ಕಟ್ಟೆಹಕ್ಕಲುನಲ್ಲಿ 8ನೇ ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನ
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿಸಾಹಿತ್ಯ ಕೃಷಿಯ ಮೂಲಕ ಕನ್ನಡಕ್ಕೆ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಯನ್ನು ತಂದು ಕೊಟ್ಟಿರುವ ಕುವೆಂಪು ಯು.ಆರ್.ಅನಂತಮೂರ್ತಿ ಮುಂತಾದ ಕವಿಪುಂಗವರಿಂದಾಗಿ ಇಡೀ ರಾಷ್ಟ್ರವೇ ಕರುನಾಡನ್ನು ತಿರುಗಿ ನೀಡುವಂತೆ ಮಾಡಿದೆ. ಎಳೆಯ ಪ್ರಾಯದಲ್ಲೇ ನಾವು ಸಾಹಿತ್ಯಾಸಕ್ತಿಯನ್ನು ಬೆಳೆಸಿಕೊಳ್ಳುವ ಮೂಲಕ ಈ ಪರಂಪರೆಯನ್ನು ಮುಂದುವರಿಸುವ ಹೊಣೆಗಾರಿಕೆಯನ್ನು ವಹಿಸಬೇಕಿದೆ ಎಂದು ಮಕ್ಕಳ ಸಾಹಿತ್ಯ ಸಮ್ಮೇಳನಾಧ್ಯಕ್ಷ ಎಚ್.ವಿ.ವಂಶಿಕ್ ಪ್ರಭು ಹೇಳಿದರು.
ನಗರದ ಕಟ್ಟೆಹಕ್ಕಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶನಿವಾರ ತಾಲೂಕು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ನಡೆದ 8ನೇ ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಾಥಮಿಕ ಶಾಲಾ ಹಂತದಲ್ಲಿರುವ ನಮ್ಮಂತಹ ಮಕ್ಕಳಲ್ಲಿ ಸಾಹಿತ್ಯಾಸಕ್ತಿಯನ್ನು ಮೂಡಿಸಲು ಇಂತಹ ಸಮ್ಮೇಳನಗಳು ಅತ್ಯಂತ ಆಶಾದಾಯಕವಾಗಿದೆ ಎಂದರು.ಶ್ರೇಷ್ಠ ಭಾಷೆಯಾಗಿರುವ ಕನ್ನಡ ಸಾಹಿತ್ಯ ಹಳೆಗನ್ನಡ, ನಡುಗನ್ನಡ ಹೊಸಗನ್ನಡ ಹೀಗೇ ರೂಪುಗೊಂಡಿಡಿದೆ. ಇದನ್ನು ಶ್ರೀಮಂತಗೊಳಿಸಲು ವಚನಕಾರರು, ದಾಸ ಶ್ರೇಷ್ಠರು, ಕವಿಗಳು ಸಾಹಿತಿಗಳು, ನಾಟಕಕಾರರು ವಿಮರ್ಶಕರು ಕೂಡಾ ಕಾರಣರಾಗಿದ್ದು ಭಾಷೆಗೆ ತಮ್ಮದೇ ಆದ ಕೊಡುಗೆ ನೀಡುವ ಮೂಲಕ ವಿಶ್ವ ಮಟ್ಟದಲ್ಲಿ ಕನ್ನಡ ಶ್ರೇಷ್ಠ ಭಾಷೆಯಾಗಿ ಹೊರಹೊಮ್ಮಲು ಕಾರಣರಾಗಿದ್ದಾರೆ. ನನ್ನಂತೆ ಪ್ರಾಥಮಿಕ ಹಂತದ ವಿಧ್ಯಾರ್ಥಿಗಳಲ್ಲಿ ಸಾಹಿತ್ಯದ ಅಬಿರುಚಿಯನ್ನು ಮೂಡಿಸುವ ಈ ಕನ್ನಡ ನುಡಿ ಜಾತ್ರೆಯ ಸಭಾಧ್ಯಕ್ಷನಾಗಲು ಕಾರಣರಾದವರಿಗೆ ನಾನು ಆಭಾರಿಯಾಗಿದ್ದೇನೆ ಎಂದರು.
