ಸದೃಢ ಭಾರತ ನಿರ್ಮಾಣ ನಮ್ಮೆಲ್ಲರ ಹೊಣೆ

KannadaprabhaNewsNetwork |  
Published : Oct 07, 2025, 02:00 AM IST
ಅಥಣಿ | Kannada Prabha

ಸಾರಾಂಶ

ಭಾರತೀಯ ಸಂಸ್ಕೃತಿ ಮತ್ತು ಜ್ಞಾನ ಪರಂಪರೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಸತ್ಯ, ಶಾಂತಿ, ಧರ್ಮ, ಯೋಗ, ಅಧ್ಯಾತ್ಮ ತತ್ವಗಳು ಜಗತ್ತಿಗೆ ಶ್ರೇಷ್ಠವಾಗಿವೆ. ಇಂತಹ ಶ್ರೀಮಂತ ಸಂಸ್ಕೃತಿ ಉಳಿಸಿ, ಬೆಳೆಸಿಕೊಂಡು ಸದೃಢ ಭಾರತ ನಿರ್ಮಾಣ ಮಾಡುವುದು ನಮ್ಮೆಲ್ಲರ ಸಾಮಾಜಿಕ ಹೊಣೆಯಾಗಿದೆ ಎಂದು ಗಚ್ಚಿನಮಠದ ಶಿವಬಸವ ಸ್ವಾಮೀಜಿ ನುಡಿದರು.

ಕನ್ನಡಪ್ರಭ ವಾರ್ತೆ ಅಥಣಿ

ಭಾರತೀಯ ಸಂಸ್ಕೃತಿ ಮತ್ತು ಜ್ಞಾನ ಪರಂಪರೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಸತ್ಯ, ಶಾಂತಿ, ಧರ್ಮ, ಯೋಗ, ಅಧ್ಯಾತ್ಮ ತತ್ವಗಳು ಜಗತ್ತಿಗೆ ಶ್ರೇಷ್ಠವಾಗಿವೆ. ಇಂತಹ ಶ್ರೀಮಂತ ಸಂಸ್ಕೃತಿ ಉಳಿಸಿ, ಬೆಳೆಸಿಕೊಂಡು ಸದೃಢ ಭಾರತ ನಿರ್ಮಾಣ ಮಾಡುವುದು ನಮ್ಮೆಲ್ಲರ ಸಾಮಾಜಿಕ ಹೊಣೆಯಾಗಿದೆ ಎಂದು ಗಚ್ಚಿನಮಠದ ಶಿವಬಸವ ಸ್ವಾಮೀಜಿ ನುಡಿದರು.

