ರಸ್ತೆ ಅಗಲೀಕರಣವೋ, ವರ್ತಕರ ಬೆದರಿಸುವ ತಂತ್ರವೋ

KannadaprabhaNewsNetwork | Published : Dec 26, 2024 1:00 AM

ಸಾರಾಂಶ

ನಗರದ ಪ್ರಮುಖ ಬಿ.ಡಿ ರಸ್ತೆಯ ಅಗಲೀಕರಣ ಮಾಡಲಾಗುತ್ತಿದೆ ಎಂಬ ಸಂಗತಿಯನ್ನು ಚಿತ್ರದುರ್ಗದ ಮಂದಿ ಗಂಭೀರವಾಗಿ ತೆಗೆದುಕೊಂಡಿಲ್ಲ. ಸುಮ್ನಿರಿ ಸರ್, ತಮಾಷೆಗೂ ಒಂದು ಮಿತಿ ಇದೆ ಎಂದು ಗೇಲಿ ಮಾಡುತ್ತಿದ್ದಾರೆ. ಇದು ರಸ್ತೆ ಅಗಲೀಕರಣವೋ ಅಥವಾ ವರ್ತಕರ ಬೆದರಿಸುವ ತಂತ್ರವೋ ಎಂದು ಬೇರೆಯದೇ ಒಳ ಹಾದಿಯ ನೆನಪಿಸುತ್ತಾರೆ. ಇಂತಹ ಅದೆಷ್ಟು ತೆರವು ಕಾರ್ಯಾಚರಣೆ ನೋಡಿದ್ದೇವೆ. ಏನೇನೋ ಮೀಟಿಂಗ್ ಆಗಿ, ಒಳ ಒಪ್ಪಂದ ನಡೆದು ಎಲ್ಲ ಸಲೀಸು ಆಗ್ತಾವೆ ಎಂಬುದು ಗೊತ್ತಿದೆ ಎನ್ನುತ್ತಾರವರು.

