ಕನ್ನಡಪ್ರಭ ವಾರ್ತೆ ತುಮಕೂರು
ಕೃಷಿ ಮತ್ತು ಕೈಗಾರಿಕೆಗಳಲ್ಲಿ ಆದ ಹೊಸ ಅವಿಷ್ಕಾರಗಳನ್ನು ಪರಿಚಯಿಸುವುದೇ ಅರ್ಧ ಶತಮಾನಕ್ಕೂ ಹೆಚ್ಚು ಹಳೆಯದಾದ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದ ಪ್ರಮುಖ ಉದ್ದೇಶವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಓ ಜಿ.ಪ್ರಭು ತಿಳಿಸಿದ್ದಾರೆ.ಸಿದ್ದಗಂಗಾ ಮಠದ ವತಿಯಿಂದ ಶ್ರೀಸಿದ್ದಲಿಂಗೇಶ್ವರಸ್ವಾಮಿ ಜಾತ್ರೆ ಅಂಗವಾಗಿ ಆಯೋಜಿಸಿರುವ ೬೦ನೇ ವರ್ಷದ ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನದ ಮುಕ್ತಾಯ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದ ಅವರು, ಜ್ಞಾನದ ಜೊತೆಗೆ, ಅರಿವು ಮೂಡಿಸುವುದೇ ವಸ್ತು ಪ್ರದರ್ಶನದ ಉದ್ದೇಶ ಎಂದರು.
ಯುವಜನತೆಗೆ ಕೃಷಿ ಮತ್ತು ಕೈಗಾರಿಕೆಗಳಲ್ಲಿ ಆಗುವ ಬದಲಾವಣೆ ಹಾಗೂ ಸರ್ಕಾರದ ವಿವಿಧ ಇಲಾಖೆಗಳ ಕಾರ್ಯಕ್ರಮಗಳು ಹಾಗೂ ಅವುಗ ಳನ್ನು ಪಡೆಯುವ ಕಾರ್ಯವಿಧಾನಗಳ ಕುರಿತು ಜನರಿಗೆ, ಅದರಲ್ಲಿಯೂ ವಿದ್ಯಾರ್ಥಿ ಯುವ ಸಮುದಾಯಕ್ಕೆ ತಿಳಿಸುವ ನಿಟ್ಟಿನಲ್ಲಿ ಈ ಕಾರ್ಯ ಕ್ರಮ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಇದಕ್ಕೆ ಕೈಜೋಡಿಸಿ ಜಿಲ್ಲಾಡಳಿತವೇ ಮುತ್ತುವರ್ಜಿ ವಹಿಸಿ ಕೆಲಸ ಮಾಡಿದೆ. ಸಿದ್ದಗಂಗಾ ಮಠ ರೈತರು, ಉದ್ದಿಮೆದಾರರಿಗೆ ಎಲ್ಲಾ ರೀತಿಯ ಜ್ಞಾನ ತುಂಬುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದಿದೆ. ಇದು ಕಟ್ಟಕಡೆಯ ವ್ಯಕ್ತಿಗೂ ತಲುಪವಂತಾಗಬೇಕು ಎಂದು ಜಿ.ಪ್ರಭು ತಿಳಿಸಿದರು.ಸಿದ್ದಗಂಗಾ ಜಾತ್ರೆಯ ಅಂಗವಾಗಿ ನಡೆಯುತ್ತಿರುವ ಈ ವಸ್ತು ಪ್ರದರ್ಶನದಲ್ಲಿ ಕೃಷಿ, ತೋಟಗಾರಿಕೆ, ಅರಣ್ಯ, ರೇಷ್ಮೆ, ಮೀನುಗಾರಿಕೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕೈಮಗ್ಗ, ಜವಳಿ ಸೇರಿದಂತೆ ರೈತರೊಂದಿಗೆ ನೇರವಾಗಿ ಸಂಪರ್ಕ ಹೊಂದಿರುವ ಇಲಾಖೆಗಳು ಸಕ್ರಿಯವಾಗಿ ಪ್ರಾತ್ಯಕ್ಷಿಕೆಗಳ ಮೂಲಕ ಕೆಲಸ ಮಾಡಿವೆ. ಇವುಗಳ ಜೊತೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹ ತಮ್ಮ ಇಲಾಖೆಯ ಸವಲತ್ತುಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಿವೆ ಎಂದರು.
