ನಮಾಜ್‌ ವಿವಾದದ ಹಿಂದೆ ಸಾಮರಸ್ಯ ಹದಗೆಡಿಸುವ ಉದ್ದೇಶ: ರಮಾನಾಥ ರೈ

KannadaprabhaNewsNetwork |  
Published : Jun 01, 2024, 12:48 AM IST
ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿರುವ ರಮಾನಾಥ ರೈ. | Kannada Prabha

ಸಾರಾಂಶ

ರಸ್ತೆಯಲ್ಲಿ ನಮಾಜ್‌ ಮಾಡಿದ ವಿಚಾರದ ಬಗ್ಗೆ ವಿವಾದ ಎಬ್ಬಿಸೋದು ನೋವು ತಂದಿದೆ. ಇದರ ಹಿಂದಿರುವ ಕಾಣದ ಕೈಗಳ ಕೈವಾಡ ತಿಳಿಯುವ ಅಗತ್ಯವಿದೆ ಎಂದು ಲೋಕಸಭಾ ಚುನಾವಣಾ ಅಭ್ಯರ್ಥಿ ಪದ್ಮರಾಜ್‌ ಪೂಜಾರಿ ಹೇಳಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಕಂಕನಾಡಿ ಮಸೀದಿ ಹೊರಗಿನ ರಸ್ತೆಯಲ್ಲಿ ನಮಾಜ್‌ ಮಾಡಿದ ಚಿಕ್ಕ ವಿಚಾರವನ್ನೇ ದೊಡ್ಡದು ಮಾಡಿ ವಿವಾದ ಸೃಷ್ಟಿಸಿರುವ ಹಿಂದೆ, ಜಿಲ್ಲೆಯಲ್ಲಿ ಮತೀಯ ಸಾಮರಸ್ಯ ಹದಗೆಡಿಸಿ ಸಂಘರ್ಷದ ವಾತಾವರಣ ಸೃಷ್ಟಿಸುವ ಉದ್ದೇಶ ಅಡಗಿದೆ ಎಂದು ಮಾಜಿ ಸಚಿವ ರಮಾನಾಥ ರೈ ಆರೋಪಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವ ಧರ್ಮವೇ ಇರಲಿ, ದೇವರು ಒಬ್ಬರೇ. ಮಸೀದಿ ಹೊರಗಡೆ ಪ್ರಾರ್ಥನೆ ಮಾಡಿದ ಮಾತ್ರಕ್ಕೆ ಸುಮೋಟೊ ಕೇಸ್‌ ದಾಖಲಿಸುವ ಅಗತ್ಯ ಇರಲಿಲ್ಲ. ಆ ಪ್ರಾರ್ಥನೆಯ ವಿಡಿಯೊ ಮಾಡಿ ಸೌಹಾರ್ದತೆಗೆ ಧಕ್ಕೆ ತರುವ ಕಾರ್ಯ ಮಾಡಿದವರ ಮೇಲೆ ಕ್ರಮ ಆಗಬೇಕು ಎಂದು ಹೇಳಿದರು.

ಎಲ್ಲ ಧರ್ಮಗಳಲ್ಲೂ ಕೆಲವೊಂದು ಕಾರ್ಯಕ್ರಮಗಳು ರಸ್ತೆಯಲ್ಲಿ ನಡೆಯುತ್ತವೆ. ಅದನ್ನೆಲ್ಲ ತಪ್ಪು ಎಂದು ಹೇಳುತ್ತಾ ಹೋಗಲು ಸಾಧ್ಯ ಇಲ್ಲ. ಜಿಲ್ಲೆಗೆ ಬೆಂಕಿ ಕೊಡುತ್ತೇನೆ ಎಂದಾಗ, ಪ್ರಚೋದನಕಾರಿ ಭಾಷಣ, ಕೃತ್ಯ ನಡೆದಾಗಲೂ ಸುಮೋಟೊ ಪ್ರಕರಣ ಆಗಿಲ್ಲ. ಈಗ ಇಷ್ಟು ಸಣ್ಣ ವಿಷಯವನ್ನು ದೊಡ್ಡದು ಮಾಡುವುದು ಸರಿಯಲ್ಲ. ಪ್ರಕರಣದಲ್ಲಿ ಏನು ತಪ್ಪು ನಡೆದಿದೆಯೋ ಅದನ್ನು ಸರಿಪಡಿಸುವ ಕೆಲಸ ಆಗಿದೆ ಎಂದು ರಮಾನಾಥ ರೈ ಹೇಳಿದರು.

ಮುಖಂಡರಾದ ಅಶ್ರಫ್ ಕೆ., ಅಪ್ಪಿ, ಇಬ್ರಾಹಿಂ ಕೋಡಿಜಾಲ್, ಶುಭೋದಯ ಆಳ್ವ, ಡಿ.ಕೆ. ಅಶೋಕ್‌, ಶಶಿಕಲಾ ಇದ್ದರು.

ಕಾಣದ ಕೈಗಳ ಕೈವಾಡ: ಪದ್ಮರಾಜ್‌

ರಸ್ತೆಯಲ್ಲಿ ನಮಾಜ್‌ ಮಾಡಿದ ವಿಚಾರದ ಬಗ್ಗೆ ವಿವಾದ ಎಬ್ಬಿಸೋದು ನೋವು ತಂದಿದೆ. ಇದರ ಹಿಂದಿರುವ ಕಾಣದ ಕೈಗಳ ಕೈವಾಡ ತಿಳಿಯುವ ಅಗತ್ಯವಿದೆ ಎಂದು ಲೋಕಸಭಾ ಚುನಾವಣಾ ಅಭ್ಯರ್ಥಿ ಪದ್ಮರಾಜ್‌ ಪೂಜಾರಿ ಹೇಳಿದರು.

ಇಂತಹ ವಿಚಾರ ಬಂದಾಗ ನೇರವಾಗಿ ಸುಮೊಟೊ ಕೇಸ್‌ ದಾಖಲಿಸುವುದು ಸರಿಯಾದ ಕ್ರಮ ಅಲ್ಲ. ದ.ಕ.ದಲ್ಲಿ ಧಾರ್ಮಿಕ ವಿಚಾರಗಳ ಬಗ್ಗೆ ಪರಸ್ಪರ ಗೌರವ ನೀಡಿ ಬಾಳುತ್ತಿದ್ದೇವೆ. ಇದುವರೆಗೆ ಇಂಥ ವಿಚಾರದಲ್ಲಿ ಸಮಸ್ಯೆ ಆಗಿಲ್ಲ. ಈಗ ಇಂಥ ಚಿಕ್ಕಪುಟ್ಟ ಘಟನೆ ಎತ್ತಿ ಹಿಡಿದು ಯಾವ ಸಂದೇಶ ನೀಡಲು ಹೋಗುತ್ತಿದ್ದಾರೆ? ಮುಂದೆ ಇಂಥ ಕೆಲಸ ಆಗಬಾರದು. ಸೌಹಾರ್ದತೆ ಕೆಡಿಸುವ ಕೆಲಸಕ್ಕೆ ಜನರು ಮನ್ನಣೆ ನೀಡಬಾರದು ಎಂದರು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