- ಮಾವ, ಪತಿ ಹೀಗೆ ಕಾಂಗ್ರೆಸ್ಸಿನ ಸರಣಿ ಸೋಲಿನ ಸೇಡು ತೀರಿಸಿಕೊಂಡ್ರು ಡಾ.ಪ್ರಭಾ ।
- ಶಾಮನೂರು-ಮಲ್ಲಿಕಾರ್ಜುನಪ್ಪ ಕುಟುಂಬದ ರಾಜಕೀಯ ಜಿದ್ದಿನಲ್ಲಿ ಕಡೆಗೂ ಮೇಲುಗೈ
- - -ನಾಗರಾಜ ಎಸ್. ಬಡದಾಳ್
ಎರಡೂವರೆ ದಶಕದಿಂದ ಕಾಂಗ್ರೆಸ್ಸಿನ ಪಾಲಿಗೆ ಕಬ್ಬಿಣದ ಕಡಲೆಯಂತಾಗಿದ್ದ ದಾವಣಗೆರೆ ಲೋಕಸಭಾ ಕ್ಷೇತ್ರ ಕಡೆಗೂ ಕಾಂಗ್ರೆಸ್ ವಶವಾಗಿದೆ. ಈ ಕ್ಷೇತ್ರಕ್ಕೆ ಸ್ಪರ್ಧಿಸಿದ ಮೊದಲ ಚುನಾವಣೆಯಲ್ಲೇ, ಅದೇ ಬಿಜೆಪಿ ವಿರುದ್ಧ 26094 ಮತಗಳ ಅಂತರದಲ್ಲಿ ಜಯಿಸುವ ಜೊತೆಗೆ ಕ್ಷೇತ್ರದ ಪ್ರಥಮ ಮಹಿಳಾ ಸಂಸದೆ ಎಂಬ ಸಾಧನೆ ಮೆರೆಯುವ ಮೂಲಕ ಡಾ.ಪ್ರಭಾ ಮಲ್ಲಿಕಾರ್ಜುನ ಲೋಕಸಭೆ ಪ್ರವೇಶಿಸಿದ್ದಾರೆ.
ಮಾವ ಶಾಮನೂರು ಶಿವಶಂಕರಪ್ಪ, ಪತಿ ಎಸ್.ಎಸ್. ಮಲ್ಲಿಕಾರ್ಜುನ ಸೋತಿದ್ದ ಕ್ಷೇತ್ರದಲ್ಲೇ ಸ್ಪರ್ಧಿಸಿದ್ದ ಡಾ.ಪ್ರಭಾ ಮಲ್ಲಿಕಾರ್ಜುನ ಇಡೀ ರಾಜ್ಯದ ಗಮನ ಸೆಳೆದಿದ್ದರು. ಸತತ 4 ಚುನಾವಣೆ ಗೆದ್ದು, ಮತ್ತೊಂದು ಚುನಾವಣೆ ಗೆಲ್ಲುವ ಉಮೇದಿನಲ್ಲಿದ್ದ ಸಂಸದ ಜಿ.ಎಂ. ಸಿದ್ದೇಶ್ವರಗೆ ಸ್ವಪಕ್ಷೀಯರಿಂದಲೇ ತೊಡಕುಂಟಾಗಿದ್ದರಿಂದ ಅನಿವಾರ್ಯವಾಗಿ ಪಕ್ಷದ ವರಿಷ್ಠರ ಸೂಚನೆಯಂತೆ ಪತ್ನಿ ಗಾಯತ್ರಿ ಸಿದ್ದೇಶ್ವರ ಅವರನ್ನು ಕಣಕ್ಕಿಳಿಸಿದರು. ಶಾಮನೂರು ಶಿವಶಂಕರಪ್ಪ ಅವರ ಮನೆ ಕಿರಿಯ ಸೊಸೆ, ದಿವಂಗತ ಜಿ.ಮಲ್ಲಿಕಾರ್ಜುನಪ್ಪ ಅವರ ಮನೆ ಹಿರಿಯ ಸೊಸೆ ಮಧ್ಯೆ ಚುನಾವಣೆ ಇದಾಗಿತ್ತು. ಸಂಬಂಧದಲ್ಲಿ ತಾಯಿ-ಮಗಳಾಗಿದ್ದರೂ, ಮತದಾರರು ಮಗಳಿಗೆ ಸಂಸದೆಯಾಗುವಂತೆ ಆಶೀರ್ವದಿಸಿದ್ದಾರೆ.
