ತುಮಕೂರು ರಸ್ತೆಯ ಪೀಣ್ಯ ಮೇಲ್ಸೇತುವೆ : ಹೊಸ ಕೇಬಲ್‌ ಅಳವಡಿಕೆ - 390 ಕೇಬಲ್‌ ಯಶಸ್ವಿ ಬದಲಾವಣೆ

KannadaprabhaNewsNetwork | Updated : Sep 19 2024, 07:47 AM IST

ಸಾರಾಂಶ

ತುಮಕೂರು ರಸ್ತೆಯ ಪೀಣ್ಯ ಮೇಲ್ಸೇತುವೆಯಲ್ಲಿ 390 ಕೇಬಲ್‌ಗಳನ್ನು ಯಶಸ್ವಿಯಾಗಿ ಬದಲಿಸಲಾಗಿದ್ದು, ಒಟ್ಟಾರೆ 1200 ಕೇಬಲ್‌ಗಳ ಬದಲಾವಣೆ ಕಾರ್ಯ ಪ್ರಗತಿಯಲ್ಲಿದೆ. ಈ ಹಿಂದೆ ಕೇಬಲ್‌ಗಳು ಬಾಗಿದ್ದರಿಂದ ಮೇಲ್ಸೇತುವೆ ಮೇಲೆ ವಾಹನ ಸಂಚಾರವನ್ನು ನಿಷೇಧಿಸಲಾಗಿತ್ತು.

ಸಿದ್ದು ಚಿಕ್ಕಬಳ್ಳೇಕೆರೆ

 ಬೆಂಗಳೂರು :  ತುಮಕೂರು ರಸ್ತೆಯ ಪೀಣ್ಯ ಮೇಲ್ಸೇತುವೆಯ 120 ಪಿಲ್ಲರ್‌ಗಳ ನಡುವೆ ಹೊಸ ಕೇಬಲ್‌ ಅಳವಡಿಕೆ ಕಾರ್ಯ ಭರದಿಂದ ಸಾಗಿದ್ದು ಈಗಾಗಲೇ 390 ಕೇಬಲ್‌ಗಳನ್ನು ಯಶಸ್ವಿಯಾಗಿ ಬದಲಿಸಲಾಗಿದೆ.

ಮೇಲ್ಸೇತುವೆಯ 120 ಪಿಲ್ಲರ್‌ ನಡುವೆ ತಲಾ 10 ರಂತೆ 1200 ಕೇಬಲ್‌ಗಳಿದ್ದು ಇವುಗಳನ್ನು ಹೊಸದಾಗಿ ಹಂತ ಹಂತವಾಗಿ ಬದಲಾಯಿಸುವ ಕಾರ್ಯ ನಡೆಯುತ್ತಿದ್ದು ಈವರೆಗೂ 390 ಕೇಬಲ್‌ಗಳನ್ನು ಅಳವಡಿಸುವ ಕಾರ್ಯ ಯಶಸ್ವಿಯಾಗಿದೆ. ಕೇಬಲ್‌ ಬದಲಾವಣೆ ಕಾರ್ಯದಲ್ಲಿ ನಾಲ್ಕು ತಂಡಗಳು ನಿರತವಾಗಿದ್ದು ಕಾರ್ಯ ಬಿರುಸಿನಿಂದ ಸಾಗಿದೆ.

ಏಷ್ಯಾದ ಅತಿದೊಡ್ಡ ಕೈಗಾರಿಕಾ ಪ್ರದೇಶವಾದ ಪೀಣ್ಯ ಭಾಗದಲ್ಲಿ ಬರುವ ಈ ಮೇಲ್ಸೇತುವೆ ತುಮಕೂರು ರಸ್ತೆಯ ಗೊರಗುಂಟೆ ಪಾಳ್ಯದಿಂದ ಪಾರ್ಲೆ ಜಿ ಫ್ಯಾಕ್ಟರಿವರೆಗೂ ಸುಮಾರು 5 ಕಿ.ಮೀ. ಉದ್ದವಿದೆ. ಮೇಲ್ಸೇತುವೆಗೆ ಒಟ್ಟಾರೆ 120 ಪಿಲ್ಲರ್‌ಗಳಿದ್ದು 8ನೇ ಮೈಲಿ ಜಂಕ್ಷನ್‌ ಸಮೀಪ 102 ಮತ್ತು 103 ನೇ ಪಿಲ್ಲರ್‌ ನಡುವೆ 3 ಕೇಬಲ್‌ ಬಾಗಿದ್ದರಿಂದ ಡಿಸೆಂಬರ್‌ 2021 ರಿಂದ ಮೇಲ್ಸೇತುವೆ ಮೇಲೆ ಎಲ್ಲ ಬಗೆಯ ವಾಹನಗಳ ಸಂಚಾರವನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‌ಎಚ್‌ಎಐ) ನಿಷೇಧಿಸಿತ್ತು.

ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‌ಸಿ)ಯ ತಜ್ಞರು ಪರಿಶೀಲನೆ ನಡೆಸಿ ಅಧಿಕ ಭಾರವಿರುವ ವಾಹನಗಳು ಸಂಚರಿಸಿದ್ದರಿಂದ ಕೇಬಲ್‌ಗಳು ಬಾಗಿವೆ ಎಂದು ವರದಿ ನೀಡಿದ್ದರು. ಫೆಬ್ರವರಿ 2022 ರಿಂದ ಲಘು ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ನಂತರ ಭಾರ ಪರೀಕ್ಷೆ ನಡೆಸಿ, ಬಳಿಕ ತಜ್ಞರ ಸಮಿತಿ ರಚಿಸಿ, ವರದಿ ಪಡೆಯಲಾಗಿತ್ತು. ಕೊನೆಗೆ 120 ಪಿಲ್ಲರ್‌ ನಡುವೆ ಹೊಸದಾಗಿ ತಲಾ ಎರಡರಂತೆ 240 ಕೇಬಲ್‌ ಅಳವಡಿಸಿ ಸೇತುವೆ ಸದೃಢಗೊಳಿಸಲಾಗಿತ್ತು. ನಂತರ 120 ಪಿಲ್ಲರ್‌ ನಡುವಿನ ತಲಾ 10 ಕೇಬಲ್‌ಗಳ ಬದಲಾವಣೆಗೆ ಜುಲೈ ಕೊನೆಯ ವಾರದಲ್ಲಿ ಚಾಲನೆ ನೀಡಲಾಗಿತ್ತು. ಸಿಮೆಂಟ್‌ ಕೆಲಸ ಕೈಗೊಳ್ಳುತ್ತಿರುವುದರಿಂದ ಶುಕ್ರವಾರ ಮಾತ್ರ ಮೇಲ್ಸೇತುವೆ ಮೇಲೆ ಎಲ್ಲ ಬಗೆಯ ವಾಹನಗಳ ಸಂಚಾರಕ್ಕೆ ನಿರ್ಬಂಧವಿದೆ.

ದಿನಕ್ಕೆ ಎರಡ್ಮೂರು ಕೇಬಲ್‌ ಬದಲಾವಣೆ

ಪಿಲ್ಲರ್‌ಗಳ ನಡುವೆ ಇರುವ ಕೇಬಲ್‌ಗಳನ್ನು ತುಂಡರಿಸಿ, ಕೇಬಲ್‌ನ ಅವಶೇಷ ಸ್ವಲ್ಪವೂ ಇರದಂತೆ ಹೊರತೆಗೆದು ಹೊಸ ಕೇಬಲ್‌ ಅಳವಡಿಸುವ ಕಾರ್ಯಕ್ಕೆ ನಾಲ್ಕು ತಂಡಗಳನ್ನು ನಿಯೋಜಿಸಿದ್ದು ಈಗಾಗಲೇ 390 ಕೇಬಲ್‌ಗಳನ್ನು ಯಾವುದೇ ಸಮಸ್ಯೆ ಉಂಟಾಗದಂತೆ ಅಳವಡಿಸಲಾಗಿದೆ. ದಿನವೊಂದಕ್ಕೆ ಎರಡ್ಮೂರು ಕೇಬಲ್‌ಗಳನ್ನು ಅಳವಡಿಸುತ್ತಿದ್ದು ಇನ್ನುಳಿದ 810 ಕೇಬಲ್‌ ಅಳವಡಿಸಲು ಇನ್ನೂ 9 ತಿಂಗಳು ಕಾಲಾವಕಾಶ ಬೇಕಾಗಬಹುದು ಎಂದು ಮೂಲಗಳು ತಿಳಿಸಿವೆ.

Share this article