ಪಟ್ಟಣದ ಹೊರವಲಯದಲ್ಲಿರುವ ಗುರು ಕಾಡಸಿದ್ದೇಶ್ವರ ಆಶ್ರಮದಲ್ಲಿ 21ನೇ ದಸರಾ ಮಹೋತ್ಸವದ ಅಂಗವಾಗಿ ಶ್ರೀ ಜಗನ್ಮಾತೆಯ 11 ದಿನಗಳ ಅಧ್ಯಾತ್ಮ ಪ್ರವಚನ ಮತ್ತು ಅಖಂಡ ಭಾರತ ಮತ್ತು ಸುಭದ್ರ ರಾಷ್ಟ್ರ ನಿರ್ಮಾಣದ ಸಂಕಲ್ಪ ಎಂಬ ಆಧ್ಯಾತ್ಮಿಕ ಚಿಂತನಾ ಗೋಷ್ಠಿಯ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಭಾರತ ತರುಣರ ರಾಷ್ಟ್ರವಾಗಿದೆ. ನಮ್ಮ ಯುವ ಜನಾಂಗ ವಿದೇಶಿ ಸಂಸ್ಕೃತಿಗೆ ಮಾರುಹೋಗದೆ ನಮ್ಮ ಶ್ರೇಷ್ಠ ಸಂಸ್ಕೃತಿ ಮತ್ತು ಜ್ಞಾನ ಪರಂಪರೆ ಉಳಿಸಿ, ಬೆಳೆಸಿಕೊಂಡು ಹೋಗಬೇಕು. ಸಜ್ಜನರ ಸಂಗ ಹೆಜ್ಜೇನು ಸವಿದಂತೆ, ನಮ್ಮ ಯುವಶಕ್ತಿ ಸಜ್ಜನರ ಸಂಘದಲ್ಲಿ ಬೆಳೆದು ಸದೃಢ ರಾಷ್ಟ್ರ ಕಟ್ಟುವಲ್ಲಿ ಶ್ರಮಿಸಬೇಕು. ಜಗತ್ತಿಗೆ ಸತ್ಯ ಶಾಂತಿ ಯೋಗವನ್ನು ಬೋಧಿಸಿದ ಭಾರತ ಅನೇಕ ಆದರ್ಶಗಳ ನೆಲೆಯ ಮೇಲೆ ನಿಂತಿದೆ. ಇಂದಿನ ಮಕ್ಕಳಿಗೆ, ಯುವ ಜನಾಂಗಕ್ಕೆ ಧಾರ್ಮಿಕ ಮತ್ತು ಸಂಸ್ಕಾರಯುತ ಶಿಕ್ಷಣ ನೀಡುವ ಮೂಲಕ ಉತ್ತಮ ಮತ್ತು ಸದೃಢ ರಾಷ್ಟ್ರ ನಿರ್ಮಾಣಕ್ಕೆ ತಾಯಂದಿರು ಮತ್ತು ಪಾಲಕರು ಕೈಜೋಡಿಸಬೇಕು ಎಂದು ತಿಳಿಸಿದರು.ಗುರು ಕಾಡಸಿದ್ದೇಶ್ವರ ಆಶ್ರಮ ಪೀಠಾಧ್ಯಕ್ಷ ಹಾಗೂ ಅಖಿಲ ಭಾರತ ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷ ಡಾ.ಕಾಡಯ್ಯ ಸ್ವಾಮೀಜಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ. ಹುಟ್ಟು ಮತ್ತು ಸಾವು ನಡುವಿನ ನಮ್ಮ ಬದುಕು ಇನ್ನೊಬ್ಬರಿಗೆ ಆದರ್ಶವಾಗಬೇಕು. ಸಮಾಜಕ್ಕಾಗಿ ಮತ್ತು ದೇಶಕ್ಕಾಗಿ ಏನಾದರೂ ಕೊಡುಗೆ ನೀಡುವ ಮೂಲಕ ನಮ್ಮ ಬದುಕನ್ನು ಸಾರ್ಥಕ ಮಾಡಿಕೊಳ್ಳಬೇಕು. ಭಾರತ ತನ್ನ ಶ್ರೀಮಂತ ಸಂಸ್ಕೃತಿ, ಪರಂಪರೆಯ ಮೂಲಕ ವಿಶ್ವಗುರು ಸ್ಥಾನದತ್ತ ಮುನ್ನಡೆಯುತ್ತಿದೆ. ದೇಶದಲ್ಲಿ ಹಲವು ಧರ್ಮ, ಭಾಷೆ, ಜಾತಿ, ಜನಾಂಗ ಇದ್ದರೂ ಕೂಡ ವಿವಿಧತೆಯಲ್ಲಿ ಏಕತೆ ಕಂಡಿದೆ. ನಮ್ಮ ಶ್ರೇಷ್ಠ ಸಂಸ್ಕೃತಿ ಉಳಿಸಿ, ಬೆಳೆಸುವ ಶ್ರೇಯಸ್ಸು ಇಂದಿನ ಯುವ ಜನಾಂಗದ ಕೈಯಲ್ಲಿದೆ. ನಮ್ಮ ಯುವಶಕ್ತಿ ನಮ್ಮ ಸನಾತನ ಧರ್ಮ ಮತ್ತು ಸಂಸ್ಕೃತಿಯ ಮಾರ್ಗದಲ್ಲಿ ನಡೆದು ಈ ಅಖಂಡ ಭಾರತವನ್ನು ಸಶಕ್ತ ಮತ್ತು ಸದೃಢ ರಾಷ್ಟ್ರವನ್ನಾಗಿ ಕಟ್ಟುವ ಸಂಕಲ್ಪ ಹೊಂದಬೇಕು. ಶ್ರೀಮಠದಿಂದ ಕಳೆದ 20 ವರ್ಷಗಳಿಂದ ದಸರಾ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುತ್ತ ಬಂದಿದ್ದೇವೆ. ಕಾರ್ಯಕ್ರಮದ ಯಶಸ್ವಿಗೆ ತನು ಮನ ಧನದಿಂದ ಸಹಕರಿಸಿದ ಎಲ್ಲ ಸದ್ಭಕ್ತರಿಗೆ ಶುಭಾಶೀರ್ವಾದ ನೀಡಿದರು. ಸಮಾರಂಭದಲ್ಲಿ ನಂದಿ ಕುರಳಿಯ ವೀರಭದ್ರ ಸ್ವಾಮೀಜಿ, ತೆಲಸಂಗದ ಸಂಗಮೇಶ್ವರ ಸ್ವಾಮೀಜಿ ಮತ್ತು ಮೋಳೆ ಸಂಚಾರಿ ಶರಣ ದುಂಡಪ್ಪ ಚಾಳೆಕರ ಆಶೀರ್ವಚನ ನೀಡಿದರು. ಸಹಸ್ರ ಮುತ್ತೈದಿಯರ ಉಡಿ ತುಂಬುವ ಕಾರ್ಯಕ್ರಮದ ಸೇವಾರ್ಥಿಗಳಿಗೆ, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಆಶ್ರಮದಿಂದ ಸನ್ಮಾನಿಸಲಾಯಿತು.ಈ ವೇಳೆ ಸಮಾಜ ಸೇವಕ ಶ್ರೀಶೈಲ ಹಳ್ಳದಮಳ, ಅಶೋಕ ಕೆಂಗಣ್ಣವರ, ಅಣ್ಣಾಸಾಹೇಬ ತೆಲಸಂಗ, ಎ.ವೈ.ಹೈಬತ್ತಿ, ಎಸ್.ಆರ್.ಪಾಟೀಲ, ಮಾಂತೇಶ್ ಹಿರೇಮಠ, ಮಹಾದೇವ ಬಿರಾದಾರ, ಸುರೇಶ್ ಕೋಳಿ, ವಿದ್ಯಾ ಹಿರೇಮಠ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ವೈಶಾಲಿ ಹಿರೇಮಠ್ ಸ್ವಾಗತಿಸಿದರು. ಆನಂದ ಪೆನಾರೆ ನಿರೂಪಿಸಿದರು. ಶಿವಶಂಕರ ಬಡಿಗೇರ ವಂದಿಸಿದರು.

PREV

Recommended Stories

ಸಮೀಕ್ಷೆ ವೇಳೆ ಬೀದಿ ನಾಯಿ ದಾಳಿಯಿಂದ ಶಿಕ್ಷಕಿ ಗಂಭೀರ
ಸೆಂಟ್ ಸ್ಪ್ರೇ ಮಾಡಿ ಹಸುವಿನ ಬಾಲಕ್ಕೆ ಬೆಂಕಿ ಹಚ್ಚಿದ ಬಾಲಕ