ಹಲಸು ಮೇಳಗಳ ಮೂಲಕ ಗ್ರಾಮೀಣ ಆರ್ಥಿಕತೆಗೆ ಮುನ್ನುಡಿ

KannadaprabhaNewsNetwork | Published : Aug 17, 2024 1:00 AM

ಸಾರಾಂಶ

ರಾಜ್ಯದಲ್ಲಿ ಈ ವರ್ಷ ಇದುವರೆಗೆ ಒಟ್ಟು 40 ಹಲಸು ಮೇಳಗಳು ಸಂಘಟನೆಯಾಗಿವೆ. ಕೇರಳ, ತಮಿಳುನಾಡು ಈಗಾಗಲೇ ಹಲಸನ್ನು ರಾಜ್ಯದ ಹಣ್ಣು ಎಂದು ಘೋಷಿಸಿದ್ದರೂ ಅಲ್ಲಿಗಿಂತಲೂ ಹೆಚ್ಚು ಮೇಳಗಳು ರಾಜ್ಯದಲ್ಲಿ ಸಂಘಟನೆಯಾಗಿವೆ. ಮೇಳಗಳ ಮೂಲಕ ವಾರ್ಷಿಕ ಅಂದಾಜು 150 ಟನ್‌ ಹಲಸು ಹಾಗೂ ಹಲಸು ಉತ್ಪನ್ನಗಳು ಮಾರಾಟಗೊಳ್ಳುತ್ತಿವೆ.

ರಾಘವೇಂದ್ರ ಅಗ್ನಿಹೋತ್ರಿ

ಕನ್ನಡಪ್ರಭ ವಾರ್ತೆ ಮಂಗಳೂರು

ಒಂದು ಕಾಲದಲ್ಲಿ ಆಹಾರ ಭದ್ರತೆ ನೀಡಿ ಹೊಟ್ಟೆ ತುಂಬಿಸುತ್ತಿದ್ದ ಹಲಸು ಈಗ ಬೆಳೆಗಾರರಿಗೆ ಆರ್ಥಿಕ ಭದ್ರತೆ ನೀಡುವ ಮೂಲಕ ಜೇಬು ತುಂಬಿಸುತ್ತಿದೆ. ಅದರಲ್ಲೂ ಹಲಸು ಹಬ್ಬ/ಮೇಳಗಳು ಗ್ರಾಮೀಣ ಭಾಗದ ರೈತರಿಗೆ ಹಾಗೂ ಗೃಹೋದ್ಯಮದ ಮೂಲಕ ಮೌಲ್ಯವರ್ಧನೆ ಮಾಡುತ್ತಿರುವವರಿಗೆ ಆರ್ಥಿಕ ಚೈತನ್ಯ ನೀಡುವಲ್ಲಿ ಪ್ರಮುಖ ಕೊಡುಗೆ ನೀಡುತ್ತಿವೆ. ದೇಶದಲ್ಲೇ ಅತಿಹೆಚ್ಚು ಹಲಸು ಮೇಳಗಳು ಸಂಘಟನೆಯಾಗುತ್ತಿರುವುದು ಕರ್ನಾಟಕದಲ್ಲಿ ಎಂಬುದು ಗಮನಾರ್ಹ.

ರಾಜ್ಯದಲ್ಲಿ ಈ ವರ್ಷ ಇದುವರೆಗೆ ಒಟ್ಟು 40 ಹಲಸು ಮೇಳಗಳು ಸಂಘಟನೆಯಾಗಿವೆ. ಕೇರಳ, ತಮಿಳುನಾಡು ಈಗಾಗಲೇ ಹಲಸನ್ನು ರಾಜ್ಯದ ಹಣ್ಣು ಎಂದು ಘೋಷಿಸಿದ್ದರೂ ಅಲ್ಲಿಗಿಂತಲೂ ಹೆಚ್ಚು ಮೇಳಗಳು ರಾಜ್ಯದಲ್ಲಿ ಸಂಘಟನೆಯಾಗಿವೆ. ಮೇಳಗಳ ಮೂಲಕ ವಾರ್ಷಿಕ ಅಂದಾಜು 150 ಟನ್‌ ಹಲಸು ಹಾಗೂ ಹಲಸು ಉತ್ಪನ್ನಗಳು ಮಾರಾಟಗೊಳ್ಳುತ್ತಿವೆ.

