ಅಂಗವಿಕಲರ ಹೀಯಾಳಿಕೆ ಸಲ್ಲದು: ಬೀರಪ್ಪ ಅಂಡಗಿ

KannadaprabhaNewsNetwork | Published : Mar 18, 2024 1:50 AM

ಸಾರಾಂಶ

ಅಂಗವಿಕಲರಿಗೆ ಯಾರೂ ಹೀಯಾಳಿಸಬಾರದು. ಇದರಿಂದ ಅವರ ಮನಸ್ಸಿಗೆ ನೋವು ಆಗುತ್ತದೆ. ಹೀಯಾಳಿಕೆ ಸಲ್ಲದು.

ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷ ಹೇಳಿಕೆ, ಅಂಗವಿಕಲರಿಗೆ ಒಂದು ದಿನದ ಕಾರ್ಯಾಗಾರ

ಕನ್ನಡಪ್ರಭ ವಾರ್ತೆ ಕೊಪ್ಪಳ

ಅಂಗವಿಕಲರಿಗೆ ಯಾರೂ ಹೀಯಾಳಿಸಬಾರದು. ಇದರಿಂದ ಅವರ ಮನಸ್ಸಿಗೆ ನೋವು ಆಗುತ್ತದೆ. ಹೀಯಾಳಿಕೆ ಸಲ್ಲದು ಎಂದು ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷ ಬೀರಪ್ಪ ಅಂಡಗಿ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯ ಆಡಿಟೋರಿಯಂ ಹಾಲ್‌ನಲ್ಲಿ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ಜಿಲ್ಲೆಯ ಅಂಗವಿಕಲರಿಗೆ ಜರುಗಿದ ಒಂದು ದಿನದ ಕಾರ್ಯಾಗಾರದಲ್ಲಿ ಸ್ವಯಂ ಉದ್ಯೋಗದ ಕುರಿತು ಉಪನ್ಯಾಸ ನೀಡಿದ ಅವರು, ಅಂಗವಿಕಲರು ತಮ್ಮ ಅಂಗವಿಕಲತೆ ನೆಪವಾಗಿಟ್ಟುಕೊಂಡು ಯಾವುದೇ ರೀತಿಯಲ್ಲಿ ಉದ್ಯೋಗದಲ್ಲಿ ತೊಡಗದೆ ಬೇರೆಯವರ ಮೇಲೆ ಅವಲಂಬಿತರಾಗಿ ಬದುಕು ಸಾಗಿಸುವ ಬದಲಾಗಿ ಸರ್ಕಾರ ಹಾಗೂ ಸಂಘ-ಸಂಸ್ಥೆಗಳಿಂದ ಸಹಾಯ ಪಡೆದು ಸ್ವಉದ್ಯೋಗ ಮಾಡುವ ಮೂಲಕ ಸ್ವತಂತ್ರವಾಗಿ ಬದುಕು ಸಾಗಿಸಲು ಕಲಿಯಬೇಕಿದೆ. ಸರ್ಕಾರವು ಅಂಗವಿಕಲರ ಏಳಿಗೆಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.

ಜಿಪಂ ಸಹಾಯಕ ಯೋಜನಾ ಅಧಿಕಾರಿ ಬಸವರಾಜ ಮಾರನಬಸರಿ ಮಾತನಾಡಿ, ಅಂಗವೈಕಲ್ಯ ಮೆಟ್ಟಿನಿಂತು ಕೂಡಾ ಪುಟ್ಟರಾಜ ಗವಾಯಿಗಳು ಸೇರಿದಂತೆ ಅನೇಕರು ವಿವಿಧ ಕ್ಷೇತ್ರದಲ್ಲಿ ಸಾಧಕರಿದ್ದಾರೆ. ಅಂತಹ ಸಾಧನೆ ಮಾಡಿದ ಅಂಗವಿಕಲರನ್ನು ಸರ್ಕಾರ ಗುರುತಿಸಿ ಗೌರವಿಸುವ ಕೆಲಸ ಮಾಡಬೇಕಿದೆ. ಅಂಗವಿಕಲರು ಸಂಕುಚಿತವಾದ ಮನೋಭಾವನೆಯನ್ನು ಬಿಟ್ಟು ವಿಶಾಲವಾದ ಮನೋಭಾವನೆ ಬೆಳೆಸಿಕೊಳ್ಳುವ ಮೂಲಕ ಉತ್ತಮ ರೀತಿಯಲ್ಲಿ ಜೀವನ ನಿರ್ವಹಣೆ ಮಾಡಿ ಇತರರಿಗೆ ಮಾದರಿಯಾಗಬೇಕು ಎಂದು ಹೇಳಿದರು.

ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶ್ರೀದೇವಿ ಮಾತನಾಡಿ, ಅಂಗವಿಕಲರ ಕಲ್ಯಾಣಕ್ಕಾಗಿ ಸರ್ಕಾರವು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅಂಗವಿಕಲರು ಅವುಗಳನ್ನು ಸರಿಯಾದ ರೀತಿಯಿಂದ ಬಳಸಿಕೊಳ್ಳಬೇಕು. ಅಲ್ಲದೇ ಇರುವ ಯೋಜನೆಗಳನ್ನು ಪ್ರತಿಯೊಬ್ಬ ಅಂಗವಿಕಲರಿಗೆ ತಿಳಿಸುವ ಕಾರ್ಯ ಆಗಬೇಕಿದೆ ಎಂದು ಹೇಳಿದರು.

ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅಂಗವಿಕಲರು ಯಾವ ರೀತಿಯಲ್ಲಿ ಕೆಲಸ ಪಡೆಯಬಹುದು ಎಂಬುದರ ಕುರಿತು ದೇವರಾಜ ಪತ್ತಾರ ಮಾಹಿತಿ ನೀಡಿದರು.

ಯೋಜನಾ ನಿರೂಪಣಾ ಅಧಿಕಾರಿ ರಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಂಯೋಜನಾಧಿಕಾರಿ ನರಸಿಂಹಮೂರ್ತಿ, ಸೆಲ್ಕೋ ಸಂಸ್ಥೆಯ ಭರತೇಶ, ವೀರೇಶ ಹಾಲಗುಂದಿ ಇತರರಿದ್ದರು.

Share this article