ಶಿವಾನಂದ ಮಹಾಬಲಶೆಟ್ಟಿ
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿದಿನದಿಂದ ದಿನಕ್ಕೆ ಬಿಸಿಲು ಪ್ರಖರವಾಗುತ್ತಲಿದೆ. ಇತ್ತ ಕೃಷ್ಣಾ ನದಿ ಪಾತ್ರದ ನೀರು ಖಾಲಿಯಾಗುವತ್ತ ಸಾಗಿದೆ. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿಭಾಯಿಸಲು ನಗರಸಭೆ ಸಿದ್ಧತೆ ಮಾಡಿಕೊಂಡಿದೆ. ಸದ್ಯಕ್ಕೆ ಸಮಸ್ಯೆ ಇಲ್ಲವಾದರೂ ಇದೇ ಪರಿಸ್ಥಿತಿ ಮುಂದುವರಿದರೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುವ ಆತಂಕ ಅವಳಿ ನಗರದ ಜನತೆ ಹಾಗೂ ನಗರಸಭೆ ಅಧಿಕಾರಗಳನ್ನು ಕಾಡುತ್ತಿದೆ.
ತಾಲೂಕಿನ ಕೂಗಳತೆಯಲ್ಲಿರುವ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿದ ರಬಕವಿ ಮಹಿಷವಾಡಗಿ ಬ್ರಿಡ್ಜ್‌ನಲ್ಲಿ ಈಗ ಕೇವಲ 2.6 ಟಿಎಂಸಿ ಮಾತ್ರ ಸಂಗ್ರಹವಿದೆ. ಈಗ ಕೃಷ್ಣಾ ನದಿ ಅಕ್ಕಪಕ್ಕದ ರೈತಾಪಿ ಜನರು ತಮ್ಮ ಜಮೀನುಗಳಿಗೆ ನದಿಯಿಂದ ನೀರು ಬಳಸುತ್ತಾರೆ. ಆದರೆ ಕಳೆದ ವರ್ಷ ಏಪ್ರಿಲ್ ತಿಂಗಳ ಮೊದಲ ವಾರದಿಂದ ದಿನಕ್ಕೆ ಕೇವಲ 3 ಗಂಟೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದರು. ಆದರೆ ಈ ವರ್ಷ 7 ಗಂಟೆ ವಿದ್ಯುತ್ ಸಂಪರ್ಕ ಇರುವುದರಿಂದ ನೀರು ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುವ ಸಾಧ್ಯತೆ ಇದೆ. ಅಲ್ಲದೆ ಬಿಸಿಲಿನ ಪ್ರಖರತೆ ಹೆಚ್ಚುತ್ತಿದ್ದು, ಇದರಿಂದ ನದಿನೀರಿನ ಬಾಷ್ಪೀಕರಣ ಕ್ರಿಯೆ ತೀವ್ರಗೊಂಡು ನದಿ ನೀರು ಸಂಗ್ರಹಣೆ ಇಳಿಕೆಯಾಗುವ ಭೀತಿಯಿದೆ ಎನ್ನುತ್ತಾರೆ ಕೆಲ ಅಧಿಕಾರಿಗಳು.ನದಿಯಲ್ಲಿ ಈಗ ಸಂಗ್ರಹವಿರುವ ನೀರು ಬೇಸಿಗೆಯವರೆಗೂ ಸಾಕಾಗುತ್ತದೆ. ಆದರೆ ಒಂದು ವೇಳೆ ಚಿಕ್ಕಪಡಸಲಗಿ ಭಾಗದ ಜನರು ಇಲ್ಲಿ ಸಂಗ್ರಹವಿದ್ದ ನೀರಲ್ಲಿ ಅರ್ಧ ಟಿಎಂಸಿ ಬಿಡುಗಡೆ ಮಾಡಿದರೆ ಅವಳಿ ನಗರ ಸೇರಿದಂತೆ ತೇರದಾಳ, ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ವ್ಯಾಪ್ತಿಯ ಜನತೆಗೆ ನೀರಿನ ಕೊರತೆಯಾಗುವ ಸಾಧ್ಯತೆ ಇದೆ.