ಆಶೀರ್ವಚನ ನೀಡಿದ ಸಿದ್ದಲಿಂಗ ಸ್ವಾಮೀಜಿ, ವಸ್ತು ಪ್ರದರ್ಶನ ಯಶಸ್ವಿಯು ಸಂತೋಷ ತಂದಿದೆ. ವಿವಿಧ ಇಲಾಖೆಗಳ ಸವಲತ್ತು ಮತ್ತು ಅವುಗಳನ್ನು ಪಡೆಯುವ ರೀತಿಯನ್ನು ಜನರಿಗೆ ತಿಳಿಸಿಕೊಡಲಾಗಿದೆ. ಕಾನೂನು ಸೇವಾ ಪ್ರಾಧಿಕಾರ ಸಹ ತಮ್ಮಲ್ಲಿ ಜನರಿಗೆ ದೊರೆಯಬಹುದಾದ ಉಚಿತ ಸೇವೆಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡಿರುವುದು ಸಂತೋಷದ ವಿಚಾರ. ಈ ಎಲ್ಲಾ ವಿಚಾರಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸುವ ಕೆಲಸ ಆಗಿದೆ. ಇದಕ್ಕೆ ಸಹಕಾರ ನೀಡಿದ ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ಸ್ವಾಮೀಜಿ ತಿಳಿಸಿದರು.ವಸ್ತು ಪ್ರದರ್ಶನದಲ್ಲಿ ಪ್ರಾತಕ್ಷಿಕೆ, ಮಾಹಿತಿ ನೀಡಿದ ವಿವಿಧ ಇಲಾಖೆಗಳಿಗೆ ಪಾರಿತೋಷಕ ನೀಡಲಾಯಿತು. ಮೊದಲ ಪಾರಿತೋಷಕವನ್ನು ಕೃಷಿ ಇಲಾಖೆ, ದ್ವಿತೀಯ ಪಾರಿತೋಷಕವನ್ನು ಅರಣ್ಯ ಇಲಾಖೆ, ತೃತೀಯ ಪಾರಿತೋಷಕವನ್ನು ಶ್ರೀಸಿದ್ದಗಂಗಾ ವೈದ್ಯಕೀಯ ಮಹಾ ವಿದ್ಯಾಲಯ, ವಿಶೇಷ ಪಾರಿತೋಷಕವನ್ನು ರೇಷ್ಮೆ ಇಲಾಖೆ ಪಡೆದುಕೊಂಡಿದೆ.ಪ್ರಥಮ ಬಹುಮಾನವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯ, ಜಿಲ್ಲಾ ಕೈಗಾರಿಕಾ ಕೇಂದ್ರ, ಮೀನುಗಾರಿಕೆ, ತೋಟಗಾರಿಕೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಪಶು ಆಸ್ಪತ್ರೆ ಪಡೆದಿವೆ. ದ್ವಿತೀಯ ಬಹುಮಾನವನ್ನು ಗ್ರಾಮೀಣ ಕೈಗಾರಿಕೆ, ಸಿದ್ದಗಂಗಾ ಶಿಕ್ಷಣ ಸಂಸ್ಥೆ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕೈಮಗ್ಗ ಮತ್ತು ಜವಳಿ ಇಲಾಖೆ, ವಾರ್ತಾ ಮತ್ತು ಪ್ರಚಾರ ಇಲಾಖೆ, ತುಮಕೂರು ನಗರಪಾಲಿಕೆ ಪಡೆಯಿತು. ತೃತಿಯ ಬಹುಮಾನವನ್ನು ತಾಲೂಕು ಪಂಚಾಯಿತಿ ತುಮಕೂರು, ಸಿದ್ದಗಂಗಾ ಜನಶಿಕ್ಷಣ ಸಂಸ್ಥೆ, ಜಯ ಏಜೆನ್ಸಿಸ್, ಬಾಲಾಜಿ ಟಿ.