ಮಂಡ್ಯ ಮಂಜುನಾಥ
ಕನ್ನಡಪ್ರಭ ವಾರ್ತೆ ಮಂಡ್ಯಇಸ್ರೋ ಬಾಹ್ಯಾಕಾಶ ಸಂಸ್ಥೆಯ ಸಾಧನೆಗಳನ್ನು ತಿಳಿದುಕೊಳ್ಳುವ ಕುತೂಹಲ ವಿದ್ಯಾರ್ಥಿಗಳಲ್ಲಿ ಇದ್ದೇ ಇರುತ್ತದೆ. ಎಲ್ಲರನ್ನೂ ಇಸ್ರೋಗೆ ಕರೆದುಕೊಂಡು ಹೋಗಲು ಸಾಧ್ಯವಿಲ್ಲ. ಅದಕ್ಕಾಗಿ ಇಸ್ರೋ ಸಂಸ್ಥೆಯೇ ವಿಶೇಷ ಬಸ್‌ನೊಳಗೆ ತನ್ನ ಸಾಧನೆಯ ಮೈಲಿಗಲ್ಲುಗಳನ್ನು ಅತ್ಯಾಕರ್ಷಣೀಯವಾಗಿ ಅನಾವರಣಗೊಳಿಸಿದೆ. ಅದನ್ನು ದೇಶದ ವಿವಿಧ ಕಾಲೇಜುಗಳಿಗೆ ಕಳುಹಿಸಿ ವಿದ್ಯಾರ್ಥಿಗಳಿಗೆ ಪರಿಚಯಿಸುವ ಮೂಲಕ ಅವರ ಕುತೂಹಲವನ್ನು ತಣಿಸಲಾಗುತ್ತಿದೆ.
ಜನತಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕೆ.ಎಸ್. ವಿಜಯಾನಂದ ಮಾರ್ಗದರ್ಶನದಲ್ಲಿ ಅಣುಸಂಪರ್ಕ ವಿಭಾಗದ ಮುಖ್ಯಸ್ಥ ಡಾ.ಎಂ.ಬಿ. ಪುನೀತ್‌ಕುಮಾರ್ ಅವರು ಮೊಟ್ಟ ಮೊದಲ ಬಾರಿಗೆ ಪಿಇಎಸ್ ಎಂಜಿನಿಯರಿಂಗ್ ಕಾಲೇಜಿಗೆ ಇಸ್ರೋ ಸ್ಪೇಸ್ ಆನ್ ವ್ಹೀಲ್ ಬಸ್‌ನ್ನು ಕರೆಸಿದ್ದರು.ಇಸ್ರೋ ಸಾಧನೆಗಳನ್ನು ಹೊತ್ತ ಬಸ್ ಬುಧವಾರ ಬೆಳಗ್ಗೆ ೮.೩೦ಕ್ಕೆ ಕಾಲೇಜಿಗೆ ಆಗಮಿಸಿತು. ಕಾಲೇಜಿನ ಸುಮಾರು ೩೦೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಸ್ತುಪ್ರದರ್ಶನ ವೀಕ್ಷಿಸಿದರು. ಆಕರ್ಷಣೀಯವಾಗಿ ಅನಾವರಣಗೊಳಿಸಲಿದ್ದ ಬಾಹ್ಯಾಕಾಶದ ಮಾದರಿಗಳನ್ನು ಕಂಡು ರೋಮಾಂಚನಗೊಂಡರು. ಇಸ್ರೋದಿಂದ ಆಗಮಿಸಿದ್ದ ವಿಜ್ಞಾನಿಗಳು ಬಾಹ್ಯಾಕಾಶದ ಸಾಧನೆಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.
