ಸತ್ತ ಮೇಲೆ ಪರಿಹಾರದ ಬದಲು, ಕಂಪನಿ ಬಂದ್‌ ಮಾಡಲಿ..!

KannadaprabhaNewsNetwork |  
Published : Jul 20, 2025, 01:20 AM IST
ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶ | Kannada Prabha

ಸಾರಾಂಶ

ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ಕೆಮಿಕಲ್‌ ಹಾಗೂ ತ್ಯಾಜ್ಯ ಕಂಪನಿಗಳಿಂದ ಹೊರಹೊಮ್ಮುತ್ತಿರುವ ವಿಷಗಾಳಿಯ ಆತಂಕ ಹಾಗೂ ದುರ್ನಾತದಿಂದಾಗಿ ಆ ಪ್ರದೇಶದ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಜನರ ಜೀವಚ್ಛವದಂತಾಗಿಸಿದೆ.

ಕನ್ನಡಪ್ರಭ ಸರಣಿ ವರದಿ ಭಾಗ : 103

ಆನಂದ್‌ ಎಂ. ಸೌದಿ

ಕನ್ನಡಪ್ರಭ ವಾರ್ತೆ ಯಾದಗಿರಿ

ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ಕೆಮಿಕಲ್‌ ಹಾಗೂ ತ್ಯಾಜ್ಯ ಕಂಪನಿಗಳಿಂದ ಹೊರಹೊಮ್ಮುತ್ತಿರುವ ವಿಷಗಾಳಿಯ ಆತಂಕ ಹಾಗೂ ದುರ್ನಾತದಿಂದಾಗಿ ಆ ಪ್ರದೇಶದ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಜನರ ಜೀವಚ್ಛವದಂತಾಗಿಸಿದೆ.

ಕ್ಯಾನ್ಸರ್‌, ಕಿಡ್ನಿ ವೈಫಲ್ಯ, ಉಸಿರಾಟದ ಸಮಸ್ಯೆ, ಚರ್ಮರೋಗ, ದೃಷ್ಟಿದೋಷದಂತಹ ಕಾಯಿಲೆಗಳು ಸದ್ದಿಲ್ಲದೆ ಇಲ್ಲಿನ ಜನರನ್ನು ಆಪೋಷನ ಪಡೆಯುತ್ತಿವೆ. ಗರ್ಭದಲ್ಲಿನ ಭ್ರೂಣ/ಶಿಶುಗಳ ಬೆಳವಣಿಗೆ ಕುಂಠಿತಗೊಂಡು ಅವುಗಳನ್ನು ಭೂಗರ್ಭ ಸೇರುತ್ತಿರುವ ಆಘಾತಕಾರಿ ಘಟನೆಗಳೂ ನಡೆಯುತ್ತಿವೆ. ಮಕ್ಕಳಿಂದ ಹದಿಹರೆಯದವರ ಆಸ್ಪತ್ರೆಗಳ ತಿರುಗಾಟ ನಿಂತಿಲ್ಲ. 50 ದಾಟಿದವರು ಸತ್ತರೆ, "ವಯಸ್ಸಾಗಿತ್ತು.. " ಅನ್ನೋ ಉದ್ಗಾರ ಸಹಜವೇನೋ ಎಂಬಂತೆ ಮೂಡಿಬರುತ್ತದೆ.

ಬಹುತೇಕ ಮನೆಗಳಲ್ಲಿನ ಹಾಲುಗಲ್ಲದ ಹಸುಳೆಗಳಿಂದ ಹಿಡಿದು, ಶಾಲೆಗಳತ್ತ ಪುಟ್ಟಪುಟ್ಟ ಹೆಜ್ಜೆಗಳಿಡುತ್ತಿರುವ ಚಿಕ್ಕಮಕ್ಕಳಿಗೆ ಆಟಿಕೆ ಸಾಮಾನುಗಳ ಬದಲು, ಸರಾಗವಾಗಿ ಉಸಿರಾಡಲು "ನೆಬ್ಯುಲೈಜರ್‌ "ಗಳ ಪೈಪು-ಬಾಟಲಿಗಳೇ ಕಾಣಸಿಗುತ್ತವೆ. ಇವೆಲ್ಲದರ ಚಿತ್ರಣ/ವರದಿ "ಇಂಡಸ್ಟ್ರಿಯಲ್‌ ಫ್ರೆಂಡ್ಲೀ " ಸರ್ಕಾರದ ಪಾದದಡಿಯಲ್ಲಿ ಸಿಲುಕಿ ಹೊಸಕಿ ಹಾಕಲಾಗುತ್ತಿರುವಂತಿದೆ.

