ಬೆಂಬಲ ಬೆಲೆ ಯೋಜನೆಯಡಿ ಜೋಳ ಖರೀದಿ ಕೇಂದ್ರ: ಡಾ. ವಿಜಯಮಹಾಂತೇಶ

KannadaprabhaNewsNetwork | Published : Mar 22, 2025 2:02 AM

ಸಾರಾಂಶ

ಬಿಳಿಜೋಳ(ಮಾಲ್ದಂಡಿ) ಪ್ರತಿ ಕ್ವಿಂಟಲ್‌ಗೆ ₹3,421 ಹಾಗೂ ಜೋಳ(ಹೈಬ್ರಿಡ್) ಪ್ರತಿ ಕ್ವಿಂಟಲ್‌ಗೆ ₹3,371ರಂತೆ ಖರೀದಿಸಲು ಸರ್ಕಾರ ಆದೇಶ ಹೊರಡಿಸಿದೆ.

ಹಾವೇರಿ: ಬೆಂಬಲ ಬೆಲೆ ಯೋಜನೆಯಡಿ ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿನ ಜೋಳ ಉತ್ಪನ್ನ ಖರೀದಿ ಕೇಂದ್ರಗಳನ್ನು ಜಿಲ್ಲೆಯ ಏಳು ತಾಲೂಕುಗಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಆರಂಭಿಸುವಂತೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಅವರು ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರ ನಿಗಧಿಪಡಿಸಿದ ಬೆಂಬಲ ಬೆಲೆ ಹಾಗೂ ಮಾರ್ಗಸೂಚಿ ಅನ್ವಯ ಎಫ್ಎಕ್ಯು ಗುಣಮಟ್ಟದ ಜೋಳ ಖರೀದಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.ಬಿಳಿಜೋಳ(ಮಾಲ್ದಂಡಿ) ಪ್ರತಿ ಕ್ವಿಂಟಲ್‌ಗೆ ₹3,421 ಹಾಗೂ ಜೋಳ(ಹೈಬ್ರಿಡ್) ಪ್ರತಿ ಕ್ವಿಂಟಲ್‌ಗೆ ₹3,371ರಂತೆ ಖರೀದಿಸಲು ಸರ್ಕಾರ ಆದೇಶ ಹೊರಡಿಸಿದೆ. ಮಾ. 25ರಿಂದ ರೈತರ ನೋಂದಣಿ ಆರಂಭಿಸಿ, ಏ. 1ರಿಂದ ಮೇ 31ರ ವರೆಗೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಂಡಳಿ ನಿಯಮಿತ ಸಂಸ್ಥೆಯ ಮೂಲಕ ಜೋಳ ಖರೀದಿಗೆ ಕ್ರಮವಹಿಸುವಂತೆ ಸೂಚನೆ ನೀಡಿದರು.ಜೋಳ ಖರೀದಿ ಕೇಂದ್ರಗಳನ್ನು ಹಾವೇರಿ, ರಾಣಿಬೆನ್ನೂರು, ಬ್ಯಾಡಗಿ, ಹಿರೇಕೆರೂರು, ಹಾನಗಲ್ಲ, ಸವಣೂರು ಹಾಗೂ ಶಿಗ್ಗಾಂವಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ತೆರೆಯಲು ಸೂಚಿಸಿದರು.ಬೆಂಬಲ ಬೆಲೆಯಡಿ ಜೋಳವನ್ನು ಪ್ರತಿ ರೈತರಿಂದ ಜೋಳದ ಉತ್ಪಾದನೆಗೆ ಅನುಗುಣವಾಗಿ ಪ್ರತಿ ಎಕರೆಗೆ 20 ಕ್ವಿಂಟಲ್‌ನಂತೆ ಗರಿಷ್ಠ 150 ಕ್ವಿಂಟಲ್ ಜೋಳ ಖರೀದಿಗೆ ಅವಕಾಶವಿದೆ. ಜೋಳ ಖರೀದಿ ಮೊತ್ತವನ್ನು ರೈತರ ಹೆಸರಿನ ಆಧಾರ್ ಸಂಖ್ಯೆ ಜೋಡಣೆಯಾದ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಬೇಕು ಎಂದು ಸಲಹೆ ನೀಡಿದರು. ನೋಡಲ್ ಅಧಿಕಾರಿಗಳ ನೇಮಕ: ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರಗಳ ಪ್ರಕ್ರಿಯೆ ಮೇಲೆ ನಿಗಾ ವಹಿಸಲು ಆಯಾ ತಾಲೂಕಿನ ತಹಸೀಲ್ದಾರರನ್ನು ತಾಲೂಕು ನೋಡಲ್ ಅಧಿಕಾರಿಯಾಗಿ ಹಾಗೂ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕರನ್ನು ಜಿಲ್ಲಾ ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ ಎಂದರು. ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರಗಳ ಮುಂದೆ ಬ್ಯಾನರ್ ಅಳವಡಿಕೆ, ಕರಪತ್ರ ಮೂಲಕ ಖರೀದಿ ಕೇಂದ್ರಗಳ ಕುರಿತು ವ್ಯಾಪಕ ಪ್ರಚಾರ ಕೈಗೊಳ್ಳಬೇಕು ಹಾಗೂ ಖರೀದಿಸುವ ಜೋಳ ದಾಸ್ತಾನು ಮಾಡಲು ಗೋದಾಮುಗಳನ್ನು ಕಾಯ್ದಿರಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ ಹಾವೇರಿ ತಾಲೂಕಿನಲ್ಲಿ 7695 ಹೆಕ್ಟೇರ್, ರಾಣಿಬೆನ್ನೂರು 12,022 ಹೆ., ಹಾನಗಲ್ಲ 3,105 ಹೆ., ಬ್ಯಾಡಗಿ 7,270 ಹೆ., ಸವಣೂರು 7,902 ಹೆ. ಹಾಗೂ ಶಿಗ್ಗಾಂವಿ 6,923, ಹಿರೇಕೆರೂರು 2,760 ಹಾಗೂ ರಟ್ಟಿಹಳ್ಳಿ ತಾಲೂಕಿನಲ್ಲಿ 2,548 ಹೆಕ್ಟೇರ್ ಸೇರಿ 50,225 ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬೆಳೆಯಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಮಾಹಿತಿ ನೀಡಿದರು.ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ ಉಪನಿರ್ದೇಶಕರು, ಸಹಕಾರಿ ಸಂಘಗಳ ಉಪನಿಬಂಧಕರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಶಾಖಾ ವ್ಯವಸ್ಥಾಪಕರು, ರಾಜ್ಯ ಉಗ್ರಾಣ ನಿಗಮದ ವ್ಯವಸ್ಥಾಪಕರು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

Share this article