ಏಪ್ರಿಲ್ ಮೊದಲ ವಾರದಲ್ಲಿಯೇ ಕೇವಲ 2 ಟಿಎಂಸಿಯಷ್ಟು ಮಾತ್ರ ಹಿಪ್ಪರಗಿ ಜಲಾಶಯದಲ್ಲಿ ನೀರು ಸಂಗ್ರಹವಾಗಿರುತ್ತಿತ್ತು. ಆದರೆ ಈ ಬಾರಿ ಮಾರ್ಚ್ ಕೊನೆಯ ವಾರದವರೆಗೂ 2.6 ಟಿಎಂಸಿ ನೀರು ಸಂಗ್ರಹವಾಗಿದೆ. ಆದರೂ ಬಳಕೆ ಮಾಡುವವರು ಹಿತಮಿತವಾಗಿ ಬಳಸಿದರೆ ಈ ಬೇಸಿಗೆಯಲ್ಲಿ ಕುಡಿಯುವ ನೀರಿನ ಕೊರತೆ ಆಗುವುದಿಲ್ಲ ಎಂಬುದು ನಗರಸಭೆ ಪೌರಾಯುಕ್ತ ಜಗದೀಶ ಈಟಿ ಅಭಿಪ್ರಾಯ.ಹಿಪ್ಪರಗಿ ಜಲಾಶಯ ಒಟ್ಟು 6 ಟಿಎಂಸಿ ಸಾಮರ್ಥ್ಯ ಹೊಂದಿದ್ದು, ಈಗ ಎಲ್ಲ 12 ಗೇಟ್ ಬಂದ್ ಮಾಡಲಾಗಿದೆ. ಜಲಾಶಯದಲ್ಲಿ ಈಗ ಒಟ್ಟು 2.6 ಟಿಎಂಸಿ ನೀರು ಸಂಗ್ರಹವಿದ್ದು, ಇದೇ ನೀರನ್ನು ಅವಳಿ ನಗರದ ಹಾಗೂ ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಸೇರಿದಂತೆ ಸಸಾಲಟ್ಟಿ, ಗೊಲಬಾವಿ, ತೇರದಾಳ ಪಟ್ಟಣಗಳು ನದಿ ನೀರನ್ನೆ ಅವಲಿಂಬಿಸಿವೆ. ಈಗಿರುವ ನೀರು ಸಮರ್ಪಕವಾಗಿ ಬಳಸಿಕೊಂಡರೆ ಬೇಸಿಗೆ ಮುಗಿಯುವರೆಗೂ ನೀರಿನ ತೊಂದರೆಯಾಗುವುದಿಲ್ಲ ಎಂದವರು ಅಭಯ ನೀಡಿದ್ದಾರೆ.
ಅವಳಿ ನಗರದ 31 ವಾರ್ಡ್‌ಗಳಲ್ಲಿ ಕೊಳವೆ ಬಾವಿಗಳು, ಮತ್ತು ನೀರು ತುಂಬಿರುವ ಬಾವಿಗಳಿಂದ ತಾತ್ಕಾಲಿಕ ಪೈಪ್‌ಲೈನ್ ವ್ಯವಸ್ಥೆ ಈಗಾಗಲೇ ಸಜ್ಜಾಗಿದೆ. ಬರ ನಿರ್ವಹಣೆ ಅನುದಾನ ಕೂಡ ಇರುವುದರಿಂದ, ನೀರಿನ ಕೊರತೆ ಆಗದ ಹಾಗೆ ಪೂರ್ವನಿಯೋಜಿತವಾಗಿ ಕ್ರಿಯಾಯೋಜನೆ ತಯಾರಿಸಿ ಕುಡಿಯುವ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಲು ನಗರಸಭೆ ಸನ್ನದ್ಧವಾಗಿದೆ. ಸಾರ್ವಜನಿಕರು ನಗರಸಭೆಯೊಂದಿಗೆ ಕೈಜೋಡಿಸಿ ಹಿತಮಿತವಾಗಿ ನೀರು ಬಳಸಿದರೆ ಈ ಬೇಸಿಗೆ ದಾಟಲು ಸಾಧ್ಯವಿದೆ ಎಂದು ಪೌರಾಯುಕ್ತ ಜಗದೀಶ ಈಟಿ ನೀರಿನ ಮಿತ ಬಳಕೆಗೆ ಜನತೆಯಲ್ಲಿ ವಿನಂತಿಸಿದ್ದಾರೆ.