ಕನ್ನಡಪ್ರಭ ವಾರ್ತೆ ಹೊನ್ನಾವರ
ಚಿಪ್ಕೋ ಚಳವಳಿಯ ಮೂಲಕ ದೇಶದಲ್ಲಿ ಸಂಚಲನ ಮಾಡಿದ್ದ ಮೇಧಾ ಪಾಟ್ಕರ್ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿಗೊಳಿಸುವ ಸರ್ಕಾರದ ವಿರುದ್ಧ ನಿಲ್ಲುವ ಭರವಸೆ ನೀಡಿದ್ದಾರೆ.ಸೋಮವಾರ ತಾಲೂಕಿನ ಶರಾವತಿ- ಕಾಸರಕೋಡ ಟೊಂಕಾ ಪ್ರದೇಶಕ್ಕೆ ಅವರು ದಿಢೀರ್ ಭೇಟಿ ನೀಡಿದರು. ಈ ಸಂದರ್ಭ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ನಿಲ್ಲಿಸಲು ಬೆಂಬಲ ಕೋರಿ ಶರಾವತಿ ನದಿ ಕಣಿವೆ ಉಳಿಸಿ ಹೋರಾಟ ಸಮಿತಿ ಅವರಿಗೆ ಮನವಿ ಸಲ್ಲಿಸಿತು. ಇದಕ್ಕೆ ಪಾಟ್ಕರ್ ಸಕಾರಾತ್ಮಕವಾಗಿ ಸ್ಪಂದಿಸಿದರು.
ಕರ್ನಾಟಕ ಪವರ್ ಕಾರ್ಪೋರೇಷನ್ ಲಿಮಿಟೆಡ್ (ಕೆಪಿಸಿಎಲ್) ಪ್ರಸ್ತಾಪಿಸಿರುವ ಶರಾವತಿ ಪಂಪ್ಡ್ ಸ್ಟೋರೇಜ್ ಜಲವಿದ್ಯುತ್ ಯೋಜನೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸಮಿತಿ, ಪಶ್ಚಿಮ ಘಟ್ಟಗಳ ಹೃದಯಭಾಗದಲ್ಲಿ ಯೋಜಿಸಲಾದ ಪರಿಸರ, ಸಾಮಾಜಿಕ ಮತ್ತು ಸಾಂಸ್ಕೃತಿಕ ರಚನೆಗೆ ಆತಂಕ ತಂದೊಡ್ಡಲಿದೆ ಎಂದು ಮನವಿಯಲ್ಲಿ ತಿಳಿಸಿದೆ.ಇದು ಪಶ್ಚಿಮ ಘಟ್ಟಗಳ ಯುನೆಸ್ಕೋ ವಿಶ್ವ ಪರಂಪರೆಯ ಪ್ರದೇಶದ ಭಾಗವಾಗಿದೆ. ಇದು ವಿಶಿಷ್ಟ ಜೀವವೈವಿಧ್ಯತೆಯನ್ನು ಹೊಂದಿದೆ. ಕೃಷಿ, ಅರಣ್ಯ ಉತ್ಪನ್ನಗಳು ಮತ್ತು ನದಿ ಆಧಾರಿತ ಜೀವನೋಪಾಯವನ್ನು ಅವಲಂಬಿಸಿರುವ ಸಾವಿರಾರು ಕುಟುಂಬಗಳು ಇಲ್ಲಿ ವಾಸವಾಗಿದೆ. ಪ್ರಸ್ತಾವಿತ ಯೋಜನೆಯು ದೊಡ್ಡ ಪ್ರಮಾಣದ ಅರಣ್ಯನಾಶ, ಸುರಂಗ ಮಾರ್ಗ ಮತ್ತು ಮುಳುಗಡೆಗೆ ಕಾರಣವಾಗುತ್ತದೆ. ಪರಿಸರ ಹಾನಿಯನ್ನುಂಟು