ರಾಜ್ಯದ ಮಲೆನಾಡು ಮತ್ತು ಕರಾವಳಿ ಹೆಚ್ಚಾಗಿ ಹಲಸು ಬೆಳೆಯುವ ಪ್ರದೇಶ. ಹಲಸು ಹೆಚ್ಚಾಗಿ ಬೆಳೆಯದ ಪ್ರದೇಶಗಳಲ್ಲೂ ಈಗ ಹಲಸು ಮೇಳಗಳು ಹಾಗೂ ಹಲಸಿನ ವಿವಿಧ ಖಾದ್ಯಗಳು ಜನಪ್ರಿಯಗೊಳ್ಳುತ್ತಿವೆ. ಹಲಸಿನ ಹಣ್ಣು ಹಾಗೂ ಹಲಸಿನ ವಿವಿಧ ಖಾದ್ಯಗಳನ್ನು ತಿನ್ನಲು ರಾಜ್ಯದೆಲ್ಲೆಡೆ, ಗ್ರಾಹಕರು ಮುಗಿಬೀಳುತ್ತಿದ್ದು ಹೊಸ ಟ್ರೆಂಡ್‌ ಸೃಷ್ಟಿಯಾಗುತ್ತಿವೆ. ಹಲಸಿನ ಮೌಲ್ಯವರ್ಧನೆ ಮಾಡುತ್ತಿರುವ ರೈತರ ಜೇಬು ತುಂಬುತ್ತಿದೆ.

ಎಲ್ಲೆಲ್ಲಿ ಹಲಸುಮೇಳ?:

ಬೆಂಗಳೂರು, ಮೈಸೂರು, ಹೇಸರಘಟ್ಟ, ಶಿರಸಿ, ಹುಬ್ಬಳ್ಳಿ, ತುಮಕೂರು, ತಿಪಟೂರು, ಪುತ್ತೂರು, ಕುಂದಾಪುರ ಹೀಗೆ ಮೇಳಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತಿವೆ. ಮೇಳಗಳನ್ನು ಸಂಘಟಿಸಲು ರೋಟರಿ, ಲಯನ್ಸ್‌ನಂತಹ ಸಂಸ್ಥೆಗಳು, ಸ್ಟಾರ್‌ ಹೊಟೇಲ್‌ಗಳು ಮುಂದೆ ಬರುತ್ತಿರುವುದು ವಿಶೇಷವಾಗಿದೆ. ಕೆಲವು ವರ್ಷಗಳ ಹಿಂದೆ ಕೇವಲ ಜಿಲ್ಲಾ ಕೇಂದ್ರಗಳಲ್ಲಿ ನಡೆಯುತ್ತಿದ್ದ ಹಲಸು ಮೇಳಗಳು ಈಗ ತಾಲೂಕು ಹಾಗೂ ಹೋಬಳಿ ಕೇಂದ್ರಗಳಿಗೂ ವಿಸ್ತಾರಗೊಳ್ಳುತ್ತಿವೆ. ಇತ್ತೀಚೆಗೆ ಕೋಲಾರದ ಹೊಟೇಲ್‌ ಒಂದರಲ್ಲಿ ತಿಂಗಳುಗಟ್ಟಲೆ ದಿನ ಹಲಸು ಮೇಳ ನಡೆದಿದೆ.

ಮೇಳಗಳಿಂದ ಹಲಸಿನ ಬಗ್ಗೆ ಜಾಗೃತಿ ಮೂಡುತ್ತಿದೆ, ಆದರೆ ಇನ್ನಷ್ಟು ಯೋಜನಾಬದ್ಧವಾಗಿ ಆಗಬೇಕಿದೆ ಎಂಬುದು ಮಂಗಳೂರು ಹಲಸು ಮೇಳಗಳ ಸಂಘಟಕ ರತ್ನಾಕರ ಕುಳಾಯಿ ಅವರ ಅಭಿಪ್ರಾಯ.

ಖಾದ್ಯಗಳ ಆಕರ್ಷಣೆ:

ಹಲಸಿನ ಹಲ್ವಾ, ಹಪ್ಪಳ, ಚಿಪ್ಸ್‌ ಜೊತೆಗೆ ಸ್ಥಳದಲ್ಲೇ ಮಾಡಿ ಕೊಡುವ ಪಾಯಸ, ಮುಳಕ, ಇಡ್ಲಿ/ಕಡುಬು, ದೋಸೆ, ಹೋಳಿಗೆ, ಬಿರ್ಯಾನಿ, ಬೋಂಡಾ, ಮಿಲ್ಕ್‌ಶೇಕ್‌ ಹೀಗೆ ವಿಧ ವಿಧ ಖಾದ್ಯಗಳನ್ನು ಸವಿಯಲು ಗ್ರಾಹಕರ ದಂಡೇ ಹಲಸುಮೇಳಗಳತ್ತ ಬರುತ್ತಿದ್ದು, ಖಾದ್ಯಗಳು ಬಿಸಿ ಬಿಸಿ ದೋಸೆಯಂತೆ ಮೇಳಗಳಲ್ಲಿ ಖರ್ಚಾಗುತ್ತಿವೆ.

ರಾಜ್ಯದಲ್ಲಿ ಈಗ ಅಂದಾಜು ವಾರ್ಷಿಕ 60 ಲಕ್ಷ ಹಲಸಿನ ಹಪ್ಪಳ ಉತ್ಪಾದನೆಯಾಗುತ್ತಿದ್ದು, ಸೆಪ್ಟೆಂಬರ್‌ ವೇಳೆಗೆ ಎಲ್ಲ ಅಂಗಡಿಗಳಲ್ಲಿ ಖಾಲಿಯಾಗಿರುತ್ತದೆ, ಬೇಕು ಅಂದರೂ ಸಿಗುತ್ತಿಲ್ಲ. ಹಲಸು ಹಪ್ಪಳ 6 ಕೋಟಿ ಉತ್ಪಾದನೆಯಾದರೂ ಬೇಡಿಕೆಯಿದೆ ಎನ್ನುತ್ತಾರೆ ಕೃಷಿ ಮಾರುಕಟ್ಟೆ ತಜ್ಞ ಶ್ರೀಪಡ್ರೆ.

ಹಲಸುಮೇಳಗಳು ಸಾಧ್ಯತೆಗಳನ್ನು ಹುಟ್ಟುಹಾಕಿವೆ, ಹಲಸು ಕ್ಷೇತ್ರಕ್ಕೆ ಮೇಳಗಳು ಅಡಿಗಲ್ಲು ಹಾಕಿವೆ. ಆದರೆ ನಿರೀಕ್ಷೆಯಷ್ಟು ಸಾಧನೆಯಾಗಿಲ್ಲ, ಇನ್ನೂ ಮುಂದಕ್ಕೆ ಹೋಗಬೇಕಿದೆ. ಮೇಳಗಳಲ್ಲಿ ವೈವಿಧ್ಯತೆ ತರಬೇಕಿದೆ. ಗಂಭೀರವಾಗಿ ಅಧ್ಯಯನ ಆಗಬೇಕಿದೆ. ಹಲಸನ್ನು ಸರಿಯಾಗಿ ಯೋಜನಾಬದ್ಧವಾಗಿ ಬಳಸಿದರೆ ಪ್ರಧಾನಿಯವರು ಹೇಳಿದಂತೆ ರೈತರ ಆದಾಯ ದ್ವಿಗುಣವಲ್ಲ, ಮೂರುಪಟ್ಟು ವೃದ್ಧಿಸುವ ಸಾಧ್ಯತೆಗಳಿವೆ ಎಂಬುದು ಶ್ರೀಪಡ್ರೆ ಅಭಿಪ್ರಾಯ.

