ವ್ಯಕ್ತಿಯಿಂದ ಸಮಾಜದ ಹಿತವೇ ಮುಖ್ಯ: ಭೋಸರಾಜು

KannadaprabhaNewsNetwork | Published : Jan 27, 2024 1:16 AM

ಸಾರಾಂಶ

ಕೊಡಗು ಜಿಲ್ಲಾಮಟ್ಟದ ಗಣರಾಜ್ಯೋತ್ಸವ ಮಡಿಕೇರಿ ನಗರದ ಜನರಲ್‌ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯಿತು. ಉಸ್ತುವಾರಿ ಸಚಿವ ಭೊಸರಾಜು ಧ್ವಜಾರೋಹಣಗೈದರು. ಬಳಿಕ ಗಣತಂತ್ರದ ಬಗ್ಗೆ ಅದರ ಮಹತ್ವದ ಬಗ್ಗೆ ಮಾತನಾಡಿ, ಯುವಕರಿಗೆ ಕಿವಿಮಾತು ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ವತಿಯಿಂದ 75 ನೇ ಗಣರಾಜ್ಯೋತ್ಸವ ದಿನವನ್ನು ಶುಕ್ರವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಧ್ವಜಾರೋಹಣ ನೆರವೇರಿಸಿದರು. ನಂತರ ಮಾತನಾಡಿದ ಅವರು, ಕಳೆದ 75 ವರ್ಷಗಳಲ್ಲಿ ದೇಶಕ್ಕೆ ಎದುರಾದ ಸಮಸ್ಯೆ, ಸವಾಲುಗಳನ್ನು ಒಮ್ಮನಸ್ಸಿನಿಂದ ಎದುರಿಸಿ ಗಣತಂತ್ರವನ್ನು ಸಂರಕ್ಷಿಸಿದ್ದೇವೆ, ‘ವ್ಯಕ್ತಿಯ ಹಿತಕ್ಕಿಂತ ಸಮಾಜದ ಹಿತವೇ ಮುಖ್ಯ’ ಎಂಬ ನಮ್ಮ ಪೂರ್ವಿಕರ ಜೀವನತತ್ವವನ್ನು ನಾವಿಂದು ಅರ್ಥಮಾಡಿಕೊಂಡು ಅನುಸರಿಸಬೇಕಿದೆ ಎಂದು ಹೇಳಿದರು. ಪೊನ್ನಂಪೇಟೆ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿ ಮೇಲ್ದರ್ಜೆಗೇರಿಸಿರುವುದು ವಿಶೇಷವಾಗಿದೆ. ಹಾಗೆಯೇ ರಾಷ್ಟ್ರ ಮಟ್ಟದ ಹಾಕಿ ಕ್ರೀಡಾಕೂಟವು ಕೊಡಗು ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆದಿರುವುದು ದಾಖಲೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕೊಡಗಿನ ಕ್ಯಾ. ಶರಣ್ಯ ರಾವ್ ದೆಹಲಿಯಲ್ಲಿ ನಡೆಯುತ್ತಿರುವ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಭೂಸೇನೆಯ ಅಗ್ನಿವೀರರ ತಂಡವನ್ನು ಮುನ್ನಡೆಸುತ್ತಿದ್ದಾರೆ. ಭಾರತದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಸೇನೆಯ ಮೂರು ವಿಭಾಗಗಳು ಒಟ್ಟಿಗೆ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿದೆ ಎಂದು ಹೇಳಿದರು.

ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ಬಡವರ ಆರ್ಥಿಕ ಸಬಲೀಕರಣಕ್ಕೆ ಪ್ರಯತ್ನಿಸಿದೆ. ಆ ನಿಟ್ಟಿನಲ್ಲಿ ‘ಶಕ್ತಿ’ ಯೋಜನೆಯು ಜೂ.11 ರಂದು ಪ್ರಥಮ ಯೋಜನೆಯಾಗಿ ಜಾರಿಗೊಂಡಿದೆ. ರಾಜ್ಯದ ಎಲ್ಲಾ ಮಹಿಳೆಯರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಸೌಲಭ್ಯವನ್ನು ಒದಗಿಸಿರುವುದು ವಿಶೇಷವಾಗಿದೆ. ಆ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಜ.20 ರವರೆಗೆ 33,21,406 ಮಹಿಳೆಯರು ಉಚಿತವಾಗಿ ಬಸ್ ಪ್ರಯಾಣ ಮಾಡಿದ್ದು, ಸುಮಾರು 12.83 ಕೋಟಿ ರು. ಭರಿಸಲಾಗಿದೆ ಎಂದು ತಿಳಿಸಿದರು. ಯುವನಿಧಿ ಯೋಜನೆಯಡಿ ಡಿ.26 ರಿಂದ ನೋಂದಣಿ ಪ್ರಕ್ರಿಯೆ ಚಾಲನೆಗೊಂಡಿದ್ದು, ಪ್ರತೀ ತಿಂಗಳು 3,000 ಮತ್ತು 1500 ರೂ. ನಿರುದ್ಯೋಗ ಭತ್ಯೆಯನ್ನು ನೀಡುವ ಯೋಜನೆ ಆಗಿದೆ. ಜ.12 ರಿಂದ ಅರ್ಹ ಫಲಾನುಭವಿಗಳ ಖಾತೆಗೆ ನೇರ ನಗದು ವರ್ಗಾವಣೆ ಆರಂಭವಾಗಿದೆ. ಯುವನಿಧಿ ಯೋಜನೆಗೆ ಅರ್ಹತೆ ಹೊಂದಿರುವವರು 1432 ಅಭ್ಯರ್ಥಿಗಳು ಇದ್ದು, ಜ.19 ರ ಅವಧಿಗೆ ಜಿಲ್ಲೆಯಲ್ಲಿ 778 ಅಭ್ಯರ್ಥಿಗಳು ಯುವನಿಧಿ ಹೆಸರು ನೋಂದಾಯಿಸಿದ್ದಾರೆ ಎಂದು ತಿಳಿಸಿದರು.

