ಸಂವಿಧಾನ ಗೌರವಿಸುವುದು ನಮ್ಮೆಲ್ಲರ ಕರ್ತವ್ಯ; ಶಾಸಕ ಸುಬ್ಬಾರೆಡ್ಡಿ

KannadaprabhaNewsNetwork | Published : Jan 27, 2024 1:19 AM

ಸಾರಾಂಶ

ದೇಶದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ, ಸಮಾನತೆ ಸಿಗಲು ಮಹನೀಯರು ಸಂವಿಧಾನ ರಚಿಸಿದ್ದಾರೆ. ಆದರೆ ಕೆಲವರು ರಾಜಕೀಯ ಚಪಲಕ್ಕೆ ಇಡೀ ಸಂವಿಧಾನವನ್ನೇ ಬದಲಿಸುತ್ತೇವೆಂದು ಹೇಳಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ

ಭಾರತದ ಪವಿತ್ರ ಗ್ರಂಥಗಳಾದ ರಾಮಾಯಣ, ಮಹಾಭಾರತ ಜೊತೆಗೆ ಡಾ.ಅಂಬೇಡ್ಕರ್ ರಚಿಸಿರುವ ಸಂವಿಧಾನವನ್ನು ಗೌರವಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಪಟ್ಟಣದ ಸರ್. ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ 75ನೇ ಗಣರಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿದ ಮಾತನಾಡಿದ ಅವರು, ಡಾ.ಅಂಬೇಡ್ಕರ್ ರಚಿಸಿರುವ ಸಂವಿಧಾನ ನಮ್ಮ ದೇಶದ ಪವಿತ್ರ ಗ್ರಂಥಗಳಲ್ಲಿ ಒಂದಾಗಿದೆ. ಸಂವಿಧಾನವನ್ನು ಸಂರಕ್ಷಿಸುವುದು ಹಾಗೂ ಗೌರವಿಸುವುದಲ್ಲದೆ ಅದನ್ನು ಪಾಲನೆ ಮಾಡಬೇಕಾಗಿರುವುದು ನಮ್ಮಲ್ಲರ ಕರ್ತವ್ಯ. ಭಾರತ ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ಸರ್ವತೋಮುಖ ಅಭಿವೃದ್ಧಿಯತ್ತ ಸಾಗುತ್ತಿರುವುದಕ್ಕೆ ಕಾರಣವೇ ನಮ್ಮ ದೇಶದ ಸಂವಿಧಾನ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ದೇಶದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ, ಸಮಾನತೆ ಸಿಗಲು ಮಹನೀಯರು ಸಂವಿಧಾನ ರಚಿಸಿದ್ದಾರೆ. ಆದರೆ ಕೆಲವರು ರಾಜಕೀಯ ಚಪಲಕ್ಕೆ ಇಡೀ ಸಂವಿಧಾನವನ್ನೇ ಬದಲಿಸುತ್ತೇವೆಂದು ಹೇಳಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಪ್ರಪಂಚ ಇರುವವರೆಗೂ ನಮ್ಮ ದೇಶದ ಸಂವಿಧಾನವನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬಾಲ್ಯವಿವಾಹ ಪ್ರಕರಣಗಳು ಹೆಚ್ಚಾಗುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ ಅವರು, ಈ ಅನಿಷ್ಠ ಪದ್ದತಿಗೆ ಕಡಿವಾಣ ಹಾಕಲು ಪ್ರತಿಯೊಬ್ಬರೂ ಕೈಜೋಡಿಸಬೇಕೆಂದರು.

ತಹಸೀಲ್ದಾರ್ ಪ್ರಶಾಂತ್ ಕೆ. ಪಾಟಿಲ್, ತಾಪಂ ಇಒ ರಮೇಶ್, ಬಿಇಒ ತನುಜಾ, ಪುರಸಭೆ ಮುಖ್ಯಾಧಿಕಾರಿ ರುದ್ರಮ್ಮ ಶರಣಪ್ಪ, ಪೊಲೀಸ್ ಇನ್ಸ್ಪೆಕ್ಟರ್ ಪ್ರಶಾಂತ್ ವರ್ಣಿ, ಕಸಾಪ ತಾಲೂಕು ಅಧ್ಯಕ್ಷ ಡಿ.ಎನ್.ಕೃಷ್ಣಾ ರೆಡ್ಡಿ ಮತ್ತಿತರರು ಇದ್ದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಅಪ್ಪಣ್ಣ ಕ್ರೀಡಾ ಕ್ಷೇತ್ರ, ಅಮರ್ ಪೊಲೀಸ್ ಇಲಾಖೆ, ಡಾ.ಯತೀಂದ್ರ ವೈದ್ಯಕೀಯ, ಮಂಜುಳಾ ವೈದ್ಯಕೀಯ, ಪಿ.ಎಸ್.ರಾಜೇಶ್(ಪ್ರಜಾವಾಣಿ) ಪತ್ರಿಕಾ ರಂಗ, ಎಂ.ವಿ. ವೆಂಕಟ ರತ್ನಮ್ಮ ಕಂದಾಯ ಇಲಾಖೆ, ಶಿವಪ್ಪ ಶಿಕ್ಷಣ ಇಲಾಖೆ, ರಮಣಮ್ಮ ಪೌರಕಾರ್ಮಿಕ ಕ್ಷೇತ್ರದ ಸಾಧಕರನ್ನುಸನ್ಮಾನಿಸಲಾಯಿತು.

Share this article