ಸಮಗ್ರ ಕೃಷಿ ಪದ್ಧತಿ ಇಂದಿನ ಅತ್ಯಗತ್ಯ: ಡಾ. ಪಿ.ಎಲ್‌. ಪಾಟೀಲ

KannadaprabhaNewsNetwork | Published : Jan 18, 2024 2:04 AM

ಸಾರಾಂಶ

ಕೃಷಿಯನ್ನು ಉದ್ಯಮವನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ವಿವಿ ವಿವಿಧ ಮಾದರಿಯ ಕಾರ್ಯಕ್ರಮ ಆಯೋಜಿಸುತ್ತಿದೆ. ಆದರೆ, ಕೇಂದ್ರ ಸರ್ಕಾರ ಉದ್ಯಮ ಪರಿವರ್ತನೆಯ ಬದಲಿಗೆ ಸಮುದಾಯ ವಿಜ್ಞಾನವನ್ನಾಗಿ ಬದಲಿಸಲು ಚಿಂತಿಸುತ್ತಿದೆ.

ಯಲ್ಲಾಪುರ:

ತಂತ್ರಜ್ಞಾನದ ಯುಗದಲ್ಲಿ ಮಕ್ಕಳು ಜೀವಶಾಸ್ತ್ರ ಅಧ್ಯಯನಕ್ಕೆ ಆಸಕ್ತಿ ತೋರದಿರುವುದು ವಿಷಾದನೀಯ ಎಂದು ಧಾರವಾಡ ಕೃಷಿ ವಿವಿ ಕುಲಪತಿ ಡಾ. ಪಿ.ಎಲ್. ಪಾಟೀಲ ಹೇಳಿದರು.ತಾಲೂಕಿನ ಉಮ್ಮಚಗಿಯ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಹಮ್ಮಿಕೊಳ್ಳಲಾಗಿದ್ದ ಕೃಷಿ ವಿಜ್ಞಾನಿಗಳ ನಡೆ-ರೈತರ ಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಜೀವಶಾಸ್ತ್ರದ ಅಧ್ಯಯನ ಮಕ್ಕಳಿಗೆ ಉತ್ತಮ ಜ್ಞಾನ ನೀಡುತ್ತದೆ ಎಂಬುದನ್ನು ಪಾಲಕರು ಅವರಿಗೆ ಮನನ ಮಾಡಿಸಿ, ಆಸಕ್ತಿ ಮೂಡಿಸಬೇಕು. ರೈತರ ಮಕ್ಕಳಿಗೆ ಕೃಷಿ ವಿವಿಯಲ್ಲಿ ಸರ್ಕಾರ ಶೇ. ೫೦ರಷ್ಟು ಸ್ಥಾನ ಮೀಸಲಿರಿಸಿದೆ. ಇದನ್ನು ಪ್ರತಿಯೊಬ್ಬ ರೈತರ ಮಕ್ಕಳು ಉಪಯೋಗಪಡಿಸಿಕೊಳ್ಳಬೇಕು ಎಂದರು.ಕೃಷಿಯನ್ನು ಉದ್ಯಮವನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ವಿವಿ ವಿವಿಧ ಮಾದರಿಯ ಕಾರ್ಯಕ್ರಮ ಆಯೋಜಿಸುತ್ತಿದೆ. ಆದರೆ, ಕೇಂದ್ರ ಸರ್ಕಾರ ಉದ್ಯಮ ಪರಿವರ್ತನೆಯ ಬದಲಿಗೆ ಸಮುದಾಯ ವಿಜ್ಞಾನವನ್ನಾಗಿ ಬದಲಿಸಲು ಚಿಂತಿಸುತ್ತಿದೆ ಎಂದ ಅವರು, ರಾಜ್ಯದಲ್ಲಿ ಒಟ್ಟೂ ೬ ಕೃಷಿ, ೧ ತೋಟಗಾರಿಕೆ ಹಾಗೂ ೧ ಪಶುವೈದ್ಯಕೀಯ ವಿಶ್ವವಿದ್ಯಾಲಯಗಳಿವೆ. ಸಮಗ್ರ ಕೃಷಿ ಪದ್ಧತಿ ಇಂದಿನ ಅಗತ್ಯವಾಗಿದ್ದು, ರೈತರು ಸಾವಯವ ಪದ್ಧತಿಯೊಂದಿಗೆ ಶಿಫಾರಸು ಮಾಡಿದ ರಸಗೊಬ್ಬರ ಬಳಕೆ ಮಾಡಿಕೊಳ್ಳಬೇಕು. ಕೃಷಿಯೊಂದಿಗೆ ಉಪಕಸುಬು ರೈತರಿಗೆ ಆರ್ಥಿಕ ಸಬಲತೆಗೆ ನೆರವಾಗುತ್ತದೆ ಎಂದರು.ಕೃಷಿ ವಿವಿ ವಿಸ್ತರಣಾ ನಿರ್ದೇಶಕ ಎಸ್.ಎಸ್. ಅಂಗಡಿ ಮಾತನಾಡಿ, ಹನಿ ನೀರಾವರಿ ವ್ಯವಸ್ಥೆ ಅಳವಡಿಕೆ ಉತ್ತಮ ಕ್ರಮವಾಗಿದ್ದು, ಕೌಶಲ್ಯ, ಮೌಲ್ಯವರ್ಧನೆ ಅಳವಡಿಸಿಕೊಂಡು ನೀರು ಪೋಲಾಗದಂತೆ ಸಂರಕ್ಷಿಸಬೇಕು ಎಂದು ಹೇಳಿದರು.

