ಇಸ್ಲಾಂ, ಕ್ರಿಶ್ಚಿಯನ್‌ ಭಾರತೀಯ ಸಂಸ್ಕೃತಿಗೆ ಸೇರಿಲ್ಲ

KannadaprabhaNewsNetwork | Published : Jul 4, 2024 1:04 AM

ಸಾರಾಂಶ

ಇಸ್ಲಾಂ, ಕ್ರಿಶ್ಟಿಯನ್‌ನ ಪ್ರಧಾನ ಶ್ರದ್ಧಾ ಕೇಂದ್ರಗಳು ಅನ್ಯದೇಶದಲ್ಲಿವೆ. ಸಿಖ್‌ ಸೇರಿದಂತೆ ಎಲ್ಲ ಧರ್ಮದ ಶ್ರದ್ಧಾ ಕೇಂದ್ರಗಳು ಭಾರತದಲ್ಲಿವೆ. ಹಾಗಾಗಿ ದೇಶದಲ್ಲಿರುವ ಎಲ್ಲ ಧರ್ಮಗಳು ಭಾರತೀಯ ಸಂಸ್ಕೃತಿಗೆ ಸೇರಿದವುಗಳಾಗಿವೆ.

ಹುಬ್ಬಳ್ಳಿ:

ಇಸ್ಲಾಂ, ಕ್ರಿಶ್ಚಿಯನ್‌ ಭಾರತೀಯ ಸಂಸ್ಕೃತಿಗೆ ಸೇರಿದ ಮತಗಳಲ್ಲ. ಮುಸ್ಲಿಮರಿಗೆ ಪ್ರಧಾನ ಶ್ರದ್ಧಾ ಕೇಂದ್ರ ಮೆಕ್ಕಾ ಆಗಿದ್ದರೆ, ಕ್ರಿಶ್ಚಿಯನ್‌ರದು ಜರುಸಲೆಂ. ಉಳಿದ ಎಲ್ಲ ಧರ್ಮಗಳು ಭಾರತೀಯ ಸಂಸ್ಕೃತಿಗೆ ಸೇರಿದವು ಎಂದು ಹರಿಹರಪುರ ಶಾರದಾ ಲಕ್ಷ್ಮೀನೃಸಿಂಹ ಪೀಠದ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಶ್ರೀ ಹೇಳಿದರು.

ಅವರು ಇಲ್ಲಿನ ಗೋಕುಲ ಗಾರ್ಡನ್‌ನಲ್ಲಿ ಬುಧವಾರ ನಡೆದ ವರ್ಧಂತಿ ಮಹೋತ್ಸವದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದರು. ಇಸ್ಲಾಂ, ಕ್ರಿಶ್ಟಿಯನ್‌ನ ಪ್ರಧಾನ ಶ್ರದ್ಧಾ ಕೇಂದ್ರಗಳು ಅನ್ಯದೇಶದಲ್ಲಿವೆ. ಸಿಖ್‌ ಸೇರಿದಂತೆ ಎಲ್ಲ ಧರ್ಮದ ಶ್ರದ್ಧಾ ಕೇಂದ್ರಗಳು ಭಾರತದಲ್ಲಿವೆ. ಹಾಗಾಗಿ ದೇಶದಲ್ಲಿರುವ ಎಲ್ಲ ಧರ್ಮಗಳು ಭಾರತೀಯ ಸಂಸ್ಕೃತಿಗೆ ಸೇರಿದವುಗಳಾಗಿವೆ. ಆದರೂ ಆ ಧರ್ಮದವರು ಭಾರತದಲ್ಲಿ ಏಕತೆಯ ತಳಹದಿ, ಸಮಾನತೆ ಚೌಕ್ಕಟ್ಟಿನಲ್ಲಿ ಸಹೋದರತ್ವ, ಪ್ರೀತಿ, ಸಂತಸದಿಂದ ಬಾಳುತ್ತಿದ್ದಾರೆ. ಇದಕ್ಕೆಲ್ಲ ಭಾರತ ಭೂಮಿಯ ಸಂಸ್ಕೃತಿಯೇ ಕಾರಣವಾಗಿದೆ ಎಂದರು.

