ದುಸ್ಸಂಗದ, ದುರ್ವ್ಯಸನದ ಶಿವರಾತ್ರಿಯಾಗುತ್ತಿರುವುದು ವಿಷಾದನೀಯ

KannadaprabhaNewsNetwork | Published : Mar 10, 2024 1:31 AM

ಸಾರಾಂಶ

ಜಾಗೃತಿಯ ಅರಿವಿನ, ಸತ್ಸಂಗದ ರಾತ್ರಿಯಾಗಬೇಕಾದ ಶಿವರಾತ್ರಿ ದುಸ್ಸಂಗದ, ದುರ್ವ್ಯಸನದ, ದುರಾಚಾರದ ರಾತ್ರಿಯಾಗುತ್ತಿರುವುದು ವಿಷಾದದ ಸಂಗತಿ ಎಂದು ಸಾಣೇಹಳ್ಳಿ ಡಾ.ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.

ಹೊಸದುರ್ಗ: ಜಾಗೃತಿಯ ಅರಿವಿನ, ಸತ್ಸಂಗದ ರಾತ್ರಿಯಾಗಬೇಕಾದ ಶಿವರಾತ್ರಿ ದುಸ್ಸಂಗದ, ದುರ್ವ್ಯಸನದ, ದುರಾಚಾರದ ರಾತ್ರಿಯಾಗುತ್ತಿರುವುದು ವಿಷಾದದ ಸಂಗತಿ ಎಂದು ಸಾಣೇಹಳ್ಳಿ ಡಾ.ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಸಾಣೇಹಳ್ಳಿಯಲ್ಲಿ ಶಿವರಾತ್ರಿ ಆಚರಣೆ ಅಂಗವಾಗಿ ಶುಕ್ರವಾರ ರಾತ್ರಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು.

ಮನುಷ್ಯ ಕಟ್ಟಿದ ಕನಸುಗಳೆಲ್ಲಾ ನನಸಾಗಲು ಸಾಧ್ಯವಿಲ್ಲ ನಿದ್ರಾವಸ್ಥೆಯಲ್ಲಿದ್ದಾಗ ಕನಸು ಕಾಣುವುದು ಮುಖ್ಯವಲ್ಲ ಜಾಗೃತವಿದ್ದಾಗ ಕನಸುಗಳು ಕಟ್ಟುವುದು ಮುಖ್ಯ. ಮಾಡಬೇಕಾದ ಕೆಲಸಗಳನ್ನು ನಾಳೆ ನಾಡಿದ್ದೆಂದು ಮುಂದೂಡದೆ ಆ ಕ್ಷಣದಿಂದಲೇ ಅಂದುಕೊಂಡ ಕೆಲಸ ಮಾಡಿದರೆ ಜೀವನದಲ್ಲಿ ಯಶಸ್ಸನ್ನು ಕಾಣಲಿಕ್ಕೆ ಸಾಧ್ಯ ಎಂದರು.

ಶಿವರಾತ್ರಿ ನಮ್ಮನ್ನು ಜಾಗೃತಗೊಳಿಸುವ ಹಬ್ಬವಾಗಬೇಕು. ಮನುಷ್ಯ ಜಡತ್ವವನ್ನು ಕಿತ್ತಾಕಿ ಜಂಗಮತ್ವವನ್ನು ಮೈಗೂಡಿಸಿಕೊಳ್ಳಬೇಕು. ಅದು ಒಂದು ದಿನಕ್ಕೆ ಮಾತ್ರ ಸೀಮಿತವಾಗದೇ ಪ್ರತಿದಿನ ಪ್ರತಿಹಂತದಲ್ಲೂ ಜಾಗೃತರಾಗಬೇಕು. ಪ್ರತಿದಿನ ಶಿವಸ್ಮರಣೆ ಮನುಷ್ಯನಿಗೆ ಆದಾಗ ಕಳಂಕವನ್ನು ಕಳೆದುಕೊಳ್ಳಲಿಕ್ಕೆ ಸಾಧ್ಯ ಎಂದರು.

