ಶಿರಹಟ್ಟಿ: ಪ್ರಪಂಚದಲ್ಲಿ ಅತ್ಯಂತ ಬೃಹತ್ ಲಿಖಿತ ಸಂವಿಧಾನ ಹೊಂದಿರುವ ಭಾರತ ಹಲವಾರು ಧರ್ಮ, ಸಂಸ್ಕೃತಿ ಹಾಗೂ ವಿವಿಧ ಭಾಷೆಗಳ ಸಂಗಮವಾಗಿದೆ. ಭಾರತೀಯರಾದ ನಮಗೆ ಗಣರಾಜ್ಯೋತ್ಸವ ಅತ್ಯಾನಂದ, ಅಭಿಮಾನದ ಹಾಗೂ ಐತಿಹಾಸಿಕ ದಿನವಾಗಿ ಸಂಭ್ರಮಿಸುವ ಸಮಯ ಎಂದು ತಹಸೀಲ್ದಾರ್ ಅನಿಲ್ ಬಡಿಗೇರ ಹೇಳಿದರು.
ಶುಕ್ರವಾರ ಪಟ್ಟಣದ ಎಸ್.ಎಂ. ಡಬಾಲಿ ತಾಲೂಕು ಕ್ರೀಡಾಂಗಣದಲ್ಲಿ ೭೫ನೇ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮೌನವಾಗಿ ನೋವುಂಡ ಅದೆಷ್ಟೋ ಹೋರಾಟಗಾರರ ಕಷ್ಟ ಕಾರ್ಪಣ್ಯ ಹಾಗೂ ತ್ಯಾಗ ಬಲಿದಾನಗಳ ದ್ಯೋತಕವಾಗಿ ನಾವಿಂದು ಸ್ವತಂತ್ರ ಪ್ರಜೆಗಳಾಗಿದ್ದೇವೆ. ಈ ಎಲ್ಲಾ ಸ್ವಾತಂತ್ರ್ಯ ಸೇನಾನಿಗಳಿಗೆ ಗೌರವ ಸಲ್ಲಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ಧರ್ಮ ಸಹಿಷ್ಠುತೆ, ಸಮಾನ ಮನೋಭಾವ ಅಂಶಗಳನ್ನು ಒಳಹೊಂಡಿರುವ ಆಧ್ಮಾತ್ಮಿಕ ದೇಶ ಭಾರತ ಇಂದು ವಿಶ್ವಗುರುವಾಗಿ ಮಾರ್ಪಾಡಾಗಿರುವದು ಹೆಮ್ಮೆಯ ಸಂಗತಿ. ಸರ್ವಧರ್ಮ ಸಮನ್ವಯ, ಸಾಮಾಜಿಕ ಸಮಾನತೆ ಮತ್ತು ಸಾವಿರಾರು ವರ್ಷಗಳ ಭವ್ಯ ಪರಂಪರೆಯ ಪ್ರತೀಕವಾದ ಭಾರತೀಯತ್ವದ ಪ್ರೇರಣೆಯಿಂದ ರೂಪಿತಗೊಂಡಿರುವ ಸಂವಿಧಾನವನ್ನು ಎಲ್ಲರೂ ಸ್ವೀಕರಿಸಿ ಆಚರಣೆಗೆ ತರಲು ನಿರ್ಧರಿಸಿದ್ದು ಇದೇ ಪವಿತ್ರ ದಿನದಂದು ಎಂದು ಹೇಳಿದರು.ಭಾರತವು ಎಲ್ಲ ರಂಗಗಳಲ್ಲಿ ಅಭಿವೃದ್ಧಿಯನ್ನು ಸಾಧಿಸಿದ್ದು, ಸಾಮಾಜಿಕ ನ್ಯಾಯ ಒದಗಿಸುವಲ್ಲಿ ವಿಫಲವಾಗಿದ್ದೇವೆ. ಅದಕ್ಕಾಗಿ ಸಾಮಾಜಿಕ ಬದುಕಿನಲ್ಲಿ ಸಾಮಾಜಿಕ ಮೌಲ್ಯಗಳನ್ನು ಕಾಪಾಡಿಕೊಳ್ಳುವ ಅನಿವಾರ್ಯತೆಯಿದೆ. ದೇಶದ ಸಮಸ್ತ ನಾಗರಿಕರಿಗೆ ಸಮಾನ ಸ್ಥಾನಮಾನ ಒದಗಿಸಲು, ರಾಷ್ಟ್ರದ ಸರ್ವಾಂಗೀಣ ಪ್ರಗತಿಯ ಜೊತೆಗೆ ಸುಭದ್ರ ಸಾರ್ವಭೌಮ ರಾಷ್ಟ್ರ ಕಟ್ಟಲು ಯುವಕರು ಪಣತೊಡಬೇಕು ಎಂದು ಕರೆ ಕೊಟ್ಟರು. ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಗಾಂಧೀಜಿಯವರು ಕಂಡ ಗ್ರಾಮ ಸ್ವರಾಜ್ ಕನಸು ನನಸಾಗಬೇಕಾದರೆ ಗ್ರಾಮಗಳು ಅಭಿವೃದ್ಧಿಯಾಗಬೇಕು. ಗ್ರಾಮಗಳು ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾದಂತೆ. ಗ್ರಾಮ ಪಂಚಾಯತಗಳಿಗೂ ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿದೆ. ಅಧಿಕಾರಿಗಳು ಸಮಸ್ಯೆಯ ಮೂಲ ಹುಡುಕಿ ಸಮರ್ಪಕ ಅನುದಾನ ಬಳಕೆ ಮಾಡಿಕೊಂಡು ಜನತೆಗೆ ಮೂಲಭೂತ ಸೌಲಭ್ಯ ಕಲ್ಪಿಸಿಕೊಡುವಲ್ಲಿ ಶ್ರಮಿಸಬೇಕು ಎಂದು ಕರೆ ನೀಡಿದರು.
ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಸುರೇಶ ಕುಂಬಾರ ಉಪನ್ಯಾಸ ನೀಡಿದರು. ತಾಪಂ ಇಓ ಡಾ. ನಿಂಗಪ್ಪ ಓಲೇಕಾರ, ಬಿಇಒ ಜಿ.ಎಂ ಮುಂದಿನಮನಿ, ಸಿಪಿಐ ನಾಗರಾಜ ಮಾಡಳ್ಳಿ, ಪಿಎಸ್‌ಐ ಈರಣ್ಣ ರಿತ್ತಿ, ಪಪಂ ಮುಖ್ಯಾಧಿಕಾರಿ ಸಿದ್ದರಾಯ ಕಟ್ಟಿಮನಿ, ಫಕ್ಕೀರೇಶ ರಟ್ಟಿಹಳ್ಳಿ, ಹೊನ್ನಪ್ಪ ಶಿರಹಟ್ಟಿ, ನಾಗರಾಜ ಲಕ್ಕುಂಡಿ, ಸಂದೀಪ ಕಪ್ಪತ್ತನವರ, ಎಚ್.ಆರ್. ಬೆನಹಾಳ, ಅಕ್ಬರ ಯಾದಗಿರಿ, ಆನಂದ ಕೋಳಿ, ಮಾಬುಸಾಬ ಲಕ್ಷ್ಮೇಶ್ವರ ಇತರರು ಇದ್ದರು. ಶಿಕ್ಷಕ ಎಂ.ಕೆ. ಲಮಾಣಿ ಕಾರ್ಯಕ್ರಮ ನಿರೂಪಿಸಿದರು.