ಮನಸ್ಸು ನಿರ್ಮಲವಾಗಿರಲಿ:

ನಾವೆಲ್ಲರೂ ಅತ್ಯಂತ ಅಮೂಲ್ಯವಾದ ಮನುಷ್ಯ ಜನ್ಮ ಪಡೆದಿದ್ದೇವೆ. ವಾಸ್ತವವಾಗಿ ಮನುಷ್ಯ ತನ್ನ ಮನಸ್ಸನ್ನು ಜಯಿಸಿದಾಗ ಮಾತ್ರ ನಿಜವಾದ ಅರ್ಥದಲ್ಲಿ ಮಾನವನಾಗುತ್ತಾನೆ. ಇಲ್ಲವಾದರೆ ಅವನು ಮನುಷ್ಯ ರೂಪದ ಪ್ರಾಣಿಯಾಗಿಯೇ ಉಳಿಯುತ್ತಾನೆ. ಜಾತಿ, ಮತ, ರಾಗ-ದ್ವೇಷಗಳನ್ನು ನೋಡದೇ ಎಲ್ಲರಿಗೂ ಸುವಾಸನೆ ನೀಡುವ ಮಲ್ಲಿಗೆಯ ಹೂವಿನಂತೆ ನಿಮ್ಮೆಲ್ಲರ ಮನಸ್ಸು ನಿರ್ಮಲವಾಗಿರಬೇಕು. ನಮ್ಮ ಸುತ್ತಮುತ್ತಲಿನ ಪರಿಸರಕ್ಕೆ ಆನಂದ ನೀಡುವಂತಿರಬೇಕು ಎಂದು ಹೇಳಿದರು.

ರಾಗ-ದ್ವೇಷ ಸಲ್ಲದು:

ರಾಗ-ದ್ವೇಷಗಳಿಂದ ಕೂಡಿರುವ ಮನಸ್ಸು ಕಸದ ತೊಟ್ಟಿಗೆ ಸಮಾನ. ಇದು ಹೆಚ್ಚಾದಷ್ಟು ಜಗತ್ತಿನ ಸರ್ವನಾಶ. ಹೀಗಾಗಿ ಮನಸ್ಸನ್ನು ಗೆಲ್ಲುವುದು ಬಹಳ ಮುಖ್ಯ. ಇದರಿಂದ ವೈಯಕ್ತಿಕ ಬೆಳವಣಿಗೆಯ ಜತೆಗೆ ಕೌಟುಂಬಿಕ ಮೌಲ್ಯ, ಬಂಧು-ಬಾಂಧವರೊಟ್ಟಿಗೆ ಉತ್ತಮ ಒಡನಾಟದ ಜತೆಗೆ ದೇವರ ಕೃಪೆಗೂ ಪಾತ್ರರಾಗಬಹುದು. ಜ್ಞಾನ ಎಂಬ ಮಾರ್ಗದಲ್ಲಿ ನಾನು ಎನ್ನುವುದರ ಮುಂದೆ ಎಲ್ಲವೂ ಉಪಾದಿ. ಜ್ಞಾನ ಮಾರ್ಗದಲ್ಲಿ ಉಪಾದಿಗಳಿಗೆ ಅವಕಾಶವಿಲ್ಲ ಎಂದು ಶ್ರೀಗಳು ಹೇಳಿದರು.

ಸ್ವಾಗತ ಸಮಿತಿ ಅಧ್ಯಕ್ಷ ಡಾ. ವಿ.ಎಸ್‌.ವಿ ಪ್ರಸಾದ ಮಾತನಾಡಿ, ಶ್ರೀಗಳ ಪುರ ಪ್ರವೇಶದಿಂದ ಹುಬ್ಬಳ್ಳಿಯ ಪುಣ್ಯಭೂಮಿ ಪಾವನವಾಗಿದೆ. ಕನಿಷ್ಠ ಮೂರು ವರ್ಷಕ್ಕೆ ಒಮ್ಮೆಯಾದರೂ ಶ್ರೀಗಳು ಹುಬ್ಬಳ್ಳಿಗೆ ಆಗಮಿಸಿ, ಈ ಭಾಗದ ಭಕ್ತರನ್ನು ಅನುಗ್ರಹಿಸಬೇಕು. ಅಲ್ಲದೆ, ವರ್ಧಂತಿ ಉತ್ಸವದ ನಿಮಿತ್ತ ನಡೆದ ಹಲವು ಹೋಮ ಹವನಗಳಿಂದ ನಗರ ಪಾವನವಾಗಿದೆ. ಮಳೆ-ಬೆಳೆ ಸುಭೀಕ್ಷವಾಗಲಿದೆ ಎಂದರು.

