ಕನ್ನಡಪ್ರಭ ವಾರ್ತೆ ತಿಪಟೂರು
ಇತ್ತೀಚಿನ ವರ್ಷಗಳಲ್ಲಿ ಹಲಸಿನ ಹಣ್ಣಿಗೆ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲೂ ಹೆಚ್ಚಿನ ಬೇಡಿಕೆ ಇದ್ದು ನಮ್ಮ ಯುವ ರೈತರಿಗೆ ವಿವಿಧ ತಳಿಗಳ ಹಲಸು ಬೆಳೆಯ ಬಗ್ಗೆ ವೈಜ್ಞಾನಿಕ ತಿಳಿವಳಿಕೆ ನೀಡಿ ಸಮರ್ಪಕ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದಲ್ಲಿ ತೆಂಗಿನಷ್ಟೇ ಪ್ರಮುಖ ವಾಣಿಜ್ಯ ಬೆಳೆಯಾಗಿ ರೈತರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲಿದೆ ಎಂದು ಹೇಳಿದರು. ತಾಲೂಕಿನ ಕೊನೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಎರಡನೇ ಬಾರಿ ಬೆಂಗಳೂರು-ಹೊನ್ನಾವರ ರಾಷ್ಟ್ರೀಯ ಹೆದ್ದಾರಿ ರಸ್ತೆಯ ಬದಿಯಲ್ಲಿ ಹಮ್ಮಿಕೊಂಡಿದ್ದ ರೈತರಿಂದ ನೇರವಾಗಿ ಗ್ರಾಹಕರಿಗೆ ಹಲಸಿನ ಹಣ್ಣು ಮಾರಾಟ ಮಾಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತುಮಕೂರು ಹಲಸು ರಾಷ್ಟ್ರಮಟ್ಟದಲ್ಲಿ ಜನಮನ್ನಣೆ ಗಳಿಸಿದೆ. ಇಲ್ಲಿ ಸಾಕಷ್ಟು ರುಚಿ ಹಾಗೂ ಪೌಷ್ಟಿಕಾಂಶಗಳನ್ನು ಹೊಂದಿರುವ ಸಿದ್ದ ಹಲಸು, ಚಂದ್ರ ಹಾಗೂ ಶಂಕರ ಹಲಸುಗಳ ಜೊತೆ ಪಾರಂಪರಿಕವಾಗಿ ಹಳ್ಳಿಗಳಲ್ಲಿ ಬೆಳೆಯುತ್ತಿದ್ದ ಹಲಸಿನ ಹಣ್ಣುಗಳು ಸಾಕಷ್ಟು ಜನಪ್ರಿಯತೆ ಗಳಿಸಿವೆ. ಆದರೆ ರೈತರು ಹಲಸಿನ ಬೆಳೆಯನ್ನು ಇತ್ತೀಚಿನವರೆಗೂ ವಾಣಿಜ್ಯ ಬೆಳೆ ಎಂದು ಪರಿಗಣಿಸದೆ ಕೇವಲ ತಾವು ತಿನ್ನುವಷ್ಟು ಉಪಯೋಗಿಸಿಕೊಂಡು ಹೆಚ್ಚುವರಿ ಹಣ್ಣುಗಳನ್ನು ಸಂಬಂದಿಕರಿಗೆ, ಪರಿಚಯಸ್ಥರಿಗೆ ಹಾಗೂ ನೆರೆಹೊರೆಯವರಿಗೆ ಉಚಿತವಾಗಿ ನೀಡುವ ಪದ್ದತಿಯನ್ನು ಬೆಳೆಸಿಕೊಂಡು ಬಂದಿರುವುದು ರೂಢಿಯಲ್ಲಿದೆ. ಹಾಗಾಗಿ ಈ ಹಲಸಿನ ಮರ ಬೇಸಾಯ ಬೆಳೆಯಿಂದಲೂ ಉತ್ತಮ ಲಾಭವಿದೆ ಎಂದು ತೋರಿಸಲು