ಮಲೆನಾಡಿನ ಸಂಸ್ಕೃತಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ: ನಯನಾ ಮೋಟಮ್ಮ

KannadaprabhaNewsNetwork | Updated : Jan 15 2024, 05:28 PM IST

ಸಾರಾಂಶ

ಮಲೆನಾಡಿನ ಸಂಸ್ಕೃತಿ, ಸಂಪ್ರದಾಯ ಉಳಿಸಿ ಬೆಳೆಸುವ ಜವಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಶಾಸಕಿ ನಯನಾ ಮೋಟಮ್ಮ ಅವರು ಹೇಳಿದ್ದಾರೆ. ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಮಲೆನಾಡು ಸಮಾನ ಮನಸ್ಕ ಮಹಿಳೆಯರ ಒಕ್ಕೂಟದ ವತಿಯಿಂದ ಭಾನುವಾರ ಆಯೋಜಿಸಿದ್ದರು.

ಕನ್ನಡಪ್ರಭ ವಾರ್ತೆ, ಮೂಡಿಗೆರೆ

ಮಲೆನಾಡಿನ ಸಂಸ್ಕೃತಿ, ಸಂಪ್ರದಾಯ ಉಳಿಸಿ ಬೆಳೆಸುವ ಜವಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಶಾಸಕಿ ನಯನಾ ಮೋಟಮ್ಮ ಅವರು ಹೇಳಿದ್ದಾರೆ. ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಮಲೆನಾಡು ಸಮಾನ ಮನಸ್ಕ ಮಹಿಳೆಯರ ಒಕ್ಕೂಟದ ವತಿಯಿಂದ ಭಾನುವಾರ ಆಯೋಜಿಸಿದ್ದ ಮಲೆನಾಡ ಮಹಿಳೆಯರ ಸಾಂಸ್ಕೃತಿಕ ಸುಗ್ಗಿ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಆಧುನಿಕ ಕಾಲ ಘಟ್ಟದಲ್ಲಿ ಮಲೆನಾಡಿನ ಸಂಸ್ಕೃತಿ ಉಳಿಸಲು ಮಹಿಳೆಯರ ಸಾಂಸ್ಕೃತಿಕ ಸುಗ್ಗಿ ಹಬ್ಬ ಪ್ರೇರಣೆಯಾಗಿದೆ ಎಂದರು. ಆಧುನಿಕ ಜಗತ್ತಿಗೆ ಮಾರು ಹೋಗಿರುವ ನಾವು ನಮ್ಮ ಸಂಪ್ರದಾಯ, ಸಂಸ್ಕೃತಿ ಮರೆಯುತ್ತಿದ್ದೇವೆ.

 ಹಲವು ತಲೆಮಾರುಗಳಿಂದ ಬಂದಿರುವ ಸಂಪ್ರದಾಯ ಉಳಿಸಬೇಕಾಗಿದೆ ಎಂದು ಹೇಳಿದರು. ಮೂಡಿಗೆರೆ ತಾಲೂಕು ಅಪ್ಪಟ ಮಲೆನಾಡು, ಅತ್ಯಂತ ವಿಭಿನ್ನ ಸಂಸ್ಕೃತಿ, ಸಂಪ್ರದಾಯವನ್ನು ಹೊಂದಿದೆ. 

ಬೇರೆ ಬೇರೆ ಸಮುದಾಯದವರು ಇಲ್ಲಿ ನೆಲೆಯೂರಿದ್ದು ತಮ್ಮ ಸಂಸ್ಕೃತಿ ಸಂಪ್ರದಾಯಗಳ ಜತೆ ಮಲೆನಾಡಿನ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿದ್ದಾರೆ ಎಂದರು. ನಮ್ಮ ಆಚರಣೆಗಳು, ಹಬ್ಬ ಹರಿದಿನಗಳು ಕೇವಲ ಮನೆ, ಗ್ರಾಮಗಳಿಗೆ ಮಾತ್ರ ಸೀಮಿತವಾಗಿವೆ. 