ಕೈಗಾರಿಕೆಗಳಿಗೆ ಜಮೀನು ನೀಡಿದರೆ ಬಂದರೆ ಉದ್ಯೋಗ, ಶಿಕ್ಷಣ, ಆರೋಗ್ಯ, ಮುಂದಿನ ಪೀಳಿಗೆ ಬದುಕು ಹಸನಾಗುತ್ತದೆ ಎಂಬೆಲ್ಲಾ ಭರವಸೆಗಳ ನಂಬಿ, ಭೂಮಿ ನೀಡಿದ ಬಹುತೇಕರು ವಿವಿಧ ರೋಗ-ರುಜಿನಗಳಿಗೆ ನರಳಿ ಮಣ್ಣಲ್ಲಿ, ಮಣ್ಣಾಗಿದ್ದಾರೆ. ಸರ್ಕಾರಿ ಕಾಗದಪತ್ರಗಳಲ್ಲಿ ಅಚ್ಚೊತ್ತಿರುವ "ಭರವಸೆಗಳ ಬಲೂನುಗಳ " ಮಸಿ ವರುಷಗರುಳಿದಂತೆ ಮುಸುಕಾಗುತ್ತ ಸಾಗಿವೆ.

ಸರ್ಕಾರದ ಷರತ್ತುಗಳ ಉಲ್ಲಂಘಿಸಿದಂತಹ ಕೆಲವು ಅಪಾಯಕಾರಿ, ರಾಸಾಯನಿಕ ಕಂಪನಿಗಳಿಗೆ ಬೀಗಮುದ್ರೆ ಹಾಕಲು ಮುಂದಾಗಿದ್ದ ಆಡಳಿತಕ್ಕೂ "ಕೈ "ಕಟ್ಟಿದಂತಿದೆ. ಅನೇಕ ಅವಘಡಗಳು ಸಂಭವಿಸಿವೆ ಮತ್ತೂ ಸಂಭವಿಸುತ್ತಿವೆಯಾದರೂ, ಕ್ರಮ ಕೈಗೊಳ್ಳಬೇಕಾದ ಸಂಬಂಧಿತರು ಮಲಗಿದಂತೆ ನಟಿಸುತ್ತಿದ್ದಾರೆ. "ಇಂಡಸ್ಟ್ರಿಯಲ್‌ ಫ್ರೆಂಡ್ಲೀ " ರಿಪೋರ್ಟಿನಲ್ಲಿ ಎಲ್ಲವೂ ನಾರ್ಮಲ್ಲಾಗಿದೆ.

ಕೂಗಳತೆಯಲ್ಲಿರುವ ತೆಲಂಗಾಣದ ಹಳ್ಳಿಗಳಲ್ಲಿ ರಾಸಾಯನಿಕ ಕಂಪನಿಗಳ ವಿರುದ್ಧ ಜನಾಕ್ರೋಶ ಮೂಡುತ್ತಿದೆ. ಕರ್ನಾಟಕದಲ್ಲಿನ ಈ ಕೆಮಿಕಲ್‌ ಕಂಪನಿಗಳಿಂದ ತೆಲಂಗಾಣದ ನಮ್ಮ ಜನರ ಜನ-ಜಲ-ಜೀವನ ದುಸ್ತರವಾಗುತ್ತಿದೆ ಎಂಬ ಆತಂಕಗಳಲ್ಲಿ ಅಲ್ಲಿಂದ ಮೂಡಿಬಂದಿವೆ. ಅಲ್ಲಿನ ಸಿಎಂ ಸಚಿವರುಗಳಿಗೆ ಜನರು ಪತ್ರ ಬರೆದು ಹೋರಾಟಕ್ಕೆ ಅಣಿಯಾಗುತ್ತಿದ್ದಾರೆ. ಕಡೇಚೂರು, ಬಾಡಿಯಾಳ, ಸೈದಾಪುರ ಹಾಗೂ ಕಿಲ್ಲನಕೇರಾ ಗ್ರಾಮ ಪಂಚಾಯ್ತಿಗಳ ಸಾಮಾನ್ಯ ಸಭೆಗಳಲ್ಲಿ ಕಂಪನಿಗಳ ವಿರುದ್ಧ ಠರಾವು ಪಾಸು ಮಾಡಲಾಗಿದೆ. ಇದರಿಂದ ಏನೂ ಆಗದು ಎಂದುಕೊಂಡವರಿಗೆ ಸಣ್ಣದೊಂದು ಕಿಡಿ ಏನು ಮಾಡಬಲ್ಲದು ಎಂಬ ಊಹೆ ಇದ್ದರೆ ಸಾಕು ಅಂತಾರೆ ಪತ್ರಕರ್ತ, ಸಾಮಾಜಿಕ ಹೋರಾಟಗಾರ ಭೀಮಣ್ಣ ವಡವಟ್‌.

