ಒಳಮೀಸಲಾತಿಗೆ ಶಿಫಾರಸಿನಿಂದ ಕಾಂಗ್ರೆಸ್‌ನ ಕಪಟನೀತಿ ಬಯಲು: ಹನುಮಂತಪ್ಪ

KannadaprabhaNewsNetwork |  
Published : Jan 21, 2024, 01:30 AM IST
(  ಈ ಸುದ್ದಿಗೆ  ಎಚ್‌.ಹನುಮಂತಪ್ಪ ಮಗ್ ಶಾಟ್ ಫೋಟೋ ಇದೆ )  | Kannada Prabha

ಸಾರಾಂಶ

ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಸಚಿವ ಸಂಪುಟ ತೆಗೆದುಕೊಂಡಿರುವ ಅವೈಜ್ಞಾನಿಕ ನಿರ್ಧಾರದಿಂದ ಕಾಂಗ್ರೆಸ್‌ನ ಕಪಟನೀತಿ ಬಯಲಾಗಿದೆ ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಚ್. ಹನುಮಂತಪ್ಪ ಆರೋಪಿಸಿದ್ದಾರೆ.

ಬಳ್ಳಾರಿ: ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಸಚಿವ ಸಂಪುಟ ತೆಗೆದುಕೊಂಡಿರುವ ಅವೈಜ್ಞಾನಿಕ ನಿರ್ಧಾರದಿಂದ ಕಾಂಗ್ರೆಸ್‌ನ ಕಪಟನೀತಿ ಬಯಲಾಗಿದೆ ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಚ್. ಹನುಮಂತಪ್ಪ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶೇ. 15ರ ಮೀಸಲಾತಿಯನ್ನು ವರ್ಗೀಕರಿಸಿದ್ದ ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡುವ ಬಗ್ಗೆ ಏನೂ ಮಾಡದ ಸಿದ್ದರಾಮಯ್ಯ ಅವರ ಸರ್ಕಾರ ಈಗ ಕೈಚೆಲ್ಲಿ ಕೂತಿದೆ. ತನ್ನ ಅಸಹಾಯಕತೆಯನ್ನು ಮುಚ್ಚಿಕೊಳ್ಳಲು ಇದೀಗ 2008ರ ಉಷಾ ಮೆಹ್ರಾ ವರದಿ ಹೇಳಿದಂತೆ ಸಂವಿಧಾನದ 341 ವಿಧಿಗೆ ತಿದ್ದುಪಡಿ ತರಬೇಕು. ಅದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಪತ್ರ ಬರೆಯುವುದಾಗಿ ಹೇಳುತ್ತಿದೆ. 2020 ಆಗಸ್ಟ್ 27ರಂದು ಸುಪ್ರೀಂಕೋರ್ಟಿನ ನ್ಯಾ. ಅರುಣ್ ಮಿಶ್ರಾ ನೇತೃತ್ವದ ಪಂಚಪೀಠ ಮೀಸಲಾತಿಯ ವರ್ಗೀಕರಣದ ವಿಷಯದಲ್ಲಿ 341ನೇ ವಿಧಿಯ ತಿದ್ದುಪಡಿಯ ಅಗತ್ಯವಿಲ್ಲವೆಂದು ಸ್ಪಷ್ಟವಾಗಿ ಹೇಳಿದೆ. ಈ ಐತಿಹಾಸಿಕ ತೀರ್ಪು ಸುಪ್ರೀಂಕೋರ್ಟಿನ 7 ಸದಸ್ಯರ ಪೀಠದ ಮುಂದೆ ವಿಚಾರಣೆಗೆ ಬಂದಿರುವಾಗ ವಕೀಲ ಹಿನ್ನೆಲೆಯ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂತಹದೊಂದು ಅಗ್ಗದ ನಿರ್ಣಯ ಕೈಗೊಂಡು ನಗೆಪಾಟಲಿಗೆ ಈಡಾಗಿದ್ದಾರೆ ಎಂದು ಟೀಕಿಸಿದ ಎಚ್. ಹನುಮಂತಪ್ಪ ಅವರು, ಸುಪ್ರೀಂಕೋರ್ಟಿನ 7 ಸದಸ್ಯರ ಪೀಠದ ಮುಂದೆ ಕೇಂದ್ರ ಸರ್ಕಾರ ಒಳ ಮೀಸಲಾತಿಯ ಪರವಾಗಿ ಖುದ್ದು ವಕಾಲತ್ತು ವಹಿಸಿರುವಾಗ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಈ ಟೊಳ್ಳು ನಿರ್ಣಯಕ್ಕೆ ಯಾರೂ ಮರುಳಾಗುವುದಿಲ್ಲ ಎಂದು ತಿಳಿಸಿದರು.

ಕಾಂಗ್ರೆಸಿನ ರಾಷ್ಟ್ರೀಯ ಅಧ್ಯಕ್ಷರೂ ಸೇರಿದಂತೆ ಬಹುತೇಕ ನಾಯಕರಿಗೆ ಒಳ ಮೀಸಲಾತಿಯ ಬಗ್ಗೆ ಯಾವ ಕಾಳಜಿಯೂ ಇಲ್ಲ. ಕಾಂಗ್ರೆಸ್‌ ಚುನಾವಣೆ ಮುನ್ನದ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯನ್ನು ಹುಸಿಗೊಳಿಸಿದೆ. ಅಪ್ರಸುತವಾಗಿರುವ 341ನೇ ವಿಧಿಯ ತಿದ್ದುಪಡಿಯ ಗುಮ್ಮವನ್ನು ತೋರಿಸಿ ಕಾಂಗ್ರೆಸ್ ಮಾದಿಗ ಸಮುದಾಯಕ್ಕೆ ಮೋಸ ಮಾಡಿದೆ. ಇತ್ತೀಚಿಗೆ ರಾಜ್ಯದೆಲ್ಲೆಡೆ ಮಾದಿಗರ ಸಮಾವೇಶಗಳ ಅಭೂತಪೂರ್ವ ಯಶಸ್ಸಿನಿಂದ ಕೆಂಗೆಟ್ಟಿರುವ ಕಾಂಗ್ರೆಸ್, ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಶೋಷಿತ ಸಮಾಜಗಳನ್ನು ದಿಕ್ಕು ತಪ್ಪಿಸಲು ಇಂತಹ ನೀಚ ಕೃತ್ಯಕ್ಕೆ ಕೈಹಾಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

PREV

Recommended Stories

ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