ಕನ್ನಡಪ್ರಭ ವಾರ್ತೆ ಮೈಸೂರುಸ್ಪರ್ಧೆಗಳು ಕ್ರಿಯಾತ್ಮಕ ಕಾಯಕಕ್ಕೆ ಎಡೆ ಮಾಡಿಕೊಡುತ್ತದೆ. ವಿದ್ಯಾರ್ಥಿಗಳು ಈ ರೀತಿಯ ಸ್ಪರ್ಧೆಗಳಲ್ಲಿ ಭಾಗವಹಿಸುವ ಮನಸ್ಸು ಮಾಡಿದರೆ ಕೆಲವೇ ಸಮಯದಲ್ಲಿ ಚಿಂತನಾತ್ಮಕ ವ್ಯಕ್ತಿತ್ವದ ವ್ಯಕ್ತಿಗಳಾಗಿ ಹೊರಹೊಮ್ಮುತ್ತಾರೆ, ಇದರಿಂದ ವಂಚಿತರಾದರೆ ಚಟುವಟಿಕೆಯಾಧಾರಿತ ಬದುಕನ್ನು ರೂಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸಕಲೇಶಪುರದ ಜೆಎಸ್ಎಸ್ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಆರ್. ಮಂಜುನಾಥ್ ಅಭಿಪ್ರಾಯಪಟ್ಟರು.ವಿಜಯನಗರದ ಸಂತ ಜೋಸೆಫರ ಕೇಂದ್ರೀಯ ಶಾಲೆಯಲ್ಲಿ ಎಂಡಿಇಎಸ್ ನ ವಜ್ರ ಮಹೋತ್ಸವದ ಪ್ರಯುಕ್ತ ಹಸಿರು ಪರಿಸರ ಸ್ವಚ್ಛ ದಾಯಕ ವಲಯ ದ್ಯೇಯೋದ್ದೇಶ ಅಡಿಯಲ್ಲಿ ಶನಿವಾರ ಆಯೋಜಿಸಿದ್ದ ಅಂತರ ಪ್ರೌಢಶಾಲಾ ಕನ್ನಡ ಚರ್ಚಾ ಸ್ಪರ್ಧೆ ಮತ್ತು ಜನಪದ ಗೀತೆ ಗಾಯನ ಸ್ಪರ್ಧೆ - 2025 ಅನ್ನು ಉದ್ಘಾಟಿಸಿ ಅವರು ಮಾತನಾಡಿದರು. ಚರ್ಚಾ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ಸರಿ ತಪ್ಪುಗಳ ವಿಮರ್ಶಾತ್ಮಕ ಚಿಂತನೆಯ ಮೂಲಕ, ವಿಶ್ಲೇಷಣೆಯ ಮನೋಭಾವದ ವಿಸ್ತಾರಕ್ಕೆ ನೆರವಾಗುತ್ತದೆ. ಮಾತಿನಲ್ಲಿ ಬದ್ಧತೆ, ಪರಿಪೂರ್ಣತೆ, ಕ್ರಿಯಾತ್ಮಕತೆಯನ್ನು ಬೆಳೆಸುವಲ್ಲಿ ಅಭೂತಪೂರ್ವವಾಗಿ ಸಹಾಯಕಾರಿಯಾಗಿದೆ. ಪ್ರಸ್ತುತ ದಿನಗಳಲ್ಲಿ ಜನಪದ ಸೃಷ್ಟಿಯಾಗುತ್ತಿಲ್ಲ. ಇರುವ ಜನಪದ ಸಂಪತ್ತನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪಾಶ್ಚಿಮಾತ್ಯ ಆಧುನಿಕ ಮಾಧ್ಯಮದ ಹೆಚ್ಚಿನ ಬಳಕೆಯ ಕಾಲಘಟ್ಟದಲ್ಲಿ, ಮೂಲ ಜನಪದವನ್ನು