ಚಿಕ್ಕಪ್ಪನಹಳ್ಳಿ ಷಣ್ಮುಖಕನ್ನಡಪ್ರಭ ವಾರ್ತೆ ಚಿತ್ರದುರ್ಗ ನಗರದ ಪ್ರಮುಖ ಬಿ.ಡಿ ರಸ್ತೆಯ ಅಗಲೀಕರಣ ಮಾಡಲಾಗುತ್ತಿದೆ ಎಂಬ ಸಂಗತಿಯನ್ನು ಚಿತ್ರದುರ್ಗದ ಮಂದಿ ಗಂಭೀರವಾಗಿ ತೆಗೆದುಕೊಂಡಿಲ್ಲ. ಸುಮ್ನಿರಿ ಸರ್, ತಮಾಷೆಗೂ ಒಂದು ಮಿತಿ ಇದೆ ಎಂದು ಗೇಲಿ ಮಾಡುತ್ತಿದ್ದಾರೆ. ಇದು ರಸ್ತೆ ಅಗಲೀಕರಣವೋ ಅಥವಾ ವರ್ತಕರ ಬೆದರಿಸುವ ತಂತ್ರವೋ ಎಂದು ಬೇರೆಯದೇ ಒಳ ಹಾದಿಯ ನೆನಪಿಸುತ್ತಾರೆ. ಇಂತಹ ಅದೆಷ್ಟು ತೆರವು ಕಾರ್ಯಾಚರಣೆ ನೋಡಿದ್ದೇವೆ. ಏನೇನೋ ಮೀಟಿಂಗ್ ಆಗಿ, ಒಳ ಒಪ್ಪಂದ ನಡೆದು ಎಲ್ಲ ಸಲೀಸು ಆಗ್ತಾವೆ ಎಂಬುದು ಗೊತ್ತಿದೆ ಎನ್ನುತ್ತಾರವರು. ಚಿತ್ರದುರ್ಗದ ಜನರ ಈ ರೀತಿಯ ಮಾತುಗಳ ಹಿಂದೆ ಗೂಡಾರ್ಥಗಳು ಇವೆ. ಕಳೆದ ಇಪ್ಪತ್ತೈದು ವರ್ಷಗಳಿಂದ ದುರ್ಗದಲ್ಲಿ ರಸ್ತೆ ಅಗಲೀಕರಣದ ಹಲವು ನಿದರ್ಶನಗಳು ದಾಖಲಾಗಿವೆ. ಇಂತಿಷ್ಟೇ ಮೀಟರುಗಳಷ್ಟು ಜಾಗ ತೆರವು ಮಾಡುತ್ತೇವೆಂದು ಅಧಿಕಾರಿಗಳು, ಜನಪ್ರತಿನಿಧಿಗಳು ಹೇಳುತ್ತಾರೆ. ನಂತರ ಅಗಲೀಕರಣವೆಂಬುದು ಕಾಟಾಚಾರವಾಗಿ ಹೋಗುತ್ತದೆ. ಹತ್ತು ಮೀಟರ್‌ನಷ್ಟು ಜಾಗ ತೆರವಿಗೆ ಗುರುತಿಸಿದರೆ ಅಂತಿಮವಾಗಿ ಒಂದೆರೆಡು ಮೀಟರ್‌ಗಳಷ್ಟು ಮಾತ್ರ ಖಾಲಿ ಮಾಡಿಸಿ ಸುಮ್ಮನಾಗುತ್ತಿದ್ದಾರೆ. ಪ್ರಮುಖ ರಸ್ತೆ ವರ್ತಕರು ತಮ್ಮ ಅಂಗಡಿ ಮಳಿಗೆಗಳ ಗೋಡೆ ಕೆಡವುದು, ನಂತರ ಕಟ್ಟಿ ಷಟರ್‌ಗಳ ಇಡುವುದು ಮಾಮೂಲಾಗಿದೆ. ಪ್ರತಿ ನಾಲ್ಕಾರು ವರ್ಷದ ನಂತರ ಇಂತಹದ್ದೇ ಮತ್ತೊಂದು ತೆರವು ಕಾರ್ಯಾಚರಣೆ ನುಸುಳುತ್ತದೆ.ಹಿಂದೆ ಪ್ರಮುಖ ರಸ್ತೆ ಬಿಟ್ಟು ಜಿಲ್ಲಾ ಆಸ್ಪತ್ರೆಯಿಂದ ತುರುವನೂರು ರಸ್ತೆ, ಗಾಂಧಿ ಸರ್ಕಲ್‌ನಿಂದ ಮೆದೆಹಳ್ಳಿ ರಸ್ತೆ ಅಗಲೀಕರಣ ಮಾಡಲಾಗಿತ್ತು. ಇಡೀ ವರ್ತಕ ಸಮುದಾಯ ನಿದ್ದೆ ಗೆಟ್ಟಿತ್ತು. ಮುಂದೇನು ಎಂದು ಕಂಗಾಲಾಗಿದ್ದರು. ಅಂತಿಮವಾಗಿ ವ್ಯವಸ್ಥೆ ಅವರನ್ನು ನಿರಾಳರನ್ನಾಗಿ ಮಾಡಿತ್ತು. ಅಂದಿನಿಂದ ಇಂದಿನವರೆಗೆ ತಮ್ಮ ದುಡಿಮೆಯಿಂದ ಬರುವ ಆದಾಯದಲ್ಲಿ ಒಂದಿಷ್ಟು ಮೊತ್ತವ ಅಗಲೀಕರಣಕ್ಕೆಂದೇ ಎತ್ತಿಡುತ್ತಿದ್ದಾರೆ. ಚಿತ್ರದುರ್ಗದ ಚಳ್ಳಕೆರೆ ಸರ್ಕಲ್‌ನಿಂದ ಗಾಂಧಿ ವೃತ್ತದವರೆಗೆ ಮೂರು ವರ್ಷದ ಹಿಂದೆ ತೆರವು ಕಾರ್ಯಾಚರಣೆ ಕೈಗೊಂಡಾಗ ರಸ್ತೆ ಮಧ್ಯದಿಂದ ಎರಡೂ ಕಡೆ ತಲಾ ಹದಿನೈದು ಮೀಟರ್‌ನಷ್ಟು ಒತ್ತುವರಿ ತೆರವು ಮಾಡಬೇಕೆಂದು ತೀರ್ಮಾನಿಸಿ ಮುನ್ನಡೆಯಲಾಗಿತ್ತು. ಅಚ್ಚರಿ ಎಂದರೆ ಚಳ್ಳಕೆರೆ ಸರ್ಕಲ್‌ನಿಂದ ಪ್ರವಾಸಿ ಮಂದಿರದವರೆಗೆ ಹದಿನೈದು ಮೀಟರ್ ನಿಯಮಾವಳಿ ಅಳವಡಿಸಲಾಯಿತು. ನಂತರ ಅಲ್ಲಿಂದ ಗಾಂಧಿ ವೃತ್ತದವರೆಗೆ ಹದಿಮೂರುವರೆ ಮೀಟರಿಗೆ ಇಳಿಸಲಾಯಿತು. ಆದರೆ ಅದೂ ಕೂಡಾ ಈಡೇರಲಿಲ್ಲ. ವರ್ತಕರ ಅಂಗಡಿ ಮೆಟ್ಟಿಲುಗಳವರೆಗೆ ಮಾತ್ರ ಅಗಲೀಕರಣ ಮಾಡಲಾಯಿತು. ಗೋಡೆಗಳ ತಂಟೆಗೆ ಹೋಗಲಿಲ್ಲ. ಹತ್ತು ಮೀಟರ್ ಕೂಡ ಅಗಲ ಆಗಲಿಲ್ಲ. ಸಿಕ್ಕ ರಸ್ತೆಗೆ ಸಿಮೆಂಟ್ ಕಾಂಕ್ರಿಟ್ ಹಾಕಿ ಮಧ್ಯದಲ್ಲಿ ಡಿವೈಡರ್ ಹೆಸರಿನ ತಡೆಗೋಡೆ ಕಟ್ಟಿ ಅಧಿಕಾರಿಗಳು ಕೈ ತೊಳೆದುಕೊಂಡರು. ಗುತ್ತಿಗೆದಾರರು ಬಿಲ್ ಮಾಡಿಸಿಕೊಳ್ಳಲು ಎಷ್ಟು ಅವಸರದಲ್ಲಿ ಇದ್ದರೆಂದರೆ ರಸ್ತೆ ಪಕ್ಕದ ವಿದ್ಯುತ್ ಕಂಬಗಳ ಸರಿಯಾಗಿ ಶಿಫ್ಟ್ ಮಾಡಲಿಲ್ಲ, ಕಾಂಕ್ರಿಟ್ ರಸ್ತೆ ಮೇಲೆ ಬಿದ್ದ ಮಳೆ ನೀರು ಸರಾಗವಾಗಿ ಹರಿಯಲು ಜಾಗ ಮಾಡಲಿಲ್ಲ. ಮಳೆ ಬಂದಾಗ ನೀರೆಲ್ಲ ರಸ್ತೆ ಅಂಚಿಗೆ ಬಂದು ನಿಂತು ಕೊಚ್ಚೆಗುಂಡಿಯಂತಾಗುತ್ತದೆ. ಪ್ರವಾಸಿ ಮಂದಿರದಿಂದ ಗಾಂಧಿ ವೃತ್ತದವರೆಗೆ ಅಗಲೀಕರಣ ಏಕೆ ಮಾಡಿದರು, ಎಲ್ಲಿ ಮಾಡಿದರು ಎಂಬುದೇ ಗೊತ್ತಾಗುತ್ತಿಲ್ಲ. ಆದರೆ ಗೋಡೆಗಳ ಮೇಲೆ ಮಾತ್ರ ಹದಿಮೂರುವರೆ ಮೀಟರ್, ಹದಿನೈದು ಮೀಟರ್ ಎಂಬ ಮಾರ್ಕ್‌ಗಳು ಹಾಗೇ ಉಳಿದಿವೆ. ಕನಿಷ್ಠ ಹನ್ನೆರೆಡು ಮೀಟರ್ ತೆರವುಗೊಳಿಸಲಾಗಿಲ್ಲ. ಅಷ್ಟರ ಮಟ್ಟಿಗೆ ತೆರವು ಕಾರ್ಯಾಚರಣೆ ಗುಮ್ಮ ಬಿಟ್ಟು ಅಧಿಕಾರಿಗಳು, ಜನ ಪ್ರತಿನಿಧಿಗಳು ಸುಮ್ಮನಾಗಿದ್ದರು. ಚಿತ್ರದುರ್ಗದಲ್ಲಿ ರಸ್ತೆ ಅಗಲೀಕರಣ ಮಾಡ್ತೇವೆ ಅಂತ ಡಿಸ್ಟ್ರಿಕ್ಟ್ ಮಿನಿಸ್ಟರ್, ಎಂಎಲ್‌ಎ, ಡಿಸಿ ಹೇಳಿದ್ದಾರೆ. ಅವರು ಹೇಳಿದ ಹಾಗೆ ರಸ್ತೆಗಳು ಅಗಲವಾದರೆ ಸಂತೋಷ. ಇದುವರೆಗೂ ಹಲವಾರು ರಸ್ತೆ ಅಗಲೀಕರಣವ ಕಣ್ಣಾರೆ ಕಂಡಿದ್ದೇವೆ. ಹಾಗಾಗಿ ಈಗ ನಡೆಯುವ ಅಗಲೀಕರಣದ ಬಗ್ಗೆ ಅಂತಹ ಕುತೂಹಲಗಳೇನೂ ಇಲ್ಲ.

-- ಬಿ.ಕಾಂತರಾಜ್, ನಗರಸಭೆ ಮಾಜಿ ಅಧ್ಯಕ್ಷ

Share this article