ತೇರದಾಳ(ರ-ಬ):ಸಾಧನೆಯ ಶಿಖರವೇರಲು ಸತತ ಅಧ್ಯಯನದ ಅಗತ್ಯತೆಯಿದ್ದು, ವಿದ್ಯಾರ್ಥಿಗಳು ಎಲ್ಲ ಶೈಕ್ಷಣಿಕ ಸೌಲಭ್ಯ ಹೊಂದಿರುವ ಸಂಸ್ಥೆಯಲ್ಲಿ ಪ್ರವೇಶ ಪಡೆದ ಬಳಿಕ ತಮ್ಮ ಸಾಧನೆಯತ್ತ ಅವಿರತ ಶ್ರಮಿಸುವ ಮೂಲಕ ಮುಂದಿನ ಭವಿಷ್ಯದ ಬದುಕನ್ನು ಉಜ್ವಲಗೊಳಿಸಿಕೊಳ್ಳಲು ನಿರಂತರ ಓದಿನತ್ತ ತೊಡಗಬೇಕೆಂದು ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಸಿನೆಟ್ ಸದಸ್ಯ ಸಚೀನ್ ಪಟ್ಟಣಶೆಟ್ಟಿ ಕರೆ ನೀಡಿದರು.
ಗುರುವಾರ ತೇರದಾಳದ ಸಿದ್ರಾಮಪ್ಪ ದಾನಿಗೊಂಡ ಮೆಮೋರಿಯಲ್ ಟ್ರಸ್ಟ್‌ನ ಆಯುವೇದಿಕ್ ಮೆಡಿಕಲ್ ಕಾಲೇಜನಲ್ಲಿ ಜರುಗಿದ ಸ್ಫೂರ್ತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಇಂದು ವಿಶ್ವಮಟ್ಟದಲ್ಲಿ ಭಾರತದ ಪ್ರಾಚೀನ ವೈದ್ಯ ಪದ್ಧತಿ ಆಯುರ್ವೇದಕ್ಕೆ ಎಲ್ಲಿಲ್ಲದ ಬೇಡಿಕೆಯಿದೆ. ಅದನ್ನು ನಿಮ್ಮ ಯಶಸ್ಸಿನ ಏಣಿಯಾಗಿಸಿಕೊಂಡು ಯಶಸ್ಸು ಪಡೆಯಲು ಎಲ್ಲ ವಿದ್ಯಾರ್ಥಿಗಳು ಸತತ ಅಧ್ಯಯನಶೀಲರಾಗಿ ಸಂಸ್ಥೆ ನೀಡಿರುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದರು.ಅಧ್ಯಕ್ಷತೆ ವಹಿಸಿದ್ದ ಡಾ.ಮಹಾವೀರ ದಾನಿಗೊಂಡ ದೀಪ ಬೆಳಗಿಸಿ ಉದ್ಘಾಟನೆ ನೆರವೇರಿಸಿದ ಬಳಿಕ ಮಾತನಾಡಿ, ಆಯುರ್ವೇದ ವೈದ್ಯ ವಿಜ್ಞಾನ ಜಗತ್ತಿನ ಪ್ರಾಚೀನ ಮತ್ತು ಸಕ್ಷಮ ವೈದ್ಯ ವಿಜ್ಞಾನವಾಗಿದೆ. ವಿಶ್ವದೆಲ್ಲೆಡೆ ಜನಪ್ರಿಯವಾಗಿದೆ. ಆದರೆ ಕಾಲಘಟ್ಟಾನುಸಾರ ಆಯುರ್ವೇದ ಶಾಸ್ತ್ರವನ್ನು ಮೂಲತತ್ವಗಳನ್ನು ಉಳಿಸಿಕೊಂಡು ಆಧುನಿಕ ವೈದ್ಯ ಪದ್ಧತಿಯನ್ನೇ ಚಿಕಿತ್ಸಾಕ್ರಮದಲ್ಲಿ ಅಳವಡಿಕೆ ಮಾಡಿಕೊಳ್ಳಬೇಕು. ಆಯುರ್ವೇದಕ್ಕೆ ಆಧುನಿಕತೆಯ ಸ್ಪರ್ಶ ಬೇಕಿದೆ. ಆಧುನಿಕ ವೈದ್ಯಕೀಯ ಪರಿಕರಗಳನ್ನು ಪಠ್ಯಕ್ರಮದಲ್ಲಿ ಸೇರ್ಪಡೆಗೊಳಿಸಿ ಜನಪ್ರಿಯಗೊಳಿಸಬೇಕು. ಜರ್ಮನಿ ಸೇರಿದಂತೆ ಪೌರ್ಯಾತ್ಯ ರಾಷ್ಟ್ರಗಳಲ್ಲಿ ಭಾರತೀಯ ಆಯುರ್ವೇದ ವೈದ್ಯ ವಿಜ್ಞಾನ ಆಧುನಿಕತೆ ಸ್ಪರ್ಶದಡಿ ಜನಪ್ರಿಯವಾಗಿದೆ. ಅದರಂತೇ ನಮ್ಮ ಪಠ್ಯದಲ್ಲಿಯೂ ಆಧುನಿಕ ಪರಿಕರ ಬಳಸಿ ಆಯುರ್ವೇದ ವೈದ್ಯ ವಿಜ್ಞಾನವನ್ನು ಉನ್ನತೀಕರಿಸಲು ಆಯುಷ್ ಇಲಾಖೆ ಮುಂದಾಗಬೇಕೆಂದರು.
ವೇದಿಕೆಯಲ್ಲಿ ಪ್ರಚಾರ್ಯ ಡಾ.ಪ್ರಭಾಕರ ಅಪರಾಜ, ಕಾಲೇಜು ಜಿಎಸ್ ಪ್ರತೀಕ ಜಮಖಂಡಿ, ಮಮತಾ, ಡಾ.ಪುಷ್ಪದಂತ ದಾನಿಗೊಂಡ ಉಪಸ್ಥಿತರಿದ್ದರು.ಬಿಎಎಂಎಸ್ ವಿದ್ಯಾರ್ಥಿನಿಯರು ಅಶ್ವಿನಿ ಸ್ತೋತ್ರ ಪಠನೆ ಮಾಡಿದರು. ಡಾ.ಗೀತಾ ಜುಂಜರವಾಡ ಸ್ವಾಗತಿಸಿದರು. ಮೇಘಾ ನಾಯ್ಕ, ಗಣೇಶ ಸಿದ್ದಾಂತಿಮಠ ನಿರೂಪಿಸಿದರು. ಡಾ.ಪಿ.ಬಿ.ಅಪರಾಜ ವಾರ್ಷಿಕ ವರದಿ ವಾಚಿಸಿದರು. ಡಾ.ಶಕುಂತಲಾ ಸಾಸಿವೆಹಳ್ಳಿ ವಂದಿಸಿದರು.
ಉಪಪ್ರಾಚಾರ್ಯ ಡಾ.ಬಿ.ಬಿ.ಉಗಾರೆ, ಡಾ.ಮಹಾದೇವ ಬಡಿಗೇರ, ಡಾ.ಸಚಿನ್, ಜಿನ್ನಪ್ಪ ಸವದತ್ತಿ, ರಾಜು ಉಳಗೊಂಡ, ವಿಜಯಕುಮಾರ ಕಾಗಿ, ಬಾಬು ಸವದತ್ತಿ, ಸಾಗರ ಬಣಜವಾಡ ಸೇರಿದಂತೆ ಪ್ರಮುಖರು ಹಾಜರಿದ್ದರು.