ಉಪನ್ಯಾಸಕ ಡಾ.ಎಸ್.ಎನ್.ಆನಂದ ಮಾತನಾಡಿ, ಮನುಷ್ಯನ ಮನಸ್ಸು ಜಾಗೃತವಾಗಿಟ್ಟುಕೊಳ್ಳುವುದೇ ಶಿವರಾತ್ರಿ. ಪ್ರತಿಯೊಬ್ಬ ವ್ಯಕ್ತಿಯ ಸಾಧನೆಯ ಹಿಂದೆ ಏಕಾಗ್ರತೆ ಇರಬೇಕು. ಆಗ ಆ ವ್ಯಕ್ತಿ ಮಹಾವ್ಯಕ್ತಿಯಾಗಲಿಕ್ಕೆ ಸಾಧ್ಯ. ಶರಣರು ವೈಚಾರಿಕ ಹಿನ್ನಲೆಯಲ್ಲಿ ಮೌಢ್ಯ, ಅಂಧಕಾರ ದೂರಮಾಡಿ ಪ್ರತಿಯೊಂದು ಆಚರಣೆ ವೈಚಾರಿಕ ಹಿನ್ನಲೆಯಲ್ಲಿ ಆಚರಣೆಗೆ ತಂದರು. ಶರಣರು ವೈಚಾರಿಕತೆಯಿಂದ, ಅಜ್ಞಾನ, ಅಂಧಕಾರ ಕಳೆದರು. ಪ್ರತಿದಿನ ಹೊಸತನವನ್ನು ಯೋಚಿಸಿ ಅದನ್ನು ತನ್ನ ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಜಾಗರಣೆಗೆ ಅರ್ಥ ಬರುತ್ತದೆ ಎಂದರು.

ವಚನ ಕಂಠಪಾಠ ಸ್ಫರ್ಧೆ ಪ್ರೌಢಶಾಲಾ ವಿಭಾಗದಿಂದ ಅಧ್ಯಾಪಕಿ ಕಾವ್ಯ.ಎಚ್.ಆರ್ ಪ್ರಥಮ, ಶೋಭಾ ಎಸ್.ಪಿ ದ್ವಿತೀಯ, ಸುಧಾ.ಎಂ ತೃತೀಯ ಸ್ಥಾನವನ್ನು ಪಡೆದುಕೊಂಡರು.

ವಿದ್ಯಾರ್ಥಿಗಳ ವಿಭಾಗದಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿ ಪ್ರಾಥಮಿಕ ಶಾಲೆಯ ಪೂರ್ವ ಪ್ರಾಥಮಿಕ ವಿಭಾಗದಿಂದ ಆದ್ಯ ಎಸ್ ಎಸ್ ಪ್ರಥಮ, ಚಾರ್ವಿ ಪ್ರಿಯ ದ್ವಿತೀಯ, ರುಚಿತ ಎಸ್ ತೃತೀಯ, ಪ್ರಾಥಮಿಕ ವಿಭಾಗದಿಂದ ಯಶೋಧ ಪ್ರಥಮ, ಪವನ್ ಎನ್ ದ್ವಿತೀಯ, ಚಿರಾಯು ತೃತೀಯ, ಮಾಧ್ಯಮಿಕ ವಿಭಾಗದಿಂದ ಸರಸ್ವತಿ ಪ್ರಥಮ, ಪ್ರತೀಕ್ಷ ದ್ವಿತೀಯ, ಚಂದನ ತೃತೀಯ, ಪ್ರೌಢಶಾಲಾ ವಿಭಾಗದಿಂದ ಶಶಾಂಕ ಈ ಟಿ ಪ್ರಥಮ, ವರ್ಷ ಕೆ ಜೆ ದ್ವಿತೀಯ, ಮಂಜುನಾಥ್ ಎಸ್ ಕೊಪ್ಪದ ತೃತೀಯ ಸ್ಥಾನವನ್ನು ಪಡೆದುಕೊಂಡರು.

ವಚನ ಕಂಠಪಾಠ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳು ವಚನಗೀತೆ ಹಾಡಿ ಬಹುಮಾನ ಪಡೆದುಕೊಂಡರು. ಈ ಕಾರ್ಯಕ್ರಮದಲ್ಲಿ ಉಭಯಶಾಲೆಗಳ ವಿದ್ಯಾರ್ಥಿಗಳು, ಅಧ್ಯಾಪಕರು, ಗ್ರಾಮಸ್ಥರು ಪಾಲ್ಗೊಂಡಿದ್ದರು. ಕಾರ್ಯಕ್ರಮದ ನಂತರ ಎಲ್ಲರೂ ಉಪ್ಪಿಟ್ಟು, ಕಡ್ಲೇಕಾಳು, ಹಣ್ಣಿನ ರಸಾಯನ ಸೇವಿಸಿದರು.

Share this article