ಹಾನಗಲ್ಲ: ಯುವಕರಲ್ಲಿ ರಾಷ್ಟ್ರೀಯ ವಿಚಾರಧಾರೆಗಳನ್ನು ಬಿತ್ತಿ ಬೆಳೆಯುವುದು ಇಂದಿನ ಅಗತ್ಯವಾಗಿದ್ದು, ಯುವಕರಲ್ಲಿ ನಮ್ಮ ಸಂಸ್ಕೃತಿ ಪರಂಪರೆಯ ಅರಿವು ಆಚರಣೆಯೂ ಬೇಕಾಗಿದೆ ಎಂದು ಸಾಹಿತಿ ಪ್ರೊ. ಮಾರುತಿ ಶಿಡ್ಲಾಪೂರ ತಿಳಿಸಿದರು.
ಹಾನಗಲ್ಲ ತಾಲೂಕಿನ ಸುರಳೇಶ್ವರದಲ್ಲಿ ಪಟ್ಟಣದ ಶ್ರೀಕುಮಾರೇಶ್ವರ ಕಲಾ ವಾಣಿಜ್ಯ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ 7ದಿನಗಳ ವಿಶೇಷ ಶಿಬಿರದ ಸಮಾರೋಪ ಮಾತುಗಳನ್ನಾಡಿದ ಅವರು, ಗ್ರಾಮೀಣ ಸಂಸ್ಕೃತಿಯ ಶ್ರೀಮಂತಿಕೆ ಅಚ್ಚಳಿಯದ ಸೌಹಾರ್ದತೆ ಹೊಂದಿದೆ. ಹಳ್ಳಿಗಳ ಯುವಕರು ಪಟ್ಟಣಗಳತ್ತ ವಲಸೆ ಹೋಗುತ್ತಿರುವುದು ಹೆಚ್ಚಾಗಿದೆ. ಈ ಆಕರ್ಷಣೆ ಹೆಚ್ಚು ಕಾಲ ಇರಲಾರದು. ಮತ್ತೆ ಗ್ರಾಮ ಭಾರತವೇ ವಿಜೃಂಭಿಸುತ್ತದೆ. ರೈತನ ದುಡಿಮೆಗೆ ಉತ್ತಮ ಫಲ ಸಿಗಬೇಕಾಗಿದೆ ಅಷ್ಟೇ. ಅಂತಹ ಶಕ್ತಿ ಯುವಕರಿಂದ ಪುನರಾರಂಭವಾಗಲೂ ಬೇಕಾಗಿದೆ. ಈಗ ರೈತರಿಗೆ ಕನ್ಯಾ ಸಿಗುತ್ತಿಲ್ಲ ಎಂಬ ಕೂಗು ಕೆಲವೇ ದಿನಗಳಲ್ಲಿ ಮಾಯವಾಗಿ ಯುವ ರೈತರನ್ನೇ ಮುದುವೆಯಾಗಲು ಹಾತೊರೆಯುವ ಕಾಲ ದೂರವಿಲ್ಲ. ಹಳ್ಳಿಗಳಲ್ಲಿರುವ ಪ್ರೀತಿ ವಾತ್ಸಲ್ಯಗಳು, ಕಷ್ಟ ಸುಖಗಳಲ್ಲಿ ಭಾಗಿಯಾಗಿ ಇಡೀ ಗ್ರಾಮಗಳೇ ಒಂದು ಕುಟುಂಬವಾಗಿ ಬದುಕುವ ನಿಷ್ಕಲ್ಮಶ ಜೀವನ ವಿಧಾನ ನಮ್ಮ ಭಾರತದ ಅಚ್ಚಳಿಯದ ಸಂಸ್ಕೃತಿ ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಡಾ. ಎಂ.ಎಚ್. ಹೊಳಿಯಣ್ಣನವರ, ಶಿಬಿರಗಳು ಸಾಮೂಹಿಕ ಜೀವನ ವಿಧಾನ ಕಲಿಸುತ್ತವೆ. ಇಲ್ಲಿನ ಜೀವನಾನುಭವ ಬದುಕಿಗೆ ಸಹಕಾರಿಯಾಗುತ್ತದೆ. ಮನುಷ್ಯ ಸಂಘ ಜೀವಿ. ಅದರಲ್ಲೂ ವಿಶೇಷವಾಗಿ ಗ್ರಾಮಗಳು ಈ ಸಾಂಘಿಕ ಜೀವನದ ಗಟ್ಟಿ ನೆಲೆಗಳಾಗಿವೆ ಎಂದರು.
ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಡಾ. ವಿ.ಬಿ.ಸತ್ಯಸಾವಿತ್ರಿ ಮಾತನಾಡಿ, ನಮ್ಮ ಹಳ್ಳಿಗಳಲ್ಲಿಯ ಆಪ್ತತೆ ಸಹಕಾರ ಮನೋಭಾವ ಇಂದಿನ ಯುವ ಪೀಳಿಗೆಗೆ ಸ್ಫೂರ್ತಿ ಎಂಬುದಕ್ಕೆ ಈ ಶಿಬಿರವೇ ಸಾಕ್ಷಿಯಾಗಿದೆ. ಇಡೀ ಊರಿನ ಗುರು ಹಿರಿಯರು ಈ ಶಿಬಿರದ ಯಶಸ್ಸಿಗೆ ಸಹಕರಿಸಿ ಇದರಲ್ಲಿ ಪಾಲ್ಗೊಂಡ ಮಕ್ಕಳ ಪಾಲಿಗೆ ದಿವ್ಯ ಸಮೂಹ ಜೀವನದ ಪಾಠವಾಗಿದೆ. 7 ದಿನಗಳ ಶಿಬಿರದಲ್ಲಿ ಮಕ್ಕಳ ಪ್ರತಿಭೆ ಕ್ರಿಯಾಶೀಲತೆ ಇಡೀ ಊರ ಜನ ಮೆಚ್ಚಿ ಮುಕ್ತ ಕಂಠದಿಂದ ಪ್ರಶಂಶಿಸಿದ್ದಾರೆ ಎಂದರು.ಸಹ ಶಿಬಿರಾಧಿಕಾರಿ ಡಾ. ಬಸನಗಾಡ ಲಕ್ಷ್ಮೀಶ್ವರ, ಡಾ. ಪ್ರಕಾಶ ಹೊಳೇರ, ಗ್ರಾಮದ ಹಿರಿಯರಾದ ಶಿವಾಜಪ್ಪ ಬಾಳೋಜಿ, ದಾನಪ್ಪ ಸಿಂಧೂರ, ಆನಂದ ಸಂಬಣ್ಣನವರ, ಮಹದೇವಪ್ಪ ಬಂಡಿವಡ್ಡರ, ದೇವೇಂದ್ರಪ್ಪ ನಾಯಕ್, ಚಂದ್ರಶೇಖರಯ್ಯ ಮೂಡಿಮಠ, ಬಸವರಾಜ ಮೈಲಾರದ, ರೆಹಮತ್‌ಅಲಿ ನೆಲ್ಲಿಕೊಪ್ಪ, ಹುಲ್ಲಪ್ಪ ಬಾರ್ಕಿ, ರೋಯತ ಹೋತನಹಳ್ಳಿ, ಸಂದೇಶ ಪಾಟೀಲ, ಶಿಕ್ಷಕ ಶ್ರೀಕಾಂತ ಹುಲಮನಿ ಅತಿಥಿಗಳಾಗಿದ್ದರು.
ಶಿಬಿರಾರ್ಥಿಗಳಾದ ನಂದಿಶ ಗುಡ್ಡಣ್ಣನವರ, ಲಕ್ಷ್ಮೀ ಡಾಂಗೆ, ತೇಜಸ್ವಿನಿ ಶಿಗ್ಗಾವಿ, ದಿವ್ಯಾ ಕೋಣನವರ, ಗೌಸ್, ರಾಹುಲ್ ಹಕ್ಕಲಮನಿ ಶಿಬಿರದ ಅನುಭವ ಹಂಚಿಕೊಂಡರು.