ಏನೆಲ್ಲಾ ಮಾಹಿತಿಗಳಿವೆ?ಇದುವರೆಗೂ ಇಸ್ರೋ ಹಾರಿಬಿಡಲಾಗಿರುವ ರಾಕೆಟ್‌ಗಳು, ಉಪಗ್ರಹ ಮಾದರಿಗಳು, ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಪಿಎಸ್‌ಎಲ್‌ವಿ, ಜಿಎಸ್‌ಎಲ್‌ವಿ, ರಾಕೆಟ್ ಉಡಾವಣಾ ಸ್ಥಳಗಳು, ಬಾಹ್ಯಾಕಾಶಕ್ಕೆ ಹಾರಿಬಿಟ್ಟಿರುವ ೧೮ ಸ್ಯಾಟಲೈಟ್‌ಗಳು ೩೬೦೦ ಕಿ.ಮೀ. ದೂರದಿಂದ ಮಾಡುತ್ತಿರುವ ಕಾರ್ಯನಿರ್ವಹಣೆ, ಅವುಗಳಿಂದ ಹವಾಮಾನ, ವಾಯುಭಾರ ಕುಸಿತದ ಮುನ್ಸೂಚನೆ, ಪ್ರಸಾರ ಮಾಧ್ಯಮ, ಬ್ಯಾಂಕಿಂಗ್, ಎಟಿಎಂ ನಿರ್ವಹಣೆ, ರೇಡಿಯೋ ಪ್ರಸಾರ, ವಿಪತ್ತಿನ ಮುನ್ಸೂಚನೆ ನೀಡುವುದನ್ನು ವಿದ್ಯಾರ್ಥಿಗಳಿಗೆ ವಿವರಿಸಲಾಯಿತು.
ಬಾಹ್ಯಾಕಾಶಕ್ಕೆ ಹಾರಿಬಿಡಲಾಗಿರುವ ಯಾವ ಯಾವ ಸ್ಯಾಟಲೈಟ್‌ಗಳಿಂದ ಯಾವೆಲ್ಲಾ ಮಾಹಿತಿಗಳನ್ನು ಪಡೆಯಬಹುದು, ಯಾವ ಸ್ಯಾಟಲೈಟ್‌ಗಳು ಏನೆಲ್ಲಾ ಮಾಹಿತಿ ರವಾನಿಸುತ್ತವೆ ಎಂಬ ಮಾಹಿತಿಯನ್ನು ಅನಾವರಣಗೊಳಿಸಲಾಗಿತ್ತು.ಕೃಷಿ ಪ್ರದೇಶ, ಖಾಲಿ ಬಿದ್ದಿರುವ ಭೂಪ್ರದೇಶ, ಪ್ರಗತಿದಾಯಕ ಪ್ರದೇಶಗಳು, ನೀರು ತುಂಬಿರುವ ಪ್ರದೇಶಗಳು, ನಗರ ವಿಸ್ತಾರ, ಸ್ಯಾಟಲೈಟ್ ನಕ್ಷೆ, ಭೂಮಿಯೊಳಗೆ ಆಗುವ ಬದಲಾವಣೆಗಳು, ಖನಿಜ ಸಂಪತ್ತಿರುವ ಪ್ರದೇಶಗಳು, ಅರಣ್ಯ ಪ್ರದೇಶ ಆವರಿಸಿರುವ ಪ್ರದೇಶ, ಪರಿಸರದ ಅಧ್ಯಯನ ಸೇರಿದಂತೆ ನೂರಾರು ಮಾಹಿತಿಗಳನ್ನು ಅರಿಯಬಹುದೆಂದು ಚಿತ್ರ ಸಹಿತ ವಿವರಿಸಲಾಗಿತ್ತು.
ಚಂದ್ರಯಾನ-೧, ಚಂದ್ರಯಾನ-೨, ಚಂದ್ರಯಾನ-೩ ನಡೆಸಿದ ರೀತಿ, ಅದರಿಂದ ದೊರೆತ ಮಾಹಿತಿಗಳು, ಮಂಗಳಯಾನ ಮಾದರಿಯ ಚಿತ್ರಗಳನ್ನು ವಿಶೇಷ ಬಸ್ ಒಳಗೊಂಡಿತ್ತು. ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ನಿಂತು ಪ್ರತಿ ಬಾರಿಗೆ ೧೫ ರಿಂದ ೨೦ ವಿದ್ಯಾರ್ಥಿಗಳನ್ನು ಬಸ್ಸಿನ ಒಳಗೆ ಕಳುಹಿಸಿ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು.ಪಿಇಎಸ್ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳ ಜೊತೆಗೆ ಪಿಇಎಸ್ ಬಿಎಡ್ ವಿದ್ಯಾರ್ಥಿಗಳು, ಕಾಳೇಗೌಡ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೂ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು. ಬೆಳಗ್ಗೆ ೮.೩೦ರಿಂದ ಸಂಜೆ ೪ ಗಂಟೆವರೆಗೆ ವಸ್ತುಪ್ರದರ್ಶನ ವಾಹನ ಕಾಲೇಜಿನ ಆವರಣದಲ್ಲೇ ಇದ್ದು ಎಲ್ಲರ ಕುತೂಹಲ ತಣಿಸಿತು.