ಹಾಗೆ ನೋಡಿದರೆ, ಕಳೆದೆರಡು ತಿಂಗಳುಗಳಿಂದ ಒಂದಿಷ್ಟು ನಿಟ್ಟುಸಿರು ಮೂಡಿಸುವ ವಾತಾವರಣ ಮೂಡಿಬರುತ್ತಿದೆಯಾದರೂ, ವಿರೋಧದ ಕಾವು ಕಡಿಮೆ ಆಗುವವರೆಗೂ ಅಪಾಯಕಾರಿ ಕೆಲವು ಕಂಪನಿಗಳ ತಂತ್ರದ ಭಾಗವಾಗಿರಬಹುದು ಎನ್ನಲಾಗುತ್ತಿದೆ. ನಂತರ ಎಲ್ಲವನ್ನೂ ಎಲ್ಲರೂ ಮರೆತು ಮೌನಾವಾದಾಗ, ಎಂದಿನಂತೆ ಅಬ್ಬರ ಭುಗಿಲೇಳಬಹುದೇನೋ ಎಂಬ ಅನುಮಾನ ಜನರಲ್ಲಿ ಮೂಡಿದೆ.

ಎಲ್ಲಿಯ ಕಡೇಚೂರು, ಎಲ್ಲಿಯ ಮೈಸೂರು..? ಆದರೂ, ಯಾದಗಿರಿ, ಬೀದರ್‌, ಬಳ್ಳಾರಿ, ಸಂಡೂರು, ಕೊಪ್ಪಳ, ದಾವಣಗೆರೆ, ಧಾರವಾಡ, ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಪರಿಸರವಾದಿಗಳು, ಚಿಂತಕರು, ಪ್ರಜ್ಞಾವಂತರು, ಹಿರಿಯ ಪತ್ರಕರ್ತರು, ಸಂಘ ಸಂಸ್ಥೆಗಳು, ಮಠಾಧೀಶರುಗಳು ಕಡೇಚೂರು ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ.

ಈ ಬದುಕು-ಬವಣೆಯ ಮಧ್ಯೆ, ನಾಲ್ಕು ವರ್ಷಗಳ ಹಿಂದೆ, ಫಾರ್ಮಾ ಹಬ್‌ ನೆಪದಲ್ಲಿ, ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಹೆಚ್ಚುವರಿ 3269 ಎಕರೆ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿರುವ ಸರ್ಕಾರದ ನಿರ್ಧಾರ ವಾಪಸ್‌ ಪಡೆಯುವ ಬಗ್ಗೆ ಗಂಭೀರ ಚಿಂತನೆ ಅಗತ್ಯ. ಈಗಿರುವ 27 ಕಂಪನಿಗಳ ಮಧ್ಯೆ, ಮತ್ತಿನ್ನೂ 34 ಫಾರ್ಮಾ ಕಂಪನಿಗಳಿಗೆ "ರೆಡ್‌ ಕಾರ್ಪೆಟ್‌ " ಹಾಸುತ್ತಿರುವ "ಇಂಡಸ್ಟ್ರಿಯಲ್‌ ಫ್ರೆಂಡ್ಲೀ " ವಾತಾವರಣ, ಬರೀ ಕಡೆಚೂರು-ಬಾಡಿಯಾಳವಷ್ಟೇ ಅಲ್ಲ, ಅತ್ತ ಕಡೆ ರಾಯಚೂರು, ಇತ್ತ ಕಡೆ ಯಾದಗಿರಿಗರಿಗೂ ಉಸಿರು ಗಟ್ಟಿಸುವ ಸಾಧ್ಯತೆಯಿದೆ ಎಂಬ ಆತಂಕ ಇಲ್ಲಿನವರಲ್ಲಿ ಮೂಡಿಸಿದೆ.

