ಕನ್ನಡಪ್ರಭ ವಾರ್ತೆ ಮೈಸೂರು
ಯುವ ಸಮುದಾಯದಲ್ಲಿ ಸಾಮಾಜಿಕ ಕಾಳಜಿ ಮತ್ತು ಜವಾಬ್ದಾರಿ ಬೆಳೆಯಲು ಪ್ರಶ್ನಿಸುವ ಮನೋಭಾವದ ಅಗತ್ಯವಿದೆ. ಈ ಪ್ರಶ್ನಿಸುವ ಮನೋಭಾವದಿಂದಲೇ ವಿಚಾರಶೀಲತೆಯೂ ಇಮ್ಮಡಿಯಾಗಿ ಬೆಳೆಯುತ್ತದೆ ಎಂದು ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಹಾಗೂ ಸಾಹಿತಿ ಟಿ. ಸತೀಶ್ ಜವರೇಗೌಡ ಅಭಿಪ್ರಾಯಪಟ್ಟರು.ಮೈಸೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ವಿಶ್ವಕವಿ ಕುವೆಂಪು ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ತಾಲೂಕಿನ ಬಡಗಲಹುಂಡಿ ಗ್ರಾಮದಲ್ಲಿ ಆಯೋಜಿಸಿದ್ದ ವಾರ್ಷಿಕ ವಿಶೇಷ ಶಿಬಿರದಲ್ಲಿ ಭಾಗವಹಿಸಿ ಯುವ ಸಮುದಾಯದಲ್ಲಿ ಸಾಮಾಜಿಕ ಜವಾಬ್ದಾರಿಗಳು ವಿಷಯ ಕುರಿತು ಉಪನ್ಯಾಸ ನೀಡಿ ಅವರು ಮಾತನಾಡಿದರು.
ಯುವ ಸಮುದಾಯ ಆದಷ್ಟು ಹೃದಯ ವೈಶಾಲ್ಯತೆ ಹೊಂದಿರಬೇಕು. ವೈಯಕ್ತಿಕ ಮತ್ತು ಕೌಟುಂಬಿಕ ನೆಲೆಯ ಮೀರಿ ಸಾಮಾಜಿಕ ನೆಲೆಯಲ್ಲಿ ಬದುಕಬೇಕು. ಸಮಾಜದಲ್ಲಿನ ನೆರೆಹೊರೆಯವರ ಹಿತವನ್ನು ಕಾಯಬೇಕು. ಸ್ವಾರ್ಥ ಕೇಂದ್ರಿತವಾಗಿ ಆಲೋಚಿಸದೆ ಇತರರ ಅಭ್ಯುದಯಕ್ಕೂ ಶ್ರಮಿಸಬೇಕು. ಜಾತೀಯತೆ, ಧರ್ಮಾಂಧತೆ, ಸ್ವಜನ ಪಕ್ಷಪಾತ, ಭ್ರಷ್ಟಾಚಾರಗಳಿಂದ ದೂರವಿರಬೇಕೆಂದು ಕರೆ ನೀಡಿದರು.ಅದಮ್ಯ ರಂಗಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಚಂದ್ರು ಮಂಡ್ಯ ಮಾತನಾಡಿ, ಇಂದಿನ ಯುವ ಜನರಲ್ಲಿ ಶಿಸ್ತು, ಏಕಾಗ್ರತೆ, ವಿಚಾರವಂತಿಕೆ, ಕುತೂಹಲ, ಉತ್ಸಾಹದ ಮನೋಭಾವದ ಕೊರತೆ ಅಗಾಧವಾಗಿದೆ. ಇದರಿಂದಾಗಿ ಯುವಜನರು ಒಂದೇ ಸೋಲಿಗೆ ಹತಾಶರಾಗುತ್ತಿದ್ದರೆ. ಮತ್ತೆ ಮತ್ತೆ ಪ್ರಯತ್ನ ಮಾಡುವ ಛಲ ಕಾಣುತ್ತಿಲ್ಲ ಎಂದು ವಿಷಾದಿಸಿದರು.
ಅಧ್ಯಕ್ಷತೆಯನ್ನು ತಾಪಂ ಮಾಜಿ ಸದಸ್ಯ ಮುದ್ದು ರಾಮೇಗೌಡ ವಹಿಸಿದ್ದರು. ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕಿ ನೀಲಮ್ಮ, ವಿಶ್ವಕವಿ ಕುವೆಂಪು ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ.ವೈ. ನಾಗರಾಜು, ದೈಹಿಕ ಶಿಕ್ಷಣ ಉಪನ್ಯಾಸಕ ಕಿರಣ್, ಎನ್.ಎಸ್.ಎಸ್. ಶಿಬಿರದ ನಿರ್ದೇಶಕ ಎಸ್. ಆನಂದ್, ಸಹ ಶಿಬಿರಾಧಿಕಾರಿ ಸಿ. ಧರ್ಮೇಂದ್ರ ಇದ್ದರು. ಬಳಿಕ ಶಿಬಿರಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.