ಉತ್ತರದ ಸಮಸ್ಯೆಗೆ ಧ್ವನಿಯಾಗುವುದೇ ಅಧಿವೇಶನ?

KannadaprabhaNewsNetwork | Published : Dec 7, 2024 12:33 AM

ಸಾರಾಂಶ

ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಚರ್ಚೆಗೆ ಬರುವುದು ಕೊನೆಯ ಎರಡು ದಿನ. ಶಾಸಕರು, ಸಚಿವರು ಪೂರ್ಣ ಪ್ರಮಾಣದಲ್ಲಿ ಇರುವುದಿಲ್ಲ. ಸದನದಲ್ಲಿರುವ ಶಾಸಕರಿಗೂ ತಮ್ಮೂರಿಗೆ ಹೋಗುವ ಧಾವಂತ. ಹೀಗಾಗಿ ಕಾಟಾಚಾರಕ್ಕೆಂಬಂತೆ ಅಲ್ಲೊಬ್ಬರು, ಇಲ್ಲೊಬ್ಬರು ಶಾಸಕರು ಚರ್ಚೆ ನಡೆಸುತ್ತಾರೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ

ಮತ್ತೊಂದು ಚಳಿಗಾಲದ ಬೆಳಗಾವಿ ಅಧಿವೇಶನಕ್ಕೆ ಡಿ. 9ರಿಂದ ಮಹೂರ್ತ ನಿಗದಿಯಾಗಿದೆ. ಈ ಸಲವಾದರೂ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆಯಾಗಿ ಪರಿಹಾರ ಸಿಗುವುದೇ? ಎಂದು ಈ ಭಾಗದ ಜನತೆ ಜಾತಕ ಪಕ್ಷಿಯಂತೆ ಎದುರು ನೋಡುತ್ತಿದ್ದಾರೆ.

ಬೆಳಗಾವಿಯಲ್ಲಿ ₹ 400 ಕೋಟಿ ವ್ಯಯಿಸಿ ಸುವರ್ಣ ವಿಧಾನಸೌಧ ನಿರ್ಮಿಸಿರುವುದೇ ಉತ್ತರ ಹಾಗೂ ದಕ್ಷಿಣ ಕರ್ನಾಟಕ ಭಾಗದಲ್ಲಿ ಅಸಮಾನತೆ ನಿವಾರಣೆಗೆ. ಒಂದೆರಡು ವರ್ಷ ಬಿಟ್ಟರೆ ಪ್ರತಿವರ್ಷ 10 ದಿನ ಚಳಿಗಾಲದ ಅಧಿವೇಶನ ನಡೆಯುತ್ತಲೇ ಇದೆ. ಆದರೆ, ಪ್ರತಿಸಲ ಅಧಿವೇಶನ ಕಾಟಾಚಾರವೆಂಬಂತೆ ನಡೆಯುತ್ತಿದೆ. ಈ ಬಾರಿಯಾದರೂ ಉತ್ತಮ ಚರ್ಚೆ ನಡೆಯುವುದೇ?

ಜನರ ನಿರೀಕ್ಷೆಗಳು:

- ಮಹದಾಯಿ ನ್ಯಾಯಾಧೀಕರಣ ನಿಗದಿ ಮಾಡಿದ ಕರ್ನಾಟಕದ ಪಾಲಿನ ನೀರು ಬಳಕೆಗೆ ಅಡ್ಡಿಯಾಗಿರುವ ಪರಿಸರ ಇಲಾಖೆ ಮತ್ತು ವನ್ಯಜೀವಿ ಮಂಡಳಿ ಅನುಮತಿ 7 ವರ್ಷವಾದರೂ ಸಿಗುತ್ತಿಲ್ಲ. ಈ ಬಗ್ಗೆ ಪಕ್ಷಾತೀತ ಚರ್ಚೆ ನಡೆದು ಪರಿಹಾರ ಸಿಗುವಂತಾಗಬೇಕು.