ವಿ.ಎಸ್ ಷೋ ರೂಂ, ಸ್ಮಯನ ಸುಜುಕಿ ಷೋ ರೂಂ, ಗಣೇಶ ಎಂಟರ್ ಪ್ರೈಸಸ್, ರಾಯಲ್ ಓಕ್, ಶಿವಶಕ್ತಿ ಮೋಟರ್ಸ್ ಅಂಡ್ ಎಂಟರ್ ಪ್ರೈಸಸ್ ಪಡೆದಿವೆ. ಕಾರ್ಯಕ್ರಮದಲ್ಲಿ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಸಮಿತಿಯ ಕಾರ್ಯದರ್ಶಿ ಗಂಗಾಧರಯ್ಯ, ಜಂಟಿ ಕಾರ್ಯದರ್ಶಿ ಶಿವಕುಮಾರ್,ಕೆ.ಬಿ.ರೇಣುಕಯ್ಯ, ಸಾಂಸ್ಕೃತಿಕ ಸಮಿತಿ ಸಂಚಾಲಕರಾದ ಉಮಾಮಹೇಶ್ ಅವರುಗಳು ಉಪಸ್ಥಿತರಿದ್ದರು. -----------------ನಿರಾಶ್ರಿತರಿಗೆ ಅನ್ನ, ಅಕ್ಷರ, ಆಶ್ರಯ ನೀಡಿರುವ ಸಿದ್ದಗಂಗಾ ಮಠ, ನಿರಂತರವಾಗಿ ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನದ ಮೂಲಕ ಜನರಿಗೆ ಜ್ಞಾನ ತುಂಬುವ ಕೆಲಸ ಮಾಡುತಿದೆ. ಹಿಂದಿನ ದೂರದೃಷ್ಟಿ ಯನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ. ಡಾ.ಶಿವಕುಮಾರ ಸ್ವಾಮೀಜಿ ಹಾಕಿಕೊಟ್ಟ ಮಾರ್ಗದಲ್ಲಿ, ಸಿದ್ದಲಿಂಗ ಸ್ವಾಮೀಜಿ ಸಹ ನಡೆಯುತಿದ್ದು, ಇದರಿಂದ ಗ್ರಾಮೀಣ ಜನರಿಗೆ ಹೆಚ್ಚು ಉಪಯೋಗವಾಗಲಿದೆ.ಇದಕ್ಕಾಗಿ ದುಡಿದ ಎಲ್ಲರಿಗೂ ಅಭಿನಂದನೆ.
- ಮರಿಯಪ್ಪ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಮಕ್ಕಳಿಗೆ, ರೈತರಿಗೆ ಅಗತ್ಯವಿರುವ ಮಾಹಿತಿಯನ್ನು ಈ ವಸ್ತುಪ್ರದರ್ಶನದಲ್ಲಿ ನೀಡಲಾಗಿದೆ. ಈ ವಿಶೇಷವಾಗಿ ಮಕ್ಕಳಿಗೆ ಹೆಚ್ಚು ಅಕರ್ಷಣೆಯಾಗಿ ಕಾಣುವಂತೆ ಮೀನುಗಾರಿಕೆ, ಅರಣ್ಯ ಇಲಾಖೆ ಸಹ ಮುತ್ತುವರ್ಜಿ ವಹಿಸಿ ಎಲ್ಲಾ ರೀತಿಯ ಮಾಹಿತಿ ದೊರೆಯುವಂತೆ ಮಾಡಿವೆ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸಹ ಮಹಿಳೆ ತೆರೆದು ಕಾನೂನು ಅರಿವು ಮೂಡಿಸುವ ಕೆಲಸ ಮಾಡಿರುವುದು ಸಂತೋಷದ ವಿಚಾರವಾಗಿದೆ.- ಶುಭಾ ಕಲ್ಯಾಣ ಜಿಲ್ಲಾಧಿಕಾರಿ