ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ಪೋಷಕರ ಜವಾಬ್ದಾರಿ

KannadaprabhaNewsNetwork |  
Published : Dec 16, 2024, 12:45 AM IST
ಫೋಟೋ: 15ಎಸ್‌ಕೆಪಿ02 ಸಂಸ್ಥೆಯ ಅಧ್ಯಕ್ಷ ಎಂ.ಬಿ. ಶಿವಕುಮಾರ್, ಎಸ್‌.ಆರ್‌. ಮಂಜುನಾಥ , ಶ್ರೀ ಲೋಕೇಶಪ್ಪ ಕೆ.ಬಿ, ಸುಭಾಷ್ ಬಿ ಆರ್., ತೇಜಸ್ವಿನಿ ರಾಘವೇಂದ್ರ, ಡಾ. ಶಿವಕುಮಾರ್‌  ಮತ್ತು ಶ್ರೀ ಕುಬೇರಪ್ಪ ಕೆ ಅತಿಥಿಗಣ್ಯರು ಕಾರ್ಯಕ್ರಮವನ್ನು ಉದ್ಘಾಟಿಸುತ್ತಿರುವುದು. | Kannada Prabha

ಸಾರಾಂಶ

ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ವತಿಯಿಂದ ಆಯೋಜಿಸಲಾದ ಕುಮದ್ವತಿ ಸಾಂಸ್ಕೃತಿಕ ಉತ್ಸವ-2024 ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ಶಿಕ್ಷಕರ ಹಾಗೂ ಪೋಷಕರ ಜವಾಬ್ದಾರಿಯಾಗಿದೆ. ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯು ತಾಲೂಕು ಮಟ್ಟದಲ್ಲಿ ಅತ್ಯುತ್ತಮ ಮೂಲಭೂತ ಸೌಲಭ್ಯ ಹೊಂದಿ, ಉತ್ತಮ ಶಿಕ್ಷಣ ನೀಡುತ್ತಿರುವ ಮಹತ್ವದ ವಿದ್ಯಾಸಂಸ್ಥೆಯಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ ಎಸ್.ಆರ್ ಹೇಳಿದರು.

ಪಟ್ಟಣದ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ವತಿಯಿಂದ ಅಂಗಸಂಸ್ಥೆಗಳ ವಾರ್ಷಿಕ ‘ಕುಮದ್ವತಿ ಸಾಂಸ್ಕೃತಿಕ ಉತ್ಸವ– 2024” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಶಿಕ್ಷಕರು ಶಾಲೆಗಳಲ್ಲಿ ಎಷ್ಟೇ ಓದಿಸಬಹುದು ಆದರೆ, ಮನೆಯಲ್ಲಿ ಪಾಲಕರು ಹೇಳಿಕೊಡುವ ವಿದ್ಯೆ ಬಹಳ ಪ್ರಮುಖವಾದದ್ದು. ಓದುವಾಗ ಮಕ್ಕಳಿಗೆ ಟಿವಿ, ಧಾರವಾಹಿಯ ಗೀಳನ್ನು ಕಡಿಮೆ ಮಾಡಿ ಓದಿನ ಕಡೆ ಹೆಚ್ಚು ಒಲವನ್ನು ಮೂಡಿಸಬೇಕಾಗಿದೆ ಎಂದು ಹೇಳಿದರು.

ಪೋಷಕರು ತಮ್ಮ ಜವಾಬ್ದಾರಿ ಅರಿತುಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಓದಿನ ಸಂಧರ್ಭದಲ್ಲಿ ಕಷ್ಟದ ಅರಿವನ್ನು ಮೂಡಿಸಬೇಕು. ಮಗು ಶಾಲೆಯಲ್ಲಿ ಮಾತ್ರವಲ್ಲದೇ ಮನೆಯಲ್ಲಿ ಸಾಂಸ್ಕೃತಿಕವಾಗಿ ಬೆಳೆಯುವಂತೆ ಮಾಡುವುದು ಶಿಕ್ಷಕರ ಮತ್ತು ಪೋಷಕರ ಪ್ರಮುಖ ಕರ್ತವ್ಯವಾಗಿದೆ.

