ಕನ್ನಡಪ್ರಭ ವಾರ್ತೆ ಶಿವಮೊಗ್ಗ
ರಾಜ್ಯ ಸರ್ಕಾರಕ್ಕೆ ರಾಮನ ಶಾಪ ತಟ್ಟುತ್ತದೆ ಎಂದು ಆರ್.ಅಶೋಕ್ ಹೇಳಿದ್ದಾರೆ. ಯಾವ ರಾಮನದು? ಅಯೋಧ್ಯೆಯ ರಾಮನಾ? ಪ್ರತಿ ಊರಲ್ಲಿ ರಾಮನಿದ್ದಾನೆ. ಅವರೇನು ರಾಮನನ್ನು ಅಡವಿಟ್ಟು ಕೊಂಡಿದ್ದಾರಾ? ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿರುಗೇಟು ನೀಡಿದರು.ಸೋಮವಾರ ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಷ್ಟ್ರಧ್ವಜಕ್ಕೆ ಗೌರವ ಕೊಡುವುದು ನಮ್ಮ ಕರ್ತವ್ಯ. ಇದರಲ್ಲಿ ಬಿಜೆಪಿಯವರು ರಾಜಕೀಯ ಮಾಡುವುದು ಸರಿಯಲ್ಲ. ಪ್ರತಿಯೊಂದರಲ್ಲೂ ರಾಜಕೀಯ ಮಾಡುವುದು ಬಿಜೆಪಿಯ ಅಭ್ಯಾಸವಾಗಿದೆ. ಮನಸ್ಸಿಗೆ ಬಂದಂತೆ ನಡೆದುಕೊಳ್ಳುವುದು ಸರಿಯಲ್ಲ ಎಂದರು.
ಆರ್.ಅಶೋಕ್ ಡಿಸಿಎಂ ಆಗಿದ್ದವರು. ಯಾವ ರೀತಿಯಲ್ಲಿ ನಡೆದುಕೊಳ್ಳಬೇಕು ಎಂದು ಅವರಿಗೆ ಗೊತ್ತಿರಬೇಕು. ರಾಮನ ಹೆಸರಿನಲ್ಲಿ ರಾಜಕೀಯ ಮಾಡಲು ನಾಚಿಕೆ ಆಗಬೇಕು. ನನ್ನ ಪ್ರಕಾರ ಆರ್.ಅಶೋಕ್ ಅವರು ಹಿಂದು ವಿರೋಧಿ. ರಾಮನನ್ನು ಮುಂದಿಟ್ಟುಕೊಂಡು ಬಿಜೆಪಿ ರಾಜಕೀಯ ಮಾಡುತ್ತಿದೆ. ರಾಮನನ್ನು ಬೀದಿಗೆ ತಂದು ನಿಲ್ಲಿಸಿದ್ದಾರೆ. ಇಷ್ಟು ದಿನ ರಾಮ ಮತ್ತು ಅಯೋಧ್ಯೆಯ ಹೆಸರಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಕುಟುಕಿದರು.ಅಯೋಧ್ಯೆಗೆ ಬಿಜೆಪಿಯ ಬಹಳಷ್ಟು ಜನ ಇನ್ನೂ ಹೋಗಿಲ್ಲ. ಅಯೋಧ್ಯೆಗೆ ಹೋದವರಲ್ಲ ಪವಿತ್ರರೇ? ಹೋಗದವರು ಬಿಜೆಪಿಗೆ ದ್ರೋಹಿಗಳಾ? ಮಾತು ಎತ್ತಿದರೆ ಪಾಕಿಸ್ತಾನಕ್ಕೆ ಹೋಗಿ ಎಂದು ಹೇಳುತ್ತಾರೆ. ಈಗ ಅವರಿಗೆ ಮಾಡಲು ಬೇರೆ ಕೆಲಸವಿಲ್ಲ. ಹೀಗಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಅವರು ಪ್ರತಿಭಟನೆ ಮಾಡಲಿ ಅದು ಅವರ ಹಕ್ಕು ಎಂದರು.