ಅವುಗಳನ್ನು ಮುಂದಿನ ಪೀಳಿಗೆಗೆ ಉಳಿಸಿ, ಬೆಳೆಸಬೇಕಿದೆ. ಈ ಹಿನ್ನಲೆಯಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ವ ಪಡೆದುಕೊಳ್ಳುತ್ತದೆ ಎಂದು ಹೇಳಿದರು. ರಾಜ್ಯ ಸೇರಿದಂತೆ ಹೊರ ರಾಜ್ಯಗಳಲ್ಲೂ ಮಲೆನಾಡಿನ ತಿಂಡಿ ತಿನಿಸುಗಳು ವೈವಿಧ್ಯತೆಯಿಂದ ಕೂಡಿದ್ದು, ಎಲ್ಲರೂ ಇಷ್ಟಪಡುತ್ತಾರೆ. 

ಹೊರ ಜಗತ್ತಿಗೆ ಪ್ರಚುರ ಪಡಿಸುವ ಅಗತ್ಯವೂ ಇದೆ ಎಂದರು. ಮೋಟಮ್ಮ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾಗಿದ್ದ ಅವಧಿಯಲ್ಲಿ ಮಲೆನಾಡು ಮಹಿಳೆಯರ ಸಾಂಸ್ಕೃತಿಕ ಸುಗ್ಗಿ ಹಬ್ಬವನ್ನು ಪ್ರಾರಂಭಿಸಿದರು. 

ಆದರೆ, 2000 ರಲ್ಲಿ ಕಾರಣಾಂತರಗಳಿಂದ ನಿಲ್ಲಿಸಲಾಗಿತ್ತು. ಮಲೆನಾಡು ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿರುವ ಅವರು, ಮತ್ತೊಮ್ಮೆ ಕಾರ್ಯಕ್ರಮ ರೂಪಿಸಲು ಚಿಂತಿಸಿ, ಎಲ್ಲಾ ಮಹಿಳೆಯರನ್ನು ಒಗ್ಗೂಡಿಸಿ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದು ಹೇಳಿದರು. 

ಮೂಡಿಗೆರೆ ಕ್ಷೇತ್ರ ಹೆಚ್ಚಿನ ಪ್ರಮಾಣದಲ್ಲಿ ಅರಣ್ಯ ಪ್ರದೇಶವನ್ನು ಹೊಂದಿದೆ. ಇಲ್ಲಿನ ಜನರು ಭೂಮಿಯ ಸಮಸ್ಯೆ ಎದುರಿಸುತ್ತಿದ್ದಾರೆ ಎಂದ ಅವರು, ಹೆಚ್ಚಿನ ಅರ್ಜಿಗಳು ಭೂಮಿಗೆ ಸಂಬಂಧಿಸಿದವುಗಳೇ ಆಗಿವೆ. ಅರಣ್ಯ ಸಂರಕ್ಷಣೆಯ ಜತೆಗೆ ಜನರ ಭೂಮಿ ಸಮಸ್ಯೆಯನ್ನು ಇತ್ಯರ್ಥಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. 

ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಮಾತನಾಡಿ, ನಮ್ಮ ಜಾನಪದ ಸಂಸ್ಕೃತಿ ಅತ್ಯಂತ ಶ್ರೀಮಂತ ಸಂಸ್ಕೃತಿಯಾಗಿದೆ, ಅದನ್ನು ಉಳಿಸಬೇಕಿದೆ. ಜಾನಪದ ಎಂದರೇ ಜ್ಞಾನಪದ, ವಿಜ್ಞಾನಪದ, ಸುಜ್ಞಾನಪದ. ಇದು ಅರ್ಥವಾಗದವರಿಗೆ ಅಜ್ಞಾನಪದ. ನಮ್ಮ ಸಂಸ್ಕೃತಿ ಎಲ್ಲರ ಕಣ್ಣು ತೆರೆಸುತ್ತದೆ ಎಂದರು. ವೈವಾಹಿಕ ಜೀವನದಲ್ಲಿ ಗುಣ, ರೂಪ ಎಲ್ಲದಿಕ್ಕಿಂತಲೂ ಮಿಗಿಲಾಗಿ ಜೀವನ ಅರಿತು ಬಾಳುವುದು ಮುಖ್ಯ ಎಂಬುದನ್ನು ನಮ್ಮ ಹಿರಿಯರು ಬದುಕಿ ತೋರಿಸಿ ಕೊಟ್ಟಿದ್ದಾರೆ. 

