ಕನ್ನಡಪ್ರಭ ವಾರ್ತೆ ತರೀಕೆರೆ
ಪ್ರಾಥಮಿಕ ಹಂತದಿಂದಲೇ ವಿದ್ಯಾರ್ಥಿಗಳಿಗೆ ವ್ಯವಹಾರದ ಅರಿವು ಮೂಡಿಸಬೇಕು ಎಂದು ಶ್ರೀ ಪ್ರಹರ್ಷಿತ ವಿದ್ಯಾ ಸಂಸ್ಥೆ ಅಡಳಿತಾಧಿಕಾರಿ ಅನೂಪ್ ಹೇಳಿದರು.ಪಟ್ಟಣದ ಶ್ರೀ ಪ್ರಹರ್ಷಿತ ವಿದ್ಯಾ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ಆಯೋಜಿಸಿದ ಬ್ಯಾಂಕ್‌ಗಳ ವ್ಯವಹಾರದ ವೀಕ್ಷಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಪಠ್ಯಪುಸ್ತಕ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿದಾಗ ಸಾಮಾನ್ಯ ಜ್ಞಾನ, ಬೌದ್ದಿಕ ವಿಕಾಸಕ್ಕೆ ಶಾಲೆಗಳಲ್ಲಿ ಸಂತೆ ಎನ್ನುವ ಕಾರ್ಯಕ್ರಮವನ್ನು ಪ್ರತಿವರ್ಷ ನಡೆಸಿಕೊಂಡು ಬಂದಿದ್ದೇವೆ, ಇದರಿಂದ ವಸ್ತುಗಳ ಬೆಲೆ ಮಕ್ಕಳಿಗೆ ತಿಳಿಯುತ್ತದೆ ಎಂದು ಹೇಳಿದರು.ವಿದ್ಯಾರ್ಥಿಗಳಿಗೆ ಗಣಿತ ಕಲಿಕೆಯಲ್ಲಿ ಹೆಚ್ಚಿನ ಜ್ಞಾನ ಪಡೆಯಲು ವ್ಯವಹಾರಿಕ ಜ್ಞಾನ ಮುಖ್ಯ ಹಾಗೂ ಅನುಭವಾತ್ಮಕ ಕಲಿಕೆಯಾಂದಿಗೆ ಲಾಭ ನಷ್ಟದ ಅರಿವಿನೊಂದಿಗೆ ಲಾಭದ ಹಣವನ್ನು ತಮ್ಮ ಮುಂದಿನ ಜೀವನದ ಹಾದಿಯನ್ನು ಭದ್ರ ಪಡಿಸಿ ಕೊಳ್ಳಲು ಬ್ಯಾಂಕ್ ವ್ಯವಹಾರವು ಮುಖ್ಯ ತರೀಕೆರೆಯ ಕೆಲವು ಬ್ಯಾಂಕ್‌ಗಳಿಗೆ ಶಿಕ್ಷಕಿಯರೊಂದಿಗೆ ವಿದ್ಯಾರ್ಥಿಗಳು ವ್ಯವಹಾರದ ವೀಕ್ಷಣೆಗೆ ಕಳಿಸಿಕೊಡಲಾಗಿದೆ ಎಂದು ಹೇಳಿದರು.
