ಒಳ ಮೀಸಲಾತಿ ತೀರ್ಪು: ಸಾಮಾಜಿಕ ನ್ಯಾಯ ಕಲ್ಪಿಸುವ ಉದ್ದೇಶ

KannadaprabhaNewsNetwork | Published : Aug 4, 2024 1:22 AM

ಸಾರಾಂಶ

ಆರ್ಥಿಕವಾಗಿ, ಸಾಮಾಜಿಕವಾಗಿ ತುಳಿತಕ್ಕೊಳಗಾದ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಕಲ್ಪಿಸುವ ಉದ್ದೇಶದಿಂದ ಒಳ ಮೀಸಲಾತಿ ವಿಚಾರವಾಗಿ ಸುಪ್ರೀಂ ಕೋರ್ಟ್‌ ನೀಡಿದ ಐತಿಹಾಸಿಕ ತೀರ್ಪು ಸ್ವಾಗತಾರ್ಹವಾಗಿದೆ ಎಂದು ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ, ನಿವೃತ್ತ ಪೊಲೀಸ್ ಅಧೀಕ್ಷಕ ಎನ್. ರುದ್ರಮುನಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಆರ್ಥಿಕವಾಗಿ, ಸಾಮಾಜಿಕವಾಗಿ ತುಳಿತಕ್ಕೊಳಗಾದ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಕಲ್ಪಿಸುವ ಉದ್ದೇಶದಿಂದ ಒಳ ಮೀಸಲಾತಿ ವಿಚಾರವಾಗಿ ಸುಪ್ರೀಂ ಕೋರ್ಟ್‌ ನೀಡಿದ ಐತಿಹಾಸಿಕ ತೀರ್ಪು ಸ್ವಾಗತಾರ್ಹವಾಗಿದೆ ಎಂದು ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ, ನಿವೃತ್ತ ಪೊಲೀಸ್ ಅಧೀಕ್ಷಕ ಎನ್. ರುದ್ರಮುನಿ ತಿಳಿಸಿದರು. ನಗರದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್‌ನ 7 ಜನ ನ್ಯಾಯಾಧೀಶರನ್ನು ಒಳಗೊಂಡ ನ್ಯಾಯಪೀಠದ ಐತಿಹಾಸಿದ ತೀರ್ಪನ್ನು ನಾವು ತುಂಬು ಮನಸ್ಸಿನಿಂದ ಸ್ವಾಗತಿಸುತ್ತೇವೆ ಎಂದರು. ಸಮ ಸಮಾಜ ನಿರ್ಮಾಣಕ್ಕಾಗಿ ಸುಪ್ರೀಂ ಕೋರ್ಟ್ ಇಂತಹದ್ದೊಂದು ಐತಿಹಾಸಿಕ ತೀರ್ಪು ಪ್ರಕಟಿಸಿದೆ. ಸುಪ್ರೀಂ ಕೋರ್ಟ್ ನ ತೀರ್ಪಿನಿಂದಾಗಿ ನಮ್ಮ ಸಮಾಜದ ಮಕ್ಕಳಿಗೆ ಶಿಕ್ಷಣ, ಉದ್ಯೋಗಕ್ಕೆ ಅನುಕೂಲವಾಗಲಿದೆ. ಈ ತೀರ್ಪಿನಂತೆಯೇ ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸಬೇಕು. ಮುಖ್ಯಮಂತ್ರಿಗಳು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಒತ್ತಾಯಿಸಿದರು.

ಒಳ ಮೀಸಲಾತಿ ನೀಡಲು ರಾಜ್ಯ ಸರ್ಕಾರಕ್ಕೆ ಇದ್ದ ಅಡ್ಡಿ ಆತಂಕಗಳು ನಿವಾರಣೆಯಾಗಿವೆ. ಈ ಹಿನ್ನೆಲೆಯಲ್ಲಿ ಕಾನೂನು ತಜ್ಞರ ಜೊತೆಗೆ ಚರ್ಚಿಸಿ, ಪರಿಶಿಷ್ಟ ಜಾತಿಗೆ ಒಳ ಮೀಸಲಾತಿಯನ್ನು ರಾಜ್ಯ ಸರ್ಕಾರ ಜಾರಿಗೊಳಿಸುವ ವಿಶ್ವಾಸವಿದೆ. ಸಾಮಾಜಿಕ ನ್ಯಾಯ ಎತ್ತಿ ಹಿಡಿಯುವ ಕೆಲಸವನ್ನು ಸುಪ್ರೀಂ ಕೋರ್ಟ್‌ನ ತೀರ್ಪು ಮಾಡಿದೆ. ಅದನ್ನು ಜಾರಿಗೊಳಿಸುವ ಕೆಲಸವನ್ನು ರಾಜ್ಯ ಸರ್ಕಾರ ಈಗ ಮಾಡಲಿ ಎಂದು ಹೇಳಿದರು.