ಮೇಳಗಳಲ್ಲಿ ಕೆಂಪು ಹಲಸಿನ ಆಕರ್ಷಣೆ:

ಹಲಸು ಕ್ಷೇತ್ರದ ಇತ್ತೀಚಿನ ಬೆಳವಣಿಗೆ ಅಂದರೆ ಹೆಚ್ಚುತ್ತಿರುವ ಕೆಂಪು ಹಲಸಿನ ಆಕರ್ಷಣೆ. ಮೇಳಗಳಲ್ಲಿ ಈ ಕೆಂಪು ಹಲಸಿಗೆ ಗ್ರಾಹಕರು ಮುಗಿ ಬೀಳುತ್ತಿದ್ದಾರೆ. ಸಿದ್ದು, ಶಂಕರ, ತೂಬಗೆರೆ, ಸಕರಾಯಪಟ್ಟಣ, ತುಮಕೂರು ಕಡೆಯ ಬೆಳೆಗಾರರು ತರುವ ಕೆಂಪು ಹಲಸಿಗೆ ರಾಜ್ಯಾದ್ಯಂತ ಬೇಡಿಕೆ ಸೃಷ್ಟಿಯಾಗುತ್ತಿದೆ. ಹಲಸು ಮೇಳಗಳ ಯಶಸ್ಸಿನ ಕೀಲಿಕೈ ಕೆಂಪು ಚಂದ್ರ ಹಲಸು ಎನ್ನುತ್ತಾರೆ ಹಲಸು ಮೇಳಗಳ ಸಂಘಟಕರಾದ ಮೈಸೂರಿನ ಕೃಷ್ಣಪ್ರಸಾದ್‌.

...........................ಕಳೆದ ಏಳು ವರ್ಷಗಳಿಂದ ಪುತ್ತೂರಿನಲ್ಲಿ ಹಲಸು ಮೇಳಗಳನ್ನು ಸಂಘಟಿಸುತ್ತಾ ಬಂದಿದ್ದೇವೆ. ಮೊದಲು ನಾಲ್ಕೈದು ಟನ್ ಹಲಸು ಖರ್ಚಾಗುತ್ತಿತ್ತು. ಈಗ ಮೇಳಗಳಿಂದ 30 ಟನ್‌ಗಳಷ್ಟು ಹಲಸು ಹಾಗೂ ಹಲಸು ಉತ್ಪನ್ನಗಳು ಹಲಸು ಬೆಳೆಯುವ ಪುತ್ತೂರಿನಲ್ಲೇ ಮಾರಾಟವಾಗುತ್ತಿದೆ. ಮೇಳಗಳಿಂದ ಸಾಕಷ್ಟು ಹಲಸಿನ ಮೋಲ್ಯವರ್ಧನೆ ಆಗುತ್ತಿದೆ.

-ಸುಹಾಸ್‌ ಮರಿಕೆ, ಪುತ್ತೂರು ಹಲಸುಮೇಳ ಸಂಘಟಕರು.

-----

ಗ್ರಾಹಕರ ಹಾಗೂ ಬೆಳೆಗಾರರ ಒತ್ತಾಸೆಯಿಂದ ಮೇಳಗಳು ಯಶಸ್ಸು ಪಡೆಯುತ್ತಿವೆ. ಮೈಸೂರಿನಲ್ಲಿ ಹಲಸು ಮೇಳಗಳಿಂದ 40 ಲಕ್ಷ ವಹಿವಾಟು ನಡೆದಿದೆ. ಹುಬ್ಬಳ್ಳಿಯ ಹಲಸು ಮೇಳದಲ್ಲಿ 1.5 ಸಾವಿರ ಹಲಸಿನ ಗಿಡಗಳು ಮಾರಾಟವಾಗಿವೆ. ಹಲಸಿನಲ್ಲಿ ಅವಕಾಶಗಳಿವೆ, ಆದರೆ ಸರ್ಕಾರದ ಮಟ್ಟದಲ್ಲಿ ಇಲಾಖೆಗಳು ಮುಂದೆ ಬರುತ್ತಿಲ್ಲ. ಸರ್ಕಾರದ ಮಟ್ಟದಲ್ಲಿ ಪ್ರಯತ್ನವಾದಾಗ ಇನ್ನಷ್ಟು ಸಾಧ್ಯತೆಗಳಿಗೆ ಅವಕಾಶವಿದೆ.

-ಕೃಷ್ಣಪ್ರಸಾದ್‌ ಗೋವಿಂದಯ್ಯ, ಮೈಸೂರು, ಹಲಸುಮೇಳ ಸಂಘಟಕರು.

Share this article