- ಮೇಲಿಂದ ಮೇಲೆ ಪ್ರವಾಹಕ್ಕೆ ಕಾರಣವಾಗಿರುವ ದೋಣಿ, ಭೀಮಾ, ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿಗಳು ಮತ್ತು ಬೆಣ್ಣಿಹಳ್ಳದ ಸರ್ವೇ ಮಾಡಿ ಒತ್ತುವರಿ ತೆರವು ಮಾಡುವ ಯೋಜನೆ ಇನ್ನೂ ಕಡತದಲ್ಲೇ ಇದೆ.

- ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು ನಿಗದಿ ಪಡಿಸಲಾದ ಕಾಲಮಿತಿ ಮುಗಿದು ಎರಡು ದಶಕ ಕಳೆದರೂ ಇನ್ನೂ ಕಾಮಗಾರಿ ಮುಗಿಯುತ್ತಲೇ ಇಲ್ಲ.

- ಆಂಧ್ರದ ಪಾಲಾಗುತ್ತಿರುವ ನೀರನ್ನು ಹಿಡಿದಿಟ್ಟುಕೊಳ್ಳಲು ತುಂಗಭದ್ರಾ ಜಲಾಶಯಕ್ಕೆ ಸಮಾನಾಂತರ ಅಣೆಕಟ್ಟೆ ಕಟ್ಟುವ ಯೋಜನೆಯೂ ಇನ್ನೂ ಡಿಪಿಆರ್ ಹಂತದಲ್ಲಿದೆ.

- ತುಂಗಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಘೋಸಿಸಿದ್ದ ೪೫೦೦ ಕೋಟಿ ಅನುದಾನ ಐದು ವರ್ಷವಾದರೂ ಬಂದಿಲ್ಲ.

- ಎಸ್.ಎಂ.ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಹುಬ್ಬಳ್ಳಿಯಲ್ಲಿ ಐಟಿ ಪಾರ್ಕ್ ಸ್ಥಾಪನೆಯಾಗಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಐಟಿ ಉದ್ಯಮ ಉತ್ತರ ಕರ್ನಾಟಕದಲ್ಲಿ ಬೆಳವಣಿಗೆ ಆಗಿಲ್ಲ.

- ನಂಜುಂಡಪ್ಪ ವರದಿಯಲ್ಲಿ ಅತೀ ಹಿಂದುಳಿದ ತಾಲೂಕುಗಳು ಎಂದು ಗುರುತಿಸಲಾದ ತಾಲೂಕುಗಳು ಹೇಳಿಕೊಳ್ಳುವ ರೀತಿಯಲ್ಲಿ ಅಭಿವೃದ್ಧಿಯಾಗದೇ ಅಭಿವೃದ್ಧಿಯಲ್ಲಿನ ತಾರತಮ್ಯ ಇನ್ನೂ ಮುಂದುವರೆದಿದೆ.

- ಉತ್ತರ ಭಾಗದವರೇ ಮುಖ್ಯಮಂತ್ರಿ, ಕೈಗಾರಿಕೆ ಸಚಿವರು ಆಗಿದ್ದರೂ ಹೇಳಿಕೊಳ್ಳುವಂತ ಬೃಹತ್ ಉದ್ಯಮ ಉತ್ತರ ಕರ್ನಾಟಕದಲ್ಲಿ ಸ್ಥಾಪನೆಯಾಗಲಿಲ್ಲ. ಏಕೈಕ ಉದ್ಯಮ ಎನಿಸಿರುವ ಧಾರವಾಡದ ಎನ್‌ಜಿಇಎಫ್ ಇನ್ನೇನು ಬಾಗಿಲು ಹಾಕುವ ಸ್ಥಿತಿ ತಲುಪಿದೆ.