ನಾವು ನಮ್ಮ ಗ್ಯಾರಂಟಿ ಮೂಲಕ ಜನರನ್ನು ತಲುಪುತ್ತೇವೆ. ಬಿಜೆಪಿಯವರು ಇಂತಹ ಒಂದು ಯೋಜನೆಯನ್ನು ಜಾರಿಗೊಳಿಸಿದ ಉದಾಹರಣೆ ಇಲ್ಲ. ಚಿತ್ರದುರ್ಗದಲ್ಲಿ ನಡೆದ ಅಹಿಂದ ಸಮಾವೇಶದಲ್ಲಿ ಕಾಂತರಾಜ ವರದಿ ಸ್ವೀಕಾರ ಕುರಿತ ಚರ್ಚೆಯಾಗಿದೆ. ಮುಖ್ಯಮಂತ್ರಿ ನಿರ್ಧಾರವೇ ನಮ್ಮ ನಿರ್ಧಾರ. ಈ ವಿಷಯದಲ್ಲಿ ಬೇರೆ ನಿಲುವೇ ಇಲ್ಲ ಎಂದು ಹೇಳಿದರು.ಸಿಎಂ ಪದ ಬಳಕೆ ಬಗ್ಗೆ ನಾನೇ ಕ್ಷಮೆ ಕೇಳುತ್ತೇನೆ:
ರಾಷ್ಟ್ರಪತಿ ದ್ರೌಪತಿ ಮುರ್ಮು ಅವರನ್ನು ಸಿಎಂ ಏಕವಚನದಲ್ಲಿ ಸಂಬೋಧಿಸಿದ ವಿಷಯವಾಗಿ ಪ್ರತಿಕ್ರಿಯಿಸಿದ ಅವರು, ಸಿಎಂ ಸ್ವಾಭಾವಿಕವಾಗಿ ಈ ಪದ ಬಳಸಿದ್ದಾರೆ. ಹಿಂದೆ ನಮ್ಮ ಗ್ಯಾರಂಟಿಗಳ ಬಗ್ಗೆ ಪುಕ್ಸಟ್ಟೆ ಎಂಬ ಪದ ಬಳಸಿದ್ದರು. ಹಾಗೆಂದ ಮಾತ್ರಕ್ಕೆ ಅಗೌರವ ಎಂದು ಅರ್ಥ ಕಲ್ಪಿಸುವುದು ಬೇಡ. ಅಲ್ಲಿ ಅವರ ಬಾಡಿ ಲಾಂಗ್ವೇಜ್ ಟಗರು ಸೂಚಿಸುವ ರೀತಿಯಲ್ಲಿ ಇರಲಿಲ್ಲ. ನಾವು ಸಿಎಂ ಅವರ ಕಾಳಜಿಯನ್ನ ಗಮನಿಸಬೇಕು. ಹಾಗೇ ನೋಡಿದರೆ ಬಿಜೆಪಿಯವರೇ ರಾಷ್ಟ್ರಪತಿ ಅವರನ್ನು ಅವಮಾನಿಸಿದ್ದಾರೆ. ಅಯೋಧ್ಯೆಗೆ ರಾಷ್ಟ್ರಪತಿಯನ್ನೇ ಕರೆಯಲಿಲ್ಲ. ಸಿಎಂ ಪದ ಬಳಕೆ ಬಗ್ಗೆ ನಾನೇ ಕ್ಷಮೆ ಕೇಳುತ್ತೇನೆ ಎಂದರು.ರಾಷ್ಟ್ರಪತಿ ಬಗ್ಗೆ ಸಿಎಂ ಪದ ಬಳಿಕ ಬಗ್ಗೆ ಬೊಬ್ಬೆ ಹೊಡೆಯುತ್ತಿರುವ ಬಿಜೆಪಿಯವರು ಸಿಎಂ ಕಾಳಜಿಗೆ ಯಾರು ಉತ್ತರ ನೀಡುತ್ತಾರೆ. ಬಿಜೆಪಿಯವರು ಅಯೋಧ್ಯೆಗೆ ಅವರನ್ನು ಕರೆದರೆ ಅಪವಿತ್ರ ಆಗುತ್ತಿತ್ತಾ, ಕರೆಯದ ಮಾತ್ರಕ್ಕೆ ಪವಿತ್ರ ಆಯ್ತಾ. ಅಯೋಧ್ಯೆಗೆ ಕರೆದು