ಸಮಿತಿ ಕಾರ್ಯಾಧ್ಯಕ್ಷ ಸುರೇಶ ಶೇಜವಾಡಕರ, ಸಮಿತಿ ಉಪಾಧ್ಯಕ್ಷ ಅಪ್ಪಯ್ಯ ನಲತ್ವಾಡಮಠ, ಮಂಗಳೂರಿನ ಜ್ಯೋತಿರ್ವಿಜ್ಞಾನ ಕೇಂದ್ರದ ಪ್ರಕಾಶ ಅಮ್ಮಣ್ಣಯ್ಯ, ಶ್ರೀಮಠದ ಆಡಳಿತಾಧಿಕಾರಿ ಡಾ. ರವಿಶಂಕರ ಮಾತನಾಡಿದರು. ಸಭಾ ಕಾರ್ಯಕ್ರಮದ ಪೂರ್ವದಲ್ಲಿ ಲೋಕ ಕಲ್ಯಾಣಾರ್ಥವಾಗಿ ಚಂಡಿಕಾ ಹೋಮ, ಆಯುಷ್ಯ ಹೋಮ, ಪವಮಾನ ಸೂಕ್ತ ಹೋಮ, ಮತ್ತು ಗುರು ಗಾಯತ್ರಿ ಹೋಮದ ಪೂರ್ಣಾಹುತಿ ನೆರವೇರಿತು. ಹಾಗೂ ನರಸಿಂಹ ಸಮಸ್ರನಾಮದ ಮಹಾ ಸಮರ್ಪಣೆ ನಡೆಯಿತು. ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳಿಂದ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

ಸ್ವಾಗತ ಸಮಿತಿ ಕಾರ್ಯದರ್ಶಿ ವೀಣಾ ಹೆಗಡೆ, ಡಾ. ಮಲ್ಲಿಕಾರ್ಜುನ ಬಾಳಿಕಾಯಿ, ಅವಧೂತ ರಮೇಶ ಗುರೂಜಿ, ರಮೇಶ ಕುಲಕರ್ಣಿ, ಜಿತೇಂದ್ರ ಮಜೇಥಿಯಾ, ವಿನಾಯಕ ಆಕಳವಾಡಿ, ಅನಂತ ಪದ್ಮನಾಭ ಐತಾಳ, ಡಾ. ರವೀಶಂಕರ ಸೇರಿದಂತೆ ಹಲವರಿದ್ದರು.ಸಮುದಾಯಕ್ಕೆ ಸೀಮಿತ

ಇಂದು ಹಲವು ಗುರುಗಳು ಒಂದು ಸಮಾಜಕ್ಕೆ ಸೀಮಿತವಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಗುರುಗಳಾದವರು ಎಂದಿಗೂ ಜಾತಿಯ ಮೂಲಕ ಗುರುತಿಸಿಕೊಳ್ಳಬಾರದು. ಹಾಗೇನಾದರೂ ಗುರುತಿಸಿಕೊಂಡರೆ ಅಂತಹವರು ಗುರುವಾಗಲು ಅರ್ಹರಲ್ಲ. ಭಕ್ತರೂ ಗುರುಗಳನ್ನು ಜಾತಿಯಿಂದಲ್ಲ ಅವರ ಸಂಪ್ರದಾಯದ ಮೂಲಕ ಗುರುತಿಸುವುದನ್ನು ಕಲಿಯಿರಿ ಎಂದು ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಶ್ರೀ ಹೇಳಿದರು.

Share this article