ಮಲ್ಲಿಗೆ ಮಾರ್ಗದ 12 ರೈಲ್ವೆ ಸ್ಟೇಶನ್‌ ವಿನ್ಯಾಸ ಬದಲು?

KannadaprabhaNewsNetwork | Updated : Feb 20 2024, 12:56 PM IST

ಸಾರಾಂಶ

ಉಪನಗರ ರೈಲು ಯೋಜನೆಯ ‘ಮಲ್ಲಿಗೆ’ ಕಾರಿಡಾರ್‌ನ ನಿಲ್ದಾಣಗಳ ವಿನ್ಯಾಸ ಬದಲಾವಣೆಯೊಂದಿಗೆ ತಿಂಗಳಾಂತ್ಯದಲ್ಲಿ ಮರು ಟೆಂಡರ್‌ ಕರೆಯಲು ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ (ಕೆ-ರೈಡ್) ಮುಂದಾಗಿದೆ.

ಮಯೂರ್‌ ಹೆಗಡೆ
ಕನ್ನಡಪ್ರಭ ವಾರ್ತೆ ಬೆಂಗಳೂರು

ಉಪನಗರ ರೈಲು ಯೋಜನೆಯ ‘ಮಲ್ಲಿಗೆ’ ಕಾರಿಡಾರ್‌ನ ನಿಲ್ದಾಣಗಳ ವಿನ್ಯಾಸ ಬದಲಾವಣೆಯೊಂದಿಗೆ ತಿಂಗಳಾಂತ್ಯದಲ್ಲಿ ಮರು ಟೆಂಡರ್‌ ಕರೆಯಲು ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ (ಕೆ-ರೈಡ್) ಮುಂದಾಗಿದೆ.

ಬೈಯಪ್ಪನಹಳ್ಳಿ-ಚಿಕ್ಕಬಾಣಾವರ ಸಂಪರ್ಕಿಸುವ 25.01 ಕಿ.ಮೀ. ಉದ್ದದ ಮಾರ್ಗವಿದು. ಇಲ್ಲಿ 12 ನಿಲ್ದಾಣಗಳ ನಿರ್ಮಾಣಕ್ಕೆ ಈ ಮೊದಲು ಕರೆದಿದ್ದ ಟೆಂಡರ್‌ ನವೆಂಬರ್‌ನಲ್ಲಿ ರದ್ದಾಗಿತ್ತು. 

ಇದೀಗ ನಿಲ್ದಾಣ ವಿನ್ಯಾಸ ಬದಲು ಅಂದರೆ ಮೂರು ಬೋಗಿ ನಿಲ್ಲುವಷ್ಟು ಉದ್ದದ ಪ್ಲಾಟ್‌ಫಾರ್ಮ್‌ ನಿರ್ಮಿಸಬೇಕೆ ಅಥವಾ ಆರು ಬೋಗಿ ರೈಲು ನಿಲುಗಡೆಗೆ ಪೂರಕವಾಗಿ ರೂಪಿಸಿಕೊಳ್ಳಬೇಕೆ ಎಂಬ ಸಾಧ್ಯಾಸಾಧ್ಯತೆಯ ಚಿಂತನೆ ನಡೆದಿದೆ.

ಆರು ಬೋಗಿಗಳ ರೈಲಿಗೆ ಅನುಗುಣವಾದ ಪ್ಲಾಟ್‌ಫಾರ್ಮ್‌ ನಿರ್ಮಿಸಿಕೊಳ್ಳುವುದು ಹಾಗೂ ಮೂರು ಬೋಗಿಗಳ ರೈಲನ್ನು ಓಡಿಸುವ ಆಲೋಚನೆಯೂ ಇದೆ. 

ಈಗಾಗಲೇ ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಸೂಚನೆಯಂತೆ ಬೆಂಗಳೂರು ಮೆಟ್ರೋ ರೈಲ್ವೆ ನಿಗಮವು ‘ನಮ್ಮ ಮೆಟ್ರೋ’ 3ನೇ ಹಂತದ ಮಾಗಡಿ ರೋಡ್‌ ಕಾರಿಡಾರ್‌ನಲ್ಲಿ ಮೂರು ಬೋಗಿಗಳ ರೈಲು ಓಡಿಸಲು ಡಿಪಿಆರ್‌ ತಯಾರಿಸಿ ಸಲ್ಲಿಸಿದೆ. ಉಪನಗರ ರೈಲ್ವೆ ಯೋಜನೆ ಅನುಷ್ಠಾನ ಮಾಡುತ್ತಿರುವ ಕೆ-ರೈಡ್‌ ಕೂಡ ಮೂರು ಬೋಗಿಗಳ ಕುರಿತು ಅಧ್ಯಯನ ನಡೆಸಿದೆ.

ಮೂರು ಬೋಗಿ: ಕೆ-ರೈಡ್‌ ಮೂಲಗಳ ಪ್ರಕಾರ ಉಪನಗರ ರೈಲ್ವೆಯ ಒಂದು ರೈಲ್ವೆ ಬೋಗಿ 300 ಜನ ಪ್ರಯಾಣಿಕರ ಸಾಮರ್ಥ್ಯ ಹೊಂದಿರಲಿದೆ. ಒಂದು ಗಂಟೆಗೆ 30ಕ್ಕಿಂತಲೂ ಹೆಚ್ಚಿನ ಟ್ರಿಪ್‌ ಸಂಚರಿಸಬಹುದು. 