ರೈತರಿಂದ ನೇರವಾಗಿ ಗ್ರಾಹಕರಿಗೆ ಹಲಸಿನ ಹಣ್ಣು ಮಾರಾಟ ಮಾಡಲು ನಾವು ಅಲ್ಲಲ್ಲಿ ಪ್ರಾತ್ಯಕ್ಷಿಕೆ ಮಾಡಿಸಿದೆವು. ಇದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಮುಂದಿನ ದಿನಗಳಲ್ಲಿ ವಾರಕ್ಕೊಮ್ಮೆ ಈ ಪ್ರಾತ್ಯಕ್ಷಿಕೆಯನ್ನು ರಾಷ್ಟ್ರೀಯ ಹೆದ್ದಾರಿ, ನಗರದ ಆಯಕಟ್ಟಿನ ಸ್ಥಳಗಳಲ್ಲಿ ಹಮ್ಮಿಕೊಳ್ಳಲಾಗುವುದು ಎಂದರು. ಕೆವಿಕೆಯ ತೋಟಗಾರಿಕೆ ವಿಜಾನಿ ಡಾ. ಕೆ. ಕೀರ್ತಿಶಂಕರ್ ಮಾತನಾಡಿ, ಹಲಸು ಒಂದು ನಿರ್ಲಕ್ಷಿತ ಕಲ್ಪವೃಕ್ಷ ಎಂದರೆ ತಪ್ಪಾಗಲಾರದು. ನಮ್ಮ ದೇಶದಲ್ಲಿ ಹಲಸು ಹಣ್ಣು ಒಂದು ಮುಖ್ಯ ಹಣ್ಣಿನ ಬೆಳೆ. ಕಡುಶೀತ ಹಾಗೂ ಅತಿಯಾದ ಉಷ್ಣಪ್ರದೇಶವನ್ನು ಹೊರತುಪಡಿಸಿ ಉಳಿದಂತೆ ಪ್ರಪಂಚದ ಎಲ್ಲಾ ಭಾಗದಲ್ಲೂ ಕಂಡುಬರುವ ಪ್ರಕೃತಿಯ ಅತ್ಯಪೂರ್ವ ಸೃಷ್ಟಿಯಾದ ಹಲಸು ತೆಂಗಿನಂತೆಯೇ ಕಲ್ಪವೃಕ್ಷ ಎಂದರೆ ಅತಿಶಯೋಕ್ತಿಯಲ್ಲ. ಹಲಸಿನ ಎಲೆಯಿಂದ ಹಿಡಿದು ಕಾಯಿ, ಹಣ್ಣು, ಬೀಜ, ಮರ-ಮುಟ್ಟು ಎಲ್ಲವೂ ಉಪಯೋಗಕ್ಕೆ ಬರುತ್ತದೆ. ಇತ್ತೀಚೆಗೆ ಎಲ್ಲರೂ ಹಲಸಿನ ಹಣ್ಣು ಕಂಡರೆ ಬಾಯಿಚಪ್ಪರಿಸುವುದು ಹೆಚ್ಚುತ್ತಿದ್ದು, ರೈತರು ನೇರವಾಗಿ ಗ್ರಾಹಕರಿಗೆ ಹಲಸಿನ ಹಣ್ಣು ಮಾರಾಟ ಮಾಡಿದರೆ ಉತ್ತಮ ಲಾಭ ಗಳಿಸಬಹುದು ಎಂದರು. ಹಲಸು ರೈತರಾದ ಕುಮಾರಣ್ಣ ತಿಮ್ಲಾಪುರ ಮತ್ತು ರೈತ ಯೋಗಾನಂದಮೂರ್ತಿ ತಡಸೂರು ಮಾತನಾಡಿ, ಕಳೆದ ವಾರ ಕೆವಿಕೆಯ ಮಾರ್ಗದರ್ಶನದಲ್ಲಿ ಹಾಗೂ ಅವರ ಪ್ರೇರೇಪಣೆಯಿಂದ ನನ್ನ ತೋಟದ ಹಲಸಿನ ಹಣ್ಣುಗಳನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾರಾಟ ಮಾಡಿ ಉತ್ತಮ ಆದಾಯಗಳಿಸಿದೆ. ಅದೇ ರೀತಿ ಈ ವಾರವೂ ಸಹ ಹೆಚ್ಚು ಹಣ್ಣುಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಿ ಉತ್ತಮ ಆದಾಯಗಳಿಸಿದೆ. ನಮ್ಮ ಹಳ್ಳಿಗಳಲ್ಲಿ ಹೆಚ್ಚು ರೈತರ ತೋಟಗಳಲ್ಲಿ ಹಲಸಿನ ಹಣ್ಣುಗಳು ಸಿಗುತ್ತವೆಯಾದರೂ ಮಾರಾಟ ಮಾಡುವ ಪ್ರಕ್ರಿಯೆ ಕಡಿಮೆ ಇದ್ದು ಮುಂದಿನ ದಿನಗಳಲ್ಲಿ ಬೆಳೆಯುವ ಎಲ್ಲ ರೈತರು ಅವಕಾಶಗಳನ್ನು ಉಪಯೋಗಿಸಿಕೊಂಡು ಲಾಭ ಮಾಡುವತ್ತ ಹೆಜ್ಜೆ ಹಾಕಬೇಕೆಂದು ತಿಳಿಸಿದರು. ಮಾರಾಟ ಕಾರ್ಯಕ್ರಮವನ್ನು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ವಿ. ಗೋವಿಂದಗೌಡ ಮಾರ್ಗದರ್ಶನದಲ್ಲಿ ನಡೆಸಲಾಯಿತು. ರೈತರಾದ ತಿಮ್ಲಾಪುರದ ಕುಮಾರಣ್ಣ, ತಡಸೂರಿನ ಯೋಗಾನಂದ, ಭರತ್ ಸೇರಿದಂತೆ ಸಾಕಷ್ಟು ರೈತರು ನೇರವಾಗಿ ಗ್ರಾಹಕರಿಗೆ ಹಲಸಿನ ಹಣ್ಣನ್ನು ಮಾರಾಟ ಮಾಡಿದರು. ಕೆವಿಕೆಯ ವಿಜ್ಞಾನಿಗಳಾದ ಡಾ.ದರ್ಶನ್, ಡಾ.ತಸ್ಮಿಯಾ, ಡಾ.ಮನೋಜ್, ಸಿಬ್ಬಂದಿಗಳು ಹಾಗೂ ಇತರೆ ರೈತರು ಭಾಗವಹಿಸಿದ್ದರು. ಬಾಕ್ಸ್3 ಗಂಟೆಯಲ್ಲಿ 6 ಸಾವಿರ ಆದಾಯ
ರೈತರ ತೋಟಗಳಲ್ಲಿರುವ ಕೆಂಪು ಹಲಸು, ಹಂಟು ರಹಿತ ಹಲಸು ಮತ್ತು ಸ್ಥಳೀಯ ಹಲಸಿನ ಹಣ್ಣುಗಳನ್ನು ನೇರವಾಗಿ ಮಾರಾಟ ಮಾಡಲು ಪ್ರೇರೇಪಿಸಲಾಯಿತು. ಅವರಿಗೆ ಬೇಕಾದ ಮಳಿಗೆ, ಟೇಬಲ್, ಶುಚಿತ್ವ ಕಾಪಾಡಲು ಪರಿಕರಗಳನ್ನು ಕಲ್ಪಿಸುವ ಮೂಲಕ ಹಲಸಿನ ಹಣ್ಣಿನ ಮಾರಾಟ ಯಶಸ್ವಿಯಾಗಿ ನಡೆಯಿತು. ಸುಮಾರು ೩ಗಂಟೆ ಅವಧಿಯಲ್ಲಿ ಹೆಚ್ಚು ಹಣ್ಣುಗಳನ್ನು ಹಾಗೂ ಹಣ್ಣಿನ ತೊಳೆಗಳನ್ನು ಮತ್ತು ಮೌಲ್ಯವರ್ದಿತ ಪದಾರ್ಥಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಿ ೬ಸಾವಿರಕ್ಕೂ ಹೆಚ್ಚು ಆದಾಯ ಗಳಿಸಲಾಯಿತು. ಸಾಕಷ್ಟು ಸಂಖ್ಯೆಯಲ್ಲಿ ಗ್ರಾಹಕರು ಜಮಾಯಿಸಿ ಖುಷಿಯಿಂದ ಹಣ್ಣು ಸವಿದರು. ಫೋಟೋ ೨೮-ಟಿಪಿಟಿ೨ ಹಾಗೂ ೩ರಲ್ಲಿ ಕಳುಹಿಸಲಾಗಿದೆ. ಶೀರ್ಷಿಕೆ : ಹಲಸು ಮಾರಾಟದಲ್ಲಿ ಗ್ರಾಹಕರು ಹಣ್ಣುಗಳನ್ನು ಕೊಂಡು ಸವಿದರು.