ಕನ್ನಡಪ್ರಭ ವಾರ್ತೆ ಶಿವಮೊಗ್ಗ ಮಾನವ ಮಾನವನಾಗಿ ಬದುಕಲು ಸಾಧ್ಯವಾಗಿದ್ದು, ಅಸಮಾನ ಭಾರತವನ್ನು ಸಮಾನವಾಗಿ ಕಟ್ಟಿದ್ದು, ಎಲ್ಲರಿಗೂ ಎಲ್ಲ ಅವಕಾಶಗಳನ್ನು ಕೊಟ್ಟಿರುವುದು ನಮ್ಮ ಸಂವಿಧಾನ. ಹಾಗಾಗಿ, ಇಂದಿನ ಯುವಜನತೆ ಭಾರತ ಸಂವಿಧಾನವನ್ನು ಅರ್ಥಮಾಡಿಕೊಳ್ಳಬೇಕು ಎಂದು ಸಿಬಿಆರ್ ರಾಷ್ಟ್ರೀಯ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಅನಲ ಹೇಳಿದರು.
ಸಂವಿಧಾನವು ಪ್ರತಿಯೊಬ್ಬರಿಗೂ ಸ್ವಾಭಿಮಾನವನ್ನು, ನೈತಿಕ ಸ್ಥೈರ್ಯವನ್ನು ತಂದುಕೊಟ್ಟು ಬದುಕಿನ ಬಗ್ಗೆ ಆಶಾಭಾವಯನ್ನು ಮೂಡಿಸಿದೆ. ಪೋಷಕರು ತಮ್ಮ ಕರ್ತವ್ಯಗಳನ್ನು ನಿರ್ವಹಿಸಿದ ಹಾಗೆ ಇಂದಿನ ಮಕ್ಕಳು ತಮ್ಮ ಕರ್ತವ್ಯವನ್ನು ನಿಭಾಯಿಸುತ್ತಿಲ್ಲ. ಅದಾಗಬಾರದು. ದೇಶ, ದೇಶದ ಧ್ವಜ, ಗುರು ಹಿರಿಯರಿಗೆ ಗೌರವ ಕೊಡಬೇಕು ಎಂದ ಅವರು, ಸಂವಿಧಾನ ನಮಗೆ ಎಲ್ಲವನ್ನೂ ನೀಡಿದ್ದರೂ ಅದು ವಿದ್ಯಾರ್ಥಿಗಳಿಗೆ ಇನ್ನೂ ಸರಿಯಾಗಿ ಅರ್ಥ ಆಗದಿರುವುದು ದುರಂತ ಎಂದು ವಿಷಾದಿಸಿದರು.
ಮುಖ್ಯ ಅತಿಥಿ, ಕುವೆಂಪು ವಿಶ್ವವಿದ್ಯಾಲಯದ ರಾ.ಸೇ.ಯೋಜನೆ ಸಂಯೋಜಕ ಡಾ.ನಾಗರಾಜ ಪರಿಸರ ಮಾತನಾಡಿ, ಸಾಧನೆ ಸೋಮಾರಿಯ ಸೊತ್ತಲ್ಲ. ಅದು ಸಾಧಕನ ಸೊತ್ತು. ವಿದ್ಯಾರ್ಥಿಗಳು ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಸಾಮಾಜಿಕ ಹೊಣೆಗಾರಿಕೆ ಇಟ್ಟುಕೊಂಡು ಮುನ್ನಡೆಯಬೇಕು ಎಂದರು.ಇಂದಿನ ಔಪಚಾರಿಕ ಶಿಕ್ಷಣ ವ್ಯವಸ್ಥೆ ವಿದ್ಯಾರ್ಥಿಗಳಲ್ಲಿ ಜೀವನಾನುಭವವನ್ನು ನೀಡುವಲ್ಲಿ ಸೋತಿದೆ. ಎನ್ಎಸ್ಎಸ್ ಯುವಕರಿಗೆ ತಮ್ಮನ್ನು ತಾವು ಅರ್ಥೈಸಿಕೊಳ್ಳಲು ಮತ್ತು ಸಮಾಜವನ್ನು ಅರ್ಥಮಾಡಿಕೊಂಡು ಮುನ್ನಡೆಯಲು ಪ್ರೇರಣೆ ನೀಡುತ್ತದೆ ಎಂದು ಹೇಳಿದರು.
- - - -ಫೋಟೋ: