ನಸುಕಿನಲ್ಲಿ ಆರ್ಭಟಿಸಿದ ಆಶ್ಲೇಷ ಮಳೆ: ಜನ, ಜಾನುವಾರು ತತ್ತರ

KannadaprabhaNewsNetwork |  
Published : Aug 15, 2024, 01:46 AM ISTUpdated : Aug 15, 2024, 01:47 AM IST
(ಸಾಂದರ್ಭಿಕ ಚಿತ್ರ) | Kannada Prabha

ಸಾರಾಂಶ

ಕಳೆದ ಕೆಲವು ದಿನಗಳಿಂದ ಬಿಡುವು ಕೊಟ್ಟಿದ್ದ ಮಳೆ ಬುಧವಾರ ನಸುಕಿನಲ್ಲಿ ಏಕಾಏಕಿ ರಣ ಆರ್ಭಟದೊಂದಿಗೆ ಸುರಿದ ಪರಿಣಾಮ ಅನೇಕ ಮನೆಗಳ ಗೋಡೆ ಕುಸಿದು, ನೂರಾರು ಎಕರೆ ಅಡಕೆ, ತೆಂಗು, ಬಾಳೆ ತೋಟಗಳು, ಇತರೆ ಬೆಳೆಗಳು ಜಲಾವೃತವಾಗಿವೆ. ಹಳ್ಳ-ಕೊಳ್ಳಗಳು ತುಂಬಿ ಹರಿದಿವೆ.

- ರಣಮಳೆಗೆ ಸಾವಿರಾರು ಎಕರೆ ತೋಟ, ಗದ್ದೆಗಳು ಜಲಾವೃತ । ಹಳ್ಳ-ಕಾಲುವೆಗಳಿಗೆ ನುಗ್ಗಿದ ನೀರು - ನೀರಿನ ರಭಸಕ್ಕೆ ಕೊಚ್ಚಿ ಹೋದ ಮೆಕ್ಕೆಜೋಳ, ಭತ್ತ ಇತರೆ ಬೆಳೆಗಳು । ರೈತರಲ್ಲಿ ಹೆಚ್ಚಿದ ಆತಂಕ - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಕಳೆದ ಕೆಲವು ದಿನಗಳಿಂದ ಬಿಡುವು ಕೊಟ್ಟಿದ್ದ ಮಳೆ ಬುಧವಾರ ನಸುಕಿನಲ್ಲಿ ಏಕಾಏಕಿ ರಣ ಆರ್ಭಟದೊಂದಿಗೆ ಸುರಿದ ಪರಿಣಾಮ ಅನೇಕ ಮನೆಗಳ ಗೋಡೆ ಕುಸಿದು, ನೂರಾರು ಎಕರೆ ಅಡಕೆ, ತೆಂಗು, ಬಾಳೆ ತೋಟಗಳು, ಇತರೆ ಬೆಳೆಗಳು ಜಲಾವೃತವಾಗಿವೆ. ಹಳ್ಳ-ಕೊಳ್ಳಗಳು ತುಂಬಿ ಹರಿದಿವೆ.

ನಗರ, ಜಿಲ್ಲಾದ್ಯಂತ ಬುಧವಾರ ನಸುಕಿನ ವೇಳೆ ಭಾರೀ ಸಿಡಿಲು, ಗುಡುಗು, ಮಿಂಚಿನ ಆರ್ಭಟದೊಂದಿಗೆ ಮಳೆರಾಯ ಅಬ್ಬರಿಸಿದ್ದಾನೆ. ಸಿಹಿ ನಿದ್ದೆಯಲ್ಲಿದ್ದ ಜನರ ನಿದ್ದೆಗೆಡಿಸಿದ ಆಶ್ಲೇಷ ಮಳೆ ಸುಮಾರು 2 ತಾಸುವರೆಗೆ ಮುಂದುವರಿದಿತ್ತು. ತಗ್ಗುಪ್ರದೇಶಗಳಿಗೆ ಅಪಾರ ಪ್ರಮಾಣದಲ್ಲಿ ನೀರು ನುಗ್ಗಿದ್ದು, ಹೊಲ, ಗದ್ದೆ, ತೋಟಗಳು ಜಲಾವೃತವಾಗಿವೆ.

ಸಾವಿರಾರು ಎಕರೆ ಬೆಳೆ ಜಲಾವೃತ:

ತಾಲೂಕಿನ ಬಿ.ಕಲ್ಪನಹಳ್ಳಿ ಗ್ರಾಮದಲ್ಲಿ ಅಡಕೆ ತೋಟಗಳೆಲ್ಲಾ ಜಲಾವೃತವಾಗಿವೆ. ಊರಿನ ಮನೆಗಳಿಗೆ ನೀರು ನುಗ್ಗಿದೆ. ರೈತರಿಗೆ ಒಂದು ಮಳೆಯು ಖುಷಿ ತಂದರೆ, ಮತ್ತೊಂದು ಕಡೆ ರಾತ್ರೋರಾತ್ರಿ ಸಂಕಷ್ಟಗಳನ್ನು ತಂದೊಡ್ಡಿತು. ನಸುಕಿನ ವೇಳೆ ಸುರಿದ ಭಾರೀ ಮಳೆಯಿಂದಾಗಿ ದಾವಣಗೆರೆ ನಗರ, ಹೊರವಲಯದ ಪ್ರದೇಶದ ಸಾವಿರಾರು ಎಕರೆ ಬತ್ತದ ಬೆಳೆ ಮುಳುಗಡೆಯಾಗಿದೆ.

ಮುಂಗಾರು ಹಂಗಾಮಿಗೆ ಬತ್ತ ನಾಟಿ ಮಾಡಿದ್ದ ರೈತರು ಮಳೆ ಆರ್ಭಟದಿಂದಾಗಿ ತತ್ತರಿಸಿದರು. ಭದ್ರಾ ಅಣೆಕಟ್ಟೆಯಿಂದಲೂ ನಾಲೆಗಳಿಗೆ ನೀರು ಬಿಟ್ಟಿದ್ದು, ಮಳೆಯ ನೀರು ಸಹ ನಾಲೆಗೆ ನುಗ್ಗಿದ್ದರಿಂದ ತಗ್ಗು ಪ್ರದೇಶದ ಹೊಲ, ಗದ್ದೆ, ತೋಟಗಳು ನೋಡ ನೋಡುತ್ತಿದ್ದಂತೆಯೇ ಜಲಾವೃತವಾದವು. ಸಾವಿರಾರು ರು. ಸಾಲ ಮಾಡಿ, ಬತ್ತ ನಾಟಿ ಮಾಡಿದ್ದ ರೈತರು ಈಗ ಕಂಗಾಲಾಗಿದ್ದಾರೆ. ಏಕಾಏಕಿ ಅಪಾರ ಪ್ರಮಾಣದ ನೀರು ಬಂದಿದ್ದರಿಂದ ದಿನವಿಡೀ ಏನು ಮಾಡಬೇಕೆಂಬುದೇ ತೋಚದೇ ಚಿಂತಿತರಾಗಿದ್ದರು.

ತುಂಗಭದ್ರಾ ನದಿ ನೆರೆ ಭೀತಿ:

ಜೀವನದಿ ತುಂಗಭದ್ರಾ ನದಿ ನೆರೆ ಭೀತಿ ತಂದರೆ, ಭದ್ರಾ ನಾಲೆಗಳು ಜೋರು ಮಳೆಯಿಂದಾಗಿ ತುಂಬಿ ಹರಿದು ರೈತರ ಆತಂಕ ಹೆಚ್ಚಿಸಿವೆ. ನಸುಕಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಹಳ್ಳ ಕೊಳ್ಳಗಳಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಅಲ್ಲಲ್ಲಿ ಸಣ್ಣ ನೀರ ಝರಿಗಳು ಸೃಷ್ಟಿಯಾಗಿವೆ. ಅತ್ತ ಜಗಳೂರು ತಾಲೂಕಿನಲ್ಲೂ ಮಳೆಯ ಆರ್ಭಟ ಮುಂದುವರಿದಿತ್ತು. ರೈತರು ಆಶ್ಲೇಷ ಮಳೆಯಿಂದಾಗಿ ನೆಮ್ಮದಿ ನಿಟ್ಟಿಸಿರು ಬಿಟ್ಟರೆ, ಜಗಳೂರು ಪಟ್ಟಣದ ತಗ್ಗುಪ್ರದೇಶದ ಜನರು ದಿನವಿಡೀ ತೊಂದರೆ ಅನುಭವಿಸಿದರು.