ಶಿಕಾರಿಪುರವು ಡಾ.ಜಿ.ಎಸ್.ಶಿವರುದ್ರಪ್ಪರಂತಹ ರಾಷ್ಟ್ರಕವಿ, ವಚನಕಾರರು, ಶಿವಶರಣರನ್ನು ರಾಷ್ಟಕ್ಕೆ ನೀಡಿದ ಶಿವಶರಣ ತಪೋಭೂಮಿಯಾಗಿದೆ. ಹಾಗೆಯೇ ಶಿಕ್ಷಣ ಮತ್ತು ಇತರೆ ಕ್ಷೇತ್ರದಲ್ಲೂ ಉತ್ತಮ ಸಾಧನೆ ಮಾಡುತ್ತಿದೆ ಎಂದು ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶಪ್ಪ ಕೆ.ಬಿ. ಮಾತನಾಡಿ, ಕೆಲವು ವರ್ಷಗಳ ಹಿಂದೆ ಮಕ್ಕಳ ಕೈಯಲ್ಲಿ ಗೊಂಬೆ ಕೊಡುವ ಪದ್ಧತಿ ಇತ್ತು, ಆದರೆ ಇಂದು ಮೊಬೈಲ್‌ ಕೊಡುವ ಸಂಪ್ರದಾಯ ಬೆಳೆಯುತ್ತಿದೆ. ಇದರಿಂದ ಮಕ್ಕಳಲ್ಲಿ ಹಠ, ಸಿಟ್ಟು, ಮಾನಸಿಕ ಉದ್ವೇಗಗಳು ಹೆಚ್ಚಾಗುತ್ತಿವೆ. ಇಂದು ಮಕ್ಕಳಲ್ಲಿ ಇನ್ನೋಬ್ಬರೊಂದಿಗೆ ಸ್ಪಂದಿಸುವ ನೈತಿಕ ಗುಣಗಳು ಕಡಿಮೆಯಾಗಿ ಕೇವಲ ವೈಯಕ್ತಿಕ ಹಿತಾಸಕ್ತಿಗಳ ಕಡೆಗೆ ಗಮನ ಹರಿಸುವಂತಾಗುತ್ತಿರುವುದು ದುರಂತ ಎಂದು ನುಡಿದರು.

ಮಾನವೀಯ ಮೌಲ್ಯಗಳು ಕಡಿಮೆಯಾಗಿ ಆನ್‌ಲೈನ್‌, ಡಿಜಿಟಲ್‌ ನಂತಹ ಸಂಪರ್ಕಗಳಿಗೆ ಮೊರೆಹೋಗುತ್ತಿರುವುದು ಹೆಚ್ಚಾಗುತ್ತಿದೆ. ಉತ್ತಮ ಮಟ್ಟದ ಶಿಕ್ಷಣವನ್ನು ಡೊನೆಶನ್‌ ಕಟ್ಟಿ ನೀಡುತ್ತೇವೆ ಎಂದ ಅವರು ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ಅದೇ ಹಣದಿಂದ ತಂದೆ ತಾಯಿಯರನ್ನು ವೃದ್ಧಾಶ್ರಮದಲ್ಲಿಟ್ಟು ನೋಡಿಕೊಳ್ಳುವ ಮನಸ್ಥಿತಿಗೆ ಬಂದಿದ್ದಾರೆ. ಇಂದಿನ ಜಗತ್ತು ಬದಲಾಗುತ್ತಿರುವುದನ್ನು ಹೋಗಲಾಡಿಸಬೇಕಾದರೆ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಗುವನ್ನು ನಿರಂತರ ತೊಡಗಿಸಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಸಂಸ್ಥೆಯ ಅಧ್ಯಕ್ಷ ಎಂ.ಬಿ.ಶಿವಕುಮಾರ್ ಬಹುಮಾನ ವಿತರಿಸಿದರು.

ಪ್ರಾಸ್ತಾವಿಕವಾಗಿ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ ಪ್ರಾಂಶುಪಾಲರಾದ ಡಾ.ಶಿವಕುಮಾರ್ ಜಿ.ಎಸ್. ಮಾತನಾಡಿದರು. ಸಂಸ್ಥೆಯ ಸಮನ್ವಯಾಧಿಕಾರಿ ಕುಬೇರಪ್ಪ.ಕೆ. ಸಂಸ್ಥೆಯ ಮುಖ್ಯಸ್ಥರು, ಪ್ರಾಚಾರ್ಯರು, ಬೋಧಕ, ಬೋಧಕೇತರ ಹಾಗೂ ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