ಖರ್ಗೆಯಂತಹವರಿಗೆ ಪ್ರಿಯಾಂಕ್ ರಂಥ ಮಗ ಹುಟ್ಟಿದ್ದೇ ಅನ್ಯಾಯ; ಈಶ್ವರಪ್ಪ ಕಿಡಿ

KannadaprabhaNewsNetwork | Published : Mar 7, 2024 1:54 AM

ಸಾರಾಂಶ

‘ಪಾಕಿಸ್ತಾನ ಜಿಂದಾಬಾದ್’ ಪರವಾಗಿ ಕಾಂಗ್ರೆಸ್ ನವರು ಇದ್ದರು. ನೇರವಾಗಿ ಪಾಕಿಸ್ತಾನ ಪರ ಘೋಷಣೆ ಕೂಗಿಲ್ಲ ಎಂದು ಡಿ.ಕೆ.ಶಿವಕುಮಾರ್‌, ಪ್ರಿಯಾಂಕ ಖರ್ಗೆ, ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಒಬ್ಬ ಕಾಂಗ್ರೆಸ್ ನಾಯಕರು ಕೂಡ ಖಂಡಿಸಲಿಲ್ಲ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮಲ್ಲಿಕಾರ್ಜುನ ಖರ್ಗೆಯಂತಹವರಿಗೆ ಪ್ರಿಯಾಂಕ ‌ಖರ್ಗೆಯಂತಹ ಮಗ ಹುಟ್ಟಿರುವುದೇ ಅನ್ಯಾಯ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಕಿಡಿಕಾರಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಪ್ರಿಯಾಂಕ ಖರ್ಗೆ ಅವರು ನಾಸೀರ್ ಬೆಂಬಲಿಗರು ಯಾವುದೇ ಕಾರಣಕ್ಕೂ ‘ಪಾಕಿಸ್ತಾನ ಜಿಂದಾಬಾದ್’ ಎಂದು ಕೂಗಿಲ್ಲ ಅಂದಿದ್ದರು. ಎ2 ಆರೋಪಿ ಕುಟುಂಬ ಸಮೇತ ಓಡಿ ಹೋಗಿದ್ದಾನೆ. ಅವನು‌ ಓಡಿ ಹೋಗಲು ಯಾರು ಕಾರಣ?. ಪೊಲೀಸರ ವೈಪಲ್ಯವಾ?, ರಾಜ್ಯ ಸರ್ಕಾರ ಸಹಕಾರ ಕೊಟ್ಟಿದೆಯಾ?, ಕಾಂಗ್ರೆಸ್ ನವರು ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೂಗಿಯೇ ಇಲ್ಲ ಅಂದರಲ್ಲ, ಡಿ.ಕೆ.ಶಿವಕುಮಾರ್ ಏನಾದರೂ ಸಹಕಾರ ಕೊಟ್ಡಿದ್ದಾರಾ? ಎಂದು ಹರಿಹಾಯ್ದರು.

‘ಪಾಕಿಸ್ತಾನ ಜಿಂದಾಬಾದ್’ ಪರವಾಗಿ ಕಾಂಗ್ರೆಸ್ ನವರು ಇದ್ದರು. ನೇರವಾಗಿ ಪಾಕಿಸ್ತಾನ ಪರ ಘೋಷಣೆ ಕೂಗಿಲ್ಲ ಎಂದು ಡಿ.ಕೆ.ಶಿವಕುಮಾರ್‌, ಪ್ರಿಯಾಂಕ ಖರ್ಗೆ, ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಒಬ್ಬ ಕಾಂಗ್ರೆಸ್ ನಾಯಕರು ಕೂಡ ಖಂಡಿಸಲಿಲ್ಲ. ಇದು ಅವರ ಮನಸ್ಥಿತಿ. ಕೇವಲ ಮುಸ್ಲಿಂರ ಓಟು ಬೇಕು ಎಂಬ ಒಂದೇ ಕಾರಣಕ್ಕೆ ಪಾಕಿಸ್ತಾನ ಪರ ಇರುವ ವ್ಯಕ್ತಿಗಳಿಗೆ ಬೆಂಬಲ ಕೊಡುತ್ತೇವೆ ಎನ್ನುವುದು ನಮ್ಮ ದೌರ್ಭಾಗ್ಯ. ಎಫ್ಎಸ್ಎಲ್ ವರದಿ ಬರಲಿ ಅಂತಿದ್ದರು. ಆದರೆ, ಗೃಹಸಚಿವ ಜಿ. ಪರಮೇಶ್ವರ್ ತುಂಬಾ ಸ್ಪಷ್ಟವಾಗಿ ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೂಗಿದ್ದಾರೆ ಎಂದಿದ್ದರು. ಜಿ.ಪರಮೇಶ್ವರ್‌ ಹಾಗೂ ಸಿಎಂ ಸಿದ್ದರಾಮಯ್ಯನವರು ರಾಷ್ಟ್ರದ್ರೋಹಿಗಳ ರಕ್ಷಣೆ ಮಾಡಲ್ಲ ಅಂದಿದ್ದರು. ಹೀಗಾಗಿ ಅವರಿಬ್ಬರಿಗೂ ಅಭಿನಂದಿಸುತ್ತೇನೆ ಎಂದರು.

