ಕನ್ನಡಪ್ರಭ ವಾರ್ತೆ ಬೆಳಗಾವಿ
ಸಂವಿಧಾನದ ಅನುಚ್ಛೇದ ೨೧ (ಎ) ಪ್ರಕಾರ ೬ ರಿಂದ ೧೪ ವರ್ಷದ ಒಳಗಿನ ಎಲ್ಲಾ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡಬೇಕು. ಅದರಂತೆ ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲ ಮಕ್ಕಳಿಗೂ ಶಿಕ್ಷಣ ಕೊಡಿಸುವುದು ತಮ್ಮ ಆದ್ಯ ಕರ್ತವ್ಯವಾಗಿದೆ. ಆದ್ದರಿಂದ ಮಕ್ಕಳ ಹಕ್ಕುಗಳು ಹಾಗೂ ಯಾವುದೇ ಕಾಯ್ದೆ ಕಾನೂನುಗಳು ಉಲ್ಲಂಘನೆ ಆಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಪಿ.ಮುರಳಿ ಮೋಹನ ರೆಡ್ಡಿ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಬೆಳಗಾವಿ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬೆಳಗಾವಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಬೆಳಗಾವಿ, ಶಿಕ್ಷಣ ಇಲಾಖೆ, ಮೀರಾಕಲ್ ಫೌಂಡೇಶನ್ ಆಫ್ ಇಂಡಿಯಾ ಹಾಗೂ ಅನಮೋಲ ತಂಗುಧಾಮ ಇವರ ಸಹಯೋಗದಲ್ಲಿ ಜಿಪಂ ಸಭಾಂಗಣದಲ್ಲಿ ನಡೆದ ಬೆಳಗಾವಿ ಗ್ರಾಮೀಣ ವಯಲಯದ ಮುಖ್ಯೋಪಾಧ್ಯಾಯರಿಗೆ ಪ್ರಾಥಮಿಕ ಶಾಲೆಗಳಲ್ಲಿ ರಚಿಸಿರಬೇಕಾದ ಮಕ್ಕಳ ರಕ್ಷಣಾ ಸಮಿತಿ ಬಗ್ಗೆ ಸಾಮಾರ್ಥ್ಯಾಭಿವೃದ್ದಿ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ನ್ಯಾಯಯುತ ಮಾರ್ಗ ತೋರಿಸಿ ಅವರನ್ನು ರಕ್ಷಣೆ ನಮ್ಮ ನಿಮ್ಮೆಲ್ಲರ ಜವಾಬ್ದಾರಿ ಎಂದರು.
ಈಚೆಗೆ ಗ್ರಾಮ ಮಟ್ಟದಲ್ಲಿ ಬಾಲ್ಯವಿವಾಹಗಳ ಸಂಖ್ಯೆ ಹೆಚ್ಚುತ್ತಿದ್ದು, ಮಕ್ಕಳ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೆ ಬಾಲ್ಯವಿವಾಹ ತಡೆಗಟ್ಟಲು ತರಬೇತಿ ಕಾರ್ಯಾಗಾರವು ತುಂಬಾ ಅವಶ್ಯಕ ಎಂದು ಸಲಹೆ ನೀಡಿದರು. ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಸಿಸ್ಟರ್ ಲೂರ್ದ್ ಮೇರಿಜೆ ಮಾತಾಡಿ, ಮಕ್ಕಳ ಹಕ್ಕುಗಳ ಸಂರಕ್ಷಣೆಯಲ್ಲಿ ಶಿಕ್ಷಕರ ಪಾತ್ರ ಜವಾಬ್ದಾರಿಯುತವಾಗಿದ್ದು, ಕೇವಲ ಮಕ್ಕಳಿಗೆ ಶಿಕ್ಷಣ ನೀಡುವುದಲ್ಲದೆ ಅವರಿಗೆ ಮಾನವೀಯ ಹಾಗೂ ಜೀವನ ಕೌಶಲ್ಯಗಳ ಕುರಿತು ಮಕ್ಕಳಗೆ ತಿಳಿಸುವುದು. ಜೊತೆಗೆ ಶಾಲೆಯಲ್ಲಿ ಗೈರು ಹಾಜರಿರುವ ಮಕ್ಕಳ ಕುರಿತು ಗಮನಹರಿಸಬೇಕು. ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ ಪ್ರಕಾರ 6 ರಿಂದ 14 ವರ್ಷ ಎಲ್ಲ ಮಕ್ಕಳು ಶಿಕ್ಷಣ ಪಡೆಯಬೇಕೆಂದು ತಿಳಿಸಿದರು.ಬೆಳಗಾವಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತೇಶ ಭಜಂತ್ರಿ ಮಾತನಾಡಿ, ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನೀತಿ ಕಾಯ್ದೆ-೨೦೧೬ ಮತ್ತು ತಿದ್ದುಪಡಿ ನೀತಿ ೨೦೨೩ ರನ್ವಯ ಪ್ರತಿ ಶಾಲೆಯಲ್ಲಿ ಮಕ್ಕಳ ರಕ್ಷಣಾ ಸಮಿತಿಯನ್ನು ಕಡ್ಡಾಯವಾಗಿ ರಚಿಸಬೇಕು. ಅದೇ ರೀತಿಯಲ್ಲಿ ಪ್ರತಿಯೊಂದು ಸಮಿತಿಯಲ್ಲಿ ಮಕ್ಕಳ ಸಂರಕ್ಷಣಾಧಿಕಾರಿ, ಆಪ್ತ ಸಮಾಲೋಚಕರು ಕಡ್ಡಾಯವಾಗಿ ನೇಮಕ ಮಡಿಕೊಳ್ಳಬೇಕು ಎಂದರು.
ಮಕ್ಳಳ ರಕ್ಷಣಾ ಸಮಿತಿಯು ನಿರ್ವಹಿಸಬೇಕಾದ ಪಾತ್ರ ಮತ್ತು ಜವಾಬ್ದಾರಿ, ಸಮಿತಿಯ ಅಧ್ಯಕ್ಷರು ಮತ್ತು ಮಕ್ಕಳ ರಕ್ಷಣಾಧಿಕಾರಿಗಳ ನೇಮಕಾತಿ, ಹಾಗೂ ನಿರ್ವಹಿಸಬೇಕಾದ ಜವಾಬ್ದಾರಿ, ಶಾಲಾ ನಿರ್ವಹಣಾ ಸಮಿತಿ, ಸಲಹಾ ಪೆಟ್ಟಿಗೆ, ಆಪ್ತಸಮಾಲೋಚನ ಸೇವೆಗಳು ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.ನಂತರ ಜಿಲ್ಲಾ ಮಕ್ಕಳ ರಕ್ಷಣಾಘಟಕ, ಮಕ್ಕಳ ಕಲ್ಯಾಣ ಸಮಿತಿ, ಮಕ್ಕಳ ಸಹಾಯವಾಣಿ ೧೦೯೮ ,ಬಾಲ ನ್ಯಾಯ ಮಂಡಳಿ, ಮಕ್ಕಳ ವಿಶೇ಼ಷ ಪೊಲೀಸ್ ಘಟಕ ದಿಂದ ಇರುವ ಸೇವೆಗಳ ಬಗ್ಗೆ ಮಾಹಿತಿ ನೀಡಿ ಇದರ ಲಾಭ ಪಡೆಯುವಂತೆ ತಿಳಿಸಿದರು. ಮಕ್ಕಳ ರಕ್ಷಣಾ ಸಮಿತಿಗಳು ಶಾಲಾ ಮಟ್ಟದಲ್ಲಿ ಗಂಭೀರವಾಗಿ ಕಾರ್ಯನಿರ್ವಹಣೆ ಮಾಡುವುದಾದರೆ ಮಕ್ಕಳ ಮೇಲಾಗುವ ದೌರ್ಜನ್ಯಗಳು, ದೈಹಿಕ ಹಲ್ಲೆಗಳು ಕಡಿಮೆಯಾಗಿ ಮಕ್ಕಳ ಸ್ನೇಹಿ ವಾತಾವರಣ ನಿರ್ಮಾಣವಾಗುವುದು ಯಾವುದೇ ಸಂದೇಹ ಇಲ್ಲ ಎಂದು ತಿಳಿಸಿದರು.
ಮಂಗಳೂರು ಶಾಂತಿಧಾಮ ಸಂದೇಶ ಟ್ರಸ್ಟ್ ನಿರ್ದೇಶಕಿ ಸಿಸ್ಟರ್ ಡುಲ್‌ಸಿನ್ ಕ್ರಸ್ಟಾ ಅವರು ಸಮಾಜದಲ್ಲಿ ಮಕ್ಕಳು ಗೌರವಯುತವಾಗಿ ಬದುಕಬೇಕೆಂದರೆ, ಬಾಲ್ಯವಿವಾಹ, ಬಾಲಕಾರ್ಮಿಕ, ಜೀತ ಪದ್ಧತಿ, ಅಡತಡೆ ಉಂಟು ಮಾಡುತ್ತದೆ. ಅದನ್ನು ತಡೆಯುವ ಅಧಿಕಾರ ನಮಗೆ ಇದೆ. ಈ ಹಕ್ಕನ್ನು ನಮಗೆ ಸಂವಿಧಾನ ಕೊಟ್ಟಿದೆ. ಬೆಳಗಾವಿ ಜಿಲ್ಲೆಯಲ್ಲಿ ಬಾಲ್ಯವಿವಾಹ ಬಾಲ ಕಾರ್ಮಿಕ ಪದ್ಧತಿ ಆಗದಂತೆ ನೋಡಿಕೊಳ್ಳೋಣ ಎಂದು ಹೇಳಿದರು.ಈ ವೇಳೆ ಜಿಪಂ ಯೋಜನಾ ನಿರ್ದೇಶಕ ರವಿ ಬಂಗಾರೆಪ್ಪನವರ, ಮೀರಾಕಲ್ ಫೌಂಡೇಶನ್ ಆಫ್ ಇಂಡಿಯಾ ರಾಜ್ಯ ಪ್ರತಿನಿಧಿ ಅರುಣಾ ಕೃಷ್ಣ, ಕೇತ್ರ ಶಿಕ್ಷಣಾಧಿಕಾರಿ ಎಸ್. ಪಿ .ದಾಸಪ್ಪನವರ, ಬಿಆರ್‌ಸಿ ಮೇದಾರ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ ೧೦೯೮ ಅನಮೋಲ ತಂಗುಧಾಮ ಸಂಸ್ಥೆಯ ಸಿಬ್ಬಂದಿ ಹಾಗೂ ಬೆಳಗಾವಿ ಗ್ರಾಮೀಣ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು ಸೇರಿದಂತೆ ೩೩೦ ಶಿಭಿರಾರ್ಥಿಗಳು ತರಬೇತಿ ಪ್ರಯೋಜನ ಪಡೆದರು. ಪ್ರವೀಣ ಗೂನ್ಸಾಲ್ವಿ ಕಾರ್ಯಕ್ರಮ ನಿರೂಪಿಸಿದರು, ಲಕ್ಷೀ ಸುಳಗೇಕರ್ ಸ್ವಾಗತಿಸಿದರು.