ಕಟ್ಟುವ, ಕಟ್ಟಿರುವ ತಾಯಿಬೇರನ್ನು ರಕ್ಷಿಸುವ ಮನೋಭಾವವನ್ನು ವಿದ್ಯಾರ್ಥಿಗಳಲ್ಲಿ ಸ್ಥಿರವಾಗುವಂತೆ ಮಾಡಬೇಕಾದದ್ದು, ಶಿಕ್ಷಣ ಕ್ಷೇತ್ರದ ಕರ್ತವ್ಯವಾಗಿದೆ. ಜಗತ್ತಿನಲ್ಲಿ ಕಾಯಕದೊಂದಿಗೆ ಮೌಲ್ಯಯುತ ಬದುಕನ್ನು ಕಟ್ಟಿಕೊಳ್ಳಲು ನೆರವು ನೀಡಿದ ಸಾಹಿತ್ಯ ಯಾವುದಾದರೂ ಇದ್ದರೆ ಅದು ಜಾನಪದ ಸಾಹಿತ್ಯವಾಗಿದೆ. ಈ ನಿಟ್ಟಿನಲ್ಲಿ ಸಂತ ಜೋಸೆಫರ ಕೇಂದ್ರೀಯ ಶಾಲೆಯು ಜನಪದ ಗೀತೆ ಗಾಯನ ಸ್ಪರ್ಧೆಯನ್ನು, ಕನ್ನಡ ಚರ್ಚಾ ಸ್ಪರ್ಧೆಯ ಕಾರ್ಯಕ್ರಮಗಳನ್ನು ಮೈಸೂರು ನಗರದ 18 ಪ್ರತಿಷ್ಠಿತ ಶಾಲೆಗಳ 70ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿರುವುದು ಪ್ರಸಂಶನೀಯ ಕಾಯಕವಾಗಿದೆ ಎಂದರು.ಎಂ.ಡಿ.ಇ.ಎಸ್ ನ ಸಿಇಒ ಸೆಬಿ ಮಾವೇಲಿ ಉಪಸ್ಥಿತರಿದ್ದರು.ಶಾಲೆಯ ಪ್ರಾಂಶುಪಾಲೆ ಎಲಿಜಬೆತ್ ಎಸ್. ಥಾಮಸ್ ಸ್ವಾಗತಿಸಿದರು. ಶಾಲೆಯ ಕನ್ನಡ ವಿಭಾಗದ ಮುಖ್ಯಸ್ಥೆ ಪದ್ಮಕುಮಾರಿ ವಂದಿಸಿದರು. ಶಾಲೆಯ ಗಾಯನ ತಂಡವು ಪ್ರಾರ್ಥಿಸಿದರು. ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಅದ್ವಿತಿ ಕೃಷ್ಣಮೂರ್ತಿ ನಿರೂಪಿಸಿದರು. ತೀರ್ಪುಗಾರರಾದ ಗಾಯಕ ಮತ್ತು ಸಪಸ ಸಂಗೀತ ಶಿಕ್ಷಕ ಪುರುಷೋತ್ತಮ ಕಿರುಗಸೂರು, ಸಹಾಯಕ ಪ್ರಾಧ್ಯಾಪಕ, ಗಾಯಕ ಎಂ. ಮೈಸೂರು ಮಹಾಲಿಂಗ, ಸಹಾಯಕ ಪ್ರಾಧ್ಯಾಪಕರಾದ ಡಾ. ಯಶವಂತ ಕುಮಾರ್, ಸಾಹಿತಿ ಪರಮೇಶ ಕೆ. ಉತ್ತನಹಳ್ಳಿ, ಪ್ರಾಂಶುಪಾಲೆ ಮೇರಿ ಮಾರ್ಗರೇಟ್ ನಿರ್ಮಲ, ಸಂತ ಜೋಸೆಫರ ವಿವಿಧ ಶಾಲೆಗಳಿಂದ ಆಗಮಿಸಿದ್ದ ಪ್ರಾಂಶುಪಾಲರು, ಶಾಲಾ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ಇದ್ದರು.