;Resize=(412,232))
ಕನ್ನಡಪ್ರಭ ವಾರ್ತೆ ಕಲಬುರಗಿ
ಬಿಜೆಪಿಯಿಂದ ತಮಗೆ ಆಮಿಷ ಬಂದಿದ್ದು ನಿಜ ಎಂದು ಆಳಂದ ಕಾಂಗ್ರೆಸ್ ಶಾಸಕ ಮತ್ತು ಮುಖ್ಯಮಂತ್ರಿ ಸಲಹೆಗಾರ ಬಿ.ಆರ್. ಪಾಟೀಲ್ ಬಹಿರಂಗವಾಗಿಯೇ ಮಾಧ್ಯಮ ಮುಂದೆ ಒಪ್ಪಿಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಎರಡು ತಿಂಗಳು ಹಿಂದೆ ನನಗೂ ಸೇರಿ ಮೂವರು ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ನಾಯಕರೊಬ್ಬರು ಪಕ್ಷವನ್ನು ಸೇರಲು ಆಮಿಷ ಒಡ್ಡಿದ್ದರು. ಆ ಕುರಿತು ಆಗಲೇ ನಾನು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮಾಹಿತಿ ಕೊಟ್ಟಿರುವೆ. ಅವರ ಆಮಿಷನ್ನು ಸಂಪೂರ್ಣ ನಿರ್ಲಕ್ಷಿಸಿದ್ದೇನೆ ಎಂದರು.
ಕಳೆದ ಎರಡು ತಿಂಗಳು ಹಿಂದೆ ಬಿಜೆಪಿ ನಾಯಕರೊಬ್ಬರು ನನಗೆ ಸಂಪರ್ಕಿಸಿ, ನಿಮಗೆ ಕಾಂಗ್ರೆಸ್ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ, ಅನ್ಯಾಯವಾಗುತ್ತಿದೆ.
ಆದ್ದರಿಂದ ನೀವು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಬಂದರೆ ನಿಮಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಕೊಡುತ್ತೇವೆ. ಚುನಾವಣೆಯಲ್ಲಿ ವೆಚ್ಚ ಮಾಡಿದ ಹಣವನ್ನೂ ಸಹ ಕೊಡಲಾಗುತ್ತದೆ ಎಂದೂ ಹೇಳಿದ್ದರು. ಅವರ ಆಮಿಷವನ್ನು ನಾನು ಒಪ್ಪಲಿಲ್ಲ ಎಂದರು.
ಬೀದರ್ ಲೋಕಸಭಾ ಟಿಕೆಟ್ ಕೊಡಿಸುವ ಭರವಸೆ ಕೊಟ್ಟಿದ್ದಾರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಿ.ಆರ್. ಪಾಟೀಲ್ ಅವರು, ಟಿಕೆಟ್ ಕೊಡಿಸುವಷ್ಟು ದೊಡ್ಡ ಮಟ್ಟದ ನಾಯಕರು ಅವರಲ್ಲ. ಅಂತಹ ಯಾವುದೇ ಮಾತುಕತೆ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ನಾಲ್ವರು ಸಚಿವರು ಬಿಜೆಪಿ ಸೇರಲು ರಾಷ್ಟ್ರೀಯ ನಾಯಕರಿಗೆ ಭೇಟಿ ಮಾಡಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹಾಗೇನಾದರೂ ನಾಲ್ವರು ಸಚಿವರು ಬಿಜೆಪಿ ನಾಯಕರನ್ನು ಭೇಟಿ ಮಾಡಿದ್ದರೆ ಈಗಾಗಲೇ ಅದು ರಾಷ್ಟ್ರೀಯ ಮಟ್ಟದ ಸುದ್ದಿಯಾಗುತ್ತಿತ್ತು. ಅಂತಹ ಯಾವುದೇ ಚಟುವಟಿಕೆಗಳು ಆಗಿಲ್ಲ ಎಂದು ಸ್ಪಷ್ಟಪಡಿಸಿದರು.
ನಾನೂ ಸೇರಿ ಕಾಂಗ್ರೆಸ್ ಶಾಸಕರಿಗೆ ಬಿಜೆಪಿಯವರು ಒಡ್ಡಿರುವ ಆಮಿಷಕ್ಕೆ ಒಳಗಾಗುವುದಿಲ್ಲ. ಯಾವುದೇ ಕಾರಣಕ್ಕೂ ಕಾಂಗ್ರೆಸ್‌ಗೆ ರಾಜೀನಾಮೆ ನೀಡುವುದಿಲ್ಲ ಎಂದು ಹೇಳಿದರು.