ಪಿಇಎಸ್ ಕಾಲೇಜಿನ ಪ್ರಾಂಶುಪಾಲ ಡಾ.ನಂಜುಂಡಸ್ವಾಮಿ, ಉಪ ಪ್ರಾಂಶುಪಾಲ ಡಾ.ಎಸ್.ವಿನಯ್, ಅಣುಸಂಪರ್ಕ: ವಿಭಾಗದ ಮುಖ್ಯಸ್ಥ ಡಾ.ಎಂ.ಬಿ.ಪುನೀತ್‌ಕುಮಾರ್ ಹಾಜರಿದ್ದರು.ಐದು ವರ್ಷಗಳಿಂದ ಸಂಚಾರಸ್ಪೇಸ್ ಆನ್ ವ್ಹೀಲ್ ಬಸ್ ಸಂಚಾರ ಆರಂಭಿಸಿ ಐದು ವರ್ಷಗಳಾಗಿವೆ. ಕರ್ನಾಟಕದ ಬಹುತೇಕ ಎಲ್ಲ ಜಿಲ್ಲೆಗಳನ್ನು ಸುತ್ತಿ ಬಂದಿರುವ ವಸ್ತು ಪ್ರದರ್ಶನದ ವಾಹನ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಸಂಚರಿಸಿದೆ. ೨.೫ ಲಕ್ಷ ವಿದ್ಯಾರ್ಥಿಗಳು ಇದುವರೆಗೆ ವಸ್ತು ಪ್ರದರ್ಶನವನ್ನು ವೀಕ್ಷಿಸಿದ್ದಾರೆ. ಶಾಲಾ-ಕಾಲೇಜುಗಳಿಂದ ಆಹ್ವಾನ ಬಂದರೆ ಇಸ್ರೋ ಬಸ್‌ನೊಂದಿಗೆ ಬರುತ್ತೇವೆ.
- ಶ್ರೀನಿವಾಸ್, ಇಸ್ರೋ ವಿಜ್ಞಾನಿವಿಜ್ಞಾನದ ಬಗ್ಗೆ ಆಸಕ್ತಿಗೆ ಪ್ರೇರಣೆ
ವಿದ್ಯಾರ್ಥಿಗಳೆಲ್ಲರನ್ನೂ ಇಸ್ರೋ ಸಂಸ್ಥೆಗೆ ಕರೆದುಕೊಂಡು ಹೋಗಲು ಸಾಧ್ಯವಿಲ್ಲ. ಅದಕ್ಕಾಗಿ ಇಸ್ರೋ ಸಾಧನೆಯನ್ನೊಳಗೊಂಡ ಸ್ಪೇಸ್ ಆನ್ ವ್ಹೀಲ್ ವಾಹನವನ್ನೇ ಕಾಲೇಜಿಗೆ ಕರೆಸಿದ್ದೇವೆ. ಸಾವಿರಾರು ವಿದ್ಯಾರ್ಥಿಗಳು ವಸ್ತು ಪ್ರದರ್ಶನ ವೀಕ್ಷಿಸಿದ್ದಾರೆ. ವಿಜ್ಞಾನದ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸುವುದು, ಇಸ್ರೋ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸುವುದು ಮುಖ್ಯ ಉದ್ದೇಶವಾಗಿದೆ.- ಕೆ.ಎಸ್.ವಿಜಯಾನಂದ, ಅಧ್ಯಕ್ಷರು, ಪಿಇಟಿ ಟ್ರಸ್ಟ್
ವಿದ್ಯಾರ್ಥಿಗಳಿಗೆ ಪರಿಚಯ
ಇಸ್ರೋ ಸಂಸ್ಥೆಯ ಸಾಧನೆಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವುದು, ಸಂಶೋಧನೆ ಕಡೆಗೆ ಆಸಕ್ತಿ ಮೂಡಿಸುವುದು, ವಿಜ್ಞಾನಿಗಳಾಗುವಂತೆ ಪ್ರೇರೇಪಿಸುವ ಸಲುವಾಗಿ ಸ್ಪೇಸ್ ಆನ್ ವ್ಹೀಲ್‌ನ್ನು ಕಾಲೇಜಿಗೆ ಕರೆಸಿದ್ದೇವೆ. ಬೆಳಗ್ಗೆಯಿಂದ ಸಂಜೆಯವರೆಗೆ ಸುಮಾರು ೩ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವೀಕ್ಷಿಸಿದರು.- ಡಾ.ಎಂ.ಬಿ.ಪುನೀತ್‌ಕುಮಾರ್, ಮುಖ್ಯಸ್ಥರು, ಅಣುಸಂಪರ್ಕ ವಿಭಾಗ