ಪಟ್ಟಣದ ಚಿಕ್ಕಮಗಳೂರು ಜಿಲ್ಲಾ ಸಹಕಾರ ಕೇಂದ್ರಬ್ಯಾಂಕ್ ನಿಯಮಿತ ತರೀಕೆರೆ ಶಾಖೆಯಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕಿಯರನ್ನು ಬ್ಯಾಂಕಿನ ಮ್ಯಾನೇಜರ್ ಹಾಗೂ ಸಿಬ್ಬಂದಿ ವರ್ಗ ಲವಲವಿಕೆಯಿಂದ ಬರಮಾಡಿಕೊಂಡು ಬ್ಯಾಂಕಿನ ವ್ಯವಹಾರದ ಬಗ್ಗೆ ಮ್ಯಾನೇಜರ್ ನವೀನ್ ನಿತ್ಯ ನಡೆಯುವ ವ್ಯವಹಾರದ ಬಗ್ಗೆ ವಿಸ್ತಾರವಾಗಿ ಮಕ್ಕಳ ಗಮನಕ್ಕೆ ತಂದರು.ಬ್ಯಾಂಕ್ ಸಿಬ್ಬಂದಿ ವರ್ಗ ಬ್ಯಾಂಕಿಗೆ ಹಾಜರಾದಾಗ ಮೊದಲು ಬಯೋಮೆಟ್ರಿಕ್ ಹಾಜರಾತಿ ಯಂತ್ರಕೆ ಹೆಬ್ಬೆರಳು ಇಟ್ಟು ಹಾಜರಾತಿಯನ್ನು ಖಚಿತಪಡಿಸಿಕೊಂಡು, ಸಿಬ್ಬಂದಿಗೆ ನಿಗದಿಪಡಿಸಿರುವ ಕೌಂಟರ್‌ಗಳಿಗೆ ತೆರಳಬೇಕು ಎಂಬುದನ್ನು ತಿಳಿಸಿ. ಮಕ್ಕಳಿಗೆ ಕ್ಯಾಶ್ ಕೌಂಟರನಲ್ಲಿ ಹಣ ಕಟ್ಟುವುದು, ಹಣ ತೆಗೆದುಕೊಳ್ಳುವುದು, ಹಣ ವರ್ಗಾವಣೆಯ ಬಗ್ಗೆ ತಿಳಿಸಿ, ನೋಟು ಎಣಿಕೆ ಯಂತ್ರದ ಮೂಲಕ ಹಣ ಎಣಿಸುವುದು ತೋರಿಸಿದರು,
ನಂತರ ನೋಟನ್ನು ತೋರಿಸಿ ಅದರ ಪ್ರಾಮುಖ್ಯತೆ, 500, 200, 100, 50, 20, 10, 5 ಸೇರಿ ಪ್ರತಿಯೊಂದು ನೋಟಿನ ಬೆಲೆಯನ್ನು ವಿದ್ಯಾರ್ಥಿಗಳಿಂದ ಪಡೆದು ನಂತರ ತಮ್ಮ ಪೋಷಕರು ಗಳಿಸಿದ ಉಳಿತಾಯ ಹಣವನ್ನು ಡಿಪಾಜೆಟ್ ಮಾಡುವ ಬಗ್ಗೆ ತಿಳಿಸಿ.ಎಲ್ಲಾ ವಿದ್ಯಾರ್ಥಿಗಳಿಗೆ ಸಿಹಿ ನೀಡಿ, ನೀವುಗಳು ಚೆನ್ನಾಗಿ ಓದಿ ತಂದೆ ತಾಯಿಗಳಿಗೆ ಶಾಲೆಗೆ ಹೆಸರು ತರುವ ವಿದ್ಯಾರ್ಥಿಗಳಾಗಿ ಎಂದು ತಿಳಿಸಿದರು.ನಂತರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್, ಪಿ ಕಾರ್ಡ್ ಬ್ಯಾಂಕ್ ಮತ್ತು ಶಿವ ಸಹಕಾರಿ ಬ್ಯಾಂಕ್‌ಗಳಿಗೆ ವಿದ್ಯಾರ್ಥಿಗಳು ಭೇಟಿ ನೀಡಿ ಪ್ರತಿಯೊಂದು ಬ್ಯಾಂಕಿನ ಮಾಹಿತಿ ಪಡೆದರು, ಪ್ರತಿ ಬ್ಯಾಂಕಿನಲ್ಲಿ ಮಕ್ಕಳ ಕೇಳುವ ಪ್ರಶ್ನೆಗೆ ಅಲ್ಲಿನ ಮ್ಯಾನೇಜರ್, ಅಧ್ಯಕ್ಷರು ಮತ್ತು ಸದಸ್ಯರು ಉತ್ತರ ನೀಡಿದರು.
ಎಲ್ಲಾ ಬ್ಯಾಂಕುಗಳಲ್ಲಿ ಮಕ್ಕಳಿಗೆ ಸಿಹಿ ನೀಡಿ ಮನಸ್ಸಿಗೆ ಖುಷಿ ನೀಡಿದರು. ಬ್ಯಾಂಕ್ ಅನ್ನು ನೋಡಿ ಮಕ್ಕಳು ಸಂತೋಷ ವ್ಯಕ್ತಪಡಿಸಿದ್ದಾರೆ. ವೀಕ್ಷಣೆಯ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕಿಯರು ಪಾಲ್ಗೊಂಡಿದ್ದರು.