ಕರ್ನಾಟಕ ರಾಜ್ಯ ರಾಷ್ಟ್ರದ್ರೋಹಿಗಳ ತಾಣವಾಗುತ್ತಿದೆ. ಪಾಕಿಸ್ತಾನ ಪರ ಘೋಷಣೆ, ಬಾಂಬ್ ಬ್ಲಾಸ್ಟ್ ರಾಜ್ಯದಲ್ಲಿ ಮಾಮೂಲಿಯಾಗಿರುವುದು ರಾಜ್ಯದ ಜನತೆಗೆ ಅಪಮಾನ. ಇಂತವರಿಗೆ ಬೆಂಬಲ ನೀಡಿದವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಕಾರ್ಯಕರ್ತ ರಾಷ್ಟ್ರದ್ರೋಹಿ ಹೇಳಿಕೆ ಅಸಾಧ್ಯ

ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತ ಪಾಕ್ ಪರ ಘೋಷಣೆ ಕೂಗಿದ್ದು, ಬಾಯ್ತಪ್ಪಿ ಹೇಳಿದ್ದಾನೆ. ಅವನ ವಿರುದ್ಧ ಇಲ್ಲಿಯವರೆಗೆ ಯಾವುದೇ ಕ್ರಮ ಇರಲಿಲ್ಲ. ಕಾಂಗ್ರೆಸ್ ಸರ್ಕಾರಕ್ಕೆ ಅಪಮಾನವಾಗುತ್ತದೆ ಎಂಬ ‌ಕಾರಣಕ್ಕೆ ಈ ರೀತಿ ಮಾಡಿದ್ದಾರೆ. ಯಾವೊಬ್ಬ ಬಿಜೆಪಿ ಕಾರ್ಯಕರ್ತನೂ ರಾಷ್ಟ್ರದ್ರೋಹಿ ಹೇಳಿಕೆ ನೀಡಲು ಸಾಧ್ಯವಿಲ್ಲ ಎಂದು ಖಾರವಾಗಿ ಹೇಳಿದರು.

ಶಿವರಾಮ್‌ ಹೆಬ್ಬಾರ್, ಎಸ್.ಟಿ.ಸೋಮಶೇಖರ್ ನಂತರ ಸಾಕಷ್ಟು ಜನ ಕಾಂಗ್ರೆಸ್ ಗೆ ಬರುತ್ತಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಆದರೆ, ಮುಳುಗಿ ಹೋಗುತ್ತಿರುವ ಹಡಗಿಗೆ ಯಾರು ಹೋಗುತ್ತಾರೆ. ಹೆಬ್ಬಾರ್, ಸೋಮಶೇಖರ್ ರಾಜ್ಯಸಭೆ ಚುನಾವಣೆ ವೇಳೆ ಗೈರಾದರು. ಅವರನ್ನು ಬಿಟ್ಟು ಮತ್ತಾರೂ ಬಿಜೆಪಿಯಿಂದ ಹೊರ ಹೋಗಲ್ಲ ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್ ನಲ್ಲಿ ಟಿಕೆಟ್‌ ಪಡೆಯಲು 100 ಕೋಟಿ ಕೊಡಬೇಕು ಎಂಬ ಆರೋಪ ಕೇಳಿಬಂದಿದೆ. 100 ಕೋಟಿ ರು. ಯಾರಿಗೆ ಕೊಡಬೇಕು?, ಯಾರು ತಗೊಂಡಿದ್ದಾರೆ? ಎಂಬ ಬಗ್ಗೆ ತನಿಖೆ ಆಗಬೇಕು. 100 ಕೋಟಿ ಯಾರಿಗೆ ತಲುಪುತ್ತಿದೆ ಎಂಬ ಬಗ್ಗೆ ಸಿಎಂ, ಡಿಸಿಎಂ ಸ್ಪಷ್ಟಪಡಿಬೇಕು. ಡಿ.ಕೆ.ಶಿವಕುಮಾರ್‌ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟಿರುವ ಬಗ್ಗೆ ನಾನು ಪ್ರಶ್ನೆ ಮಾಡಲ್ಲ, ಸ್ವಾಗತ ಮಾಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು

ಶಿವಮೊಗ್ಗ ನಗರದಲ್ಲಿ ಅತಿರುದ್ರ ಮಹಾಯಾಗ ಯಶಸ್ವಿಯಾಗಿ ನಡೆದಿದೆ. ಲೋಕ ಕಲ್ಯಾಣಕ್ಕಾಗಿ ಮತ್ತೊಮ್ಮೆ ನರೇಂದ್ರ ಮೋದಿ ಅಪೇಕ್ಷೆಯಿಂದ ಯಾಗ ನಡೆದಿದೆ. ನಿರೀಕ್ಷೆಗೂ ಮೀರಿ ಭಕ್ತರು ಭಾಗವಹಿಸಿದ್ದರು. 11 ಕುಂಡಗಳಲ್ಲಿ ಹೋಮ ಮಾಡಿದ್ದಾರೆ. ರಾಜ್ಯಕ್ಕೆ , ದೇಶಕ್ಕೆ ಒಳ್ಳೆಯದಾಗಲಿ ಎಂದು ಉಜ್ಜಯಿನಿ ಜಗದ್ಗುರು ಆಶೀರ್ವದಿಸಿದ್ದಾರೆ. ದೇಶ ಉಳಿಸಬೇಕಾದರೆ, ಧರ್ಮ ಉಳಿಯಬೇಕಾದರೆ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಮಂತ್ರಿಯಾಗಲಿ ಎಂದು ಹೋಮ, ಅತಿರುದ್ರ ಮಹಾಯಾಗ ನಡೆದಿದೆ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ತಿಳಿಸಿದರು.

Share this article