ವಸ್ತುವಿನ ಗುಣಮಟ್ಟ ಖಾತರಿಗೆ ‘ಐಎಸ್‌ಐ’

KannadaprabhaNewsNetwork | Published : Mar 5, 2025 12:32 AM

ಸಾರಾಂಶ

ಹಾಲ್‌ ಮಾರ್ಕ್‌ ಇದ್ದರೂ ಚಿನ್ನವನ್ನು ಮತ್ತೊಮ್ಮೆ ಪರಿಶೀಲನೆ ಮಾಡಿಕೊಳ್ಳುವುದು ಉತ್ತಮ. ಇತ್ತೀಚಿನ ದಿನಗಳಲ್ಲಿ ನಕಲಿ ಚಿನ್ನವನ್ನು ಪರಿಶೀಲಿಸುವುದಕ್ಕೆ ಕೇಂದ್ರ ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್ ರವರು ಚಿನ್ನದ ಹಾಲ್‌ ಮಾರ್ಕ್‌ ನಕಲಿಯೋ ಅಥವಾ ಅಸಲಿಯೋ ಎಂದು ಪತ್ತೆ ಮಾಡುವುದಕ್ಕೆ “ಬಿಎಸ್‌ಐ ಕೇರ್‌ ಆ್ಯಪ್” ಪರಿಚಯಿಸಿದೆ. ಈ ಆ್ಯಪ್‌ನ ಮೂಲಕ ಅತ್ಯಂತ ಸುಲಭವಾಗಿ ಚಿನ್ನದ ಗುಣಮಟ್ಟವನ್ನ ಖಾತ್ರಿ ಮಾಡಿಕೊಳ್ಳಬಹುದಾಗಿದೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಚಿನ್ನಾಭರಣ ಖರೀದಿಸುವಾಗ ಹಾಲ್ ಮಾರ್ಕ್ ದೃಢೀಕರಣಕ್ಕಾಗಿ ಬಿಐಎಸ್‌ ಕೇರ್ ಅಪ್ಲಿಕೇಶನ್ ಮೂಲಕ ಪರಿಶೀಲಿಸುವುದು ಉತ್ತಮ ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ತಿಳಿಸಿದರು.ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ರಾಷ್ಟ್ರೀಯ ಗುಣಮಟ್ಟ ಸಂಸ್ಥೆ, ಗ್ರಾಹಕರ ವ್ಯವಹಾರಗಳ ಹಾಗೂ ಸಾರ್ವಜನಿಕ ವಿತರಣಾ ಪದ್ದತಿ ಸಚಿವಾಲಯ, ಆಹಾರ ಮತ್ತು ಸಾರ್ವಜನಿಕ ವಿತರಣೆ, ಭಾರತ ಸರ್ಕಾರ, ಜಿಲ್ಲಾಡಳಿತ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.ಗುಣಮಟ್ಟ ತಿಳಿಯಲು ಹಾಲ್‌ಮಾರ್ಕ್‌

ಬಡವ, ಮಧ್ಯಮ ವರ್ಗದವರ ಮನೆಯಲ್ಲೂ ಬಂಗಾರ ಖರೀದಿ ಮಾಡುತ್ತಾರೆ. ಮದುವೆ ಮುಂತಾದ ಸಮಾರಂಭಗಳ ಸಂದರ್ಭದಲ್ಲಿ ಚಿನ್ನ ಅನಿವಾರ್ಯ ಎನ್ನುವಂತಾಗಿದೆ. ಚಿನ್ನದ ಗುಣಮುಟ್ಟದ ಬಗ್ಗೆ ಸರಿಯಾಗಿ ಪರಿಶೀಲಿಸುವ ವಿಧಾನಗಳ ಅರಿವು ಖರೀದಿದಾರರಿಗೆ ಇರಬೇಕು. ಆ ನಿಟ್ಟಿನಲ್ಲಿ ಬಿಐಎಸ್ ಹಾಲ್‌ಮಾರ್ಕ್‌ ಬಂದ ಬಳಿಕ ಖರೀದಿದಾರರು ತಮ್ಮ ಚಿನ್ನದ ಖರೀದಿಯಲ್ಲಿ ಹೆಚ್ಚು ವಿಶ್ವಾಸ ಹೊಂದಿದ್ದಾರೆ. ಚಿನ್ನ ಅಸಲಿಯೋ ಇಲ್ಲ ನಕಲಿಯೋ ಎಂದು ನೋಡುವುದೇ ಚಿನ್ನದ ಹಾಲ್‌ ಮಾರ್ಕ್‌ನಿಂದ ಎಂದರು.

