ಕನ್ನಡಪ್ರಭ ವಾರ್ತೆ ಮಂಡ್ಯ
ಮಂಡ್ಯದಲ್ಲಿ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೊಂಡಿರುವ ಪೂರ್ವಭಾವಿಯಾಗಿ ಮಕ್ಕಳಲ್ಲಿ ಸಾಹಿತ್ಯ ಪ್ರೀತಿ ಹುಟ್ಟಿಸುವ ಕಾರ್ಯಕ್ರಮಗಳನ್ನು ಶಾಲಾ-ಕಾಲೇಜುಗಳಲ್ಲಿ ಆಯೋಜಿಸುವ ಮೂಲಕ ಕನ್ನಡಮಯ ವಾತಾವರಣ, ಸಂಭ್ರಮವನ್ನು ಮೂಡಿಸುವ ಅಗತ್ಯವಿದೆ ಎಂದು ಸಾಹಿತಿ ಡಾ.ಪ್ರದೀಪ್‌ಕುಮಾರ್ ಹೆಬ್ರಿ ಹೇಳಿದರು.ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಆಯೋಜಿಸಿದ್ದ ವಾರದ ಅತಿಥಿ ಸಾಹಿತಿ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಇಂದಿನ ವಿದ್ಯಾರ್ಥಿಗಳಿಗೆ, ಯುವಜನರಿಗೆ ಸಾಹಿತ್ಯದ ಮಹತ್ವವನ್ನು ತಿಳಿಸಿಕೊಟ್ಟು, ಕವಿಗಳು, ಸಾಹಿತಿಗಳನ್ನು ಪರಿಚಯಿಸಿಕೊಡಬೇಕು. ಹೊರಗಿನ ಸಾಹಿತಿಗಳನ್ನು ಕರೆತಂದು ಸಾಹಿತ್ಯಾತ್ಮಕ ವಿಚಾರ ಸಂಕಿರಣಗಳನ್ನು ಆಯೋಜಿಸುವುದು. ಅತ್ಯುತ್ತಮ ಕೃತಿಗಳನ್ನು ಓದುವಂತೆ ಪ್ರೇರೇಪಿಸಿ ಪುಸ್ತಕ ಪ್ರೀತಿಯನ್ನು ಬೆಳೆಸುವಂತಹ ಕಾರ್ಯಕ್ರಮಗಳು ಜಿಲ್ಲಾದ್ಯಂತ ನಡೆಸುವ ಅಗತ್ಯವಿದೆ ಎಂದು ಸಲಹೆ ನೀಡಿದರು.
ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎಂಬ ಮಾತಿನಂತೆ ಮಕ್ಕಳಿಗೆ ಸಾಹಿತ್ಯದ ಮಹತ್ವ, ಪರಂಪರೆಯ ಅರಿವು ಮೂಡಿಸಿ ಈಗಿನಿಂದಲೇ ಸಾಹಿತ್ಯದತ್ತ ಪ್ರೀತಿ-ಸೆಳೆತಕ್ಕೆ ಒಳಗಾಗುವಂತೆ ಮಾಡಬೇಕು. ಸಾಹಿತ್ಯ ಕ್ಷೇತ್ರದ ವಿವಿಧ ದಾರಿಗಳನ್ನು ತೋರಿಸಿಕೊಡಬೇಕು. ಮುಂದಿನ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಈಗಿನಿಂದಲೇ ಅವರನ್ನು ಪುಸ್ತಕ ಪ್ರೇಮಿಗಳು, ಸಾಹಿತ್ಯ ಪ್ರೇಮಿಗಳನ್ನಾಗಿ ತಯಾರುಗೊಳಿಸಬೇಕು. ಇಲ್ಲದಿದ್ದರೆ ಪುಸ್ತಕಗಳು ಮಾತ್ರ ಹೊರಬರುತ್ತಿರುತ್ತವೆ. ಅವುಗಳನ್ನು ಓದುವವರೇ ಇರುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.ಸಾರ್ವಜನಿಕ ಅಭಿಪ್ರಾಯಕ್ಕೂ ಮನ್ನಣೆ ಇರಲಿ:
