ಹಾಲು ಉತ್ಪಾದನಾ ಪ್ರಮಾಣ ಹೆಚ್ಚಳಕ್ಕೆ ಕ್ರಮ ವಹಿಸಿ: ನಲಿನ್ ಅತುಲ್

KannadaprabhaNewsNetwork | Published : Aug 25, 2024 1:59 AM

ಸಾರಾಂಶ

2030ರ ವೇಳೆಗೆ ಜಿಲ್ಲೆಯಲ್ಲಿ ಹಾಲಿನ ಉತ್ಪಾದನೆಯನ್ನು 2.37 ಲಕ್ಷ ಟನ್‌ಗಳಿಂದ 3.60 ಲಕ್ಷ ಟನ್‌ಗಳಿಗೆ ಹೆಚ್ಚಿಸಲು ಮತ್ತು ಮತ್ತು ದೇಶಿಯ ಹಾಲು ಉತ್ಪಾದನೆಯಿಂದ ಹೆಚ್ಚುತ್ತಿರುವ ಹಾಲಿನ ಬೇಡಿಕೆ ಪೂರೈಸಲು ಕ್ರಮ ವಹಿಸಬೇಕು ಎಂದು ಕೊಪ್ಪಳ ಜಿಲ್ಲಾಧಿಕಾರಿ ನಲಿನ್ ಅತುಲ್ ಸೂಚಿಸಿದ್ದಾರೆ.

ಕೊಪ್ಪಳ: ಜಿಲ್ಲೆಯಲ್ಲಿ ಹೈನುಗಾರಿಕೆಗೆ ಪ್ರೋತ್ಸಾಹಿಸಿ, ಹಾಲು ಉತ್ಪಾದನಾ ಪ್ರಮಾಣ ಹೆಚ್ಚಳಕ್ಕೆ ಕ್ರಮ ವಹಿಸಬೇಕು ಎಂದು ಕೊಪ್ಪಳ ಜಿಲ್ಲಾಧಿಕಾರಿ ನಲಿನ್ ಅತುಲ್ ಅವರು ಪಶು ಇಲಾಖೆಯ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಉಪ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯ ಎಲ್ಲ ಜಾನುವಾರುಗಳಿಗೆ ಕಾಲಕ್ಕೆ ತಕ್ಕಂತೆ ಅಗತ್ಯ ಲಸಿಕಾ ಸೇವೆಗಳನ್ನು ನೀಡಬೇಕು. 2030ರ ವೇಳೆಗೆ ಜಿಲ್ಲೆಯಲ್ಲಿ ಹಾಲಿನ ಉತ್ಪಾದನೆಯನ್ನು 2.37 ಲಕ್ಷ ಟನ್‌ಗಳಿಂದ 3.60 ಲಕ್ಷ ಟನ್‌ಗಳಿಗೆ ಹೆಚ್ಚಿಸಲು ಮತ್ತು ಮತ್ತು ದೇಶಿಯ ಹಾಲು ಉತ್ಪಾದನೆಯಿಂದ ಹೆಚ್ಚುತ್ತಿರುವ ಹಾಲಿನ ಬೇಡಿಕೆ ಪೂರೈಸಲು ಕ್ರಮ ವಹಿಸಬೇಕು. ಹೈನುಗಾರಿಕೆ ಯೋಜನೆಯಡಿ ಅರ್ಹ ರೈತ ಮಹಿಳೆಯರಿಗೆ ಹಸು, ಎಮ್ಮೆ ಖರೀದಿಗಾಗಿ ಇರುವ ಸಹಾಯಧನ ಸೌಲಭ್ಯ ನೀಡಬೇಕು. ಇದಲ್ಲದೇ ಇಲಾಖೆಗಳ ಸೌಲಭ್ಯಗಳನ್ನು ರೈತರಿಗೆ ಒದಗಿಸುವ ಮೂಲಕ ಕೃಷಿ ಮಟ್ಟದಲ್ಲಿ ಹಾಲು ಉತ್ಪಾದನೆ ಮತ್ತು ರೈತರ ಆದಾಯ ದ್ವಿಗುಣಗೊಳಿಸಲು ಪ್ರಯತ್ನಿಸಬೇಕು. ಕೋಳಿ ಸಾಕಾಣಿಕೆಗಾಗಿ ಇರುವ ಸರ್ಕಾರದ ಸೌಲಭ್ಯಗಳನ್ನು ರೈತರಿಗೆ ನೀಡಬೇಕು. ಜಿಲ್ಲೆಯಲ್ಲಿರುವ ಕೋಳಿ ಫಾರಂಗಳಲ್ಲಿ ಸ್ವಚ್ಛತಾ ಮತ್ತು ಆರೋಗ್ಯದ ಕ್ರಮಗಳ ಪಾಲನೆಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಹೇಳಿದರು.

ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯಡಿ ಸ್ವೀಕೃತವಾದ ಅರ್ಜಿಗಳಲ್ಲಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ನೀಡಬೇಕು. ಜಾನುವಾರು ಪ್ರಾಣ ಹಾನಿ ಪ್ರಕರಣಗಳಡಿ ಪರಿಹಾರ ಪ್ರಕರಣ ಸಹ ಸಂಬಂಧಪಟ್ಟ ಜಾನುವಾರು ಮಾಲಿಕರಿಗೆ ತ್ವರಿತವಾಗಿ ವಿತರಿಸಲು ಪಶು ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಪಶು ಇಲಾಖೆ ಉಪನಿರ್ದೇಶಕ ಡಾ. ಪಿ.ಎಂ. ಮಲ್ಲಯ್ಯ ಮಾತನಾಡಿ, 20ನೇ ಜಾನುವಾರು ಗಣತಿಯ ಅಂಕಿ-ಅಂಶಗಳನ್ವಯ ಕೊಪ್ಪಳ ಜಿಲ್ಲೆಯಲ್ಲಿ 2,94,880 ದನ-ಎಮ್ಮೆಗಳು ಮತ್ತು 7,97,945 ಕುರಿ-ಮೇಕೆಗಳು ಇವೆ. ಜಿಲ್ಲೆಯ ಒಟ್ಟು ದನ-ಎಮ್ಮೆಗಳ ಪೈಕಿ ಅಂದಾಜು 25,000 ಸಂಚಾರಿ ಆಗಿವೆ. ಸುಮಾರು 5 ಲಕ್ಷ ಸಂಚಾರಿ ಕುರಿ-ಮೇಕೆಗಳಿವೆ. ವಾಸ್ತವವಾಗಿ ಈ ಜಾನುವಾರುಗಳು ಜಿಲ್ಲೆಯ ಮತ್ತು ಅಕ್ಕಪಕ್ಕದ ಜಿಲ್ಲೆಗಳ, ಹುಲ್ಲುಗಾವಲು ಪ್ರದೇಶ, ಅರಣ್ಯ ಪ್ರದೇಶ, ನೀರಾವರಿ ಪ್ರದೇಶ ಮತ್ತು ಚೌಗು ಪ್ರದೇಶಗಳಲ್ಲಿ ಉದ್ಭವವಾಗುವ ಮೇವಿನ ಮೇಲೆಯೇ ಸಂಪೂರ್ಣವಾಗಿ ಅವಲಂಬಿತವಾಗಿವೆ. ಹೈನುಗಾರಿಕೆ, ಕುರಿ ಸಾಕಾಣಿಕೆ ಮತ್ತು ಇತರ ಕಾರ್ಯಕ್ರಮದಡಿ ರೈತರಿಗೆ ಇಲಾಖೆಯ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಕೊಪ್ಪಳ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಕೊಪ್ಪಳ ಜಂಟಿ ಕೃಷಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಸಿ. ಉಕ್ಕುಂದ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸುಧಾಕರ ಮಾನೆ ಹಾಗೂ ರೇಷ್ಮೆ, ಮೀನುಗಾರಿಕೆ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ತಹಸೀಲ್ದಾರರು ಉಪಸ್ಥಿತರಿದ್ದರು.

Share this article