ಕೊರತೆಗಳ ನಡುವೆ ಸೊರಗಿದ ಐಟಿಐ ಕಾಲೇಜ್

KannadaprabhaNewsNetwork | Published : Mar 1, 2024 2:15 AM

ಸಾರಾಂಶ

ದೂರದ ಬೆಂಗಳೂರು, ವಿಜಯಪುರ, ಚಿಂತಾಮಣಿ, ದಿಬ್ಬೂರಹಳ್ಳಿ ಹೀಗೆ ಸಾಕಷ್ಟು ದೂರದಿಂದ ಐಟಿಐ ಕಾಲೇಜಿಗೆ ಬರುತ್ತಿದ್ದರೂ ಕನಿಷ್ಠ ಕುಡಿಯುವ ನೀರಿಗೂ ಕಾಲೇಜಿನಲ್ಲಿ ಪರಿತಪಿಸುವಂತಾಗಿದೆ.

ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ

ನಗರದ ಹೊರ ವಲಯದ ತಿಪ್ಪೇನಹಳ್ಳಿ ಸಮೀಪ ಇರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ) ಮೂಲ ಸೌಲಭ್ಯಗಳ ಕೊರತೆಯಿಂದ ಸೊರಗುತ್ತಿದೆ. ಇದರ ಪರಿಣಾಮ ಕಾಲೇಜಿನಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ.

ತಾಂತ್ರಿಕ ಶಿಕ್ಷಣ ಪಡೆಯುವ ಅದರಲ್ಲೂ ಐಟಿಐ ಓದಿದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಹೆಚ್ಚು. ಆದರೆ ತಾಲೂಕಿನ ಬಡ ಮಕ್ಕಳಿಗೆ ಆಶ್ರಯವಾಗಬೇಕಿದ್ದ ತಿಪ್ಪೇನಹಳ್ಳಿ ಐಟಿಐ ಮೂಲಭೂತ ಸೌಕರ್ಯಗಳಿಲ್ಲದೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಇದರಿಂದಾಗಿ ಿಲ್ಲಿಯ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕತ್ತಲು ಕವಿದಂತಾಗಿದೆ.

ಸ್ವಂತ ಕಟ್ಟಡಕ್ಕೆ ಸ್ಥಳಾಂತರ

2007 ರಲ್ಲಿ ಸ್ಥಾಪನೆಯಾದ ಐಟಿಐ ಕಾಲೇಜು ಆರಂಭದಲ್ಲಿ ತಾಲೂಕಿನ ಹನುಮಂತಪುರ ಕ್ರಾಸ್‌ನಲ್ಲಿತ್ತು. ಬಳಿಕ 2013 ರಿಂದ 2019 ರ ವರೆಗೂ ನಗರದಲ್ಲಿ ದಾನಿಗಳು ಕಟ್ಟಿಸಿದ್ದ ಕೆರೆಯಂಗಳದಲ್ಲಿನ ಕಟ್ಟಡದಲ್ಲಿ ಕಾರ್ಯನಿರ್ವಹಿಸಿತು. ಈಗ ತಿಪ್ಪೇನಹಳ್ಳಿ ಸಮೀಪ 5 ಎಕೆರೆ ಜಾಗದಲ್ಲಿ ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ.

ಕಾಲೇಜಿಗೆ ಸ್ವಂತ ಕಟ್ಟಡವಿದ್ದರೂ ಕುಡಿಯುವ ನೀರು, ಸಮರ್ಪಕ ಬಸ್ ಸೌಕರ್ಯ ಇಲ್ಲ. ಅಲ್ಲದೆ ಪ್ರಮುಖವಾಗಿ ಉಪನ್ಯಾಸಕರ ಕೊರತೆ ಎದ್ದು ಕಾಣುತ್ತಿದೆ. ಕಾಲೇಜಿಗೆ ಕಾಯಂ ಪ್ರಾಂಶುಪಾಲರೂ ಇಲ್ಲ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಇದನ್ನು ಪರಿಹರಿಸಲು ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಆಸಕ್ತಿ ತೊರಿಸುತ್ತಿಲ್ಲ.