ಮಾಡುತ್ತದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಯೋಜನೆಯಿಂದ ೫೦೦೦ಕ್ಕೂ ಹೆಚ್ಚು ಮಾಂಗ್ರೋವ್ ಮರಗಳನ್ನು ಕಡಿಯಲಾಗುವುದು. ಅಳಿವಿನಂಚಿನಲ್ಲಿರುವ ಸಿಂಹ ಬಾಲದ ಕೋತಿಗಳು ಮತ್ತು ಇತರ ಸ್ಥಳೀಯ ಪ್ರಭೇದಗಳು ಆವಾಸ ಸ್ಥಾನ ಕಳೆದುಕೊಳ್ಳುತ್ತವೆ. ನಿರಂತರ ಸುರಂಗ ಮಾರ್ಗ ಮತ್ತು ಸ್ಫೋಟವು ಅಂತರ್ಜಲ ಕಡಿಮೆ ಮಾಡುತ್ತದೆ. ಕೃಷಿ ಭೂಮಿ ನಾಶಪಡಿಸುತ್ತದೆ ಮತ್ತು ಭೂಕುಸಿತಗಳಿಗೆ ಕಾರಣವಾಗುತ್ತದೆ. ಪಶ್ಚಿಮ ಘಟ್ಟಗಳಲ್ಲಿನ ಜೀವವೈವಿಧ್ಯ ಕಾರಿಡಾರ್‌ಗಳು ಶಾಶ್ವತವಾಗಿ ಛಿದ್ರವಾಗುತ್ತವೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.ಈ ಗಂಭೀರ ಕಾಳಜಿಗಳ ಹೊರತಾಗಿಯೂ ಪಾರದರ್ಶಕ ಪರಿಸರ ಅನುಮತಿಗಳು, ಸಮಗ್ರ ಪರಿಣಾಮದ ಮೌಲ್ಯಮಾಪನಗಳು ಅಥವಾ ಪೀಡಿತ ಗ್ರಾಮ ಪಂಚಾಯಿತಿಗಳ ಒಪ್ಪಿಗೆಯಿಲ್ಲದೆ ಯೋಜನೆಯೊಂದಿಗೆ ಮುಂದುವರಿಯುತ್ತಿದ್ದಾರೆ. ಇದು ಪರಿಸರ ಉಲ್ಲಂಘನೆ ಮತ್ತು ಪ್ರಜಾಪ್ರಭುತ್ವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಸಮಿತಿ ಹೇಳಿದೆ.
ನದಿಗಳು, ಜನರು ಮತ್ತು ನ್ಯಾಯಕ್ಕಾಗಿ ನಿಮ್ಮ ಜೀವಮಾನದ ಹೋರಾಟವು ಅಸಂಖ್ಯಾತ ಚಳವಳಿಗಳಿಗೆ ಸ್ಪೂರ್ತಿ ನೀಡಿದೆ. ಶರಾವತಿ ಕಣಿವೆಗೆ ನಿಮ್ಮ ಧ್ವನಿ ಮತ್ತು ನೈತಿಕ ಬೆಂಬಲದ ಅಗತ್ಯವಿದೆ. ಈ ಬಿಕ್ಕಟ್ಟಿನ ಬಗ್ಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಗಮನ ಸೆಳೆಯಲು ನಿಮ್ಮ ಬೆಂಬಲ ಬಯಸಿದೆ ಎಂದು ಸಮಿತಿ ತಿಳಿಸಿದೆ. ಅದಕ್ಕೆ ಸದ್ಯದಲ್ಲಿಯೇ ಮತ್ತೊಮ್ಮೆ ನಾವೆಲ್ಲ ಸೇರೋಣ ಎನ್ನುವ ಮಾತನ್ನು ಮೇಧಾ ಪಾಟ್ಕರ್ ಶರಾವತಿ ಉಳಿಸಿ ಹೋರಾಟ ಸಮಿತಿಗೆ ಹೇಳಿದ್ದಾರೆ.