ಚಿತ್ರದುರ್ಗ: 800 ವರ್ಷಗಳ ಹಿಂದೆ ಬಾಳಿ ಬದುಕಿದ ಶಿವಶರಣರು ವಚನಗಳಲ್ಲಿ ಸಾರಿದ ಸಂದೇಶಗಳು ಇಂದಿನ ಸಮಾಜದಲ್ಲೂ ಪ್ರಸ್ತುತ ಎನಿಸುತ್ತವೆ. ಅವರು ಹೇಳಿದ ಸಾಕಷ್ಟು ವಿಚಾರಗಳು ವಾಸ್ತವಾಗಿವೆ. ಸಮಾಜದ ಬದಲಾವಣೆಗೆ ಸಹಕಾರಿಯಾಗಿವೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
ಶರಣರು ಹೇಳಿದ ಮಾತು ನಾವು ಪಾಲಿಸಿದ್ದೇವೆಯೇ ಎಂದು ನಮ್ಮಳಗೆ ಪ್ರಶ್ನೆ ಮಾಡಿಕೊಂಡರೆ ನಮಗೆ ಸಾಕಷ್ಟು ಅಂತರ ಕಾಣಿಸುತ್ತದೆ. 12ನೇ ಶತಮಾನದಲ್ಲಿ ಎಲ್ಲಾ ಕಾಯಕ ಸಮುದಾಯಗಳಿಂದ ಬಂದವರು ಅನುಭವ ಮಂಟಪವನ್ನು ಕಟ್ಟಿದರು. ಕಾಯಕ, ಭಕ್ತಿ, ದಾಸೋಹ ಶರಣ ಪ್ರಮುಖ ತತ್ವಗಳು ಅಂಬಿಗ ವೃತ್ತಿ ಮಾಡುತ್ತಿದ್ದ ಚೌಡಯ್ಯ ಕೂಡ ಪ್ರಮುಖ ಶಿವಶರಣ. ಇವರನ್ನು ನೇರ ನಿಷ್ಠುರಿ, ನಿಜ ಶರಣ ಎಂದೇ ಎಲ್ಲರೂ ಕರೆಯುತ್ತಿದ್ದರು. ಅಂಬಿಗರ ಚೌಡಯ್ಯ ತನ್ನ ವಚನಗಳಲ್ಲಿ ತಳ ಸಮುದಾಯದ ಜನರ ವೇದನೆಗಳನ್ನು ಗಟ್ಟಿತನದಿಂದ ಪ್ರಸ್ತುತ ಪಡಿಸಿದ್ದಾರೆ. ಅಂಬಿಗರ ಚೌಡಯ್ಯನವರ ಜ್ಞಾನ ಹಾಗೂ ಸಮಾಜದ ಬಗೆಗಿನ ತತ್ಪರತೆ ಎಲ್ಲರಿಗೂ ಮಾದರಿಯಾಗಿದೆ. ಚೌಡಯ್ಯನವರ ವಚನಗಳು ಅರ್ಥಪೂರ್ಣವಾಗಿವೆ ಎಂದರು.
ಶಿವಶರಣರಲ್ಲಿ ದಾಸೋಹ ತತ್ವ ಇತ್ತು. ಇದು ಸಂಪತ್ತನ್ನು ಕ್ರೂಡೀಕರಣ ಮಾಡುವುದಕ್ಕೆ ವಿರುದ್ಧವಾಗಿತ್ತು. ಸಂಪತ್ತನ್ನು ಸಮಾನವಾಗಿ ಹಂಚಲಾಗುತ್ತಿತ್ತು. ಈಗಿನ ಪ್ರಪಂಚದಲ್ಲಿ ಸಂಪತ್ತನ್ನೂ ಕ್ರೂಡಿಕರಿಸಿ ಮಕ್ಕಳು ಮತ್ತು ಮೊಕ್ಕಳಿಗೆ ಶೇಖರಿಸಿಡುವ ಪರಿಪಾಠ ಬೆಳೆದು ಬಂದಿದೆ. ಹಂಚುವ ಸಂಸ್ಕೃತಿ ಕಡಿಮೆಯಾಗುತ್ತಿದೆ. ವಿಭೂತಿ ಹಾಗೂ ರುದ್ರಾಕ್ಷಿ ಧರಿಸಿದ ತಕ್ಷಣ ನಾವು ಶಿವಶರಣರು ಆಗುವುದಿಲ್ಲ.ಅವರ ತತ್ವಗಳನ್ನು ಮೈಗೂಡಿಸಿಕೊಳ್ಳಬೇಕು. ಜ್ಯಾತ್ಯಾತೀತ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಉಪನ್ಯಾಸಕ ಡಾ.ಬಿ.ಎಂ.ಗುರುನಾಥ ಮಾತನಾಡಿ, ಅಂಬಿಗರ ಚೌಡಯ್ಯ ಕಲ್ಯಾಣದ ಧೃವತಾರೆ ಹಾಗೂ ತತ್ವಜ್ಞಾನಿಯಾಗಿದ್ದರು. ಇವರ 400 ಕ್ಕೂ ಅಧಿಕ ವಚನಗಳು ಲಭ್ಯವಾಗಿವೆ. ಇವುಗಳಲ್ಲಿ ಸಮಾಜದ ಜಾತಿ ವ್ಯವಸ್ಥೆ, ಮೂಡ ನಂಬಿಕೆಗಳ ಬಗ್ಗೆ ಚುಚ್ಚು ಮಾತುಗಳಿವೆ. ಹಸಿಗೋಡೆಗೆ ಹರಳು ಎಸೆದಂತೆ ಚೌಡಯ್ಯ ವಚನಗಳು. ಬಸವಣ್ಣ ಸೇರಿದಂತೆ ಬಹಳಷ್ಟು ವಚನಕಾರರು ಚೌಡಯ್ಯನನ್ನು ನಿಜಶರಣ ಎಂದು ಕರೆದಿದ್ದಾರೆ.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೆಶಕ ಎಸ್.ಕೆ.ಮಲ್ಲಿಕಾರ್ಜುನ್ ಸ್ವಾಗತಿಸಿದರು. ರಂಗ ನಿರ್ದೇಶಕ ಕೆ.ಪಿ.ಎಂ.ಗಣೇಶಯ್ಯ ನಿರೂಪಿಸಿದರು. ನಿವೃತ್ತ ಪಿ.ಯು.ಉಪ ನಿರ್ದೇಶಕ ನಾಗರಾಜ ವಂದಿಸಿದರು.