ಸಮ್ಮೇಳನವನ್ನು ಉದ್ಘಾಟಿಸಿದ ಎಂ.ಎನ್.ಮಾನ್ಯ ಮಾತನಾಡಿ, ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರಿಯಸಿ ಎಂಬಂತೆ ನಮ್ಮ ಜನ್ಮಕ್ಕೆ ಕಾರಣಳಾದ ತಾಯಿಯಷ್ಟೇ ನಾವು ಜನಿಸಿದ ಈ ನೆಲ ಮತ್ತು ಭಾಷೆ ಕೂಡಾ ಶ್ರೇಷ್ಠವಾಗಿದ್ದು ಕನ್ನಡವನ್ನು ಪ್ರೀತಿಸಿ ಗೌರವಿಸುವ ಹೊಣೆಗಾರಿಕೆಯೂ ನಮ್ಮ ಮೇಲಿದೆ. ಪರಭಾಷೆಯನ್ನು ದ್ವೇಷಿಸದೇ ನಮ್ಮ ಭಾಷೆಯನ್ನು ಪ್ರೀತಿಸಿ ಸರ್ವ ಮನಸ್ಸುಗಳಲ್ಲಿ ಕನ್ನಡದ ಸುಗಂಧವನ್ನು ಬೀರುತ್ತ ಕನ್ನಡ ಭಾಷೆಯೊಂದಿಗೆ ಕನ್ನಡ ಸಂಸ್ಕೃತಿಯ ಕುಸುಮವನ್ನು ಎಲ್ಲೆಡೆ ಪಸರಿಸುವ ರಾಯಭಾರಿಗಳಾಗೋಣ ಎಂದರು.ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಮಂಜುನಾಥ್ ಮಾತನಾಡಿ, ಈಚಿನ ವರ್ಷಗಳಲ್ಲಿ ಪೋಷಕರ ಆಂಗ್ಲ ಭಾಷೆಯ ವ್ಯಾಮೋಹದಿಂದಾಗಿ ಕನ್ನಡ ಭಾಷೆಗೆ ತೀವ್ರ ಹಿನ್ನಡೆಯಾಗುತ್ತಿರುವುದಲ್ಲದೇ ವಾಕ್ಚಾತುರ್ಯವೂ ಕುಂಠಿತಗೊಳ್ಳುತ್ತಿದೆ. ಈ ಬೆಳವಣಿಗೆಯಿಂದಾಗಿ ಕನ್ನಡ ಸಾಹಿತ್ಯ ಲೋಕಕ್ಕೆ ಕುಂದುಂಟಾಗುವ ಆತಂಕವಿದೆ. ಹೀಗಾಗಿ ಕಸಾಪ ವತಿಯಿಂದ ಶಾಲಾ ಕಾಲೇಜು ಮಟ್ಟದಲ್ಲಿ ಕಮ್ಮಟವನ್ನು ಏರ್ಪಡಿಸುತ್ತಿದ್ದೇವೆ. ಇದಕ್ಕೆ ಎಲ್ಲರ ಬೆಂಬಲ ಅಗತ್ಯವಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಗಣೇಶ್ ಮಾತನಾಡಿ, ಅತ್ಯಂತ ಅರ್ಥಪೂರ್ಣವಾಗಿ ಆಯೋಜಿಸಲಾಗಿರುವ ಈ ಸಾಹಿತ್ಯ ಸಮ್ಮೇಳನ ಮಕ್ಕಳ ಆಂತರ್ಯದಲ್ಲಿ ಅಡಗಿರುವ ಸಾಹಿತ್ಯಾಸಕ್ತಿಗೆ ಉತ್ತೇಜನ ನೀಡುವಂತಿದೆ. ವಿಶೇಷವಾಗಿ ಮೂರು ಗೋಷ್ಠಿಗಳು ಕೂಡಾ ಅರ್ಥಪೂರ್ಣವಾಗಿದ್ದು ಕಾರ್ಯಕ್ರಮದಲ್ಲಿ ಗ್ರಾಮಸ್ಥರ ಸಹಭಾಗಿತ್ವ ಮಾದರಿಯಾಗಿದೆ ಎಂದರು.ಸಮ್ಮೇಳನಾಧ್ಯಕ್ಷರನ್ನು ಗಣಪತಿಕಟ್ಟೆಯಿಂದ ಕಲಾತಂಡಗಳೊಂದಿಗೆ ಊರಿನ ಪ್ರಮುಖ ಬೀದಿಯಲ್ಲಿ ಮೆರವಣಿಗೆಯೊಂದಿಗೆ ವೇದಿಕೆಗೆ ಕರೆತರಲಾಯ್ತು. ಮಕ್ಕಳೇ ಕಾರ್ಯಕ್ರಮವನ್ನು ನಿರ್ವಹಿಸಿದ ಈ ಸಮ್ಮೇಳನದಲ್ಲಿ ಕವನ ವಾಚನ, ಕಥಗೋಷ್ಠಿ ಮತ್ತು ಪ್ರಭಂಧ ಈ ಮೂರು ಗೋಷ್ಠಿಗಳನ್ನು ಆಯೋಜಿಸಲಾಗಿತ್ತು.
ಅತಿಥಿಗಳಾಗಿ ಸಾಲ್ಗಡಿ ಗ್ರಾಪಂ ಅಧ್ಯಕ್ಷೆ ಮಮತಾ ಉಮೇಶ್, ಉಪಾಧ್ಯಕ್ಷೆ ಶಕುಂತಲಾ, ತಾಕಸಾಪ ಅಧ್ಯಕ್ಷ ಟಿ.ಕೆ.ರಮೇಶ್ ಶೆಟ್ಟಿ, ತಾಲೂಕು ಕನ್ನಡ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ಅಧ್ಯಕ್ಷೆ ರೇಣುಕಾ ಹೆಗ್ಡೆ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಪ್ರಕಾಶ್ ನಾಯಕ್, ಮುಖ್ಯೋಪಾಧ್ಯಾಯಿನಿ ಶ್ರೀದೇವಿ, ತಾಲೂಕು ಜಾನಪದ ಪರಿಷತ್ ಅಧ್ಯಕ್ಷೆ ಲೀಲಾವತಿ ಜಯಶೀಲ್ ಇದ್ದರು.