ಡಾ.ಬಾಬು ಜಗಜೀವನ ರಾಂ ಜಯಂತಿಕನ್ನಡಪ್ರಭ ವಾರ್ತೆ ಹಾಸನ
ಸಮಾಜದಲ್ಲಿ ಬೇರೂರಿದ್ದ ಅಸಮಾನತೆ ಹೋಗಲಾಡಿಸಲು ಉಕ್ಕಿನ ಮನುಷ್ಯ ಡಾ. ಬಾಬು ಜಗಜೀವನ ರಾಂ ಅವರ ಶ್ರಮ ಅಪಾರವಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ತಿಳಿಸಿದರು.ನಗರದ ಜಿಲ್ಲಾ ಪಂಚಾಯತ್ ಹೊಯ್ಸಳ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಜಂಟಿಯಾಗಿ ಶುಕ್ರವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಡಾ.ಬಾಬು ಜಗಜೀವನ ರಾಂ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿ, ತಳ ಸಮುದಾಯವನ್ನು ಮೇಲೆತ್ತುವ ಸಲುವಾಗಿ ಜಗಜೀವನ ರಾಂ ಹಲವಾರು ಕಾರ್ಯಕ್ರಮ ನೀಡಿದ್ದು, ಹಸಿರು ಕ್ರಾಂತಿಯ ಹರಿಕಾರರಾಗಿ, ಬಡವ, ಕೂಲಿ ಕಾರ್ಮಿಕರ ಪರವಾಗಿ ಅನೇಕ ಕಾನೂನುಗಳನ್ನು ಜಾರಿಗೆ ತರುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಜಗಜೀವನ್ ರಾಂ ಅವರ ಹಾದಿಯಲ್ಲಿ ಎಲ್ಲರೂ ನಡೆದು ಸಮ ಸಮಾಜ, ಅರ್ಥಪೂರ್ಣ ಸಾಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕು. ಮಾಜಿ ಉಪ ಪ್ರಧಾನಿ ಹಾಗೂ ಕಾರ್ಮಿಕ ಖಾತೆಯ ಸಚಿವರಾಗಿ ಉತ್ತಮ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಹಸಿರು ಕ್ರಾಂತಿಯ ಹರಿಕಾರರಾಗಿ ಜನರಿಗೆ ಹತ್ತಿರವಾಗಿದ್ದರು ಎಂದರು.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್. ಪೂರ್ಣಿಮಾ ಮಾತನಾಡಿ, ಬಾಬು ಜಗಜೀವನ್ ರಾಂ ಅವರು ೧೯೪೫ರಲ್ಲಿ ಕಾರ್ಮಿಕ ಖಾತೆಯ ಸಚಿವರಾಗಿ ನೇಮಕವಾಗಿದ್ದಾಗ ಕಾರ್ಮಿಕರ ಪರವಾಗಿ ಅನೇಕ ಕಾಯಿದೆ ಹಾಗೂ ಯೋಜನೆಗಳನ್ನು ಜಾರಿಗೆ ತಂದರು. ಆರ್ಥಿಕವಾಗಿ, ಸಾಮಾಜಿಕವಾಗಿ ಕಾರ್ಮಿಕರು ಮುನ್ನೆಲೆಗೆ ಬರಬೇಕು ಎಂಬ ದೃಷ್ಟಿಯಿಂದ ಅನೇಕ ಜನಪರ ಕಾರ್ಯಕ್ರಮಗಳನ್ನು ರೂಪಿಸಿದರು. ಬಾಬು ಜಗಜೀವನ ರಾಂ ಅವರನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸಬಾರದು. ಈ ಭಾರತ ದೇಶದ ಪ್ರತಿನಿಧಿಯಾಗಿ, ಬಡವರ ಪ್ರತಿನಿಧಿಯಾಗಿ ಸಂವಿಧಾನದ ಆಶಯದಂತೆ ಕೆಲಸ ಮಾಡಿ ಬಡವರಿಗೆ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ಕಲ್ಪಿಸಿಕೊಡುವ ಸಲುವಾಗಿ ಕೆಲಸ ಮಾಡಿದ್ದಾರೆ. ಅದರ ಪರಿಣಾಮ ಇಂದು ಸಮಾಜದಲ್ಲಿ ಎಲ್ಲರೂ ಉತ್ತಮ ಸ್ಥಾನಮಾನ ಪಡೆಯಲು ಸಾಧ್ಯವಾಗಿದೆ ಎಂದು ಹೇಳಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೂರು ಪ್ರಮುಖ ಸಮಿತಿಗಳಲ್ಲಿ ಕೆಲಸ ಮಾಡಿರುವ ಬಾಬು ಜಗಜೀವನ ರಾಂ ದೇಶದಲ್ಲಿ ಬರಗಾಲ ಬಂದು ಆಹಾರಕ್ಕೆ ತೊಂದರೆಯಾದಾಗ ಹಸಿರು ಕ್ರಾಂತಿ ಮೂಲಕ ದೇಶದ ಜನರ ಹಸಿವು ನೀಗಿಸುವ ಕೆಲಸ ಮಾಡಿದ್ದಾರೆ ಎಂದರು.ನೀರಾವರಿ ಸಚಿವರಾಗಿ ಅಂದಿನ ಕಾಲದಲ್ಲಿ ಉತ್ತಮ ಬಿತ್ತನೆ ಬೀಜ ಪೂರೈಕೆ, ಮಾರುಕಟ್ಟೆ ವ್ಯವಸ್ಥೆ, ರಸಗೊಬ್ಬರಗಳ ಸಮಗ್ರ ಪೂರೈಕೆ ಹೀಗೆ ಎಲ್ಲಾ ಆಯಾಮಗಳಲ್ಲಿಯೂ ಯೋಚಿಸಿ ಕೃಷಿ ಕ್ಷೇತ್ರದಲ್ಲಿ ಅನೇಕ ಸುಧಾರಣೆಗಳನ್ನು ತಂದಿದ್ದಾರೆ. ಪ್ರಮುಖವಾಗಿ ಭೂ ಸುಧಾರಣಾ ಕಾಯ್ದೆ ಜಾರಿಗೆ ತಂದು ಭೂ ರೈತರಿಗೆ ಭೂಮಿಯನ್ನು ಒದಗಿಸುವ ಕೆಲಸ ಮಾಡಿದ್ದಾರೆ. ಜಗಜೀವನ ರಾಂ ಅವರ ಆಶಯ ಹಾಗೂ ದೂರದೃಷ್ಟಿಯನ್ನು ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿ ಎಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಬಾಬು ಜಗಜೀವನ ರಾಂ ಅವರ ಸಾಧನೆಗಳ ಕಿರು ಹೊತ್ತಿಗೆಯನ್ನು ಜನರಿಗೆ ಹಂಚುವ ಮೂಲಕ ಅವರ ಸಾಧನೆಗಳನ್ನು ಹೆಸರಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಈ. ಕೃಷ್ಣೇಗೌಡ, ಡಿ.ಎಫ್.ಒ ಸೌರಭ್ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸತೀಶ್, ಸಮುದಾಯದ ಮುಖಂಡರು ಇದ್ದರು.ಹಾಸನದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಾ.ಬಾಬು ಜಗಜೀವನ ರಾಂ ಜಯಂತಿಯನ್ನು ಜಿಲ್ಲಾಧಿಕಾರಿ ಸತ್ಯಭಾಮ ಉದ್ಘಾಟಿಸಿ ಮಾತನಾಡಿದರು.