ಇತ್ತೀಚೆಗೆ ನಡೆದ ಸಚಿವ ಸಂಪುಟದಲ್ಲಿ 48 ಯೂನಿಟ್‌ಗಿಂತ ಕಡಿಮೆ ವಿದ್ಯುತ್ ಬಳಸುವ ಎಲ್‌ಟಿ 2 ಗ್ರಾಹಕರಿಗೆ ಹೆಚ್ಚುವರಿ ಶೇ.10 ಬದಲು ಹೆಚ್ಚುವರಿ 10 ಯೂನಿಟ್ ಅರ್ಹತಾ ಯೂನಿಟ್‌ಗಳಾಗಿ ಒದಗಿಸಲು ನಿರ್ಧರಿಸಿರುವುದು ವಿಶೇಷವಾಗಿದೆ ಎಂದರು.

ಆಕರ್ಷಕ ಪಥಸಂಚಲನ: ಪಥಸಂಚಲನದಲ್ಲಿ ಪೊಲೀಸ್ ತಂಡ, ಹೋಂ ಗಾರ್ಡ್, ಅರಣ್ಯ ಇಲಾಖೆ, ಕೊಡಗು ಸೈನಿಕ ಶಾಲೆ, ನವೋದಯ ಶಾಲೆ, ಜೂನಿಯರ್ ಕಾಲೇಜು, ಕೊಡಗು ವಿದ್ಯಾಲಯ, ಜನರಲ್ ತಿಮ್ಮಯ್ಯ ಶಾಲೆ, ಸಂತ ಮೈಕಲರ ಶಾಲೆ, ಸಂತ ಜೋಸೆಫರ ಶಾಲೆ, ರಾಜರಾಜೇಶ್ವರಿ ಶಾಲೆ, ಕ್ರೆಸೆಂಟ್ ಶಾಲೆ ಸೇರಿದಂತೆ ಹಲವು ತಂಡಗಳು ಪಾಲ್ಗೊಂಡಿದ್ದವು.ಮಡಿಕೇರಿಯ ಸಂತ ಮೈಕಲರ ಶಾಲೆ,ಬಾಲಕರ ಬಾಲ ಮಂದಿರ, ಜವಾಹರ್ ನವೋದಯ ವಿದ್ಯಾಲಯ, ವಾಲ್ಮೀಕಿ ಆಶ್ರಮ ಶಾಲೆ ವಿರಾಜಪೇಟೆ, ಬಾಲಕರ ಬಾಲ ಮಂದಿರ, ಬ್ಲಾಸಂ ಶಾಲೆ, ಸ.ಮಾ.ಪ್ರಾ. ಶಾಲೆ ಮಡಿಕೇರಿ, ಮಡಿಕೇರಿಯ ಪದವಿ ಪೂರ್ವ ಕಾಲೇಜು ತಂಡದಿಂದ ನೃತ್ಯ ಪ್ರದರ್ಶನ ನಡೆಯಿತು. ಶಾಸಕ ಡಾ. ಮಂತರ್ ಗೌಡ, ನಗರಸಭೆ ಅಧ್ಯಕ್ಷೆ ಎನ್.ಪಿ.ಅನಿತಾ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿ.ಪಂ.ಸಿಇಒ ವರ್ಣಿತ್ ನೇಗಿ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್, ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ, ಎನ್‌ಸಿಸಿ ಕಮಾಂಡಿಂಗ್ ಅಧಿಕಾರಿ ಕರ್ನಲ್ ಜಪ್ರಿನ್ ಅರಾನ್ಹಾ ಇತರರು ಇದ್ದರು.

Share this article