ಹೆಚ್ಚುವರಿ ಭೂಸ್ವಾಧೀನ ರದ್ದತಿ ವಿಚಾರ ಬಗ್ಗೆ ಸಚಿವ ಸಂಪುಟದಲ್ಲಿ ನಿರ್ಧಾರ ಬಾಕಿಯುಳಿದಿದೆ ಎಂಬುದಾಗಿದ್ದರೆ ಕಾರ್ಯರೂಪಕ್ಕೆ ಬರಲಿ. ಅವಘಡಗಳು ಸಂಭವಿಸಿದಾಗ ಮಾತ್ರ ಒಂದಿಷ್ಟು ಪರಿಹಾರ- ಕಣ್ಣೀರು, ಸಾಂತ್ವನ ಹೇಳುವ, ಅಥವಾ ನಂತರದಲ್ಲಿನ ಹೋರಾಟ-ಹಾರಾಟದ ಬದಲು, ಜನ ಬದುಕಿದ್ದಾಗಲೇ ಕ್ರಮ ಅಗತ್ಯ. ದೇವನಹಳ್ಳಿ ರೈತರನ್ನು ನೋಡಿಯಾದರೂ ನಾವು ಕಲಿಯಬೇಕಿದೆ, "ಇಂಡಸ್ಟ್ರಿಯಲ್‌ ಫ್ರೆಂಡ್ಲೀ " ಅಗತ್ಯ ಎಂದು ಬಡಿಬಡಿಸುತ್ತಿದ್ದ ಸರ್ಕಾರವನ್ನು ಅಲ್ಲಿನ ರೈತ ಹೋರಾಟ ಬಗ್ಗು ಬಡಿದಿದೆ.

ಕನ್ನಡಪ್ರಭ ನೂರಕ್ಕೂ ಹೆಚ್ಚು ಸರಣಿ ವರದಿಗಳು !

"ಕಡೇಚೂರು : ಬದುಕು ಚೂರು..! ಚೂರು..!! ಶೀರ್ಷಿಕೆಯಡಿ, ಅಲ್ಲಿನ ಬದುಕು-ಬವಣೆ ಕುರಿತು ಕನ್ನಡಪ್ರಭ ಏ.9 ರಿಂದ ಈವರೆಗೆ ನಿರಂತರ ನೂರಕ್ಕೂ ಹೆಚ್ಚು ವರದಿಗಳ ಪ್ರಕಟಿಸುತ್ತಿದೆ. ಇಂದು ಭಾನುವಾರ (ಜು.20)ಕ್ಕೆ ಇದರ 103ನೇ ಭಾಗ ಮುಂದುವರೆದಿದೆ. ಹಂತಹಂತವಾಗಿ, ವಿವಿಧ ಆಯಾಮಗಳಲ್ಲಿ ಪ್ರಕಟಗೊಂಡ ಈ ವರದಿಗಳು ಜಾಗೃತಿ ಮೂಡಿಸುತ್ತಿವೆ. ಜನರ ಬದುಕು ಹಸನಾಗಲಿ ಎಂಬ ಕಾರಣಕ್ಕೆ ಕೈಗಾರಿಕೆಗಳು ಸ್ಥಾಪನೆಯಾಗಬೇಕೇ ಹೊರತು, ಜನರ ಹೆಣಗಳ ಮೇಲೆ ಕೈಗಾರಿಕೆಗಳ ಸ್ಥಾಪಿಸುವುದಲ್ಲ ಅಂತಾರೆ ಇಲ್ಲಿಯ ಜನ.

PREV

Latest Stories

ನ್ಯಾಯಾಂಗದ ಸ್ವಾತಂತ್ರ್ಯ ರಕ್ಷಣೆಗೆ ಕ್ರಮ : ನ್ಯಾ.ವಿಭು
ಕೃಷ್ಣಾ ಮೇಲ್ದಂಡೆ-3 ಭೂಸ್ವಾಧೀನಕ್ಕೆ 2.01 ಲಕ್ಷ ಕೋಟಿ ಬೇಕು : ಸಚಿವ ಕೃಷ್ಣ
ನಮ್ಮ ಗ್ಯಾರಂಟಿ ಯೋಜನೆ ದೇಶಕ್ಕೇ ಮಾದರಿ - ಟೀಕಿಸಿದ್ದ ಬಿಜೆಪಿಯೇ ಕಾಪಿ ಮಾಡಿದೆ : ಡಿಸಿಎಂ ಡಿಕೆಶಿ