ಸಂಶೋಧನಾ ನಿರ್ದೇಶಕ ಡಾ. ಬಿ.ಡಿ. ಬಿರಾದಾರ ಮಾತನಾಡಿ, ಸಾಂಪ್ರದಾಯಿಕ ಕೃಷಿ ಪದ್ಧತಿಯೊಂದಿಗೆ ರೈತರು ವೈಜ್ಞಾನಿಕ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದರು.ಶಿರಸಿ ಅರಣ್ಯ ಮಹಾವಿದ್ಯಾಲಯದ ಡೀನ್ ಡಾ. ಆರ್. ವಾಸುದೇವ ಮಾತನಾಡಿ, ರೈತರಿಗೆ ಆದಾಯದ ಮೂಲವಾಗಿರುವ ದಾಲ್ಚಿನ್ನಿ ಮತ್ತು ಏಕನಾಯಕ ಬೆಳೆಗಳ ಸುಲಭ ಕೃಷಿಯನ್ನು ಜಿಲ್ಲೆಯ ಬೆಟ್ಟ ಜಮೀನುಗಳಲ್ಲಿ ಬೆಳೆಯಬಹುದು. ಆದರೆ, ಜಿಲ್ಲೆಯಲ್ಲಿರುವ ೪೦೦೦೦ ಹೆಕ್ಟೇರ್ ಬೆಟ್ಟ ಜಮೀನುಗಳ ನಿರ್ವಹಣೆ ಸಮರ್ಪಕವಾದರೆ ಜೀವವೈವಿಧ್ಯದ ಸಂರಕ್ಷಣೆ ಸಾಧ್ಯವಾದೀತು ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಸೇ.ಸ. ಸಂಘದ ಅಧ್ಯಕ್ಷ ಎಂ.ಜಿ. ಭಟ್ಟ ಸಂಕದಗುಂಡಿ ಮಾತನಾಡಿ, ಹಿಂದೆಂದಿಗಿಂತಲೂ ರೈತರಿಗೆ ಕೃಷಿವಿಜ್ಞಾನಿಗಳ ಸಲಹೆ, ಸೂಚನೆ ಅಗತ್ಯವೆನಿಸಿದೆ. ರೈತರಿಗೆ ವಿವಿಧ ಹಂತಗಳಲ್ಲಿ ಎದುರಾಗುವ ಸಮಸ್ಯೆಗಳ ಪರಿಹಾರ ಸವಾಲಾಗಿದೆ. ವಿವಿಧ ಉಪಕರಣಗಳ ಖರೀದಿಗೆ ನೀಡುವ ಸಬ್ಸಿಡಿ ಪಡೆಯುವುದು ಕಷ್ಟವಾಗಿದ್ದು, ಈ ಸಮಸ್ಯೆಯನ್ನು ಕೃಷಿ ವಿವಿ ಗಂಭೀರವಾಗಿ ಪರಿಗಣಿಸಿ, ಉಪಯುಕ್ತ ಕ್ರಮಕೈಗೊಳ್ಳಬೇಕು ಎಂದರು.ಅಷ್ಟ್ರಾ ಯೋಜನೆಯ ನಿರ್ದೇಶಕ ಡಾ. ಎ.ಎಸ್. ವಸ್ತ್ರದ, ಸಹಾಯಕ ವಿಸ್ತರಣಾ ನಿರ್ದೇಶಕ ಎಸ್.ಎ. ಗದ್ದನಕೇರಿ, ಕೆವಿಕೆ ಉಸ್ತುವಾರಿ ಅಧಿಕಾರಿ ಡಾ. ಪಿ. ನಾಗರಾಜ, ಗ್ರಾಪಂ ಸದಸ್ಯ ಖೈತಾನ್ ಡಿಸೋಜಾ, ಸಹಕಾರಿ ಸಂಘದ ಗಿರೀಶ ಹೆಗಡೆ, ಶಿರಸಿಯ ಕೆ.ವಿ.ಕೆ. ರಂಗನಾಥ ಇದ್ದರು. ಆನಂತರ ನಡೆದ ವಿಚಾರಗೋಷ್ಠಿಯಲ್ಲಿ ಧಾರವಾಡ ಕೃಷಿ ವಿವಿ ತಜ್ಞ ಡಾ. ಆರ್.ವಿ. ಹೆಗಡೆ ಮತ್ತು ಡಾ. ಪಿ.ವಿ. ಪಾಟೀಲ ಮತ್ತಿತರರು ಅಡಕೆ, ಕಾಳುಮೆಣಸು, ವೆನಿಲ್ಲಾ ಮುಂತಾದ ಬೆಳೆಗಳ ಸಮಗ್ರ ನಿರ್ವಹಣೆ ಕುರಿತಂತೆ ರೈತರೊಂದಿಗೆ ಸಂವಾದ ಮತ್ತು ಚರ್ಚೆ ನಡೆಸಿದರು.೧೭ ವೈಎಲ್‌ಪಿ೦೨

ಉಮ್ಮಚಗಿಯಲ್ಲಿ ಕೃಷಿ ವಿಜ್ಞಾನಿಗಳ ನಡೆ-ರೈತರ ಕಡೆ ಕಾರ್ಯಕ್ರಮ ನಡೆಯಿತು.

Share this article