- ಈಗಲೂ ಉತ್ತರ ಭಾಗದ ಶೇ.೮೦ ರಷ್ಟು ಯುವಕರು ಉದ್ಯೋಗ ಅರಸಿ ಮಂಗಳೂರು, ಬೆಂಗಳೂರಿಗೆ ವಲಸೆ ಹೋಗುತ್ತಿದ್ದಾರೆ. ಕೊಪ್ಪಳ, ವಿಜಯನಗರ, ಬಳ್ಳಾರಿ ಜಿಲ್ಲೆಯಲ್ಲಿನ ಉದ್ಯಮಗಳಲ್ಲಿ ಸ್ಥಳೀಯರಿಗೆ ಅವಕಾಶ ಸಿಗುತ್ತಿಲ್ಲ.

- ಹಳ್ಳಿ, ತಾಂಡಾಗಳಲ್ಲಿನ ಬಡವರು ಕೂಲಿ ಅರಸಿ ಗೋವಾ, ಮಂಗಳೂರು, ಬೆಂಗಳೂರಿಗೆ ಹೋಗುತ್ತಿದ್ದಾರೆ. ಅವರ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.

- ಉತ್ತರದೆಡೆ ಆಡಳಿತ ಎನ್ನುವ ಘೋಷಣೆಯೊಂದಿಗೆ ಬೆಳಗಾವಿಯಲ್ಲಿ ಸುವರ್ಣವಿಧಾನಸೌಧ ಸ್ಥಾಪನೆಯಾಗಿದ್ದರೂ ವಿವಿಧ ಇಲಾಖೆ, ನಿಗಮ ಮಂಡಳಿಗಳ ಕಚೇರಿಗಳು ಇಲ್ಲಿಗೆ ಸ್ಥಳಾಂತರವಾಗದೇ ನಿರೀಕ್ಷೆ ಹುಸಿಗೊಳಿಸಿದೆ.

- ಉತ್ತರ ಭಾಗದಲ್ಲಿ ಸಾಕಷ್ಟು ಸಕ್ಕರೆ ಕಾರ್ಖಾನೆಗಳು ಸ್ಥಾಪನೆಯಾಗಿದ್ದರೂ ಕಬ್ಬು ಬೆಳೆಗಾರರ ಸಮಸ್ಯೆಗೆ ಸರ್ಕಾರದಿಂದಾಗಲಿ, ಕಾರ್ಖಾನೆ ಮಾಲಿಕರಿಂದಾಗಲಿ ಇನ್ನೂ ಪರಿಹಾರ ಸಿಕ್ಕಿಲ್ಲ.

- ಕರುನಾಡಿನ ಕನ್ನಡ ಗುಡಿ ಎನಿಸಿರುವ ಹಂಪಿ ಕನ್ನಡ ವಿವಿ ಸರ್ಕಾರದ ನಿರ್ಲಕ್ಷ್ಯದಿಂದ ಸಿಬ್ಬಂದಿಗೆ ಸಂಬಳ ಕೊಡಲಾಗದೇ ಒದ್ದಾಡುತ್ತಿದೆ. ಜಿಲ್ಲೆಗೊಂದು ವಿವಿ ಸ್ಥಾಪಿಸಿದ ಸರ್ಕಾರ ಅವುಗಳಿಗೆ ಅಗತ್ಯ ಅನುದಾನ ನೀಡದೇ ರೋಗಗ್ರಸ್ಥ ವಿವಿಗಳನ್ನಾಗಿ ಮಾಡಿದೆ.

- ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಅಪಾರ ಪ್ರಮಾಣದಲ್ಲಿ ಬೆಳೆಯುವ ದ್ರಾಕ್ಷಿ, ದಾಳಿಂಬರ, ಚಿಕ್ಕೂ (ಸಪೋಟ) ಹಣ್ಣುಗಳಿಗೆ ಉತ್ತಮ ಬೆಲೆ ಕೊಡಿಸುವಲ್ಲಿ ಸರ್ಕಾರಕ್ಕೆ ಆಗುತ್ತಿಲ್ಲ.