ತಗ್ಗು ಪ್ರದೇಶಗಳಿಗೆ ನೀರು:

ಜಗಳೂರು ಪಟ್ಟಣದ ತಗ್ಗು ಪ್ರದೇಶದಲ್ಲಿ ಮನೆ ಕಟ್ಟಿಕೊಂಡವರ ಗೋಳು ಹೇಳತೀರದಂತಾಗಿತ್ತು. ಸೊಕ್ಕೆ ಗ್ರಾಮದಲ್ಲಿ ಶಿರಡಿ ಸಾಯಿಬಾಬಾ ದೇವಸ್ಥಾನ ಟ್ರಸ್ಟ್‌ನ ಟ್ರಸ್ಟಿ ಪ್ರೊ. ಜೆ.ಎಂ. ತಿಪ್ಪೇಸ್ವಾಮಿ ಅವರ ಅಡಕೆ ತೋಟಕ್ಕೆ ನೀರು ನುಗ್ಗಿ, ಸಾಕಷ್ಟು ಅನಾಹುತವಾಗಿದೆ. ಇಡೀ ತೋಟ ಕೆರೆಯಂತೆ ಭಾಸವಾಗುತ್ತಿದೆ. ತೋಟ, ಗದ್ದೆ, ಹೊಲದ ಬದುಗಳು ಮಳೆ ನೀರಿನ ಹೊಡೆತಕ್ಕೆ ಕೊಚ್ಚಿಹೋಗಿವೆ. ಉದ್ಧಗಟ್ಟ ಗ್ರಾಮದ ರೈತರ ಮೆಕ್ಕೆಜೋಳದ ಬೆಳೆ ಚಾಪೆ ಹಾಸಿದಂತೆ ಮಲಗಿದೆ. ಮೆಕ್ಕೆಜೋಳ, ಶೇಂಕಾ, ಅಡಕೆ, ನೀರುಳ್ಳಿ ಬೆಳೆಗಳನ್ನು ಬೆಳೆದಿದ್ದ ನೆಲಗಳು ಕೆರೆಗಳಾಗಿ ಮಾರ್ಪಟ್ಟಂತಾಗಿದೆ.

ಅರಿಶಿಣ ಗುಂಡಿ ಗ್ರಾಮದ ಅನೇಕ ಮನೆಗಳಿಗೆ ನೀರು ನುಗ್ಗಿದೆ. ಕಟ್ಟಿಗೆಹಳ್ಳಿ, ಬಿದರಕೆರೆ, ಕಲ್ಲೇದೇವರಪುರ, ಹನುಮಂತಾಪುರ, ಲಿಂಗಣ್ಣನ ಹಳ್ಳಿ, ತೋರಣಘಟ್ಟ, ಸೊಕ್ಕೆ ಹೋಬಳಿಯ ಲಕ್ಕಂಪುರ, ಗಡಿಮಾಕುಂಟೆ, ಕ್ಯಾಸೇನಹಳ್ಳಿ, ಬಿಳಿಚೋಡು ಹೋಬಳಿ ಗುತ್ತಿದುರ್ಗ, ದೇವಿಕೆರೆ, ಮೆದಗಿನ ಕೆರೆ, ಪಲ್ಲಾಗಟ್ಟೆ, ದಿದ್ದಿಗೆ, ದೊಣೆಹಳ್ಳಿು, ಹನುಮಂತಾಪುರ ಗ್ರಾಮಗಳಲ್ಲಿ ಜೋರು ಮಳೆಯಿಂದಾಗಿ ಊರು, ಹೊಲ, ಗದ್ದೆ ಜಲಾವೃತವಾಗಿ, ಕೆರೆ ಕಟ್ಟೆಗಳು ಭರ್ತಿಯಾಗಿವೆ.

ಜಗಳೂರಲ್ಲಿ 4 ಮನೆಗಳಿಗೆ ಹಾನಿ:

ದಾವಣಗೆರೆ, ಜಗಳೂರು ಸೇರಿದಂತೆ ಜಿಲ್ಲೆಯ ವಿವಿಧೆಡೆ ಮಳೆಯಿಂದ ಆಗಿರುವ ಹಾನಿಗಳು ವರದಿಯಾಗುತ್ತಿವೆ. ಜಗಳೂರು ತಾಲೂಕಿನಲ್ಲಿ ಮಳೆಯಿಂದಾಗಿ ನಾಲ್ಕು ಮನೆಗಳ ಗೋಡೆಗಳು ಕುಸಿದು ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ. ಜೋರು ಮಳೆಯಿಂದಾಗಿ ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿತ್ತು. ಅಲ್ಲಲ್ಲಿ ಮರಗಳು ಉರುಳಿದ, ವಿದ್ಯುತ್ ಕಂಬಗಳು ವಾಲಿರುವ ಬಗ್ಗೆ ಮಾಹಿತಿ ಬರುತ್ತಿವೆ.

ಹಲವಾರು ಕೆರೆಗಳಿಗೆ ಅಪಾರ ಪ್ರಮಾಣದಲ್ಲಿ ಹಳ್ಳಗಳ ಮೂಲಕ ನೀರು ಹರಿದುಬರುತ್ತಿದೆ. ಹೊಲ, ಗದ್ದೆ, ತೋಟಗಳು ಜಲಾವೃತವಾಗಿವೆ. ತುಪ್ಪದಹಳ್ಳಿ, ಲಕ್ಕಂಪುರ, ಬಿಳಿಚೋಡು, ಮುಷ್ಟಿಗರಹಳ್ಳಿ, ಚಿಕ್ಕಅರಕೆರೆ, ದೊಡ್ಡ ಅರಕೆರೆ, ಚದರಗೊಳ್ಳ, ಜಗಳೂರು ಸೇರಿದಂತೆ 30 ಕೆರೆಗಳಿಗೆ ಈಗಾಗಲೇ 57 ಕೆರೆ ತುಂಬಿಸುವ ಏತ ಕಾಮಗಾರಿಯಿಂದ ಶೇ.30ರಷ್ಟು ನೀರು ಹರಿದಿದ್ದು, ಮಳೆಯಿಂದ ಕೆರೆಗಳು ಶೇ.50ರಷ್ಟು ಭರ್ತಿ ಯಾಗಿವೆ.

- - -

ಬಾಕ್ಸ್‌ * ಜಗಳೂರಲ್ಲಿ ಮಳೆಹಾನಿ ಪರಿಶೀಲಿಸಿದ ತಹಸೀಲ್ದಾರ್, ಆರ್‌ಐ - 4 ಮನೆಗಳಿಗೆ ಹಾನಿ, ಪರಿಹಾರ ನೀಡಲು ಡಿಸಿಗೆ ವರದಿ ಜಗಳೂರು: ಭಾರಿ ಮಳೆಯಿಂದಾಗಿ ಹಾನಿಗೀಡಾದ ತಾಲೂಕಿನ ವಿವಿಧ ಪ್ರದೇಶಕ್ಕೆ ಭೇಟಿ ನೀಡಿದ್ದ ತಹಸೀಲ್ದಾರ್‌ ಸೈಯದ್ ಖಲೀಂವುಲ್ಲಾ, ಕಂದಾಯ ನಿರೀಕ್ಷಕ ಧನಂಜಯ ಜಿಲ್ಲಾಡಳಿತಕ್ಕೆ ಹಾನಿ ವರದಿ ಸಲ್ಲಿಸಲಿದ್ದಾರೆ.

ತಾಲೂಕಿನಲ್ಲಿ ಭಾರೀ ಮಳೆಯಿಂದಾಗಿ 4 ಮನೆಗಳ ಗೋಡೆಗಳು ಕುಸಿದಿವೆ. ಮಣ್ಣಿನ ಗೋಡೆಗಳ ಮನೆಗಳು ಮಳೆಯ ಹೊಡೆತಕ್ಕೆ ಕುಸಿದು ಬಿದ್ದಿದ್ದು, ಯಾವುದೇ ಪ್ರಾಣಹಾನಿ ಆಗಿಲ್ಲ. ಬುಧವಾರ ಬೆಳಗಿನ ಜಾವ 3ರಿಂದ 6 ಗಂಟೆವರೆಗೆ ಒಂದೇ ಸಮನೆ ಸುರಿದ ಭಾರೀ ಮಳೆಯಿಂದಾಗಿ ಗ್ರಾಮೀಣ ಪ್ರದೇಶದ ಮಣ್ಣಿನ ಗೋಡೆ ಮನೆ, ಹೆಂಚಿನ ಮನೆಗಳು, ತಗಡು, ಶೆಡ್ಡಿನ ಮನೆಗಳಿಗೆ ಹಾನಿಯಾಗಿದೆ. ಕೊಟ್ಟಿಗೆಗಳು, ಗೂಡುಗಳಲ್ಲಿದ್ದ ಪ್ರಾಣಿಗಳು, ಪಕ್ಷಿಗಳು ಪರದಾಡಿದವು.

