ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಕೇಂದ್ರ ಹಾಗೂ ರಾಜ್ಯ ಸರ್ಕಾರ ಗ್ರಾಮ ಪಂಚಾಯಿತಿ ಆಡಳಿತವನ್ನು ಬಲಿಷ್ಠಗೊಳಿಸಲು ನೇರವಾಗಿ ಅನುದಾನವನ್ನು ಗ್ರಾಪಂಗಳಿಗೆ ನೀಡುತ್ತಿವೆ. ಇದಲ್ಲದೆ ಸರ್ಕಾರದ ಎಲ್ಲಾ ಯೋಜನೆಯಗಳೂ ಗ್ರಾಪಂನಲ್ಲೆ ದೊರೆಯುವಂತೆ ಮಾಡಿ ಸರ್ಕಾರ ಜನರಿಗೆ ಮತ್ತಷ್ಟು ಹತ್ತಿರವಾಗುವಂತೆ ಮಾಡಿದೆ. ಆದರೆ ಇಂತಹ ಆಡಳಿತ ನಡೆಸುವ ಗ್ರಾಪಂ ಕಚೇರಿಯೇ ಅವ್ಯವಸ್ಥೆಯಿಂದ ಕೂಡಿದ್ದರೆ ಹೇಗೆ?. ತಾಲೂಕಿನ ಬಹುತೇಕ ಗ್ರಾಮ ಪಂಚಾಯಿತಿ ಕಟ್ಟಡಗಳು ಸ್ವಂತ ಕಟ್ಟಡಗಳನ್ನು ಹೊಂದಿವೆ, ಆದರೆ ಹಲವು ಗ್ರಾಪಂ ಕಟ್ಟಡಗಳು ತುಂಬಾ ಚಿಕ್ಕದಾಗಿವೆ. ಇಲ್ಲವೆ ಹಳೇ ಕಟ್ಟಡದಲ್ಲೇ ಕಚೇರಿ ನಡೆಸುತ್ತಿವೆ. ಇಂತಹ ಪಟ್ಟಿಗೆ ಪಟ್ಟಣಕ್ಕೆ ಅಂಟಿಕೊಂಡಿರುವ ಐನೋರಹೊಸಹಳ್ಳಿ ಗ್ರಾಪಂ ಸೇರುತ್ತದೆ.ಪ್ರತ್ಯೇಕ ಕೊಠಡಿ ಇಲ್ಲ
ಈ ಪಂಚಾಯತಿಯ ಕಟ್ಟಡ ತುಂಬಾ ಹಳೇದಾಗಿದೆ ಹಾಗೂ ಗ್ರಾಮ ಪಂಚಾಯ್ತಿ ಸಾಮಾನ್ಯ ಸಭೆ ನಡೆಸಲೂ ಸ್ಥಳಾವಕಾಶ ಸಮರ್ಪಕವಾಗಿಲ್ಲ, ಅಧ್ಯಕ್ಷ ಉಪಾಧ್ಯಕ್ಷರಿಗೆ ಪ್ರತ್ಯೇಕ ಕೊಠಡಿಗಳಿಲ್ಲ, ಇನ್ನು ಕಡತಗಳನ್ನು ಸಂಗ್ರಹಿಸಿಡಲು ಪ್ರತ್ಯೇಕ ಕೊಠಡಿಗಳಿಲ್ಲದೆ ಹಲವು ದಶಕಗಳಿಂದ ಕಿಷ್ಕಿಂದೆಯಾದ ಕಟ್ಟಡದಲ್ಲೆ ಜೋಡಿಸಿಡಲಾಗಿದೆ. ಕಳೆದ ಐದಾರು ದಿನಗಳಿಂದ ಫೆಂಗಲ್ ಚಂಡಮಾರುತ ಮಳೆಗೆ ಗ್ರಾಪಂ ಕಟ್ಟಡ ಸಂಪೂರ್ಣವಾಗಿ ಜಲಾವೃತಗೊಂಡಿತ್ತು. ಪಿಡಿಒ ಕೊಠಡಿ, ಕಡತ ಕೊಠಡಿ, ಸಾಮಾನ್ಯ ಸಭೆ ನಡೆಸುವ ಸ್ಥಳದಲ್ಲಿ ಮಾಳಿಗೆಯಿಂದ ನೀರು ಸೋರುತ್ತಿತ್ತು. ಇದರಿಂದಾಗಿ ಗ್ರಾಪಂ ಕಚೇರಿ ನೀರಿನಿಂದ ಆವರಿಸಿಕೊಂಡಿತ್ತು. ವಿಧಿಯಿಲ್ಲದೆ ಸೋರುವ ಕಟ್ಟಡದಲ್ಲೆ ಕಚೇರಿ ಕಾರ್ಯ ನಡೆಯುತ್ತಿವೆ.ಈ ಹಿಂದಿನ ಆಡಳಿತ ಮಂಡಳಿ ಪಂಚಾಯ್ತಿಯ ಹಳೇ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣಕ್ಕೆ ನರೇಗ ಯೋಜನೆಯಲ್ಲಿ ೨೫ ಲಕ್ಷ ರು.ಗಳನ್ನು ಮೀಸಲಿಡಲಾಗಿತ್ತು. ಆದರೆ ಕಟ್ಟಡ ನಿರ್ಮಾಣದ ವಿಷಯದಲ್ಲಿ ಇಬ್ಬರ ನಡುವೆ ಉಂಟಾದ ಭಿನ್ನಾಭಿಪ್ರಾಯದಿಂದಾಗಿ ಯೋಜನೆ ಕಾರ್ಯಗತವಾಗದೆ ನನೆಗುದಿಗೆ ಬಿದ್ದಿತ್ತು.
ಅನುಮೋದನೆ ದೊರೆತಿಲ್ಲಈಗ ಅಧ್ಯಕ್ಷರಾಗಿ ಮಂಜುನಾಥ್ ಆಯ್ಕೆಯಾದ ನಂತರ ಗ್ರಾಪಂಗೆ ಹೊಸ ಕಟ್ಟಡ ನಿರ್ಮಾಣ ಮಾಡಲು ಉತ್ಸುಕರಾಗಿದ್ದಾರೆ. ಆದರೆ ಇನ್ನೂ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಪಡೆದಿಲ್ಲ. ಇದೇ ರೀತಿ ಕಾರಹಳ್ಳಿ ಗ್ರಾಪಂ ಸಹ ಕಿರಿದಾದ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಹೊಸ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ಭೂಮಿ ಪೂಜೆ ಮಾಡಿದ್ದರೂ ಕಟ್ಟಡ ನಿರ್ಮಾಣ ಆರಂಭವಾಗಿಲ್ಲ.