ದಲಿತರ ಬಾಳಿಗೆ ಒಳಿತು ಮಾಡಿದ ಜಗಜೀವನರಾಂ

KannadaprabhaNewsNetwork | Published : Apr 6, 2024 12:48 AM

ಸಾರಾಂಶ

ಹಸಿರುಕ್ರಾಂತಿ ಹರಿಕಾರ ಬಾಬು ಜಗಜೀವರಾಂ ಅವರ ೧೧೭ನೇ ಜನ್ಮದಿನಾಚರಣೆ ನಿಮಿತ್ತ ಯಲಬುರ್ಗಾ ಪಟ್ಟಣದ ಮುಧೋಳ ರಸ್ತೆಯಲ್ಲಿರುವ ಜಗಜೀವನರಾಂ ಕಾಲನಿಯಲ್ಲಿ ಶುಕ್ರವಾರ ಬಾಬು ಜಗಜೀವನರಾಂ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಯಲಬುರ್ಗಾ: ಪಟ್ಟಣದ ಮುಧೋಳ ರಸ್ತೆಯಲ್ಲಿರುವ ಜಗಜೀವನರಾಂ ಕಾಲನಿಯಲ್ಲಿ ಶುಕ್ರವಾರ ಹಸಿರುಕ್ರಾಂತಿ ಹರಿಕಾರ ಬಾಬು ಜಗಜೀವರಾಂ ಅವರ ೧೧೭ನೇ ಜನ್ಮದಿನಾಚರಣೆ ನಿಮಿತ್ತ ತಾಲೂಕಾಡಳಿತ, ಸಮಾಜ ಕಲ್ಯಾಣ ಹಾಗೂ ಸ್ಥಳೀಯ ಮಾದಿಗ ಸಮಾಜದವರು ಮಾಜಿ ಉಪಪ್ರಧಾನಿ ಬಾಬು ಜಗಜೀವನರಾಂ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿದರು.

ಬಳಿಕ ತಹಸೀಲ್ದಾರ್ ಬಸವರಾಜ ತೆನ್ನೆಳ್ಳಿ ಮಾತನಾಡಿ, ಬಾಬು ಜಗಜೀವನರಾಂ ದೀನ-ದಲಿತರ ಹಿತರಕ್ಷಣೆಗಾಗಿ ಸಾಕಷ್ಟು ಕಷ್ಟ-ಕಾರ್ಪಣ್ಯಗಳನ್ನು ಅನುಭವಿಸಿದರು. ದಲಿತರ ಬಾಳಿಗೆ ಒಳಿತು ಮಾಡಲು ಶ್ರಮಿಸಿದರು. ಸದಾ ಕ್ರಿಯಾಶೀಲ ವ್ಯಕ್ತಿಯಾಗಿ ಶ್ರದ್ಧೆ, ಪ್ರಾಮಾಣಿಕತೆ ಅಳವಡಿಸಿಕೊಂಡು ರಾಜಕೀಯ ರಂಗದಲ್ಲಿ ಉನ್ನತ ಸ್ಥಾನಮಾನ ಪಡೆದರು. ಶೋಷಿತ ವರ್ಗದವರ ಕಣ್ಣೀರು ಒರೆಸುವಲ್ಲಿ ಶ್ರಮಿಸಿದ ಮಹಾಚೇತನ ಅವರು ಎಂದರು.

ಸಮಾಜ ಕಲ್ಯಾಣಾಧಿಕಾರಿ ವಿ.ಕೆ. ಬಡಿಗೇರ ಮಾತನಾಡಿ, ಸಾಮಾಜಿಕ ಸಮಾನತೆ ಮತ್ತು ನ್ಯಾಯಕ್ಕಾಗಿ ನಿಸ್ವಾರ್ಥ ಸೇವೆಯ ಮೂಲಕ ದೀನ-ದಲಿತ ಮತ್ತು ದುರ್ಬಲ ವರ್ಗದ ಧ್ವನಿಯಾಗಿ, ಸಾತ್ವಿಕ ಹೋರಾಟ ಮತ್ತು ಸ್ವಾಭಿಮಾನದ ಮೂಲಕ ತಮ್ಮ ವ್ಯಕ್ತಿತ್ವವನ್ನು ವಿಕಾಸಗಳಿಸಿಕೊಂಡು ಮೇಲೆ ಬಂದವರು. ರಾಷ್ಟ್ರ ಕಂಡ ಹಲವು ಪ್ರಮುಖ ನಾಯಕರಲ್ಲಿ ಡಾ. ಜಗಜೀವನ ರಾಂ ಅವರು ಒಬ್ಬರಾಗಿದ್ದು, ಕಡುಬಡತನದಲ್ಲಿ ಜನಿಸಿ ಉನ್ನತ ಶಿಕ್ಷಣ ಪಡೆದು ಈ ದೇಶದ ಮಾಜಿ ಉಪಪ್ರಧಾನಿ ಹುದ್ದೆಯನ್ನು ಅಲಂಕರಿಸಿ ಹಸಿರುಕ್ರಾಂತಿಯ ಹರಿಕಾರ ಎನಿಸಿಕೊಂಡರು ಎಂದು ಹೇಳಿದರು.

ಹಾಲುಮತ ಸಮಾಜ ಯುವ ಮುಖಂಡ ಈಶ್ವರ ಅಟಮಾಳಗಿ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಡಾ. ಜಗಜೀವನರಾಂ ಅವರ ತತ್ವಾದರ್ಶಗಳು ಸರ್ವಕಾಲಕ್ಕೂ ಅನ್ವಯವಾಗಲಿದ್ದು, ಇಂದಿನ ಯುವ ಜನಾಂಗ ಆ ನಾಯಕರ ವಿಚಾರಧಾರೆಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವ ಜತೆಗೆ ದೇಶದ ಸರ್ವತೋಮುಖ ಅಭಿವೃದ್ಧಿಗೆ ಮುಂದಾಗಬೇಕಿದೆ ಎಂದರು.

ಸಮಾಜ ಕಲ್ಯಾಣ ಇಲಾಖೆ ಮ್ಯಾನೇಜರ್ ವಿಜಯಕುಮಾರ, ದಲಿತ ಮುಖಂಡರಾದ ಶಂಕರ ಭಾವಿಮನಿ, ಈರಪ್ಪ ಬಣಕಾರ, ಯಲ್ಲಪ್ಪ ಹಂದ್ರಾಳ, ಮಲ್ಲೇಶ ನಡುವಲಕೇರಿ, ಶಂಕ್ರಪ್ಪ ಭಾವಿಮನಿ, ಮೌನೇಶ ಬಣಕಾರ, ಚಂದ್ರಪ್ಪ ದೊಡ್ಮನಿ, ಯಮನೂರಪ್ಪ, ಹುಲಗಪ್ಪ ಬಣಕಾರ, ರಮೇಶ ಬಣಕಾರ, ಶೇಖಪ್ಪ ಭಾವಿಮನಿ, ಹೇಮಂತ ಪೂಜಾರ, ತಹಸ್ಹೀಲ್ ಸಿಬ್ಬಂದಿ ಹಾಗೂ ಪಪಂ ಹನುಮಂತಗೌಡ ಪಾಟೀಲ, ರಮೇಶ ಬೇಲೇರಿ, ರವಿ ತಾಳಿಕೋಟಿ, ರವಿ ಯಕ್ಲಾಸಪುರ ಇದ್ದರು.

Share this article