ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಸ್ವಾತಂತ್ರ್ಯೋತ್ಸವವು ರಾಷ್ಟ್ರಕ್ಕೆ ಮಹತ್ವದ ದಿನಾಚರಣೆ. ಮಹಾನ್ ನಾಯಕರ ತ್ಯಾಗ ಬಲಿದಾನ ಹೋರಾಟದ ಫಲವಾಗಿ ದಾಸ್ಯದ ಸಂಕೋಲೆಯಿಂದ ಹೊರಬಂದ ಅಪೂರ್ವ ದಿನ ಇದಾಗಿದೆ ಎಂದು ಮುರುಘ ರಾಜೇಂದ್ರ ಬೃಹನ್ಮಠ ಆಡಳಿತ ಮಂಡಳಿಯ ಅಧ್ಯಕ್ಷ ಶಿವಯೋಗಿ ಸಿ.ಕಳಸದ ಹೇಳಿದರು.ಮಲ್ಲಿಕಾರ್ಜುನ ಮುರುಘ ರಾಜೇಂದ್ರ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಗುರುವಾರ ಆಯೋಜಿಸಲಾಗಿದ್ದ 78ನೇ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸ್ವಾತಂತ್ರ್ಯದ ಹಬ್ಬ ನಾಡಿಗೆ ಮಾತ್ರವಲ್ಲ ಪ್ರಪಂಚದಾದ್ಯಂತ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ನಾಯಕರ ತ್ಯಾಗ ಬಲಿದಾನಗಳನ್ನು ಸ್ಮರಿಸಿಕೊಳ್ಳಬೇಕು. ನಮ್ಮದು ಹೆಮ್ಮೆಯ ನಾಡು. ಇಂದಿನ ಯುವಪೀಳಿಗೆ ನಾಡಿನ ಉತ್ತಮ ಪ್ರಜೆಯಾಗಿ ರೂಪುಗೊಂಡು ಸಮಾಜಕ್ಕೆ ಉತ್ತಮ ಕಾಣಿಕೆ ನೀಡುವ ಜವಾಬ್ದಾರಿ ಹೊರಬೇಕು ಎಂದರು.ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು. ಯುವಪೀಳಿಗೆ ದೇಶದ ಅತಿ ದೊಡ್ಡ ಶಕ್ತಿಯಾಗಿದೆ. ಶ್ರೀ ಮಠವು ಶತಮಾನಗಳ ಇತಿಹಾಸವನ್ನು ಹೊಂದಿದೆ. ಶ್ರೀ ಮಠದ ಹಿಂದಿನ ಪೂಜ್ಯರು ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ಸರ್ಕಾರ ನಮ್ಮನ್ನು ಶ್ರೀ ಮಠ ಮತ್ತು ವಿದ್ಯಾಪೀಠಕ್ಕೆ ನೇಮಕ ಮಾಡಿದಾಗಿನಿಂದ ಅನೇಕ ಜನಪರ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದರು.ಶ್ರೀಮಠಕ್ಕೆ ಸಂಬಂಧಿಸಿದ ಅನೇಕ ಶಾಖಾಮಠಗಳ ಜೀರ್ಣೋದ್ಧಾರ ಕಾರ್ಯಗಳನ್ನು ಕೈಗೊಂಡಿದ್ದೇವೆ. ಸಮಸ್ಯೆಗಳಿಗೆ ಒಳಗಾಗಿದ್ದ ಕೆಲವು ಆಸ್ತಿಗಳನ್ನು ರಕ್ಷಣೆ ಮಾಡಲಾಗುತ್ತಿದೆ. ಅನೇಕ ಶಾಲಾ ಕಾಲೇಜುಗಳ ಕಟ್ಟಡ ಕಾಮಗಾರಿಗಳು ತ್ವರಿತಗತಿಯಲ್ಲಿ ನಡೆಯುತ್ತಿವೆ. ಎಸ್ ಜೆಎಂ ನರ್ಸಿಂಗ್ ಕಾಲೇಜಿಗೆ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ಮಾಡಲಾಗಿದ್ದು, ಹತ್ತು ತಿಂಗಳಲ್ಲಿ ಕಟ್ಟಡ ಕಾಮಗಾರಿ ಪೂರೈಸಲು ಸೂಚಿಸಲಾಗಿದೆ.ತರೀಕೆರೆಯಲ್ಲಿ ಹೊಸದಾಗಿ ಫಾರ್ಮಸಿ ಕಾಲೇಜು ಆರಂಭಿಸುತ್ತಿದ್ದು, ಈ ವರ್ಷದಿಂದಲೇ ಪ್ರವೇಶ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಇದೆಕ್ಕೆಲ್ಲಾ ಆಡಳಿತ ಮಂಡಳಿ ಸದಸ್ಯರು, ಸಂಸ್ಥೆಯ ಸಮಸ್ತ ನೌಕರರ ಸಹಕಾರ ಇರುವುದು ಸಂತಸವೇ ಸರಿ. ಮುಂದಿನ ದಿನಗಳಲ್ಲಿ ಸಂಸ್ಥೆಯು ಹತ್ತು ಹಲವು ಯೋಜನೆಗಳ ಮೂಲಕ ಶಿಕ್ಷಣ ಸಂಸ್ಥೆಗಳನ್ನು ಬೆಳೆಸುವ ಯೋಜನೆ ಹಾಕಿಕೊಳ್ಳಲಾಗಿದೆ. ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಒತ್ತು ನೀಡಲಾಗುವುದು ಎಂದು ಹೇಳಿದರು. ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮಿಗಳು ಮಾತನಾಡಿ, ನೌಕರರ ಶ್ರಮದಿಂದ ವಿದ್ಯಾಪೀಠ ಇಷ್ಟೊಂದು ಎತ್ತರಕ್ಕೆ ಬೆಳೆದಿದೆ. ವ್ಯಕ್ತಿ ತನಗಾಗಿ ಬದುಕಬಾರದು ದೇಶಕ್ಕಾಗಿ ಬದುಕಬೇಕು. ಕ್ರಿಯಾಶೀಲತೆಯಿಂದ ನಮ್ಮ ಬದುಕನ್ನು ರಾಷ್ಟ್ರಕ್ಕಾಗಿ ಮೀಸಲಿಡಬೇಕು. ಅದು ಮೌಲ್ಯಯುತವಾಗಿರಬೇಕೆಂದರು.ವಿದ್ಯಾಪೀಠದ ವಿವಿಧ ಶಾಲಾ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನೌಕರರಿಗೆ, ಪಿಎಚ್ ಡಿ ಪದವಿ ಪಡೆದವರಿಗೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ, ರ್ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ ಅಧ್ಯಕ್ಷರು ಮತ್ತು ಶ್ರೀಗಳು ಸನ್ಮಾನಿಸಿ ಗೌರವಿಸಿದರು. ವಿದ್ಯಾಸಂಸ್ಥೆಯ ಶಾಲಾ ಕಾಲೇಜುಗಳ 14 ತಂಡಗಳು ಆಕರ್ಷಕ ಪಥಸಂಚಲನ ನಡೆಸಿದವು.