ಗಾಳಿಪಟದಂಥ ದೇಶಿ ಕಲೆ ಉಳಿಸುವುದು ಎಲ್ಲರ ಕರ್ತವ್ಯ

KannadaprabhaNewsNetwork |  
Published : Jan 28, 2024, 01:15 AM IST
ಹುಬ್ಬಳ್ಳಿಯ ಕೇಶ್ವಾಪುರದ ಕುಸುಗಲ್ ರಸ್ತೆಯ ಆಕ್ಸಫರ್ಡ್‌ ಕಾಲೇಜಿನ ಬಳಿಯ ಮೈದಾನದಲ್ಲಿ ಅಂತರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಗಣ್ಯರು ಚಾಲನೆ ನೀಡಿದರು. | Kannada Prabha

ಸಾರಾಂಶ

ದೇಶಿ ಕಲೆಯಾಗಿರುವ ಗಾಳಿಪಟ ಉತ್ಸವ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಜೋಶಿ ಅವರು ದೂರ ದೃಷ್ಟಿಯುಳ್ಳ ನಾಯಕರಾಗಿದ್ದು, ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ

ಹುಬ್ಬಳ್ಳಿ: ಗಾಳಿಪಟ ದೇಶಿ ಕಲೆ. ಇಂತಹ ದೇಶ ಕಲೆಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ. ಅಂತಾರಾಷ್ಟ್ರೀಯ ಗಾಳಿ ಪಟ ಉತ್ಸವ ಆಯೋಜಿಸುವ ಮೂಲಕ ಆ ಕೆಲಸವನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾಡುತ್ತಿದ್ದಾರೆ. ಇದು ಹೆಮ್ಮೆಯ ವಿಷಯ ಎಂದು ಧಾರವಾಡ ಜೆಎಸ್‌ಎಸ್ ಸಂಸ್ಥೆಯ ಗೌರವ ಕಾರ್ಯದರ್ಶಿ ಅಜಿತ್ ಪ್ರಸಾದ್ ಶ್ಲಾಘಿಸಿದರು.

ಇಲ್ಲಿನ ಕುಸುಗಲ್ ರಸ್ತೆಯಲ್ಲಿರುವ ಮೈದಾನದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಯೋಜಿಸಿರುವ ಅಂತಾರಾಷ್ಟ್ರೀಯ ಗಾಳಿ ಪಟ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ದೇಶಿ ಕಲೆಯಾಗಿರುವ ಗಾಳಿಪಟ ಉತ್ಸವ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಜೋಶಿ ಅವರು ದೂರ ದೃಷ್ಟಿಯುಳ್ಳ ನಾಯಕರಾಗಿದ್ದು, ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ ಎಂದರು.

ಮೂರುಸಾವಿರಮಠದ ಡಾ. ಗುರುಸಿದ್ದರಾಜಯೋಗೀಂದ್ರ ಶ್ರೀಗಳು ಮಾತನಾಡಿ, ದೇಶೀಯ ಕಲೆ, ಕ್ರೀಡೆ, ಸಾಂಸ್ಕೃತಿಕತೆ ಉಳಿಸಿ ಬೆಳೆಸುವುದು ಎಲ್ಲರ ಕರ್ತವ್ಯ. ಹುಬ್ಬಳ್ಳಿಯಲ್ಲಿ ಸಾಂಸ್ಕೃತಿಕ ಮನಸುಗಳು ಹೆಚ್ಚಾಗಬೇಕಿದೆ. ಇದೊಂದು ಶ್ರೇಷ್ಠ ಸಾಂಸ್ಕೃತಿಕ ಉತ್ಸವ. ಇದನ್ನು ಆಯೋಜಿಸಿರುವ ಜೋಶಿ ಅವರ ಕಾರ್ಯ ಶ್ಲಾಘನೀಯ ಎಂದರು.

ಉದ್ಯಮಿ ನಂದಕುಮಾರ ಪಾಟೀಲ ಮಾತನಾಡಿ, ಗಾಳಿಪಟ ಜೀವನದ ಸೂತ್ರವಾಗಿದೆ. ಗಾಳಿಪಟದ ರೀತಿ ಜೀವನದ ಸೂತ್ರ ಸರಿಯಿದ್ದರೆ ಮಾತ್ರ ಯಶಸ್ಸು ಗ್ಯಾರಂಟಿ. ನೆಲ, ಜಲ, ಸಂಸ್ಕಾರ ಸಂಸ್ಕೃತಿಗೆ ಬದ್ಧವಾಗಿ ಸಚಿವ ಜೋಶಿ ಯಶಸ್ವಿಯಾಗಿ ಕಾರ್ಯ ಮಾಡುತ್ತಿದ್ದಾರೆ ಎಂದರು.

ಕ್ಷಮತಾ ಸಂಸ್ಥೆಯ ಗೋವಿಂದ ಜೋಶಿ ಮಾತನಾಡಿ, ನಮ್ಮ ಮೂಲ ಸಂಸ್ಕೃತಿಯನ್ನು ಎಂದಿಗೂ ಮರೆಯಬಾರದು. ಗಾಳಿಪಟ ಸಂಸ್ಕೃತಿ ಉಳಿಸಬೇಕು ಎಂಬ ನಿಟ್ಟಿನಲ್ಲಿ ಜೋಶಿ ಅವರು ಗಾಳಿಪಟ ಉತ್ಸವ ಹಾಗೂ ದೇಶಿಯ ಕ್ರೀಡೆಗಳನ್ನು ಹಮ್ಮಿಕೊಂಡಿದ್ದಾರೆ ಎಂದರು.

ಇದಕ್ಕೂ ಮುನ್ನ ನಡೆದ ಶಾಲಾ ಮಕ್ಕಳ ಚಿತ್ರಕಲೆ ಸ್ಪರ್ಧೆಯಲ್ಲಿ ನೂರಾರು ಮಕ್ಕಳು ಭಾಗವಹಿಸಿದ್ದರು. ನಂತರ ಮಲ್ಲಕಂಬ ಪ್ರದರ್ಶನ ನಡೆಯಿತು. ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಉದ್ಯಮಿ ವಿ.ಎಸ್.ವಿ. ಪ್ರಸಾದ, ವಸಂತ ಹೊರಟ್ಟಿ, ರಂಗಾ ಬದ್ದಿ, ಪಾಲಿಕೆ ಸದಸ್ಯರಾದ ಸಂತೋಷ ಚವ್ಹಾಣ, ಶಿವು ಮೆಣಸಿನಕಾಯಿ, ಸಂದೀಪ ಬೂದಿಹಾಳ ಸೇರಿದಂತೆ ಹಲವರಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