ಮಾನವೀಯತೆ ತೋರಿಸಬೇಕಿತ್ತು ಎಂದು ಕಿಡಿಕಾರಿದರು. ರಾಜ್ಯದ 28 ಲೋಕಸಭಾ ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಬಿಜೆಪಿಯವರು ಹೇಳಿಕೊಳ್ಳಲಿ ಅದರ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಫಲಿತಾಂಶ ಏನಾಗಿತ್ತು. 150 ಸ್ಥಾನಗಳನ್ನು ಗೆಲ್ಲುತ್ತೇವೆ ಎಂಬ ಅವರ ಮಾತು ಎಲ್ಲಿಗೆ ಹೋಯಿತು ಎಂದು ಪ್ರಶ್ನಿಸಿದರು. ಇಂಡಿಯಾ ಒಕ್ಕೂಟದಿಂದ ಹೊರಗೆ ಹೋಗಿರುವ ನಿತೀಶ್ ಕುಮಾರ್ ಅವರ ನಿರ್ಧಾರ ಸರಿಯಲ್ಲ. ಅವರು ಹೋಗಿದ್ದಾರೆ ನಾವೇನು ಮಾಡಲು ಆಗುವುದಿಲ್ಲ. ಈ ಬದಲಾವಣೆ ಜನರಲ್ಲಿ ಗೊಂದಲ ಮೂಡಿಸುತ್ತದೆ. ಅವರು ಒಕ್ಕೂಟವನ್ನು ಬಿಟ್ಟು ಹೋದ ಮಾತ್ರಕ್ಕೆ ನಾವು ಹೆದರುವುದಿಲ್ಲ ಎಂದರು.ರಾಘವೇಂದ್ರ ಅವರನ್ನು ಗೆಲ್ಲಿಸಿ ಎಂಬ ಶಾಮನೂರು ಶಿವಶಂಕರಪ್ಪ ಹಿರಿಯರಾಗಿ ಆಶೀರ್ವಾದ ಮಾಡುವುದನ್ನು ತಪ್ಪು ಎಂದು ಹೇಳಲಾಗುವುದಿಲ್ಲ. ಹಿಂದೆ ಯಡಿಯೂರಪ್ಪ ಸಹ ಎಂಬಿ ಪಾಟೀಲ್ ಅವರಿಗೆ ಆಶೀರ್ವಾದ ಮಾಡಿದ್ದರು. ಎಂ.ಬಿ ಪಾಟೀಲ್ ಉತ್ತಮ ಕೆಲಸ ಮಾಡಿದ್ದಾರೆ ಎಂದು ಹೇಳಿದ್ದರು. ದಿವಂಗತ ಎಂ.ಪಿ. ಪ್ರಕಾಶ್ ಸಹ ಹಿಂದೆ ನನ್ನನ್ನು ಅದೇ ರೀತಿ ಆಶೀರ್ವದಿಸಿದ್ದರು. ಹಾಗೆಂದ ಮಾತ್ರಕ್ಕೆ ನಾವು ಆ ಪಕ್ಷಕ್ಕೆ ಸೇರಿದ್ದೇವೆ ಎಂದು ಅರ್ಥ ಅಲ್ಲ. ಶಿವಮೊಗ್ಗ ರಾಜಕಾರಣಕ್ಕೂಅದಕ್ಕೂ ಸಂಬಂಧವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.-----------------------ಪೋಟೋ: 29ಎಸ್‌ಎಂಜಿಕೆಪಿ05: ಮಧು ಬಂಗಾರಪ್ಪ