ಅ.4ರಿಂದ ಅಂತಾರಾಜ್ಯ ವಿವಿ ಕಬಡ್ಡಿ ಕ್ರೀಡಾಕೂಟ

KannadaprabhaNewsNetwork |  
Published : Sep 28, 2025, 02:01 AM ISTUpdated : Sep 28, 2025, 02:02 AM IST
ಶಾಸಕ ಅಶೋಕ ಪಟ್ಟಣ | Kannada Prabha

ಸಾರಾಂಶ

ಅ.4 ರಿಂದ 7ರವರೆಗೆ ಸೌಥ್ ಜೋನ್ ಅಂತಾರಾಜ್ಯ ವಿಶ್ವವಿದ್ಯಾಲಯ ಪುರುಷರ ಕಬಡ್ಡಿ ಪಂದ್ಯಾವಳಿ ನಡೆಯಲಿವೆ

ಕನ್ನಡಪ್ರಭ ವಾರ್ತೆ ರಾಮದುರ್ಗ

ಭಾರತೀಯ ವಿಶ್ವವಿದ್ಯಾಲಯಗಳ ಸಂಘಟನೆ ಮತ್ತು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ಹಾಗೂ ಸ್ಥಳೀಯ ಈರಮ್ಮ ಶಿ.ಯಾದವಾಡ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಸಹಯೋಗದಲ್ಲಿ ಅ.4 ರಿಂದ 7ರವರೆಗೆ ಸೌಥ್ ಜೋನ್ ಅಂತಾರಾಜ್ಯ ವಿಶ್ವವಿದ್ಯಾಲಯ ಪುರುಷರ ಕಬಡ್ಡಿ ಪಂದ್ಯಾವಳಿ ನಡೆಯಲಿವೆ ಎಂದು ಕಾಲೇಜು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ, ಸರ್ಕಾರದ ಮುಖ್ಯಸಚೇತಕ ಅಶೋಕ ಪಟ್ಟಣ ಹೇಳಿದರು.

ಮಂಗಳವಾರ ಮಹಾವಿದ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲ್ಕು ದಿನಗಳ ಕಾಲ ಮಹಾವಿದ್ಯಾಲಯದ ಆವರಣದಲ್ಲಿ ನಡೆಯುವ ಪುರುಷರ ಕಬಡ್ಡಿ ಪಂದ್ಯಾವಳಿಯಲ್ಲಿ ಕರ್ನಾಟಕ, ಆಂಧ್ರಪ್ರದೇಶ, ಕೇರಳ, ತೆಲಂಗಾಣ, ತಮಿಳುನಾಡು, ಪಾಂಡಿಚೇರಿ ರಾಜ್ಯಗಳ 131 ವಿಶ್ವವಿದ್ಯಾಲಯಗಳ 2100 ಕಬಡ್ಡಿ ಆಟಗಾರರು ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ನಾಕೌಟ್ ಹಂತದ ಪಂದ್ಯವಾಗಿದ್ದು ಪಂದ್ಯಾವಳಿಗಳನ್ನು ನಾಲ್ಕು ಮ್ಯಾಟ್ ಅಂಕಣಗಳಲ್ಲಿ ನಡೆಸಲಾಗುವುದು. ಹೊನಲು ಬೆಳಕಿನ ಪಂದ್ಯಾವಳಿ ಕೂಡ ನಡೆಯಲಿವೆ. ಅಂತಾರಾಜ್ಯ ಮಟ್ಟದ ಕ್ರೀಡಾಕೂಟಗಳನ್ನು ವಿಶೇಷವಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳು ಸಂಘಟನೆ ಜವಾಬ್ದಾರಿ ನಿರ್ವಹಣೆ ಮಾಡುತ್ತಿವೆ. ಕರ್ನಾಟಕದ ಇತಿಹಾಸದಲ್ಲಿ ಪ್ರಥಮ ಬಾರಿ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ರಾಮದುರ್ಗದಲ್ಲಿ ನಡೆಯುತ್ತಿದೆ ಎಂದರು.

ಆರು ರಾಜ್ಯಗಳ 131 ವಿವಿಗಳಿಂದ ಪ್ರತಿ ತಂಡದಿಂದ 14 ಜನರು ಆಗಮಿಸುವರು. ಜತೆಗೆ ನೂರು ಜನ ತರಬೇತಿದಾರರು, 60 ನುರಿತ ನಿರ್ಣಾಯಕರು ಸೇರಿ ಸುಮಾರು ಎರಡು ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಆಗಮಿಸುವ ನಿರೀಕ್ಷೆ ಇದೆ. ಎಲ್ಲರಿಗೂ ವಸತಿ, ಊಟ ಮತ್ತು ಉಪಹಾರದ ವ್ಯವಸ್ಥೆ ಮಾಡಲಾಗಿದೆ. ಹೊರರಾಜ್ಯದಿಂದ ಕ್ರೀಡಾಪಟುಗಳು ಆಗಮಿಸಲಿದ್ದು ಅವರಿಗೆ ಆರೋಗ್ಯ ತಪಾಸಣೆಗೆ ಮತ್ತು ರಕ್ಷಣೆಗೆ ಸೂಕ್ತ ವ್ಯವಸ್ಥೆ ಮಾಡಿದ್ದು ಗ್ರಾಮೀಣ ಕ್ರೀಡೆ ಅಂತಾರಾಜ್ಯ ಮಟ್ಟದಲ್ಲಿ ನಡೆಯುತ್ತಿದ್ದು ಕ್ರೀಡಾಪ್ರೇಮಿಗಳಿಗೆ ವೀಕ್ಷಿಸಲು 800 ಜನರು ಏಕಕಾಲದಲ್ಲಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.

ಈ ವೇಳೆ ಕಾಲೇಜು ಮೇಲುಸ್ತುವಾರಿ ಸಮಿತಿ ಸದಸ್ಯ ಪ್ರೊ.ಎಸ್.ಜಿ.ಚಿಕ್ಕನರಗುಂದ, ಪ್ರೊ.ಎಸ್.ಎಸ್.ಕೊಡತೆ, ಶಿವಾನಂದ ಚಿಕ್ಕೋಡಿ, ಬಸವರಾಜ ಗಂಗಣ್ಣವರ, ಪ್ರಾಚಾರ್ಯ ಎಂ.ಡಿ.ಕಮತಗಿ, ದೈಹಿಕ ಶಿಕ್ಷಣ ನಿರ್ದೇಶಕ ಎಂ.ಕೆ.ಸಾರವಾನ ಸೇರಿದಂತೆ ಇತರರು ಇದ್ದರು.

PREV

Recommended Stories

ಜಾನಪದ ಕಲೆ ಉಳಿಸಲು ಸಂಘಟನೆಗಳ ಪಾತ್ರ ಪ್ರಮುಖ: ಎಂ.ಎಂ. ವಿರಕ್ತಮಠ
ಮತ ಹಾಕಿದ ಜನತೆಗೆ ಸಾರ್ಥಕ ಭಾವ ತಂದಿದ್ದೇನೆ