ಕಾಯಂ ಪ್ರಾಂಶುಪಾಲರಿಲ್ಲ

ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿದ್ದಲಿಂಗ ಕುರಿ ಎಂಬುವರು ಇಲ್ಲಿ ಪ್ರಭಾರ ಪ್ರಾಂಶುಪಾಲರಾಗಿದ್ದಾರೆ. 35 ಉಪನ್ಯಾಸಕರು, ಸಿಬ್ಬಂದಿ ಇರಬೇಕಾದ ಕಾಲೇಜಿನಲ್ಲಿ ಬರೀ 7 ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾಕಷ್ಟು ಕೋರ್ಸ್‌ಗಳಿದ್ದರೂ ಉಪನ್ಯಾಸಕರ ಕೊರತೆಯಿಂದ ಕೇವಲ 8 ಕೋರ್ಸ್ ನಡೆಸಲಾಗುತ್ತಿದೆ.

ವಿದ್ಯಾರ್ಥಿಗಳ ಸಂಖ್ಯೆ 180ಕ್ಕೆ ಇಳಿಕೆ ಐಟಿಐ ಕಾಲೇಜು ಆರಂಭದಲ್ಲಿ 300ರಿಂದ 400 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಈಗ ಕೇವಲ 180 ವಿದ್ಯಾರ್ಥಿಗಳಿದ್ದಾರೆ. ಸೌಲಭ್ಯ ಇಲ್ಲದ ಕಾರಣ ಹೆಣ್ಣು ಮಕ್ಕಳಂತೂ ಕಾಲೇಜಿನ ಕಡೆ ಸುಳಿಯುತ್ತಿಲ್ಲ. ನಗರಕ್ಕೆ 5 ಕಿ.ಮೀ ಅಂತರದಲ್ಲಿದ್ದರೂ ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಇಲ್ಲ. ಆಟೋ, ಬೈಕ್ ಅಶ್ರಯಿಸಿಕೊಂಡು ಮಕ್ಕಳು ಕಾಲೇಜಿಗೆ ತೆರಳಬೇಕಿದೆ ಎಂಬುದು ವಿದ್ಯಾರ್ಥಿಗಳ ಆರೋಪ.

ದೂರದ ಬೆಂಗಳೂರು, ವಿಜಯಪುರ, ಚಿಂತಾಮಣಿ, ದಿಬ್ಬೂರಹಳ್ಳಿ ಹೀಗೆ ಸಾಕಷ್ಟು ದೂರದಿಂದ ಐಟಿಐ ಕಾಲೇಜಿಗೆ ಬರುತ್ತಿದ್ದರೂ ಕನಿಷ್ಠ ಕುಡಿಯುವ ನೀರಿಗೂ ಕಾಲೇಜಿನಲ್ಲಿ ಪರಿತಪಿಸುವಂತಾಗಿದೆ. ಕಾಲೇಜಿನ ಉಪನ್ಯಾಸಕರು ಗ್ರಾಪಂಗೆ ಹಲವು ಬಾರಿ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ . ಇನ್ನಾದರೂ ಜಿಲ್ಲಾಡಳಿತ, ಸಂಬಂಧಪಟ್ಟ ಇಲಾಖೆಗಳು ಹಾಗೂ ಕ್ಷೇತ್ರದ ಜನಪ್ರತಿನಿಧಿಗಳು ಇತ್ತ ಕಡೆ ಗಮನ ಹರಿಸಿ ಐಟಿಐ ಕಾಲೇಜಿಗೆ ಬೇಕಾದ ಮೂಲ ಸೌಕರ್ಯವನ್ನು ಒದಗಿಸುವುದರತ್ತ ಗಮನ ಹರಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

Share this article