ಚಿಕ್ಕ ಮಲ್ಲನಹೊಳೆ ಗ್ರಾಮದ ಶಾರದಮ್ಮ ಅವರ ಕಲ್ಲಿನ ಮನೆಯ ಗೋಡೆ ಕುಸಿದು ಭಾಗಶಃ ಹಾನಿಯಾಗಿದೆ. ಮೆದಿಕೇರನಹಳ್ಳಿ ಗ್ರಾಮದ ಹಾಲಮ್ಮ ಅವರ ಮಾಳಿಗೆ ಮನೆ ಕುಸಿದುಬಿದ್ದು ಮನೆ ಮಂದಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರವಾಗಿದ್ದಾರೆ. ಸಿದ್ದಮ್ಮನಹಳ್ಳಿಯಲ್ಲಿ ಮಾಳಿಗೆ ಮನೆಯ ಗೋಡೆ ಕುಸಿದಿದ್ದರಿಂದ ಇಡೀ ಮನೆ ಮನೆ ನೆಲಸಮ ಆಗಿದೆ. ಹಾನಿ ಸ್ಥಳಗಳಿಗೆ ಅಧಿಕಾರಿಗಳು ಭೇಟಿ ನೀಡಿದ್ದು, ಸಂತ್ರಸ್ತರಿಗೆ ಎನ್‍ಡಿಆರ್‌ಎಫ್ ನಿಯಮಾನುಸಾರ ಪರಿಹಾರ ನೀಡಲು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸುವುದಾಗಿ ಹೇಳಿದ್ದಾರೆ.

- - -

-14ಕೆಡಿವಿಜಿ2, 3: ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನಲ್ಲಿ ಭಾರೀ ಮಳೆಯಿಂದಾಗಿ ಅಡಕೆ ತೋಟ ಜಲಾವೃತವಾಗಿದೆ.-14ಕೆಡಿವಿಜಿ4, 5: ದಾವಣಗೆರೆ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ನೆಲಕಚ್ಚಿದ ಬೆಳೆಗಳು.

-14ಕೆಡಿವಿಜಿ6, 7: ದಾವಣಗೆರೆ ಜಿಲ್ಲೆಯಲ್ಲಿ ಬುಧವಾರ ನಸುಕಿನಲ್ಲಿ ಭಾರೀ ಮಳೆಯಿಂದಾಗಿ ಬೆಳೆಗಳು ಮಳೆ ಹೊಡೆತಕ್ಕೆ ನೆಲ ಕಚ್ಚಿವೆ. -14ಕೆಡಿವಿಜಿ8: ದಾವಣಗೆರೆ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಹಳ್ಳ-ಕೊಳ್ಳಗಳು ರಾತ್ರೋರಾತ್ರಿ ತುಂಬಿ, ದಿನವಿಡೀ ಹರಿಯುತ್ತಿದ್ದುದರಿಂದ ಅನೇಕ ಕಡೆ ಸಣ್ಣ ಸೇತುವೆಗಳು ಮುಳುಗಡೆಯಾಗಿ ಸಂಪರ್ಕ ಕಡಿತವಾಗಿವೆ. -14ಕೆಡಿವಿಜಿ9: ಜಗಳೂರು ತಾಲೂಕಿನಲ್ಲಿ ಭಾರಿ ಮಳೆಯಿಂದಾಗಿ ಹಳೇ ಮಣ್ಣಿನ ಗೋಡೆಯ ಮನೆಯೊಂದು ಕುಸಿದಿದೆ.

-14ಕೆಡಿವಿಜಿ10, 11: ಜಗಳೂರಿನಲ್ಲಿ ಬುಧವಾರ ನಸುಕಿನಲ್ಲಿ ಭಾರೀ ಮಳೆಯಿಂದಾಗಿ ಮನೆ ಕುಸಿದು ಬಿದ್ದು ಸಂತ್ರಸ್ತ ಜನರು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