ಅವರು, ಇಂದು ಕೃಷಿ ಅವಲಂಭಿತ ಪುರುಷರಿಗೆ ಹೆಣ್ಣು ಸಿಗುತ್ತಿಲ್ಲ ಎಂಬ ವಿಚಾರ ವಿಷಾಧನೀಯ ಎಂದು ಹೇಳಿದರು. ಮಾಜಿ ಶಾಸಕ ನೆ.ಲಾ.ನರೇಂದ್ರಬಾಬು ಮಾತನಾಡಿದರು. ಕಾರ್ಯಕ್ರಮದಲ್ಲಿ ಚಲನಚಿತ್ರ ನಿರ್ದೇಶಕ, ನಿನಾಸಂ ಗಣೇಶ್, ಕಿರು ತೆರೆ ನಟಿ ಶರ್ಮಿತ ಗೌಡ, ಡಾ.ಮೋಟಮ್ಮ, ಜಯಮ್ಮ, ಸೀತಮ್ಮ, ಜಮುನಾ ಇದ್ದರು. ಸವಿತಾ ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. 

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ರಕ್ಷಿತಾ ರಾಜು, ಅನುಪಮ ವಿಶ್ವಾಮಿತ್ರ, ಲಕ್ಷ್ಮೀದೇವಮ್ಮ, ದೇವನ ರವಿ, ವೀಣಾ ಡಿ.ಬಿ.ಚಂದ್ರೇಗೌಡ, ಡಾ.ಮಾನಸ ಅವರನ್ನು ಸನ್ಮಾನಿಸಲಾಯಿತು. 

ಇದೇ ವೇಳೆ ದಿಕ್ಷೀತ್ ಗೌಡ ಮತ್ತು ಶೃತಿ ಗೌಡ ಅವರ ಅಣಕು ವಿವಾಹ ಮಹೋತ್ಸವ ಮಲೆನಾಡಿನ ಸಂಪ್ರದಾಯದಂತೆ ನಡೆದಿದ್ದು ವಿಶೇಷವಾಗಿತ್ತು ಹಾಗೂ ಸುಗ್ಗಿಕಾಲದ ಬಣವೆ ಪೂಜೆ ನೆರವೇರಿಸಲಾಯಿತು.

ವೇದಿಕೆ ಕಾರ್ಯಕ್ರಮದ ನಂತರ ಮಲೆನಾಡು ಸಂಪ್ರದಾಯದ ಜಾನಪದ ನೃತ್ಯ, ಜನಪದ ಗೀತೆ, ಕೋಲಾಟ ಸ್ಪರ್ಧೆ, ಕಂಸಾಳೆ, ನೃತ್ಯರೂಪಕ, ಜಾನಪದ ಶೈಲಿಯ ರ್‍ಯಾಂಪ್ ವಾಕ್ ನಡೆಯಿತು.

ಮಲೆನಾಡು ತಿಂಡಿ ತಿನಿಸುಗಳನ್ನು ಪ್ರದರ್ಶನ ಮಳಿಗೆ ಗಮನ ಸೆಳೆದವು. ವೇದಿಕೆಯನ್ನು ಮಲೆನಾಡು ಸಂಪ್ರದಾಯದಂತೆ ಶೃಂಗಾರಗೊಳಿಸಲಾಗಿತ್ತು. ಪೋಟೋ ಪೈಲ್ ನೇಮ್ 14 ಕೆಸಿಕೆಎಂ 4ಮೂಡಿಗೆರೆಯ ಅಡ್ಯಂತಾಯ ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಮಲೆನಾಡ ಮಹಿಳೆಯರ ಸಾಂಸ್ಕೃತಿಕ ಸುಗ್ಗಿ ಸಂಭ್ರಮ ಕಾರ್ಯಕ್ರಮವನ್ನು ನಯನಾ ಮೋಟಮ್ಮ ಅವರು ಉದ್ಘಾಟಿಸಿದರು. ಹಿರೇಮಗಳೂರು ಕಣ್ಣನ್, ಮೋಟಮ್ಮ, ಸವಿತಾ ರಮೇಶ್ ಇದ್ದರು.

Share this article