ಸಾಹಿತ್ಯ ಸಮ್ಮೇಳನಗಳಿಗೆ ಅಧ್ಯಕ್ಷರನ್ನು ಆಯ್ಕೆ ಮಾಡುವಾಗ ಸಾರ್ವಜನಿಕ ಅಭಿಪ್ರಾಯಗಳಿಗೂ ಮನ್ನಣೆ ದೊರಕುವಂತಾಗಬೇಕು. ಎಲ್ಲೋ ಒಂದೆಡೆ ಕುಳಿತು ಸಮ್ಮೇಳನಾಧ್ಯಕ್ಷರನ್ನು ಆಯ್ಕೆ ಮಾಡದೆ ಎಲ್ಲಾ ಜಿಲ್ಲೆಗಳಿಂದಲ್ಲೂ ಸಮ್ಮೇಳನಾಧ್ಯಕ್ಷರು ಯಾರಾಗಬೇಕು ಎಂಬ ಅಭಿಪ್ರಾಯಗಳನ್ನು ಕ್ರೋಢೀಕರಿಸಿಕೊಂಡು ಮೌಲ್ಯಯುತ ವ್ಯಕ್ತಿಗಳನ್ನು ಆಯ್ಕೆ ಮಾಡಬೇಕು ಎಂದು ನುಡಿದರು.ಸಮ್ಮೇಳನಾಧ್ಯಕ್ಷರನ್ನು ಆಯ್ಕೆ ಮಾಡುವಾಗ ವ್ಯಕ್ತಿಯಾಗಲೀ, ಆತ ಬರೆದಿರುವ ಪುಸ್ತಕಗಳ ಸಂಖ್ಯೆಯಾಗಲೀ ಮುಖ್ಯವಲ್ಲ. ಆತ ಬರೆದ ಸಾಹಿತ್ಯ ಸಮಾಜದ ಬೆಳವಣಿಗೆ, ಭೌತಿಕ ಬೆಳವಣಿಗೆಯಾಗಿರುವುದು ಕಂಡುಬಂದರೆ ಅಂತಹವರನ್ನು ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದೊಳಗೆ ಸಮ್ಮೇಳನ ಆಯೋಜಿಸಿ:ಸಾಹಿತ್ಯ ಸಮ್ಮೇಳನವನ್ನು ನಗರದೊಳಗೆ ಆಯೋಜಿಸುವುದು ಉತ್ತಮ. ನಗರದ ಹೊರಗೆ ಆಯೋಜಿಸಿದರೆ ಸಂಭ್ರಮವಿರುವುದಿಲ್ಲ. ನಗರದೊಳಗೆ ಎಲ್ಲೆಲ್ಲೂ ಕನ್ನಡದ ರಂಗನ್ನು ತುಂಬುವುದಕ್ಕೆ ಸಾಕಷ್ಟು ಅವಕಾಶಗಳಿವೆ. ಮಂಡ್ಯ ವಿಶ್ವವಿದ್ಯಾಲಯ ಆವರಣ, ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣ ಸೇರಿದಂತೆ ಹಲವು ವಿಶಾಲವಾದ ಜಾಗಗಳಿವೆ. ಹೆದ್ದಾರಿಯಿಂದ ಪಿಇಎಸ್ ಎಂಜಿನಿಯರಿಂಗ್ ಕಾಲೇಜುವರೆಗಿನ ರಸ್ತೆಯುದ್ದಕ್ಕೂ ಪುಸ್ತಕ ಮಳಿಗೆಗಳನ್ನು ಆಯೋಜಿಸುವುದು. ನಗರದ ಎಲ್ಲಾ ಹೋಟೆಲ್‌ನವರನ್ನು ಕರೆದು ೬೦ ರು. ಕೂಪನ್ ವಿತರಿಸಿ ಅನ್ನ, ಸಾಂಬಾರ್, ಪಲ್ಯ ನೀಡುವಂತೆ ತಿಳಿಸುವುದು. ಏಕೆಂದರೆ, ಸಮ್ಮೇಳನ ನಡೆಸುತ್ತಿರುವುದು ಕೇವಲ ಊಟಕ್ಕಾಗಲ್ಲ. ಅದಕ್ಕೆ ಕೋಟಿಗಟ್ಟಲೆ ಖರ್ಚು ಮಾಡುವುದರಲ್ಲಿ ಯಾವ ಅರ್ಥವೂ ಇಲ್ಲ. ಊಟದಿಂದ ಸಮ್ಮೇಳನ ಯಶಸ್ವಿಗೊಳಿದಂತೆ ಆಗುವುದೂ ಇಲ್ಲ ಎಂದು ಸೂಕ್ಷ್ಮವಾಗಿ ಹೇಳಿದರು.
ಒಂದು ವರ್ಷ ಅಧಿಕೃತ ಪ್ರತಿನಿಧಿ:ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗುವವರು ಕೇವಲ ಮೂರು ದಿನದ ಸಮ್ಮೇಳನಾಧ್ಯಕ್ಷರಾಗಿರುವುದಿಲ್ಲ. ಅವರು ಮುಂದಿನ ಒಂದು ವರ್ಷದವರೆಗೆ ಸಾಹಿತ್ಯ ಪರಿಷತ್ತಿನ ಎಲ್ಲಾ ಚಟುವಟಿಕೆಗಳಿಗೂ ಅಧಿಕೃತ ಪ್ರತಿನಿಧಿಯಾಗಿರುತ್ತಾರೆ. ಆದರೆ, ಸಮ್ಮೇಳನಾಧ್ಯಕ್ಷರಾದ ಬಳಿಕ ಅವರು ತಮ್ಮ ಜವಾಬ್ದಾರಿಗಳನ್ನೇ ಮರೆಯುತ್ತಿದ್ದಾರೆ ಎಂದು ವಿಷಾದಿಸಿದರು.
ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ, ಕನ್ನಡ ಭಾಷೆಯ ಬೆಳವಣಿಗೆ ಕೆಲಸಗಳು ಹೇಗೆ ನಡೆಯಬೇಕು ಎಂಬ ಕುರಿತು ಸಂಬಂಧಿಸಿದವರಿಗೆ ಮಾರ್ಗದರ್ಶನ ಮಾಡಬೇಕು. ನಾಮಕಾವಸ್ಥೆಗೆ ನಿರ್ಣಯಗಳನ್ನು ಕೈಗೊಳ್ಳುವ ಸಂಪ್ರದಾಯಕ್ಕೆ ತಿಲಾಂಜಲಿ ಹಾಡಬೇಕು. ಒಂದು ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳು ಪರಿಪೂರ್ಣವಾಗಿ ಜಾರಿಯಾಗುವವರೆಗೆ ಮತ್ತೆ ಸಾಹಿತ್ಯ ಸಮ್ಮೇಳನ ನಡೆಸದಂತೆ ದೃಢ ಸಂಕಲ್ಪ ಮಾಡಬೇಕು ಎಂದರು.ಅಂತರಂಗದ ಪ್ರೀತಿ ಮುಖ್ಯ:
ವಿಜ್ಞಾನ-ತಂತ್ರಜ್ಞಾನ ಎಷ್ಟೇ ಬೆಳವಣಿಗೆಯಾಗಲಿ, ಸಾಮಾಜಿಕ ಜಾಲ ತಾಣಗಳ ಪ್ರಭಾವ ಬೀರಿದರೂ ಪ್ರತಿಯೊಬ್ಬರ ಅಂತರಂಗದಲ್ಲಿ ಕನ್ನಡವನ್ನು ಪ್ರೀತಿಸುವ ಮನೋಭಾವವಿರಬೇಕು. ಕನ್ನಡ ಎಲ್ಲರ ಮನಸ್ಸುಗಳಲ್ಲಿ ನೆಲೆನಿಂತರೆ ಯಾವ ವೈಜ್ಞಾನಿಕ ಬೆಳವಣಿಗೆಯೂ ಅದನ್ನು ಏನೂ ಮಾಡಲಾಗುವುದಿಲ್ಲ ಎಂದು ಡಾ.ಪ್ರದೀಪ್‌ಕುಮಾರ್ ಹೇಳಿದರು.ಮಕ್ಕಳನ್ನು ಪುಸ್ತಕ ಓದುವುದಕ್ಕೆ ಪ್ರೇರಣೆ ನೀಡುವ ನಾವೂ ಕೂಡ ಪುಸ್ತಕ ಓದುವುದನ್ನು ರೂಢಿಸಿಕೊಳ್ಳಬೇಕು. ಪ್ರತಿ ವರ್ಷ ೯ ಸಾವಿರ ಪುಸ್ತಕಗಳು ಹೊರಬರುತ್ತಿವೆ. ಅದರಲ್ಲಿ ಒಂಬತ್ತನ್ನಾದರೂ ಓದಿದ್ದೇವೆಯೇ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ನಮ್ಮಲ್ಲೇ ಪುಸ್ತಕ ಪ್ರೀತಿ ಹುಟ್ಟದಿದ್ದರೆ ಮಕ್ಕಳಲ್ಲಿ ಆ ಪ್ರೀತಿಯನ್ನು ಮೂಡಿಸುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಗೌರವಧನ ಕೊಡಬಾರದು:ಸಮ್ಮೇಳನದಲ್ಲಿ ಭಾಗವಹಿಸಲು ಬರುವ ಪ್ರತಿನಿಧಿಗಳಿಗೆ ಗೌರವಧನ ನೀಡುವುದನ್ನು ಸರ್ಕಾರ ಕೂಡಲೇ ನಿಲುಗಡೆ ಮಾಡುವುದು ಒಳ್ಳೆಯದು. ಅವರೆಲ್ಲರೂ ಸರ್ಕಾರದಿಂದ ವೇತನ ಪಡೆಯುತ್ತಿರುತ್ತಾರೆ. ಅವರಿಗೆ ಗೌರವಧನ ಕೊಡುವುದರಿಂದ ಆರ್ಥಿಕ ಹೊರೆಯಾಗುತ್ತದೆ. ಆ ಹಣವನ್ನು ಕನ್ನಡದ ಬೆಳವಣಿಗೆಗೆ ಪೂರಕವಾದ ಕಾರ್ಯಕ್ರಮಗಳಿಗೆ ಬಳಸಿಕೊಳ್ಳುವಂತೆ ತಿಳಿಸಿದರು.
ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಪಿ.ಪ್ರಕಾಶ್, ನವೀನ್‌ಕುಮಾರ್, ಆನಂದ ಅವರು ಸಂವಾದ ಕಾರ್ಯಕ್ರಮದಲ್ಲಿ ಹಾಜರಿದ್ದರು.