ಶೈಕ್ಷಣಿಕ, ಆರ್ಥಿಕವಾಗಿ ತುಳಿತಕ್ಕೊಳಗಾದ ಸಮಾಜ ನಮ್ಮದು. ನಮ್ಮ ಸಮಾಜದಲ್ಲೇ ಒಳ ಪಂಗಡಗಳು ಇವೆ. ಈ ತೀರ್ಪು ಅಂತಹವರಿಗೂ ಅನ್ವಯಿಸಲಿದೆ. ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರು ಸುಧೀರ್ಘ 565 ಪುಟಗಳನ್ನು ಒಳಗೊಂಡ ಐತಿಹಾಸಿಕ ತೀರ್ಪನ್ನು ನೀಡಿದ್ದಾರೆ. ಎಂದು ತಿಳಿಸಿದರು. ಸಮಾಜದ ಮುಖಂಡ ಜಯಪ್ರಕಾಶ ಮಾತನಾಡಿ, ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ನೀಡಬೇಕೆಂಬ ಹೋರಾಟಕ್ಕೆ, ಕೂಗಿಗೆ ಕೊನೆಗೂ ನ್ಯಾಯ ಸಿಕ್ಕಂತಾಗಿದೆ. ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರನ್ನು ಒಳಗೊಂಡ ನ್ಯಾಯ ಪೀಠದ ತೀರ್ಪನ್ನು ನಮ್ಮ ಛಲವಾದಿ ಸಮಾಜವು ಹೃತ್ಪೂರ್ವಕವಾಗಿ ಸ್ವಾಗತಿಸುತ್ತದೆ. ತಳ ಸಮುದಾಯವನ್ನು ಗುರುತಿಸಿ, ನ್ಯಾಯಬದ್ಧ ಸಾಂವಿಧಾನಿಕ ತೀರ್ಪು ನೀಡಲಾಗಿದೆ. ಈ ತೀರ್ಪು ನಮಗೆಲ್ಲರಿಗೂ ಸಂತೋಷ ತಂದಿದೆ ಎಂದರು.

ಸಮಾಜದ ಹಿರಿಯ ಮುಖಂಡ, ನಿವೃತ್ತ ಅಧಿಕಾರಿ ಎಸ್. ಶೇಖರಪ್ಪ ಮಾತನಾಡಿ, ವಿಧಾನ ಪರಿಷತ್‌ನ ವಿಪಕ್ಷ ನಾಯಕರಾಗಿ ಛಲವಾದಿ ಸಮಾಜದ ಛಲವಾದಿ ನಾರಾಯಣಸ್ವಾಮಿ ಅವರನ್ನು ನೇಮಕ ಮಾಡಿರುವ ಬಿಜೆಪಿ ರಾಜ್ಯ, ರಾಷ್ಟ್ರೀಯ ನಾಯಕರಿಗೆ ಅಭಿನಂದಿಸುತ್ತೇವೆ. ನಾರಾಯಣ ಸ್ವಾಮಿ ಸಹ ತಮಗೆ ವಹಿಸಿದ ಜವಾಬ್ಧಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಲಿ. ಅಷ್ಟೇ ಅಲ್ಲ, ಸಮಾಜಕ್ಕೆ ಅನ್ಯಾಯವಾದಾಗ ಪಕ್ಷಾತೀತವಾಗಿ, ನಿಷ್ಟುರವಾಗಿ ಸಮಾಜದ ಪರ ಧ್ವನಿ ಎತ್ತುವ ಮೂಲಕ ಸಮಾಜದ ಬೆನ್ನಿಗೆ ನಿಲ್ಲಬೇಕು ಎಂದು ಹೇಳಿದರು.

ಈ ವೇಳೆ ಸಮಾಜದ ಮುಖಂಡರಾದ ಕೊಟ್ರಬಸಪ್ಪ, ಬಸವರಾಜ, ನಾಗಭೂಷಣ, ರೇವಣಸಿದ್ದಪ್ಪ, ನವೀನ, ಕೊಂಡಜ್ಜಿ ರಾಘವೇಂದ್ರ, ಅಣ್ಣಪ್ಪ ಇತರರು ಇದ್ದರು.

Share this article