ದಾವಣಗೆರೆ ಕ್ಷೇತ್ರದ ಫಲಿತಾಂಶ ಮಾತ್ರ ಯಾರೂ ಊಹಿಸುವುದು ಕಷ್ಟಸಾಧ್ಯವಾಗಿತ್ತು. ಅದಕ್ಕೆ ಇಂಬು ನೀಡುವಂತೆ ಯಾವ ಕ್ಷೇತ್ರ ಮುನ್ನಡೆ ಕೊಡಬಹುದು, ಯಾವ ಕ್ಷೇತ್ರ ಕೈಕೊಡಬಹುದೆಂಬ ಲೆಕ್ಕಾಚಾರವೂ ಇಲ್ಲಿ ಬಿಜೆಪಿ ಪಾಲಿಗೆ ತಲೆ ಕೆಳೆಗಾಯಿತು. ತಮ್ಮ ತಂದೆ, ತಮ್ಮ ಸೋಲು ಹಾಗೂ 2019ರಲ್ಲಿ ಎಚ್.ಬಿ.ಮಂಜಪ್ಪ ಸೋಲು ಇದೆಲ್ಲದರಿಂದ ಅತ್ಯಂತ ಜಾಣ್ಮೆಯ ರಾಜಕೀಯ ತಂತ್ರಗಾರಿಕೆ ಹೆಣೆದ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ಎದುರಾಳಿ ಪಕ್ಷದ ಬಲಹೀನತೆಯನ್ನೇ ಅಸ್ತ್ರವಾಗಿ ಮಾಡಿಕೊಂಡರು. ದಶಕಗಳ ನಂತರ ಎಸ್.ಎಸ್. ಮಲ್ಲಿಕಾರ್ಜುನ ಮೈಚಳಿ ಬಿಟ್ಟು, ಮುಂಚಿನಂತೆಯೇ ರಾಜಕಾರಣ ಮಾಡುವ ಮೂಲಕ ಪತ್ನಿ ಡಾ.ಪ್ರಭಾ ಮಲ್ಲಿಕಾರ್ಜುನ ಅವರನ್ನು ಗೆಲ್ಲಿಸಿದ್ದಾರೆ. ಆ ಮೂಲಕ ಬಿಜೆಪಿಗೆ ತಕ್ಕ ತಿರುಗೇಟು ನೀಡಿದ್ದಾರೆ.
ಶಾಮನೂರು ಶಿವಶಂಕರಪ್ಪ- ಮಲ್ಲಿಕಾರ್ಜುನಪ್ಪ ರಾಜಕೀಯ ಜಿದ್ದಾಜಿದ್ದಿ 1996ರಿಂದಲೂ ಇದೆ. ಇದು ಒಮ್ಮೆ ಶಾಮನೂರು, ಮತ್ತೊಮ್ಮೆ ಜಿ.ಮಲ್ಲಿಕಾರ್ಜುನಪ್ಪ ಗೆದ್ದಿದ್ದರು. 1999ರಲ್ಲಿ ಶಾಮನೂರು ವಿರುದ್ಧ ಜಿ.ಮಲ್ಲಿಕಾರ್ಜುನಪ್ಪ ಗೆದ್ದು ಬೀಗಿದ್ದರು. ಅನಂತರ ಮಲ್ಲಿಕಾರ್ಜುನಪ್ಪ ನಿಧನದಿಂದಾಗಿ ಸಂಸದ ಜಿ.ಎಂ. ಸಿದ್ದೇಶ್ವರ ಸಕ್ರಿಯ ರಾಜಕಾರಣಕ್ಕೆ ಪ್ರವೇಶಿಸಿದರು. 2004, 2009, 2014ರ ಚುನಾವಣೆಯಲ್ಲಿ ತಮ್ಮ ರಾಜಕೀಯ ಕಡುವೈರಿ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ ವಿರುದ್ಧ ಗೆದ್ದು ಬೀಗಿದ್ದ ಸಂಸದ ಜಿ.ಎಂ. ಸಿದ್ದೇಶ್ವರ 2019ರ ಚುನಾವಣೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ವಿರುದ್ಧ ದಾಖಲೆ ಅಂತರದ ಜಯ ಸಾಧಿಸಿದ್ದರು. ಅಲ್ಲದೇ, ಕ್ಷೇತ್ರದಿಂದ ಸತತ 4 ಸಲ ಗೆದ್ದು ದಾಖಲೆ ನಿರ್ಮಿಸಿದ್ದರು. ಈಗ ಅದೇ ಬಿಜೆಪಿ ದಾಖಲೆ ಸರಣಿಯನ್ನು ಕಾಂಗ್ರೆಸ್ಸಿನ ಅಭ್ಯರ್ಥಿ ಡಾ.ಪ್ರಭಾ ಬ್ರೇಕ್ ಮಾಡಿದ್ದಾರೆ.
- - - -(ಫೋಟೋ ಬರಲಿವೆ)