ಬಿಎಸ್‌ಐ ಕೇರ್‌ ಆ್ಯಪ್

ಆದರೆ ಹಾಲ್‌ ಮಾರ್ಕ್‌ನಲ್ಲೂ ಮೋಸ ಮಾಡುವುದು ನಡೆಯುತ್ತಿದೆ. ಹೀಗಾಗಿ ಇನ್ಮುಂದೆ ಹಾಲ್‌ ಮಾರ್ಕ್‌ ಇದ್ದರೂ ಚಿನ್ನವನ್ನು ಮತ್ತೊಮ್ಮೆ ಪರಿಶೀಲನೆ ಮಾಡಿಕೊಳ್ಳುವುದು ಉತ್ತಮ. ಇತ್ತೀಚಿನ ದಿನಗಳಲ್ಲಿ ನಕಲಿ ಚಿನ್ನವನ್ನು ಪರಿಶೀಲಿಸುವುದಕ್ಕೆ ಕೇಂದ್ರ ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್ ರವರು ಚಿನ್ನದ ಹಾಲ್‌ ಮಾರ್ಕ್‌ ನಕಲಿಯೋ ಅಥವಾ ಅಸಲಿಯೋ ಎಂದು ಪತ್ತೆ ಮಾಡುವುದಕ್ಕೆ “ಬಿಎಸ್‌ಐ ಕೇರ್‌ ಆ್ಯಪ್” ಪರಿಚಯಿಸಿದೆ. ಈ ಆ್ಯಪ್‌ನ ಮೂಲಕ ಅತ್ಯಂತ ಸುಲಭವಾಗಿ ಚಿನ್ನದ ಗುಣಮಟ್ಟವನ್ನ ಖಾತ್ರಿ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.ಕೇಂದ್ರ ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್ನ ಫಾರ್ಮರ್ ಡೈರೆಕ್ಟರ್ ಎಸ್. ಡಿ. ಸೆಲ್ವನ್ ಮಾತನಾಡಿ, ಗ್ರಾಹಕ ಬಳಕೆಯ ವಸ್ತುಗಳಿಗೆ ಐಎಸ್‌ಐ, ಖಾದ್ಯ ವಸ್ತುಗಳಿಗೆ ಆಗ್‌ಮಾರ್ಕ್ ಇದ್ದಂತೆ ಚಿನ್ನಾಭರಣಗಳ ಶುದ್ಧತೆಗೆ ಹಾಲ್‌ಮಾರ್ಕ್ ಇದೆ. ಆಭರಣದಲ್ಲಿ ಬಳಸಲಾಗಿರುವ ಚಿನ್ನದ ಶುದ್ದತೆಗೆ ಇದೊಂದು ಪ್ರಮಾಣ ಪತ್ರ ನೀಡಲಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಶತಮಾನಗಳಿಂದಲೂ ಹಾಲ್‌ಮಾರ್ಕ್ ಗುಣಮಟ್ಟ ಪರಿಶೀಲನೆಯ ಮಾನದಂಡವಾಗಿದೆ. ಗ್ರಾಹಕರ ಜಾಗೃತಿ ಮತ್ತು ರಕ್ಷಣೆ ಮತ್ತು ಇನ್ನೂ ಹೆಚ್ಚಿನ ಕುರಿತು ಜಾಗೃತವಾಗಿರಬೇಕು ಎಂದರು.

ವಸ್ತುವಿನ ಗುಣಮಟ್ಟ ಅರಿತುಕೊಳ್ಳಿ

ದೈನಂದಿನ ಬದುಕಿನಲ್ಲಿ ಖರೀದಿಸುವ ವಸ್ತುಗಳ ಗುಣಮಟ್ಟದ ಬಗ್ಗೆ ಗಮನ ಕೊಡಬೇಕು. ಗ್ರಾಹಕರು ಗುಣಮಟ್ಟದ ಬಗ್ಗೆ ಯೋಚನೆ ಮಾಡುವುದಿಲ್ಲ. ಸ್ವಿಚ್‌ಗಳು, ವಿದ್ಯುತ್ ಮೋಟಾರ್‌ಗಳು, ವೈರಿಂಗ್ ಕೇಬಲ್‌ಗಳು, ಹೀಟರ್‌ಗಳು, ಅಡಿಗೆಯ ಉಪಕರಣಗಳು, ಸಿಮೆಂಟ್, ವಿದ್ಯುತ್ ಉಪಕರಣಗಳಂತಹ ಕೆಲವು ಉತ್ಪನ್ನಗಳನ್ನು ಭಾರತದಲ್ಲಿ ಮಾರಾಟ ಮಾಡಲು ಐಎಸ್ಐ ಗುರುತು ಕಡ್ಡಾಯವಾಗಿದೆ. ಈ ಕುರಿತು ಜನ ಸಾಮಾನ್ಯರಲ್ಲಿ ವಸ್ತುವಿನ ಗುಣ ಮಟ್ಟದ ಬಗ್ಗೆ ಅರಿವು ಮೂಡಿಸಬೇಕು ಎಂದು ಸೂಚಿಸಿದರು..ಈ ಸಂದರ್ಭದಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್, ಎಸ್.ಪಿ.ಸಿ ಅಫೀಫಾ.ಎಂ ಫಾತಿಮಾ, ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

Share this article