- ಉತ್ತರ ಭಾಗದ ಹ್ರೌಢಶಾಲೆಗಳ ಫಲಿತಾಂಶ ಕುಸಿತ ಮತ್ತು ಡ್ರಾಪೌಟ್ (ಮಧ್ಯದಲ್ಲಿ ಶಾಲೆ ಬಿಡುವ ಮಕ್ಕಳು) ಸಂಖ್ಯೆ ವರ್ಷದಿಂದ ವರ್ಷಧಕ್ಕೆ ಗಣನೀಯವಾಗಿ ಹೆಚ್ಚುತ್ತಿದ್ದರೂ ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಗಡಿ ಭಾಗದಲ್ಲಿನ ಕನ್ನಡ ಶಾಲೆಗಳು ಬಾಗಿಲು ಮುಚ್ಚುತ್ತಿವೆ. ಗಡಿಯಲ್ಲಿನ ಕನ್ನಡಿಗರು ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ಕೇರಳ ರಾಜ್ಯಗಳಿಂದಲೂ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದಾರೆ.

- ನೈಋತ್ಯ ರೈಲ್ವೆ ವಲಯ ಕೈಗೆತ್ತಿಕೊಂಡ ಹೊಸ ರೈಲು ಯೋಜನೆಗಳಿಗೆ ಕರ್ನಾಟಕ ಸರ್ಕಾರ ತನ್ನ ಮಾಲಿನ ವಂತಿಕೆ ನೀಡುತ್ತಿಲ್ಲ. ಅಗತ್ಯ ಭೂಮಿ ಸ್ವಾಧೀನ ಮಾಡಿ ಕೊಡುತ್ತಿಲ್ಲ. ಹಾಗಾಗಿ ಆ ಎಲ್ಲ ಯೋಜನೆಗಳು ನೆನೆಗುದಿಗೆ ಬೀಳುತ್ತಿವೆ. ಧಾರವಾಡ- ಕಿತ್ತೂರು- ಬೆಳಗಾವಿ ಕೆಲಸವೇ ಶುರುವಾಗುತ್ತಿಲ್ಲ ಇದಕ್ಕೆ ಕಾರಣ ಭೂಸ್ವಾಧೀನ.

- ಧಾರವಾಡಕ್ಕೆ ಓದಲು ಬರುವ ವಿದ್ಯಾರ್ಥಿಗಳಿಗೆ ಅಗತ್ಯ ಹಾಸ್ಟೆಲ್ ವ್ಯವಸ್ಥೆ ಆಗುತ್ತಿಲ್ಲ. ಪ್ರತಿ ವರ್ಷ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಸ್ಟೆಲ್ ಪ್ರವೇಶ ಸಿಗದೇ ತಮಗೆ ಇಷ್ಟವಾದ ಕೋರ್ಸ್ ಓದಲಾಗದೇ ನಿರಾಶರಾಗುತ್ತಿದ್ದಾರೆ.

- ಕೌಶಲ್ಯಾಭಿವೃದ್ಧಿ ನಿಗಮದ ಕಾಟಾಚಾರದ ಕಾರ್ಯವೈಖರಿಯಿಂದಾಗಿ ಗ್ರಾಮೀಣ ಯುವಕರು ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ.ಇವುಗಳೊಂದಿಗೆ ಉತ್ತರ ಕರ್ನಾಟಕಕ್ಕೆ ವಿಶೇಷ ಅನುದಾನ, ಕುಡಿಯುವ ನೀರಿನ ಸಮಸ್ಯೆ, ಪರಿಹಾರದ ಚರ್ಚೆ ನಡೆದು ಕ್ರಮ ಕೈಗೊಳ್ಳಬೇಕು. ಉತ್ತರದ ಧ್ವನಿಯಾಗಲಿ ಅಧಿವೇಶನ ಎನ್ನುವುದು ಜನರ ಆಶಯ.

------

Share this article