ಯುಕೆಪಿ 3ನೇ ಹಂತಕ್ಕೆ ನಯಾಪೈಸೆ ಹಣ ನೀಡದೆ ರಾಜ್ಯ ಸರ್ಕಾರ ಸತತವಾಗಿ ಉತ್ತರ ಕರ್ನಾಟಕದ ಜನತೆಗೆ ಮೋಸ ಎಸಗಿದೆ. ಸಾಲದ್ದಕ್ಕೆ ಡಿಸಿಎಂ ಕಾಂಗ್ರೆಸ್ ಹೈಕಮಾಂಡ್ ಮೆಚ್ಚುಗೆ ಪಡೆಯಲು ಕೃಷ್ಣೆಯ 10 ಟಿಎಂಸಿ ನೀರನ್ನು ತೆಲಂಗಾಣ ರಾಜ್ಯಕ್ಕೆ ಹರಿಸಿದ್ದರಿಂದ ಕೃಷ್ಣೆಯ ಒಡಲು ಬರಿದಾಗಿದೆ. ರಾಜ್ಯ ಸರ್ಕಾರದ ಬಾಲಿಶ ಕ್ರಮದಿಂದ ಉತ್ತರ ಕರ್ನಾಟಕದ ಕೃಷ್ಣಾ ಪಾತ್ರದ ಜನತೆ ನೀರಿಗೆ ತತ್ವಾರ ಎದುರಿಸುವಂತಾಗಿದೆ. ನದಿ ಆಶ್ರಿತ ರೈತರ ಹಿತ ಕಾಯಲು ಮಹಾರಾಷ್ಟ್ರದ ಕೋಯ್ನಾ ಜಲಾಶಯದಿಂದ ಹಣ ಕೊಟ್ಟಾದರೂ ಕೃಷ್ಣೆಗೆ ಕನಿಷ್ಟ 4 ಟಿಎಂಸಿ ನೀರು ಬಿಡಿಸಬೇಕು.
- ಸಂಜಯ ವೀರಪ್ಪ ತೆಗ್ಗಿ ಮಾಜಿ ನಗರಾಧ್ಯಕ್ಷರು, ಸದಸ್ಯರು ನಗರಸಭೆ ರಬಕವಿ-ಬನಹಟ್ಟಿಅವಳಿ ನಗರಸ ಜನತೆಗೆ ಕುಡಿಯುವ ನೀರಿನ ಕೊರತೆಯಾಗದಂತೆ ಮುಂಜಾಗ್ರತಾ ಕ್ರಮವಾಗಿ ನಗರಸಭೆ ತನ್ನ ವ್ಯಾಪ್ತಿಯ ಬಾವಿಗಳಿಗೆ ಸಂಪರ್ಕ ಕಲ್ಪಿಸಿ ನಳದ ಮೂಲಕ ನೀರು ಪೂರೈಸಲು ಸನ್ನದ್ಧವಾಗಿದೆ. ಯಾವುದೇ ಕಾರಣಕ್ಕೂ ನಾಗರಿಕರಿಗೆ ನೀರಿನ ಕೊರತೆಯಾಗದಂತೆ ಬರ ನಿರ್ವಹಣೆ ಅನುದಾನ ಬಳಸಲಾಗುತ್ತದೆ. ಜನತೆ ಯಾವುದಕ್ಕೂ ಭಯ ಪಡದೇ ನೀರನ್ನು ಮಿತವಾಗಿ ಬಳಸುವ ಮೂಲಕ ನಗರಸಭೆ ಜೊತೆಗೆ ಸಹಕರಿಸಬೇಕು.
- ಜಗದೀಶ ಈಟಿ, ಪೌರಾಯುಕ್ತರು, ನಗರಸಭೆ, ರಬಕವಿ-ಬನಹಟ್ಟಿ