ಸಂಸ್ಥೆ ನಡೆಸಿದ ಪಿಎಚ್‌ಪಿಡಿಟಿ (ಪೀಕ್ ಅವರ್ ಪೀಕ್ ಡೈರೆಕ್ಷನ್ ಟ್ರಾಫಿಕ್) ಅಧ್ಯಯನದ ಪ್ರಕಾರ ಈ ಮಾರ್ಗದಲ್ಲಿ ವರ್ಷಕ್ಕೆ ಶೇ.19ರಷ್ಟು ಹೆಚ್ಚಿನ ಪ್ರಯಾಣಿಕರ ಸೇರ್ಪಡೆಯೊಂದಿಗೆ 2031ರ ವೇಳೆಗೆ ದಿನಕ್ಕೆ 10,931, 2041ಕ್ಕೆ 13,858 ಪ್ರಯಾಣಿಕರು ಸಂಚರಿಸುವ ಅಂದಾಜಿದೆ. 

ಇದೇ 2051ಕ್ಕೆ 17,599 ಜನ ಓಡಾಡುವ ಸಾಧ್ಯತೆಯಿದೆ. ಅಲ್ಲದೆ, 2061ರವರೆಗೂ ಇಷ್ಟೇ ಬೋಗಿಗಳು ಸಾಕಾಗುತ್ತವೆ. ಅಲ್ಲಿವರೆಗೆ ಮೂರು ಬೋಗಿಗಳ ರೈಲು ಸಂಚರಿಸಿದರೂ ಇಷ್ಟು ಪ್ರಯಾಣಿಕರು ತೊಂದರೆಯಿಲ್ಲದೆ ಸಂಚರಿಸಬಹುದು. ಅಲ್ಲದೆ, ಟ್ರಿಪ್‌ಗಳನ್ನು ಹೆಚ್ಚಿಸಿಕೊಳ್ಳಬಹುದು ಎಂದು ಅಧಿಕಾರಿಗಳು ಹೇಳುತ್ತಾರೆ.

ಹೆಚ್ಚಾದ ನಿಲ್ದಾಣ ನಿರ್ಮಾಣ ವೆಚ್ಚ: ಮೂಲಗಳ ಪ್ರಕಾರ 2019ರ ಮೂಲ ವಿಸ್ತ್ರತ ಯೋಜನಾ ವರದಿಯಲ್ಲಿ ಒಂಬತ್ತು ಬೋಗಿಯ ರೈಲಿಗೆ ಅನುಗುಣವಾಗಿ ನಿಲ್ದಾಣ ವಿನ್ಯಾಸ ಮಾಡಿಕೊಳ್ಳುವುದು ಹಾಗೂ ಆರು ಬೋಗಿಗಳ ನಿಲುಗಡೆಗೆ ತಕ್ಕಂತೆ ನಿಲ್ದಾಣ ನಿರ್ಮಿಸಿಕೊಳ್ಳಲು ಉಲ್ಲೇಖವಿದೆ.

ಆಗ ನಿಲ್ದಾಣಕ್ಕೆ ₹500 ಕೋಟಿ ವೆಚ್ಚ ಅಂದಾಜಿಸಲಾಗಿತ್ತು. ಆದರೆ, ಐದು ವರ್ಷದ ಬಳಿಕ ಈ ವೆಚ್ಚ ಸುಮಾರು ₹850-900 ಕೋಟಿಗೆ ತಲುಪುತ್ತಿದೆ. ಈ ಹಿನ್ನೆಲೆಯಲ್ಲಿ ನಿಲ್ದಾಣದ ವಿನ್ಯಾಸ ಬದಲಿಸಲು ಕೆ-ರೈಡ್‌ ಯೋಜಿಸಿದೆ.

ಶೀಘ್ರ ನಿರ್ಧಾರ: ಅಂದರೆ 9 ಬೋಗಿಯ ರೈಲು ನಿಲ್ಲುವಷ್ಟರ ಉದ್ದದ ಪ್ಲಾಟ್‌ಫಾರ್ಮ್‌ ನಿರ್ಮಿಸಿಕೊಂಡು ಹೆಚ್ಚುವರಿ ಖರ್ಚಿನ ಬದಲು ಆರು ಬೋಗಿಯ ರೈಲು ನಿಲ್ಲುವಷ್ಟು ಉದ್ದದ ಪ್ಲಾಟ್‌ಫಾರ್ಮ್‌ ನಿರ್ಮಿಸಿಕೊಳ್ಳುವ ಚಿಂತನೆ ನಡೆದಿದೆ. ತಿಂಗಳಾಂತ್ಯದ ಒಳಗೆ ಕೆ-ರೈಡ್ ಬೋರ್ಡ್‌ ಸಭೆ ನಡೆಯಲಿದ್ದು, ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.

Share this article