ಕನ್ನಡಪ್ರಭ ವಾರ್ತೆ ಹಿರಿಯೂರು
ಅಕ್ರಮ ಸಕ್ರಮ ಯೋಜನೆಯಲ್ಲಿ ಪರಿವರ್ತಕ ಅಳವಡಿಸಬೇಕು ಮತ್ತು ಇಲಾಖೆಯಲ್ಲಿ ನಡೆದಿರುವ ಹಗರಣಗಳ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ, ರಾಜ್ಯ ರೈತ ಸಂಘದಿಂದ ಸೋಮವಾರ ಬೆಸ್ಕಾಂ ಇಲಾಖೆ ಮುಂಭಾಗ ಪ್ರತಿಭಟನೆ ನಡೆಸಲಾಯಿತು.ತಾಲೂಕಿನಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ರೈತರು ಅಕ್ರಮ ಸಕ್ರಮ ಯೋಜನೆಯಲ್ಲಿ ಹಣ ತುಂಬಿ ನಾಲ್ಕು ವರ್ಷ ಕಳೆಯುತ್ತಾ ಬಂದರೂ ಸಹ ರೈತರಿಗೆ ಪರಿವರ್ತಕ ಹಾಗೂ ಮೂಲಭೂತ ಸೌಕರ್ಯ ಒದಗಿಸಿಲ್ಲ. ಕಳೆದ 2023ರಲ್ಲಿ 24 ಕೋಟಿ ರು. ಈ ಯೋಜನೆಗೆ ಬಂದಿದ್ದು ಹೊಸ ಸರ್ಕಾರ ಬಂದಾಗ ಹಣ ವಾಪಸ್ ಪಡೆಯಲಾಗಿತ್ತು. ಈಗ ಈ ಯೋಜನೆಗೆ ಸುಮಾರು 50 ಕೋಟಿ ರು. ಅಂದಾಜಿಸಲಾಗಿದ್ದು ಶೀಘ್ರ ಅಷ್ಟು ಹಣ ಬಿಡುಗಡೆ ಮಾಡಿ ಸ್ಥಳೀಯ ಗುತ್ತಿಗೆದಾರರಿಗೆ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕು. ಎರಡು ತಿಂಗಳೊಳಗಾಗಿ ಎಲ್ಲಾ ರೈತರಿಗೂ ಪರಿವರ್ತಕ ಅಳವಡಿಸಬೇಕು. ಅಕ್ರಮ ಸಕ್ರಮ ಯೋಜನೆಯಲ್ಲಿ ಸುಮಾರು 71 ಕಾಮಗಾರಿಗಳಿಗೆ ಕಾರ್ಯಾದೇಶ ನೀಡದೆ ಕಾಮಗಾರಿ ನಡೆಸಿರುವ ಅಧಿಕಾರಿಗಳ ವಿರುದ್ಧ ನಿಯಮಾನುಸಾರ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ತ್ರಿ ಫೇಸ್ ವಿದ್ಯುತ್ ಸರಬರಾಜಿನಲ್ಲಿ ತುಂಬಾ ಕಳಪೆ ವಿದ್ಯುತ್ ಸರಬರಾಜು ಮಾಡಲಾಗುತ್ತಿದ್ದು, ದಿನಕ್ಕೆ 7ಗಂಟೆ ಸರಾಸರಿ ವಿದ್ಯುತ್ ಪೂರೈಸಬೇಕು. ಪರಿವರ್ತಕಗಳು ಸುಟ್ಟುಹೋದಲ್ಲಿ 72 ಗಂಟೆಯೊಳಗೆ ಟಿಸಿ ಒದಗಿಸಬೇಕು. ಇಲಾಖೆ ವಾಹನದಲ್ಲಿ ಗುಣಮಟ್ಟದ ಪರಿವರ್ತಕ ರೈತರ ಜಮೀನಿಗೆ ಸಾಗಿಸಬೇಕು. ಮಾರ್ಡನ್ ವಿಲೇಜ್ ಕಾಮಗಾರಿಯಲ್ಲಿ ಭಾರೀ ಹಗರಣ ನಡೆದಿದೆ. ಇದರ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ರೈತರು ಒತ್ತಾಯಿಸಿ ಮನವಿ ಸಲ್ಲಿಸಿದರು.ಈ ವೇಳೆ ರೈತ ಸಂಘದ ತಾಲೂಕು ಅಧ್ಯಕ್ಷ ಕೆಟಿ ತಿಪ್ಪೇಸ್ವಾಮಿ, ರೈತ ಮುಖಂಡರಾದ ಆಲೂರು ಸಿದ್ದರಾಮಣ್ಣ, ರಂಗಸ್ವಾಮಿ, ಅರಳಿಕೆರೆ ತಿಪ್ಪೇಸ್ವಾಮಿ, ತಿಮ್ಮಾರೆಡ್ಡಿ, ಬಬ್ಬೂರು ಫಾರಂ ಶಿವಣ್ಣ, ರಂಗಜ್ಜ, ಮೀಸೆ ರಾಮಣ್ಣ, ಗೌಡಪ್ಪ, ಮಂಜುನಾಥ್, ರಾಮಕೃಷ್ಣ, ಶಿವಣ್ಣ,ಜಗನ್ನಾಥ್, ಕೆಂಚಪ್ಪ, ತಿಮ್ಮಯ್ಯ, ತಿಪ್ಪೇಸ್ವಾಮಿ, ಮೆಹಬೂಬ್, ನಾಗರಾಜಪ್ಪ, ಕಾಂತರಾಜ್ ಮುಂತಾದವರಿದ್ದರು.
ಅಕ್ರಮ ಸಕ್ರಮ ಯೋಜನೆ ಹಣ ಮುಂಜೂರು ಆಗಿದೆ. ಹಂತ ಹಂತವಾಗಿ ಮೂರು ತಿಂಗಳ ಒಳಗಾಗಿ ಎಲ್ಲಾ ಕೆಲಸ ಮುಗಿಸುವ ಪ್ರಯತ್ನ ಮಾಡುತ್ತೇವೆ. ಮುಂದಿನ ವಾರ ಮುಖ್ಯ ಇಂಜಿನಿಯರ್‌ರನ್ನು ಕರೆಸಿ ಸಭೆ ನಡೆಸೋಣಡಿ.ರಾಮಚಂದ್ರ. ಕಾರ್ಯಪಾಲಕ ಅಭಿಯಂತರರು.